ನವದೆಹಲಿ: ಭಾರತಕ್ಕೂ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಲು ಉದ್ದೇಶಿಸಿದ್ದ ರಷ್ಯಾದ ಲೂನಾ-25 ಬಾಹ್ಯಾಕಾಶ ನೌಕೆಯು ತಾಂತ್ರಿಕ ಸಮಸ್ಯೆಗೆ ತುತ್ತಾಗಿ ಚಂದ್ರನ ಮೇಲೆ ಅಪ್ಪಳಿಸಿ ಪತನವಾಗಿದೆ. 47 ವರ್ಷಗಳ ಬಳಿಕ ಮತ್ತೆ ಚಂದ್ರಯಾನ ಕೈಗೊಂಡಿದ್ದ ಸಾಹಸ ವಿಫಲವಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆಯಾದ ರೋಸ್ಕೋಸ್ಮಾಸ್ ಭಾನುವಾರ ತಿಳಿಸಿದೆ.
ಆಗಸ್ಟ್ 11ರಂದು ರಷ್ಯಾ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ಚಂದ್ರನ ಅಧ್ಯಯನಕ್ಕಾಗಿ ಲೂನಾ- 25 ರಾಕೆಟ್ ಅನ್ನು ಉಡಾವಣೆ ಮಾಡಿತ್ತು. ಚಂದ್ರಯಾನ-3 ನೌಕೆ ಹಾರಿಬಿಟ್ಟಿರುವ ಭಾರತದ ಇಸ್ರೋಗಿಂತಲೂ ಮೊದಲೇ ನೌಕೆಯನ್ನು ಇಳಿಸಲು ಉದ್ದೇಶಿಸಿದ್ದ ರಷ್ಯಾ ಪ್ರಯತ್ನ ವಿಫಲ ಕಂಡಿದೆ.
ತಪ್ಪಾದ ಕಕ್ಷೆ ಸೇರಿದ ನೌಕೆ: ನಾಳೆ ಅಂದರೆ ಆಗಸ್ಟ್ 21 ರಂದು ಲೂನಾ-25 ಉಪಗ್ರಹವನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಲು ಉದ್ದೇಶಿಸಲಾಗಿತ್ತು. ಈ ಸಾಹಸದ ಭಾಗವಾಗಿ ಚಂದ್ರನ ಕಕ್ಷೆಯ ಇಳಿಕೆಯ ವೇಳೆ ನೌಕೆಯು ತಪ್ಪಾದ ಕಕ್ಷೆಗೆ ಜಾರಿದೆ. ಇದರಿಂದ ನೌಕೆ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲೆ ಅಪ್ಪಳಿಸಿ ನಾಶವಾಗಿದೆ. ಲ್ಯಾಂಡ್ ಆಗುವ ಒಂದು ದಿನ ಮೊದಲು ರಷ್ಯಾದ ನೌಕೆ ಪತನವಾಗಿದೆ.
ತಪ್ಪಿದ ಮೊದಲ ರಾಷ್ಟ್ರ ಗರಿಮೆ: ಚಂದ್ರನ ದಕ್ಷಿಣ ಧ್ರುವದಲ್ಲಿ ಲೂನಾ ಉಪಗ್ರಹವನ್ನು ಇಳಿಸಲು ರಷ್ಯಾ ಯಶಸ್ವಿಯಾಗಿದ್ದರೆ, ವಿಶ್ವದಲ್ಲಿಯೇ ಈ ಸಾಹಸ ಮಾಡಿದ ಮೊದಲ ರಾಷ್ಟ್ರ ಎಂಬ ಗರಿಮೆಯನ್ನು ದೇಶ ಹೊಂದಲಿತ್ತು. ಆದರೆ, ಕೊನೆ ಕ್ಷಣದಲ್ಲಾದ ಸಮಸ್ಯೆಯಿಂದಾಗಿ ಈ ದಾಖಲೆಯನ್ನು ತಪ್ಪಿಸಿಕೊಂಡಿತು. ಶನಿವಾರ 11.10 ರ ಸಮಯದಲ್ಲಿ ಲ್ಯಾಂಡಿಂಗ್ಗೆ ಸುಲಭವಾಗಲು ನೌಕೆಯ ಕಕ್ಷೆಯನ್ನು ಇಳಿಸುವ ವೇಳೆ ಲೂನಾ ನಿಗದಿತ ಕಕ್ಷೆಯಲ್ಲಿ ಸಾಗದೇ, ತಪ್ಪಾದ ಕಕ್ಷೆಗೆ ಇಳಿದಿದೆ. ಇದರಿಂದ ನೌಕೆಯು ನಿಯಂತ್ರಣ ಕಳೆದುಕೊಂಡು ಚಂದ್ರನ ಮೇಲೆ ಬಿದ್ದಿದೆ ಎಂದು ರೋಸ್ಕೋಸ್ಮೊಸ್ ತಿಳಿಸಿದೆ.
ಪ್ರತಿಷ್ಠೆಯ ಮಿಷನ್‌ಗೆ ಹೊಡೆತ: 1957 ರಲ್ಲಿ ಸ್ಪುಟ್ನಿಕ್ 1 ನೌಕೆಯನ್ನ ಚಂದ್ರನ ಅಧ್ಯಯನಕ್ಕಾಗಿ ರಷ್ಯಾ ಹಾರಿಬಿಟ್ಟಿತ್ತು. ಇದಾದ ಬಳಿಕ ಮಾನವಸಹಿತ ಗಗನಯಾನ ಕೈಗೊಂಡಿದ್ದ ರಷ್ಯಾ ಸೋವಿಯತ್ ಗಗನಯಾತ್ರಿ ಯೂರಿ ಗಗಾರಿನ್ ಅವರನ್ನು ಮೊದಲ ಬಾರಿಗೆ ಅಂತರಿಕ್ಷಕ್ಕೆ ಕಳುಹಿಸಿತ್ತು. ಇದರ ಬಳಿಕ ಅಂದರೆ 47 ವರ್ಷಗಳ ಮಳಿಕ ಮತ್ತೆ ಚಂದ್ರನ ಅಂಗಳಕ್ಕೆ ಇಳಿಯುವ ಸಾಹಸ ಕೊನೆ ಕ್ಷಣದಲ್ಲಿ ಪತನವಾಗಿದೆ.
ಇತ್ತ, ಭಾರತ ಚಂದ್ರಯಾನ-3 ನೌಕೆಯನ್ನು ಚಂದ್ರನ ತೀರಾ ಸನಿಹಕ್ಕೆ ತಂದು ನಿಲ್ಲಿಸಿದೆ. ಆಗಸ್ಟ್ 23 ರಂದು ಸಂಜೆ 6.04 ನಿಮಿಷಕ್ಕೆ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ. ಕಳೆದ ಬಾರಿಯ ಚಂದ್ರಯಾನ-2 ಉಪಗ್ರಹ ಚಂದ್ರನ ಸಾಫ್ಟ್ ಲ್ಯಾಂಡಿಂಗ್ನ ಕೊನೆ ಕ್ಷಣದಲ್ಲಿ ಪತನವಾಗಿತ್ತು. ಇದರಿಂದ ಇಸ್ರೋ ವೈಫಲ್ಯ ಆಧಾರಿತ ವಿಧಾನವನ್ನು ಇದರಲ್ಲಿ ಅಳವಡಿಸಲಾಗಿದ್ದು, ಚಂದಮಾಮನ ಅಂಗಳಕ್ಕೆ ಇಳಿಯುವ ಶಪಥ ಮಾಡಿದೆ.
ಇದನ್ನೂ ಓದಿ: ಚಂದ್ರಯಾನ 3: ಚಂದ್ರಾನ್ವೇಷಣೆಯ ಯಶಸ್ಸಿಗೆ ವೈಫಲ್ಯದಿಂದ ಕಲಿತ ಪಾಠಗಳ ಆಧಾರಿತ ವಿನ್ಯಾಸ