ನವದೆಹಲಿ: ಭಾರತೀಯ ಐಟಿ ವಲಯದ ನೇಮಕಾತಿಗಳು 2022 ರ ಇದೇ ತಿಂಗಳಿಗೆ ಹೋಲಿಸಿದರೆ 2023 ರ ಡಿಸೆಂಬರ್ನಲ್ಲಿ ಶೇಕಡಾ 21 ರಷ್ಟು ಕುಸಿದಿವೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ. ನೌಕ್ರಿ ಜಾಬ್ಸ್ಪೀಕ್ ಸೂಚ್ಯಂಕದ ಪ್ರಕಾರ, ಐಟಿ ಉದ್ಯಮದಲ್ಲಿ ಕಡಿಮೆ ನೇಮಕಾತಿಗಳ ಹೊರತಾಗಿಯೂ ಫುಲ್ ಸ್ಟ್ಯಾಕ್ ಡೇಟಾ ಸೈಂಟಿಸ್ಟ್, ಐಟಿ ಇನ್ಫ್ರಾಸ್ರ್ಟಕ್ಚರ್ ಎಂಜಿನಿಯರ್ ಮತ್ತು ಆಟೋಮೇಷನ್ ಎಂಜಿನಿಯರ್ ಹುದ್ದೆಗಳಿಗೆ ಹೆಚ್ಚಿನ ನೇಮಕಾತಿ ನಡೆದಿದೆ.
ಬಿಪಿಒ, ಶಿಕ್ಷಣ, ರಿಟೇಲ್ ವ್ಯಾಪಾರ ಮತ್ತು ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಉದ್ಯೋಗ ನೇಮಕಾತಿಗಳು ಮಂದವಾಗಿವೆ. 2022 ರ ಇದೇ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್ನಲ್ಲಿ ಈ ಕ್ಷೇತ್ರಗಳಲ್ಲಿ ಉದ್ಯೋಗ ನೇಮಕಾತಿಗಳು ಕ್ರಮವಾಗಿ ಶೇಕಡಾ 17, 11, 11 ಮತ್ತು 10 ರಷ್ಟು ಕಡಿಮೆಯಾಗಿವೆ. ಹಾಸ್ಪಿಟ್ಯಾಲಿಟಿ ಮತ್ತು ಫಾರ್ಮಾ ಇವು ಡಿಸೆಂಬರ್ನಲ್ಲಿ ಉದ್ಯೋಗ ಬೆಳವಣಿಗೆಗೆ ಸಾಕ್ಷಿಯಾದ ಪ್ರಮುಖ ಕ್ಷೇತ್ರಗಳಾಗಿವೆ. ಎಐ ವಲಯದಲ್ಲಿನ ಉದ್ಯೋಗ ನೇಮಕಾತಿಗಳು 2022 ರ ಇದೇ ತಿಂಗಳಿಗೆ ಹೋಲಿಸಿದರೆ ಇತ್ತೀಚಿನ ತಿಂಗಳಲ್ಲಿ ಶೇಕಡಾ 5 ರಷ್ಟು ಗಮನಾರ್ಹ ಬೆಳವಣಿಗೆ ಸಾಧಿಸಿವೆ.
ಐಟಿಯೇತರ ವಲಯಗಳಿಂದ ಪ್ರೇರಿತವಾದ ನವೆಂಬರ್ ಗೆ ಹೋಲಿಸಿದರೆ ಡಿಸೆಂಬರ್ ನಲ್ಲಿ ನೇಮಕಾತಿ ಚಟುವಟಿಕೆಯಲ್ಲಿ ಶೇಕಡಾ 2 ರಷ್ಟು ಅಲ್ಪ ಅನುಕ್ರಮ ಬೆಳವಣಿಗೆಯಾಗಿದೆ ಎಂದು ನೌಕ್ರಿ ಡಾಟ್ ಕಾಂ ನ ಮುಖ್ಯ ವ್ಯವಹಾರ ಅಧಿಕಾರಿ ಡಾ. ಪವನ್ ಗೋಯಲ್ ಹೇಳಿದರು. ಆದಾಗ್ಯೂ, ಕಳೆದ ವರ್ಷಕ್ಕೆ ಹೋಲಿಸಿದರೆ ಐಟಿ ನೇಮಕಾತಿಗಳು ತೀವ್ರ ಕುಸಿತವಾಗಿವೆ. ಈ ವಲಯದಲ್ಲಿನ ನೇಮಕಾತಿಗಳು ಮತ್ತೆ ಚೇತರಿಸಿಕೊಳ್ಳಲು ದೀರ್ಘ ಸಮಯ ಬೇಕಾಗಬಹುದು ಎಂದು ಅವರು ಹೇಳಿದರು.
ಹಾಸ್ಪಿಟ್ಯಾಲಿಟಿ (ಆತಿಥ್ಯ) ವಲಯವು ಡಿಸೆಂಬರ್ 2022 ಕ್ಕೆ ಹೋಲಿಸಿದರೆ ನೇಮಕಾತಿಯಲ್ಲಿ ಶೇಕಡಾ 4 ರಷ್ಟು ಹೆಚ್ಚಳದೊಂದಿಗೆ ಹೊಸ ಉದ್ಯೋಗ ಸೃಷ್ಟಿಯಲ್ಲಿ ತನ್ನ ಬೆಳವಣಿಗೆಯ ವೇಗವನ್ನು ಮುಂದುವರೆಸಿದೆ. ಈ ವಲಯದ ಉದ್ಯೋಗ ಬೆಳವಣಿಗೆಯು ಮುಂಬೈ ಮತ್ತು ದೆಹಲಿ-ಎನ್ಸಿಆರ್ ನಗರಗಳಲ್ಲಿ ಅತ್ಯಧಿಕವಾಗಿದೆ. 16 ವರ್ಷಗಳ ಅನುಭವ ಹೊಂದಿರುವ ಹಿರಿಯ ವೃತ್ತಿಪರರು ಈ ವಲಯದಲ್ಲಿ ನೇಮಕಾತಿಗೆ ಹೆಚ್ಚು ಬೇಡಿಕೆಯ ಅಭ್ಯರ್ಥಿಗಳಾಗಿ ಹೊರಹೊಮ್ಮಿದ್ದಾರೆ.
ಫಾರ್ಮಾ ವಲಯವು ನೇಮಕಾತಿಯಲ್ಲಿ ಶೇಕಡಾ 2 ರಷ್ಟು ಹೆಚ್ಚಳ ಕಂಡಿದೆ. ಫಾರ್ಮಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಹೊಸದಾಗಿ ಬೇಡಿಕೆ ಸೃಷ್ಟಿಯಾಗಿದ್ದು, ಇದು ಅದರ ಬೆಳವಣಿಗೆ ಮತ್ತು ಉದ್ಯೋಗಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ. ಮೆಟ್ರೋಗಳಲ್ಲದ ಇತರ ನಗರಗಳು ನೇಮಕಾತಿಗಳಲ್ಲಿ ಮೆಟ್ರೋಗಳನ್ನು ಮೀರಿಸಿವೆ. 2022 ರ ಇದೇ ತಿಂಗಳಿಗೆ ಹೋಲಿಸಿದರೆ ವಡೋದರಾ ಇತ್ತೀಚಿನ ತಿಂಗಳಲ್ಲಿ ಹೊಸ ಉದ್ಯೋಗಾವಕಾಶಗಳಲ್ಲಿ ಶೇಕಡಾ 3 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ಬ್ರೌಸಿಂಗ್ ವೇಳೆ ಡೇಟಾ ಟ್ರ್ಯಾಕಿಂಗ್ ಕುಕೀಸ್‌ಗೆ ಗೂಗಲ್ ನಿರ್ಬಂಧ