ನವದೆಹಲಿ: ಸೂರ್ಯನ ವಾತಾವರಣ ಅಧ್ಯಯನ ಮಾಡುವ ಇಸ್ರೋದ ಆದಿತ್ಯ-ಎಲ್1 ಮಿಷನ್ ಈ ವರ್ಷ ಉಡಾವಣೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಾಜಿ ಮುಖ್ಯಸ್ಥ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ.
ಮಂಗಳ ಗ್ರಹದ ಅಧ್ಯಯನಕ್ಕಾಗಿ ಉಡಾವಣೆ ಮಾಡಿದ್ದ ಮಾರ್ಸ್ ಆರ್ಬಿಟರ್ ಮಿಷನ್ 7 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಆಸ್ಟ್ರೋಸ್ಯಾಟ್ ಮಿಷನ್ ಭಾರತವು ಕಕ್ಷೆಗೆ ಹಾರಿಸಿದ ಮೊದಲ ಖಗೋಳ ವೀಕ್ಷಣಾಲಯವಾಗಿದೆ. ಇದು ಅನೇಕ ರಾಷ್ಟ್ರೀಯ ಸಂಸ್ಥೆಗಳ ನಡುವಣ ದೊಡ್ಡ ಸಹಯೋಗವಾಗಿದ್ದು, ಖಗೋಳ ಸಂಶೋಧನೆ ಮಾಡಲು ಅಧಿಕ ಡೇಟಾಗಳನ್ನು ಒದಗಿಸುವ ಮೂಲಕ ಹೆಚ್ಚಿನ ಅಧ್ಯಯನಕ್ಕೆ ಸಹಕಾರಿಯಾಗಿದೆ ಎಂದು ಕಿರಣ್ ಕುಮಾರ್ ಹೇಳಿದ್ದಾರೆ.
ಚಂದ್ರಯಾನ -2ರ ಆರ್ಬಿಟರ್ ಆರೋಗ್ಯಕರವಾಗಿದ್ದು, ಅದರಲ್ಲಿನ ಎಲ್ಲಾ ಪೇಲೋಡ್‌ಗಳು ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ. ಬಾಹ್ಯಾಕಾಶ ನೌಕೆ ಇನ್ನೂ ಹಲವು ವರ್ಷಗಳವರೆಗೆ ಕಾರ್ಯನಿರ್ವಹಿಸುತ್ತಿದೆ ಎಂದು ಇಂಡೋ-ಯುಎಸ್ ಕಾರ್ಯಾಗಾರದಲ್ಲಿ ಭಾಗವಹಿಸಿ ಕಿರಣ್ ಕುಮಾರ್ ಮಾತನಾಡಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಭವಿಷ್ಯದಲ್ಲಿ ಇಸ್ರೋಗೆ ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ (ಜಾಕ್ಸಾ) ಚಂದ್ರನ ಪರಿಶೋಧನಾ ಕಾರ್ಯಾಚರಣೆಯಲ್ಲಿ ಸಹಕರಿಸಲಿವೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.
ಬಾಹ್ಯಾಕಾಶ ವಿಕಿರಣ ಮತ್ತು ಜೀವಶಾಸ್ತ್ರ ಎಂಬ ವಿಷಯದ ಕುರಿತು ಭಾರತ- ಅಮೆರಿಕ ಕಾರ್ಯಾಗಾರ ನಡೆಯುತ್ತಿದ್ದು, ಈ ಕಾರ್ಯಾಗಾರಕ್ಕೆ ಇಂಡೋ-ಯುಎಸ್ ಸೈನ್ಸ್ ಅಂಡ್ ಟೆಕ್ನಾಲಜಿ ಫೋರಮ್ ಕೂಡಾ ಬೆಂಬಲಿಸಿದೆ. ಆರ್ಯಭಟ ರಿಸರ್ಚ್ ಇನ್‌ಸ್ಟಿಟ್ಯೂಟ್ ಫಾರ್ ಅಬ್ಸರ್ವೇಶನಲ್ ಸೈನ್ಸಸ್ (ARIES), ನೈನಿತಾಲ್ನ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ( IISER) ಪುಣೆ ಈ ಕಾರ್ಯಾಗಾರವನ್ನು ಆಯೋಜಿಸಿದೆ.
ARIES ನಲ್ಲಿ ಭಾರತ ಸ್ವಾತಂತ್ರ್ಯದ 75 ವರ್ಷಗಳು: ಆಜಾದಿ ಕಾ ಅಮೃತ್ ಮಹೋತ್ಸವ ಸ್ಮರಣಾರ್ಥ ಚಟುವಟಿಕೆಗಳ ಭಾಗವಾಗಿ ಐದು ದಿನಗಳ ಕಾರ್ಯಾಗಾರ ಏರ್ಪಡಿಸಲಾಗಿದೆ. ಪ್ರತಿ ದಿನ ಒಂದು ವಿಷಯದ ಮೇಲೆ ಇಲ್ಲಿ ಸಂವಾದ, ವಿಚಾರ ಸಂಕಿರಣ ನಡೆಯುತ್ತಿದೆ.
ಇದನ್ನು ಓದಿ:ಹೊಸ ವೈರಸ್ ಸುಳಿವು ಕೊಟ್ಟ ವಿಜ್ಞಾನಿಗಳು: 'ನಿಯೋಕೋವ್' ಸೋಂಕಿತ ಮೂವರಲ್ಲಿ ಒಬ್ಬನ ಸಾವು ಖಚಿತವಂತೆ!