ನವದೆಹಲಿ : ಜಾಗತಿಕವಾಗಿ ಒಟ್ಟು ಇಂಟರ್ನೆಟ್ ಬಳಕೆದಾರರ ಪೈಕಿ ಶೇಕಡಾ 95ರಷ್ಟು ಮಂದಿ ಈಗ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳನ್ನೂ ಬಳಸುತ್ತಾರೆ ಮತ್ತು ಈ ಪ್ರಮಾಣ ಕಳೆದ ವರ್ಷಕ್ಕಿಂತ ಶೇಕಡಾ 4ರಷ್ಟು ಹೆಚ್ಚಾಗಿದೆ ಎಂದು ಬುಧವಾರ ವರದಿಯೊಂದು ತಿಳಿಸಿದೆ. ಅಕ್ಟೋಬರ್ ವೇಳೆಗೆ, ವಿಶ್ವಾದ್ಯಂತ 5.3 ಬಿಲಿಯನ್ ಜನ ಇಂಟರ್ನೆಟ್ ಬಳಸುತ್ತಿದ್ದಾರೆ ಅಥವಾ ಇದು ಜಾಗತಿಕ ಜನಸಂಖ್ಯೆಯ ಶೇಕಡಾ 65.7 ರಷ್ಟಾಗುತ್ತದೆ.
ಇದರರ್ಥ ಇಂಟರ್ನೆಟ್ ಬಳಕೆದಾರರ ಸಂಖ್ಯೆ 189 ಮಿಲಿಯನ್ ಅಥವಾ ವರ್ಷದಿಂದ ವರ್ಷಕ್ಕೆ ಶೇಕಡಾ 3.7 ರಷ್ಟು ಹೆಚ್ಚಾಗಿದೆ ಎಂದು OnlyAccounts ಡಾಟ್ io ಪ್ರಸ್ತುತಪಡಿಸಿದ ಅಂಕಿ - ಅಂಶಗಳು ತಿಳಿಸಿವೆ. ಇದರಲ್ಲಿ, 4.95 ಬಿಲಿಯನ್ ಜನ ಅಥವಾ ವಿಶ್ವದ ಜನಸಂಖ್ಯೆಯ ಶೇಕಡಾ 61.4 ಜನರು ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದರು.
ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ ಜಾಗತಿಕ ಇಂಟರ್ನೆಟ್ ಬಳಕೆದಾರರ ಸಂಖ್ಯೆಗಿಂತ ವೇಗವಾಗಿ ಬೆಳೆದಿದೆ ಎಂದು ಅಂಕಿ - ಅಂಶಗಳು ತೋರಿಸಿರುವುದು ವರದಿಯ ಕುತೂಹಲಕಾರಿ ವಿಷಯವಾಗಿದೆ. ಕಳೆದ ವರ್ಷದಿಂದ, ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ ಶೇಕಡಾ 4.5 ರಷ್ಟು ಹೆಚ್ಚಾಗಿದ್ದು, ಸುಮಾರು 215 ಮಿಲಿಯನ್ ಜನ ಸಾಮಾಜಿಕ ಮಾಧ್ಯಮಕ್ಕೆ ಬಂದಿದ್ದಾರೆ.
2019 ರಿಂದ ಪ್ರತಿ ವರ್ಷ ಸರಾಸರಿ 350 ಮಿಲಿಯನ್ ಜನ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಿಗೆ ಬರುತ್ತಿದ್ದಾರೆ. ಇದು ಒಟ್ಟು ಬಳಕೆದಾರರ ಸಂಖ್ಯೆಯನ್ನು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಸಿದೆ. ಆದರೆ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ, ಸಾಮಾಜಿಕ ಮಾಧ್ಯಮ ಬಳಸುವ ಸಮಯಾವಧಿ ವಾಸ್ತವದಲ್ಲಿ ಕಡಿಮೆಯಾಗಿದೆ.
ಡೇಟಾ ರಿಪೋರ್ಟ್ ಸಮೀಕ್ಷೆಯ ಪ್ರಕಾರ, ಅಕ್ಟೋಬರ್ ವೇಳೆಗೆ ಇಂಟರ್ನೆಟ್ ಬಳಕೆದಾರರು ಪ್ರತಿದಿನ ಸರಾಸರಿ ಎರಡು ಗಂಟೆ 24 ನಿಮಿಷಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಕಳೆಯುತ್ತಾರೆ. ಇದು ಕಳೆದ ವರ್ಷಕ್ಕಿಂತ ನಾಲ್ಕು ನಿಮಿಷ ಕಡಿಮೆಯಾಗಿದೆ. ಹಾಗೆಯೇ ಇಂಟರ್ನೆಟ್ ಬಳಸುವ ಸರಾಸರಿ ದೈನಂದಿನ ಸಮಯ ನಾಲ್ಕು ನಿಮಿಷಗಳಷ್ಟು ಹೆಚ್ಚಾಗಿದೆ ಮತ್ತು ಈಗ 6 ಗಂಟೆ 41 ನಿಮಿಷಗಳಿಗೆ ತಲುಪಿದೆ.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಪ್ರಸ್ತುತ 4.9 ಬಿಲಿಯನ್ ಬಳಕೆದಾರರನ್ನು ಹೊಂದಿದ್ದು, ಮುಂದಿನ ವರ್ಷಗಳಲ್ಲಿ ಈ ಸಂಖ್ಯೆ ಇನ್ನೂ ಶೇಕಡಾ 25 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಸ್ಟ್ಯಾಟಿಸ್ಟಾ ಸಮೀಕ್ಷೆಯ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ 1.1 ಬಿಲಿಯನ್ ಗಿಂತ ಹೆಚ್ಚು ಜನ ಸಾಮಾಜಿಕ ಮಾಧ್ಯಮಗಳಿಗೆ ಸೇರಲಿದ್ದಾರೆ. ಇದರಿಂದ ಒಟ್ಟು ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ ಆರು ಬಿಲಿಯನ್ ಗೆ ಹೆಚ್ಚಾಗಲಿದೆ.
ಇದನ್ನೂ ಓದಿ : ಕರಾರುವಾಕ್ಕಾಗಿ ಗುರಿ ಹೊಡೆದುರುಳಿಸಿದ ಸ್ವದೇಶಿ ನಿರ್ಮಿತ 'ಇಂಫಾಲ್' ಯುದ್ಧನೌಕೆ