ನವದೆಹಲಿ: ಭಾರತದ ಸೈಬರ್ ಸೆಕ್ಯುರಿಟಿ ಮಾರುಕಟ್ಟೆ 2023ರಲ್ಲಿ 6 ಬಿಲಿಯನ್ ಡಾಲರ್ ತಲುಪಿದೆ ಮತ್ತು ಇದು 2019 ರಿಂದ 23ರ ಅವಧಿಯಲ್ಲಿ ಶೇಕಡಾ 30ಕ್ಕಿಂತ ಹೆಚ್ಚು ವಾರ್ಷಿಕ ಬೆಳವಣಿಗೆಯ ದರದಲ್ಲಿ (ಸಿಎಜಿಆರ್) ಬೆಳೆಯುತ್ತಿದೆ ಎಂದು ಹೊಸ ವರದಿ ಶುಕ್ರವಾರ ತೋರಿಸಿದೆ. ಭಾರತದ ಸೈಬರ್ ಸೆಕ್ಯೂರಿಟಿ ಉತ್ಪನ್ನಗಳ ವಿಭಾಗವು 2019ರಲ್ಲಿ ಇದ್ದ 1 ಬಿಲಿಯನ್ ಡಾಲರ್ನಿಂದ 2023 ರಲ್ಲಿ 3.7 ಬಿಲಿಯನ್ ಡಾಲರ್ಗೆ ತಲುಪಿದೆ.
2028ರ ವೇಳೆಗೆ ಭಾರತದ ಸೈಬರ್ ಸೆಕ್ಯುರಿಟಿ ಮಾರುಕಟ್ಟೆಯು ಜಾಗತಿಕ ಮಾರುಕಟ್ಟೆಯಲ್ಲಿ ಶೇಕಡಾ 5 ರಷ್ಟು ಪಾಲನ್ನು ಹೊಂದುವ ನಿರೀಕ್ಷೆಯಿದೆ ಎಂದು ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ (ಡಿಎಸ್ಸಿಐ) ವರದಿ ತಿಳಿಸಿದೆ.
"ಭಾರತವು ಜಾಗತಿಕ ಸೈಬರ್ ಸೆಕ್ಯುರಿಟಿ ಹಬ್ ಆಗಿ ಹೊರಹೊಮ್ಮುತ್ತಿದೆ. ಡಿಜಿಟಲೀಕರಣಕ್ಕೆ ಸರ್ಕಾರದ ಉತ್ತೇಜನ ಮತ್ತು ವಿಕಸನಗೊಳ್ಳುತ್ತಿರುವ ನೀತಿಗಳ ಬೆಂಬಲದೊಂದಿಗೆ, ಭಾರತದಲ್ಲಿ ಸೈಬರ್ ಭದ್ರತಾ ಹೂಡಿಕೆಯ ಹೆಚ್ಚಳಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ" ಎಂದು ಎಂಇಐಟಿವೈ ಕಾರ್ಯದರ್ಶಿ ಎಸ್.ಕೃಷ್ಣನ್ ಹೇಳಿದರು.
ಸೈಬರ್ ದಾಳಿ ನಡೆಸಲು ಇಮೇಲ್ ಅನ್ನೇ ಪ್ರಮುಖವಾಗಿ ಬಳಸಲಾಗುತ್ತಿದೆ ಎಂದು ದೇಶದ ಸುಮಾರು 90 ಪ್ರತಿಶತದಷ್ಟು ಸಂಸ್ಥೆಗಳು ತಿಳಿಸಿವೆ ಮತ್ತು 84 ಪ್ರತಿಶತದಷ್ಟು ಸಂಸ್ಥೆಗಳು ಫಿಶಿಂಗ್ ಅನ್ನು ತಮ್ಮ ಉದ್ಯಮ ಎದುರಿಸುತ್ತಿರುವ ಪ್ರಮುಖ ಸೈಬರ್ ಅಪಾಯವಾಗಿದೆ ಎಂದು ಹೇಳಿವೆ. ಸಮೀಕ್ಷೆ ನಡೆಸಿದ ಸುಮಾರು 75 ಪ್ರತಿಶತದಷ್ಟು ಸಂಸ್ಥೆಗಳು ನುರಿತ ಸೈಬರ್ ಸೆಕ್ಯೂರಿಟಿ ತಜ್ಞರ ಕೊರತೆ ಬಹುದೊಡ್ಡ ಸಮಸ್ಯೆಯಾಗಿದೆ ಎಂದಿದ್ದಾರೆ.
"ಭಾರತದ ಸೈಬರ್ ಸೆಕ್ಯುರಿಟಿ ಮಾರುಕಟ್ಟೆ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ. ಇದು ಹೆಚ್ಚಾಗುತ್ತಿರುವ ಸೈಬರ್ ಅಪಾಯಗಳ ಹಿನ್ನೆಲೆಯಲ್ಲಿ ಡಿಜಿಟಲ್ ರಕ್ಷಣೆಯನ್ನು ಬಲಪಡಿಸುವ ಮಹತ್ವವನ್ನು ಒತ್ತಿ ಹೇಳುತ್ತದೆ" ಎಂದು ಡಿಎಸ್ ಸಿಐ ಸಿಇಒ ವಿನಾಯಕ್ ಗೋಡ್ಸೆ ಹೇಳಿದರು. ಬಿಎಫ್ಎಸ್ಐ ಮತ್ತು ಐಟಿ, ಐಟಿಇಎಸ್ ಈ ಕ್ಷೇತ್ರಗಳು ಸೈಬರ್ ಸೆಕ್ಯೂರಿಟಿಗಾಗಿ ಅತಿ ಹೆಚ್ಚು ಖರ್ಚು ಮಾಡುವ ವಲಯಗಳಾಗಿವೆ. ದೇಶದ ಶೇ 97ರಷ್ಟು ಸಂಸ್ಥೆಗಳು ಎಐ/ಎಂಎಲ್ನಲ್ಲಿ ಹೂಡಿಕೆ ಮಾಡಿದ್ದರೆ, ಶೇ 84ರಷ್ಟು ಸಂಸ್ಥೆಗಳು ಕ್ಲೌಡ್ನಲ್ಲಿ ಹೂಡಿಕೆ ಮಾಡಿವೆ.
ಸೈಬರ್ ಸೆಕ್ಯೂರಿಟಿ ಇದು ಕಂಪ್ಯೂಟರ್ಗಳು, ಸರ್ವರ್ಗಳು, ಮೊಬೈಲ್ ಸಾಧನಗಳು, ಎಲೆಕ್ಟ್ರಾನಿಕ್ ವ್ಯವಸ್ಥೆಗಳು, ನೆಟ್ ವರ್ಕ್ಗಳನ್ನು ಹ್ಯಾಕರ್ಗಳ ದಾಳಿಯಿಂದ ರಕ್ಷಿಸುವ ವ್ಯವಸ್ಥೆಯಾಗಿದೆ. ಇದನ್ನು ಮಾಹಿತಿ ತಂತ್ರಜ್ಞಾನ ಭದ್ರತೆ ಅಥವಾ ಎಲೆಕ್ಟ್ರಾನಿಕ್ ಮಾಹಿತಿ ಭದ್ರತೆ ಎಂದೂ ಕರೆಯಲಾಗುತ್ತದೆ.
ಇದನ್ನೂ ಓದಿ: ಜ.6ರಂದು ಸೂರ್ಯ ನಿರಂತರವಾಗಿ ಕಾಣಿಸುವ ಲ್ಯಾಂಗ್ರೇಜ್ ಪಾಯಿಂಟ್ ತಲುಪಲಿದೆ ಆದಿತ್ಯ ಎಲ್ 1