ಸರ್ಕಾರಿ ಪ್ರಾಯೋಜಿತ ಹ್ಯಾಕರ್ಗಳು ಐಫೋನ್ ಗಳ ಮೇಲೆ ದಾಳಿ ಮಾಡುವ ಸಾಧ್ಯತೆಯಿದೆ ಎಂದು ಆಪಲ್ ಇತ್ತೀಚೆಗೆ ದೇಶದ ಪ್ರಮುಖ ವಿರೋಧ ಪಕ್ಷದ ನಾಯಕರು ಮತ್ತು ಪತ್ರಕರ್ತರಿಗೆ ಎಚ್ಚರಿಕೆ ನೀಡಿತ್ತು. ನಮ್ಮ ದೇಶ ಮಾತ್ರವಲ್ಲದೆ 150 ದೇಶಗಳ ಅನೇಕರಿಗೆ ಇಂಥದೊಂದು ಅಧಿಸೂಚನೆ ಆಪಲ್ನಿಂದ ಬಂದಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಆಪಲ್ ಗೆ ನೋಟಿಸ್ ನೀಡಿದ್ದು, ವಿವರಣೆ ಕೋರಿದೆ.
ತಾನು ಹೊರಡಿಸಿದ ಈ ಅಧಿಸೂಚನೆಗಳು ಯಾವುದೇ ಸರ್ಕಾರಿ ಪ್ರಾಯೋಜಿತ ಹ್ಯಾಕರ್ಗಳನ್ನು ಉದ್ದೇಶಿಸಿಲ್ಲ ಎಂದು ಆಪಲ್ ಸ್ಪಷ್ಟಪಡಿಸಿದೆ. ಆದರೆ ಇಂಥ ಹ್ಯಾಕಿಂಗ್ ಬಗ್ಗೆ ಆಪಲ್ ನ ಎಚ್ಚರಿಕೆ ಹೊಸತೇನಲ್ಲ. 2021 ರಿಂದ, ಯಾವುದೇ ಶಂಕಿತ ಹ್ಯಾಕಿಂಗ್ನ ಪ್ರಯತ್ನ ಕಂಡುಬಂದಾಗ ಸ್ವಯಂಚಾಲಿತವಾಗಿ ಅಂಥ ಅಧಿಸೂಚನೆಗಳನ್ನು ಹೊರಡಿಸಲಾಗುತ್ತದೆ ಎಂದು ಆಪಲ್ ತಿಳಿಸಿದೆ. ಆಪಲ್ನ ಇತ್ತೀಚಿನ ಎಚ್ಚರಿಕೆಗಳು ನಿಜವಲ್ಲ ಎಂದುಕೊಂಡರೂ ಕೆಲ ಸೈಬರ್ ಅಪರಾಧಿಗಳು ನಿಜವಾಗಿಯೂ ಫೋನ್ಗಳನ್ನು ಹ್ಯಾಕ್ ಮಾಡಿದರೆ ಮುಂದೇನು? ಹ್ಯಾಕಿಂಗ್ ಅನ್ನು ಗುರುತಿಸುವುದು ಹೇಗೆ? ಹಾಗಾಗದಂತೆ ತಪ್ಪಿಸುವುದು ಹೇಗೆ? ಇಲ್ಲಿದೆ ಒಂದಿಷ್ಟು ಮಾಹಿತಿ.
ಹೇಗೆಲ್ಲ ಹ್ಯಾಕ್ ಮಾಡಲಾಗುತ್ತೆ?: ಸೈಬರ್ ಅಪರಾಧಿಗಳು ದುರುದ್ದೇಶಪೂರಿತ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡುವ ಮೂಲಕ ಸ್ಮಾರ್ಟ್ಫೋನ್ಗಳನ್ನು ಹ್ಯಾಕ್ ಮಾಡುತ್ತಾರೆ. ನಂತರ ಮೊಬೈಲ್ನಲ್ಲಿ ಸಂಗ್ರಹಿಸಿದ ವೈಯಕ್ತಿಕ ಮಾಹಿತಿಯನ್ನು ಕದಿಯಲಾಗುತ್ತದೆ. ಬಳಕೆದಾರರ ಯಾವುದೇ ಹಸ್ತಕ್ಷೇಪವಿಲ್ಲದೆ ಹ್ಯಾಕರ್ಗಳು ಫೋನ್ಗೆ ಪ್ರವೇಶ ಪಡೆಯುತ್ತಾರೆ ಹಾಗೂ ತಮಗೆ ಬೇಕಾದ ಅಪ್ಲಿಕೇಶನ್ ಗಳನ್ನು ಇನ್ಸ್ಟಾಲ್ ಮಾಡುತ್ತಾರೆ. ಈ ವಿಷಯದಲ್ಲಿ ಯಾವುದೇ ಸ್ಮಾರ್ಟ್ ಫೋನ್ ಸಂಪೂರ್ಣ ಸುರಕ್ಷಿತವಲ್ಲ.
ಮೊಬೈಲ್ ಫೋನ್ ಹ್ಯಾಕ್ ಆಗಿರುವ ಲಕ್ಷಣಗಳು ಹೀಗಿವೆ: ಡೇಟಾ ಬೇಗ ಖಾಲಿಯಾಗುವುದು: ನಿಮ್ಮ ಮೊಬೈಲ್ ಫೋನ್ ನ ಡೇಟಾ ಬೇಗನೆ ಖಾಲಿಯಾಗುತ್ತಿದ್ದರೆ ನೀವು ಜಾಗೃತರಾಗುವುದು ಒಳ್ಳೆಯದು. ಫೋನ್ನಲ್ಲಿ ಮಾಲ್ವೇರ್ ಇನ್ಸ್ಟಾಲ್ ಆದಾಗ ಹೀಗಾಗಬಹುದು. ಸ್ಪೈವೇರ್ ಅಥವಾ ಮಾಲ್ವೇರ್ ಫೋನ್ನಲ್ಲಿ ನಿರಂತರವಾಗಿ ಚಾಲನೆಯಲ್ಲಿರುತ್ತದೆ. ಇದರಿಂದ ಡೇಟಾ ಖಾಲಿಯಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ನೀವು ಅನಿಯಮಿತ ಡೇಟಾ ಪ್ಯಾಕ್ ಹಾಕಿಸಿದ್ದರೆ ಡೇಟಾ ಬಳಕೆಯ ಮೇಲೆ ಕಣ್ಣಿಡಬೇಕು. ಡೇಟಾ ಬಳಕೆ ಅಸಾಮಾನ್ಯವಾಗಿ ಹೆಚ್ಚಾಗಿದ್ದರೆ ಫೋನ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದರ್ಥ.
ಇಂಥ ಪಾಪ್ ಅಪ್ಗಳು ಕಾಣಿಸಬಹುದು: ಫೋನ್ ನಲ್ಲಿ ಇಂಟರ್ನೆಟ್ ಬ್ರೌಸ್ ಮಾಡುವಾಗ, ನೀವು ಅನಗತ್ಯ ಪಾಪ್ - ಅಪ್ ಗಳನ್ನು ಪಡೆಯುತ್ತಿದ್ದರೆ ಬೇಗನೆ ಜಾಗೃತರಾಗಿ. ಅಲ್ಲದೇ, ಜಾಹೀರಾತುಗಳು ಅಥವಾ ಅನುಚಿತ ವಿಷಯದ ಪಾಪ್ ಅಪ್ಗಳು ಬರುತ್ತಿದ್ದರೆ ಏನೋ ಸಮಸ್ಯೆ ಇದೆ ಎಂದರ್ಥ. ಇವೆರಡೂ ಫೋನ್ ಹ್ಯಾಕ್ ಆಗಿರುವ ಲಕ್ಷಣಗಳಾಗಿವೆ. ಪಾಪ್ ಅಪ್ ಗಳು ಕಾಣಿಸಿಕೊಂಡಾಗ ವಿಂಡೋವನ್ನು ಎಚ್ಚರಿಕೆಯಿಂದ ಮುಚ್ಚಿ. ಅವುಗಳ ಮೇಲೆ ಎಲ್ಲಿಯೂ ಕ್ಲಿಕ್ ಮಾಡಬೇಡಿ.
ಗೊತ್ತಿರದ ಹೊಸ ಆ್ಯಪ್ಗಳು ಬಂದಿರುವುದು: ಫೋನ್ ನಲ್ಲಿ ಮೊದಲೇ ಡೌನ್ ಲೋಡ್ ಮಾಡಿದ ಅಪ್ಲಿಕೇಶನ್ ಗಳು ಇರುವುದು ಸಾಮಾನ್ಯ. ಆದರೆ ನಾವು ಡೌನ್ಲೋಡ್ ಮಾಡದ ಅಥವಾ ಖರೀದಿಸದ ಅಪ್ಲಿಕೇಶನ್ಗಳು ಕಾಣಿಸಿಕೊಂಡರೆ ಅದು ಹ್ಯಾಕಿಂಗ್ನ ಸಂಕೇತವಾಗಿರಬಹುದು.
ನಾವು ಮಾಡದ ಕರೆಗಳು: ಕೆಲವೊಮ್ಮೆ ಆಕಸ್ಮಿಕವಾಗಿ ಕಾಲ್ ಕಟ್ ಆಗುವುದು ಸಾಮಾನ್ಯ. ಆದರೆ ಕಾಲ್ ಹಿಸ್ಟರಿಯಲ್ಲಿ ನಾವು ಕಾಲ್ ಮಾಡದೇ ಇದ್ದರೂ ಕೆಲವೊಂದು ನಂಬರ್ಗಳಿಗೆ ಕರೆ ಹೋಗಿರುವುದು ಕಾಣಿಸಬಹುದು. ಹೀಗಾಗದಾಗ ಫೋನ್ ಹ್ಯಾಕ್ ಆಗಿರಬಹುದು.
ಫೋನ್ ನಿಧಾನವಾಗುವುದು: ಫೋನ್ನ ವೇಗ ಕಡಿಮೆಯಾಗಿದ್ದರೆ ಅಥವಾ ಅಪ್ಲಿಕೇಶನ್ಗಳು ಓಪನ್ ಆಗದಿದ್ದರೆ ಅದು ಹ್ಯಾಕಿಂಗ್ನ ಸಂಕೇತವಾಗಿದೆ. ಅಲ್ಲದೆ, ಫೋನ್ ಆಗಾಗ ಬಿಸಿಯಾದರೆ ಇದೂ ಕೂಡ ಅನುಮಾನಕ್ಕೆ ಕಾರಣವಾಗುತ್ತದೆ. ಮಾಲ್ವೇರ್ಗಳು ನಿರಂತರವಾಗಿ ಬ್ಯಾಕ್ಗ್ರೌಂಡ್ನಲ್ಲಿ ಕೆಲಸ ಮಾಡುತ್ತಿದ್ದರೆ ಫೋನ್ ಅಸಾಮಾನ್ಯವಾಗಿ ಬಿಸಿಯಾಗುತ್ತದೆ.
ಸ್ಪ್ಯಾಮ್ ಸಂದೇಶಗಳು: ನಿಮಗೆ ಅಪರಿಚಿತ ಸಂಖ್ಯೆಗಳಿಂದ ಕರೆಗಳು ಅಥವಾ ಸ್ಪ್ಯಾಮ್ ಸಂದೇಶಗಳು ಬರುತ್ತಿದ್ದರೆ ಫೋನ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ನೀವು ಭಾವಿಸಬೇಕು.
ಸೆಕ್ಯೂರಿಟಿ ಫೀಚರ್ ನಿಷ್ಕ್ರಿಯವಾಗುವುದು: ಸ್ಕ್ರೀನ್ ಲಾಕ್ ಮತ್ತು ಆಂಟಿವೈರಸ್ ನಂತಹ ಭದ್ರತಾ ವೈಶಿಷ್ಟ್ಯಗಳು ನಮಗೆ ತಿಳಿಯದೇ ನಿಷ್ಕ್ರಿಯಗೊಳ್ಳುತ್ತಿದ್ದರೆ ಅದು ಅನುಮಾನಾಸ್ಪದವಾಗಿರುತ್ತದೆ. ಇವು ಹ್ಯಾಕಿಂಗ್ ನ ಬಲವಾದ ಚಿಹ್ನೆಗಳು ಎಂದು ತಿಳಿದಿರಲಿ.
ಸಂಶಯ ಬಂದಾಗ ಏನು ಮಾಡಬೇಕು?
* ಫೋನ್ ಹ್ಯಾಕ್ ಆಗಿದೆ ಎಂದು ನೀವು ಭಾವಿಸಿದರೆ ಕೆಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ. ಮೊದಲಿಗೆ, ಫೋನ್ ಹ್ಯಾಕ್ ಮಾಡಲಾಗಿದೆ ಎಂದು ಎಲ್ಲಾ ಸಂಪರ್ಕ ಸಂಖ್ಯೆಗಳಿಗೆ ತಿಳಿಸಬೇಕು. ನಿಮ್ಮ ಫೋನ್ಗೆ ಬರುವ ಯಾವುದೇ ಅನುಮಾನಾಸ್ಪದ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ
* ಫೋನ್, ವೈ-ಫೈ ಮತ್ತು ಮೊಬೈಲ್ ಡೇಟಾವನ್ನು ಆಫ್ ಮಾಡಬೇಕು. ಇದರಿಂದ ವಂಚಕರು ಫೋನ್ ಮೇಲೆ ಹೆಚ್ಚಿನ ನಿಯಂತ್ರಣ ಪಡೆಯುವುದನ್ನು ತಡೆಯಬಹುದು
* ಮಾಲ್ವೇರ್ ತಡೆಗಟ್ಟುವ ಸಾಫ್ಟ್ವೇರ್ ಫೋನ್ನಿಂದ ಮಾಲ್ವೇರ್ ಅನ್ನು ಪತ್ತೆಹಚ್ಚಲು ಮತ್ತು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಂತಹ ಸಾಫ್ಟ್ ವೇರ್ ಲಭ್ಯವಿಲ್ಲದಿದ್ದರೆ, ಆಂಟಿವೈರಸ್ ಸಾಫ್ಟ್ ವೇರ್ ಅನ್ನು ಡೌನ್ ಲೋಡ್ ಮಾಡಿ ಮತ್ತು ರನ್ ಮಾಡಿ.
* ಫೋನ್ ಹ್ಯಾಕ್ ಮಾಡಿದಾಗ ವಂಚಕರು ಲಾಗಿನ್ ಪಾಸ್ವರ್ಡ್ಗಳನ್ನು ಕದಿಯುವ ಅಪಾಯವಿದೆ. ಆದ್ದರಿಂದ ಮಾಲ್ವೇರ್ ತೆಗೆದುಹಾಕಿದ ನಂತರ ಎಲ್ಲಾ ಪಾಸ್ವರ್ಡ್ ಗಳನ್ನು ರಿಸೆಟ್ ಮಾಡಿ. ಪ್ರತಿ ಖಾತೆಗೆ ವಿಭಿನ್ನ ಬಲವಾದ ಪಾಸ್ ವರ್ಡ್ ಗಳನ್ನು ಹಾಕಬೇಕು.
* ಅನುಮಾನಾಸ್ಪದ ಅಪ್ಲಿಕೇಶನ್ಗಳು ನಿಮ್ಮ ಫೋನ್ನಲ್ಲಿ ಮಾಲ್ವೇರ್ಗಳನ್ನು ತರುವ ಪ್ರಮುಖ ಮೂಲವಾಗಿವೆ. ಫೋನ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ನೀವು ಭಾವಿಸಿದರೆ ಆ್ಯಪ್ಗಳ ಲಿಸ್ಟ್ ಅನ್ನು ಚೆಕ್ ಮಾಡಿ ಸೂಕ್ಷ್ಮವಾಗಿ ಪರಿಶೀಲಿಸಬೇಕು. ಥರ್ಡ್ ಪಾರ್ಟಿ ಆ್ಯಪ್ ಸ್ಟೋರ್ ಗಳು ಅಥವಾ ಅನಧಿಕೃತ ಮೂಲಗಳಿಂದ ಡೌನ್ ಲೋಡ್ ಮಾಡಲಾದ ಅಪ್ಲಿಕೇಶನ್ ಗಳನ್ನು ತಕ್ಷಣವೇ ಡಿಲೀಟ್ ಮಾಡಬೇಕು. ಅಲ್ಲದೇ, ಆ ಅಪ್ಲಿಕೇಶನ್ಗಳು ಯಾವ ಮಾಹಿತಿಗೆ ಪ್ರವೇಶ ಹೊಂದಿವೆ ಎಂಬುದನ್ನು ನೊಡಿ. ಯಾವ ಖಾತೆಗಳ ಪಾಸ್ ವರ್ಡ್ ಗಳನ್ನು ಬದಲಾಯಿಸಬೇಕು ಎಂಬುದನ್ನು ಇದು ತೋರಿಸುತ್ತದೆ. ಅಗತ್ಯವಿದ್ದರೆ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಅಪ್ಡೇಟ್ ಮಾಡಿ.
* ಫ್ಯಾಕ್ಟರಿ ರಿಸೆಟ್ ಮಾಡುವುದರಿಂದ ಬಹುತೇಕ ಮಾಲ್ವೇರ್ಗಳನ್ನು ತೆಗೆದು ಹಾಕಬಹುದು. ಆದರೆ ಇದರಿಂದ ಫೋನ್ನಲ್ಲಿ ಇರುವ ಫೋಟೋಗಳು, ನೋಟ್ಸ್ ಮತ್ತು ಸಂಪರ್ಕಗಳಂತಹ ಮಾಹಿತಿ ಕೂಡ ಡಿಲೀಟ್ ಆಗುತ್ತವೆ. ಆದ್ದರಿಂದ ಫೋನ್ ಅನ್ನು ರಿಸೆಟ್ ಮಾಡುವ ಮೊದಲು ಡೇಟಾವನ್ನು ಬ್ಯಾಕಪ್ ಮಾಡಿ. ಆದರೆ, ಅಪ್ಲಿಕೇಶನ್ ಗಳನ್ನು ಬ್ಯಾಕಪ್ ಮಾಡಬೇಡಿ. ವಿಶೇಷವಾಗಿ ಫೋನ್ನಲ್ಲಿ ಮಾಲ್ವೇರ್ ಇದೆ ಎಂದು ನೀವು ಅನುಮಾನಿಸಿದರೆ, ಮೂಲ ಅಪ್ಲಿಕೇಶನ್ಗಳನ್ನು ಬ್ಯಾಕಪ್ ಮಾಡಬೇಡಿ. ಮರು-ಡೌನ್ ಲೋಡ್ ಮಾಡಬೇಕಾದ ಅಪ್ಲಿಕೇಶನ್ ಗಳ ಹೆಸರುಗಳನ್ನು ಬರೆಯಿರಿ. ಅವು ವಿಶ್ವಾಸಾರ್ಹ ಎಂದು ನಿಮಗೆ ತಿಳಿದಿದ್ದರೆ ಮಾತ್ರ ಅವುಗಳನ್ನು ಡೌನ್ಲೋಡ್ ಮಾಡಿ
* ಹೆಚ್ಚುವರಿ ಭದ್ರತೆಗಾಗಿ, ಎಲ್ಲಾ ಪ್ರಮುಖ ಅಪ್ಲಿಕೇಶನ್ಗಳಿಗೆ ಟು ಸ್ಟೆಪ್ ದೃಢೀಕರಣವನ್ನು ಹೊಂದಿಸಬೇಕು
* ಅಪ್ಲಿಕೇಶನ್ಗಳಿಗೆ ನೀಡಲಾದ ಅನುಮತಿಗಳನ್ನು ಪರಿಶೀಲಿಸಿ. ಫೋನ್ ವೈಶಿಷ್ಟ್ಯಗಳು ಮತ್ತು ಡೇಟಾಗೆ ಅನಗತ್ಯ ಪ್ರವೇಶವನ್ನು ನಿಷ್ಕ್ರಿಯಗೊಳಿಸಬೇಕು
* ಬ್ಯಾಂಕ್ ಖಾತೆಗಳು, ಇ-ಮೇಲ್ಗಳು ಮತ್ತು ಇತರ ಗೌಪ್ಯ ಖಾತೆಗಳಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆಯ ಮೇಲೆ ನಿಗಾ ಇರಿಸಿ
* ಸಮಸ್ಯೆಯನ್ನು ಹೇಗೆ ಪರಿಹರಿಸುವುದು ಎಂದು ನಿಮಗೆ ತಿಳಿದಿಲ್ಲದಿದ್ದರೆ, ಸೈಬರ್ ಭದ್ರತಾ ತಜ್ಞರ ಸಹಾಯವನ್ನು ತೆಗೆದುಕೊಳ್ಳಿ
ಫೋನ್ ಹೇಗೆ ಹ್ಯಾಕ್ ಮಾಡಲಾಗುತ್ತದೆ? : ಸ್ಮಾರ್ಟ್ಫೋನ್ ಹ್ಯಾಕ್ ಮಾಡಲು ಹ್ಯಾಕರ್ಗಳು ವಿವಿಧ ವಿಧಾನಗಳನ್ನು ಬಳಸುತ್ತಾರೆ. ಫಿಶಿಂಗ್ ದಾಳಿಗಳು, ಸ್ಮಿಶಿಂಗ್ ದಾಳಿಗಳು, ಸ್ಪೈವೇರ್, ಅಸುರಕ್ಷಿತ ವೈಫೈ ಮತ್ತು ದುರುದ್ದೇಶಪೂರಿತ ಅಪ್ಲಿಕೇಶನ್ಗಳನ್ನು ಇದಕ್ಕಾಗಿ ಬಳಸಲಾಗುತ್ತದೆ. ಫಿಶಿಂಗ್ ಅನ್ನು ಇಮೇಲ್, ಪಠ್ಯ ಸಂದೇಶಗಳು ಮತ್ತು ಫೋನ್ ಕರೆಗಳ ಮೂಲಕ ಮಾಡಲಾಗುತ್ತದೆ. ಇವು ವಿಶ್ವಾಸಾರ್ಹ ಮೂಲಗಳು ಎಂದು ನಂಬುವಂತೆ ಜನರನ್ನು ಮೋಸಗೊಳಿಸಲಾಗುತ್ತದೆ. ಸ್ಮಿಶಿಂಗ್ ಎಂಬುದು ಎಸ್ಎಂಎಸ್ ಮತ್ತು ಫಿಶಿಂಗ್ನ ಸಂಯೋಜನೆಯಾಗಿದೆ. ಇಮೇಲ್ ಗಳಿಗಿಂತ ಪಠ್ಯ ಸಂದೇಶಗಳು ಹೆಚ್ಚು ವಿಶ್ವಾಸಾರ್ಹವಾಗಿವೆ. ಆದ್ದರಿಂದ ಸೈಬರ್ ಅಪರಾಧಿಗಳು ಮೋಸ ಮಾಡಲು ಎಸ್ ಎಂಎಸ್ ಅನ್ನು ಬಳಸುತ್ತಾರೆ.
ಮೊದಲಿಗೆ, ದುರುದ್ದೇಶಪೂರಿತ ಲಿಂಕ್ ಹೊಂದಿರುವ ಸಂದೇಶವನ್ನು ಕಳುಹಿಸಲಾಗುತ್ತದೆ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯುವ ಮೂಲಕ ವಂಚನೆ ಮಾಡಲಾಗುತ್ತದೆ. ಸ್ಪೈವೇರ್ ಒಂದು ರೀತಿಯ ಮಾಲ್ವೇರ್ ಆಗಿದೆ. ವಂಚಕರು ನಮ್ಮ ಹಸ್ತಕ್ಷೇಪವಿಲ್ಲದೆ ಮತ್ತು ನಮಗೆ ತಿಳಿಯದೆ ಅದನ್ನು ಫೋನ್ನಲ್ಲಿ ಇನ್ಸ್ಟಾಲ್ ಮಾಡುತ್ತಾರೆ. ಇದು ನಮ್ಮ ಮಾಹಿತಿಯನ್ನು ರಹಸ್ಯವಾಗಿ ಕದಿಯುತ್ತದೆ. ಸ್ಪೈವೇರ್ ಆಡ್ವೇರ್, ಟ್ರೋಜನ್ಗಳು, ಇಂಟರ್ನೆಟ್ ಟ್ರ್ಯಾಕರ್ಗಳು, ಕೀಬೋರ್ಡ್ ಲಾಗರ್ಗಳು ಇತ್ಯಾದಿಗಳನ್ನು ಇವು ಒಳಗೊಂಡಿವೆ. ಸಾರ್ವಜನಿಕ ವೈ-ಫೈನಂತಹ ಅಸುರಕ್ಷಿತ ವೈ-ಫೈ ಬಳಸುವಾಗ, ಹ್ಯಾಕರ್ ಗಳು ಫೋನ್ ಅನ್ನು ಸುಲಭವಾಗಿ ಪ್ರವೇಶಿಸಬಹುದು.
ಹ್ಯಾಕಿಂಗ್ ತಪ್ಪಿಸಲು ಸಾಧ್ಯವೇ?
* ಪಾಸ್ವರ್ಡ್ ಮ್ಯಾನೇಜರ್ನಂಥ ಸುರಕ್ಷಿತ ಅಪ್ಲಿಕೇಶನ್ ನಿಮ್ಮ ಬಳಿ ಇರದಿದ್ದರೆ ಪಾಸ್ವರ್ಡ್ಗಳು ಮತ್ತು ಕ್ರೆಡಿಟ್ ಕಾರ್ಡ್ ವಿವರಗಳಂತಹ ಸೂಕ್ಷ್ಮ ಮಾಹಿತಿಯನ್ನು ನಿಮ್ಮ ಫೋನ್ನಲ್ಲಿ ಸೇವ್ ಮಾಡಬೇಡಿ.
* ಇತರರು ಊಹಿಸಲು ಸಾಧ್ಯವಾಗದ ಬಲವಾದ ಪಾಸ್ ವರ್ಡ್ ರಚಿಸಿ
* ಪಾಸ್ ವರ್ಡ್ ನೊಂದಿಗೆ ಪ್ರಮುಖ ಅಪ್ಲಿಕೇಶನ್ ಗಳನ್ನು ಲಾಕ್ ಮಾಡಿ
* ಬಳಸುವಾಗ ಬ್ಲೂಟೂತ್ ಅನ್ನು ಆನ್ ಮಾಡಬೇಕು. ಇತರ ಸಮಯಗಳಲ್ಲಿ ಅದನ್ನು ಸ್ವಿಚ್ ಆಫ್ ಮಾಡಬೇಕು
* ಸಾಂದರ್ಭಿಕ ಪಾಪ್ಅಪ್ಗಳು ಅಥವಾ ಬ್ಯಾಟರಿ ಬೇಗನೆ ಖಾಲಿಯಾಗುವಂತಹ ಯಾವುದೇ ಅಸಾಮಾನ್ಯ ಚಟುವಟಿಕೆಯ ಮೇಲೆ ನಿಗಾ ಇರಿಸಿ
* ಸಾಫ್ಟ್ವೇರ್ ಮತ್ತು ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ಗಳು ಬಿಡುಗಡೆಯಾದ ಕೂಡಲೇ ಅವನ್ನು ಅಪ್ಡೇಟ್ ಮಾಡಬೇಕು.
* ಡೇಟಾ ಸಂರಕ್ಷಣೆಗಾಗಿ ಫೋನ್ ಅನ್ನು ಆಗಾಗ್ಗೆ ಬ್ಯಾಕಪ್ ಮಾಡಿ
* ಸಾರ್ವಜನಿಕ ವೈ-ಫೈ ನೆಟ್ ವರ್ಕ್ ಬಳಸುವಾಗ ಜಾಗರೂಕರಾಗಿರಿ. ಹೆಚ್ಚುವರಿ ಭದ್ರತೆಗಾಗಿ ಪಿಪಿಎನ್ ಅನ್ನು ಬಳಸಬೇಕು
* ವಿಶ್ವಾಸಾರ್ಹ ಮೊಬೈಲ್ ಭದ್ರತಾ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ
ಇದನ್ನೂ ಓದಿ : ನಿತ್ಯ ಬರ್ತಿವೆ ಸರಾಸರಿ 12 ಸ್ಪ್ಯಾಮ್ ಮೆಸೇಜುಗಳು; ವಂಚನೆಗೆ ಇಂಬು ನೀಡುತ್ತಿದೆ ಎಐ