ನವದೆಹಲಿ : ಕಾರ್ ಸೀಟ್ ಬೆಲ್ಟ್ ಅಲಾರ್ಮ್ ಸ್ಟಾಪರ್ ಕ್ಲಿಪ್‌ಗಳ ಮಾರಾಟವನ್ನು ನಿಲ್ಲಿಸುವಂತೆ ಅಮೆಜಾನ್, ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್ ಮತ್ತು ಇತರ ಎರಡು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಗ್ರಾಹಕ ಸಂರಕ್ಷಣಾ ನಿಯಂತ್ರಕ (ಸಿಸಿಪಿಎ) ಶುಕ್ರವಾರ ನಿರ್ದೇಶಿಸಿದೆ. ಸೀಟ್ ಬೆಲ್ಟ್ ಅಲಾರ್ಮ್ ಸ್ಟಾಪರ್ ಕ್ಲಿಪ್‌ಗಳ ಮಾರಾಟ ಕುರಿತಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿತ್ತು.
ಹೆದ್ದಾರಿ ಸಚಿವಾಲಯದ ಪ್ರಕಾರ 2021 ರಲ್ಲಿ 16,000 ಕ್ಕೂ ಹೆಚ್ಚು ಜನರು ಸೀಟ್ ಬೆಲ್ಟ್ ಧರಿಸದ ಕಾರಣ ಸಾವನ್ನಪ್ಪಿದ್ದಾರೆ. ರಸ್ತೆ ಅಪಘಾತ ಪ್ರಕರಣಗಳಲ್ಲಿ ಬಲಿಯಾದವರಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಜನ 18-45 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಸರ್ಕಾರ ಹೇಳಿದೆ. ಈ ಕ್ಲಿಪ್‌ಗಳನ್ನು ಬಳಸಿರುವಾಗ ಕಾರು ಅಪಘಾತಕ್ಕೀಡಾದರೆ ಅಂಥ ಸಂದರ್ಭದಲ್ಲಿ ವಿಮಾ ಕಂಪನಿಗಳು ವಿಮಾ ಕ್ಲೇಮ್ ನಿರಾಕರಿಸಬಹುದು. ಈ ಅಪಾಯಕಾರಿ ಕ್ಲಿಪ್‌ಗಳ ತಯಾರಿಕೆ ಅಥವಾ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಸಿಸಿಪಿಎ ಮನವಿ ಮಾಡಿದೆ.
ಸಿಸಿಪಿಎ ಆದೇಶದ ಪ್ರಕಾರ ಎಲ್ಲ ಐದು ಪ್ಲಾಟ್‌ಫಾರ್ಮ್‌ಗಳು ಅನುಸರಣಾ ವರದಿಗಳನ್ನು ಸಲ್ಲಿಸಿದ್ದು, ಸರಿಸುಮಾರು 13,118 ಕಾರ್ ಸೀಟ್ ಬೆಲ್ಟ್ ಅಲಾರ್ಮ್ ಸ್ಟಾಪರ್ ಕ್ಲಿಪ್‌ಗಳನ್ನು ಇ - ಕಾಮರ್ಸ್ ಪ್ಲಾಟ್ಫಾರ್ಮ್ಗಳಿಂದ ತೆಗೆದುಹಾಕಲಾಗಿದೆ. ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989 ರ ನಿಯಮ 138 ರ ಅಡಿ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ.
ಸೀಟ್ ಬೆಲ್ಟ್ ಅಲಾರ್ಮ್ ಸ್ಟಾಪರ್ಸ್ ಎಂದು ಕರೆಯಲ್ಪಡುವ ಕ್ಲಿಪ್‌ಗಳನ್ನು ಬೀಪ್ ಅನ್ನು ನಿಶ್ಯಬ್ದಗೊಳಿಸಲು ಬಳಸಲಾಗುತ್ತದೆ. ಅದು ಚಾಲಕ ಮತ್ತು ಪ್ರಯಾಣಿಕರಿಗೆ ಬಕಲ್ ಅಪ್ ಮಾಡಲು ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಡ್ರೈವ್‌ಸ್ಪಾರ್ಕ್ ಪ್ರಕಾರ, ಸೀಟ್ ಬೆಲ್ಟ್ ಬಕಲ್‌ಗೆ ಅಳವಡಿಸಿದ ನಂತರ ವಾಹನದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಸೀಟ್‌ಬೆಲ್ಟ್‌ಗಳನ್ನು ಧರಿಸಿದ್ದಾನೆ ಎಂದು ಭಾವಿಸುವಂತೆ ಲಗತ್ತು ಸೀಟ್ ಬೆಲ್ಟ್-ಲಾಕಿಂಗ್ ವ್ಯವಸ್ಥೆಯನ್ನು ವಂಚಿಸುತ್ತದೆ.
ಭಾರತದಲ್ಲಿನ ಬಹುಪಾಲು ವಾಹನಗಳು ಮುಂಭಾಗದ ಪ್ರಯಾಣಿಕರ ಸೀಟ್ ಬೆಲ್ಟ್ ಎಚ್ಚರಿಕೆ ಸಾಧನಗಳನ್ನು ಒಳಗೊಂಡಿವೆ. ಮುಂಭಾಗದ ಪ್ರಯಾಣಿಕರು ಸರಿಯಾಗಿ ಬೆಲ್ಟ್ ಹಾಕಿಕೊಂಡಿಲ್ಲದಿದ್ದರೆ ಕೆಲ ಕಾರುಗಳು ಮುಂದಕ್ಕೆ ಚಲಿಸುವುದೇ ಇಲ್ಲ. ಆದರೆ ಹಿಂಬದಿಯ ಪ್ರಯಾಣಿಕರು ಅಂತಹ ಸುರಕ್ಷತಾ ವೈಶಿಷ್ಟ್ಯವನ್ನು ಹೊಂದಿರುವುದಿಲ್ಲ. ಎಲ್ಲ ರೀತಿಯ ಸೀಟ್ ಬೆಲ್ಟ್ ಬೀಪ್ ಅಲಾರ್ಮ್ ಸ್ಟಾಪರ್‌ಗಳನ್ನು ಕಾನೂನುಬಾಹಿರಗೊಳಿಸಲಾಗುವುದು ಎಂದು ಈ ಹಿಂದೆ ಸಚಿವ ಗಡ್ಕರಿ ಘೋಷಿಸಿದ್ದರು.
ಇತ್ತೀಚೆಗೆ ಟಾಟಾ ಮೋಟಾರ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮಿಸ್ತ್ರಿ ಅವರು ಅಹಮದಾಬಾದ್‌ನಿಂದ ಮುಂಬೈಗೆ ಮರ್ಸಿಡಿಸ್ ಕಾರನ್ನು ಚಲಾಯಿಸುತ್ತಿದ್ದಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಈ ಅಪಘಾತ ಹೇಗೆ ಸಂಭವಿಸಿತ್ತು ಎಂಬ ಬಗ್ಗೆ ಹಲವಾರು ವಾದಗಳಿವೆ. ಆದರೆ ಚಾಲಕನ ಅಸಡ್ಡೆ ಚಾಲನೆ ಮತ್ತು ಹಿಂಬದಿಯಲ್ಲಿ ಮಿಸ್ತ್ರಿ ಬೆಲ್ಟ್ ಹಾಕಿಲ್ಲದಿದ್ದರಿಂದ ಸಾವು ಸಂಭವಿಸಿದೆ ಎಂಬ ವಾದಕ್ಕೆ ಪುಷ್ಟಿ ಸಿಕ್ಕಿದೆ.
ಇದನ್ನೂ ಓದಿ : ಕೋವಿಡ್ ಎಮರ್ಜೆನ್ಸಿ ಅಂತ್ಯ: ವೈದ್ಯಕೀಯ ಸಾಧನ ಕಂಪನಿಗಳ ಮಾರಾಟ ಇಳಿಕೆ ಸಾಧ್ಯತೆ