ಬೆಂಗಳೂರು: ಕಳೆದ ವರ್ಷ ಗೂಗಲ್ ತನ್ನ ಕೃತಕ ಬುದ್ಧಿಮತ್ತೆ ಸಾಫ್ಟ್ವೇರ್ ಬಾರ್ಡ್ ಅನ್ನು ಲಾಂಚ್ ಮಾಡಿದಾಗ ಅದು ಪದೇ ಪದೆ ತಪ್ಪು ಉತ್ತರಗಳನ್ನು ನೀಡುವ ಮೂಲಕ ವ್ಯಾಪಕ ಟೀಕೆಗೊಳಗಾಗಿತ್ತು. ಆದರೆ ಕ್ರಮೇಣ ಅದರ ಸಾಮರ್ಥ್ಯ ಸುಧಾರಣೆಯಾಗಿ ತಪ್ಪುಗಳು ನಿಂತು ಹೋದವು. ಈಗ ಗೂಗಲ್ ತನ್ನ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ ಎಐ ಸಾಫ್ಟ್ವೇರ್ ಜೆಮಿನಿಯನ್ನು ಲಾಂಚ್ ಮಾಡಲು ಯೋಜಿಸುತ್ತಿದೆ.
ಇತ್ತೀಚಿನ ವರದಿಗಳ ಪ್ರಕಾರ, ಜೆಮಿನಿ ಇದೇ ವಾರ ಲಾಂಚ್ ಆಗಬೇಕಿತ್ತು. ಆದರೆ ಕೆಲ ಪ್ರಶ್ನೆಗಳಿಗೆ ಅದು ನಿರೀಕ್ಷಿತ ಮಟ್ಟದ ಸರಿಯಾದ ಉತ್ತರಗಳನ್ನು ನೀಡದ ಕಾರಣದಿಂದ ಅದರ ಬಿಡುಗಡೆಯನ್ನು ವಿಳಂಬ ಮಾಡಲಾಗಿದೆ ಎಂದು ವರದಿಗಳು ಹೇಳಿವೆ.
ದಿ ಇನ್ಫರ್ಮೇಷನ್ ವರದಿಯ ಪ್ರಕಾರ, ಗೂಗಲ್ ಜೆಮಿನಿಯ ಸಾರ್ವಜನಿಕ ಬಿಡುಗಡೆಯನ್ನು ಜನವರಿಗೆ ಮುಂದೂಡಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಮೂಲಗಳು ತಿಳಿಸಿವೆ. ಗೂಗಲ್ ಸಿಇಒ ಸುಂದರ್ ಪಿಚೈ ಇತ್ತೀಚೆಗೆ ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ನಲ್ಲಿ ಮುಂದಿನ ವಾರ ನಡೆಯಬೇಕಿದ್ದ ಜೆಮಿನಿ ಬಿಡುಗಡೆ ಸಮಾರಂಭವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಕೆಲ ಇಂಗ್ಲಿಷೇತರ ಪ್ರಶ್ನೆಗಳಿಗೆ ಉತ್ತರ ನೀಡಲು ಜೆಮಿನಿ ವಿಫಲವಾದ ನಂತರ ಕಂಪನಿ ಅದರ ಬಿಡುಗಡೆಯನ್ನು ಮುಂದೂಡಿದೆ.
ಈ ವರ್ಷದ ಮೇ ತಿಂಗಳಲ್ಲಿ ಗೂಗಲ್ನ ಐ / ಒ ಈವೆಂಟ್ನಲ್ಲಿ ಜೆಮಿನಿ ಬಗ್ಗೆ ಘೋಷಿಸಿದಾಗ, ಇದು ಓಪನ್ಎಐನ ವೈರಲ್ ಎಐ ಸಾಧನ ಚಾಟ್ ಜಿಪಿಟಿಗೆ ಪೈಪೋಟಿ ನೀಡಲಿದೆ ಎಂದು ಭಾವಿಸಲಾಗಿತ್ತು. ಡೀಪ್ ಮೈಂಡ್ ಸಿಇಒ ಡೆಮಿಸ್ ಹಸ್ಸಾಬಿಸ್ ಅವರು ಜೆಮಿನಿ ಚಾಟ್ ಜಿಪಿಟಿಗಿಂತ ಹೆಚ್ಚು ಶಕ್ತಿಶಾಲಿಯಾಗಲಿದೆ ಎಂದು ಹೇಳಿದ್ದರು.
ಕೃತಕ ಬುದ್ಧಿಮತ್ತೆ (ಎಐ) ಎಂಬುದು ಕಂಪ್ಯೂಟರ್ ವಿಜ್ಞಾನದ ವಿಶಾಲವಾದ ಶಾಖೆಯಾಗಿದೆ. ಇದು ಸಾಮಾನ್ಯವಾಗಿ ಮಾನವ ಬುದ್ಧಿಮತ್ತೆಯ ಅಗತ್ಯವಿರುವ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಸ್ಮಾರ್ಟ್ ಯಂತ್ರಗಳನ್ನು ನಿರ್ಮಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತದೆ.
ಎಐ ಬಹು ವಿಧಾನಗಳನ್ನು ಹೊಂದಿರುವ ಅಂತರ್ ಶಿಸ್ತೀಯ ವಿಜ್ಞಾನವಾಗಿದ್ದರೂ, ಮಶೀನ್ ಲರ್ನಿಂಗ್ ಮತ್ತು ಡೀಪ್ ಲರ್ನಿಂಗ್ನಲ್ಲಿನ ಪ್ರಗತಿಗಳು, ನಿರ್ದಿಷ್ಟವಾಗಿ, ಟೆಕ್ ಉದ್ಯಮದ ಪ್ರತಿಯೊಂದು ಕ್ಷೇತ್ರದಲ್ಲೂ ಅಗಾಧ ಬದಲಾವಣೆಗಳನ್ನು ತರುತ್ತಿವೆ. ವಿಶಾಲವಾಗಿ ಹೇಳುವುದಾದರೆ, ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ಸಾಮಾನ್ಯವಾಗಿ ಮಾನವ ಅರಿವಿನ ಕಾರ್ಯಗಳಿಗೆ ಸಂಬಂಧಿಸಿದ ಕೆಲಸಗಳನ್ನು ತಾವೇ ಮಾಡಬಹುದು.
ಇದನ್ನೂ ಓದಿ : ವಾಟ್ಸ್ಆ್ಯಪ್ ಸ್ಟೇಟಸ್ ಇನ್ಸ್ಟಾದೊಂದಿಗೆ ನೇರ ಶೇರಿಂಗ್; ಬರಲಿದೆ ಹೊಸ ವೈಶಿಷ್ಟ್ಯ