ನವದೆಹಲಿ: ಡೀಫಾಲ್ಟ್ ಆಗಿ ಥರ್ಡ್ ಪಾರ್ಟಿ ಕುಕೀಗಳಿಗೆ ವೆಬ್‌ಸೈಟ್ ಪ್ರವೇಶವನ್ನು ನಿರ್ಬಂಧಿಸುವ ಮೂಲಕ ಕ್ರಾಸ್-ಸೈಟ್ ಟ್ರ್ಯಾಕಿಂಗ್ ಮಿತಿಗೊಳಿಸುವ ಹೊಸ ವೈಶಿಷ್ಟ್ಯವನ್ನು ಗೂಗಲ್ ಪರೀಕ್ಷಿಸಲು ಪ್ರಾರಂಭಿಸಿದೆ. ಪರೀಕ್ಷೆಯ ಭಾಗವಾಗಿ ಆರಂಭದಲ್ಲಿ ಕಂಪನಿಯು ಜಾಗತಿಕವಾಗಿ ಶೇಕಡಾ 1ರಷ್ಟು ಕ್ರೋಮ್ ಬಳಕೆದಾರರಿಗೆ (ಸುಮಾರು 30 ಮಿಲಿಯನ್ ಬಳಕೆದಾರರು) 'ಟ್ರ್ಯಾಕಿಂಗ್ ಪ್ರೊಟೆಕ್ಷನ್' ವೈಶಿಷ್ಟ್ಯವನ್ನು ಜಾರಿಗೊಳಿಸಿದೆ. ಇದು 2024ರ ದ್ವಿತೀಯಾರ್ಧದ ವೇಳೆಗೆ ಎಲ್ಲರಿಗೂ ಥರ್ಡ್-ಪಾರ್ಟಿ ಕುಕೀಗಳನ್ನು ಹಂತ ಹಂತವಾಗಿ ತೆಗೆದುಹಾಕುವ ಗೂಗಲ್ನ 'ಪ್ರೈವಸಿ ಸ್ಯಾಂಡ್ಬಾಕ್ಸ್' ಉಪಕ್ರಮದ ಭಾಗವಾಗಿದೆ.
"ಈ ಕ್ರಮವು ಯುಕೆಯ ಸ್ಪರ್ಧೆ ಮತ್ತು ಮಾರುಕಟ್ಟೆ ಪ್ರಾಧಿಕಾರವು ಕಡ್ಡಾಯಗೊಳಿಸಿರುವ ನಿಯಮಗಳ ಪೈಕಿ ಬಾಕಿ ಉಳಿದ ನಿಯಮಗಳನ್ನು ಪೂರೈಸುವ ಅಗತ್ಯಕ್ಕೆ ಪೂರಕವಾಗಿದೆ" ಎಂದು ಗೂಗಲ್ ಹೇಳಿದೆ.
ಈ ವರ್ಷದ ಕೊನೆಯಲ್ಲಿ ಕುಕೀಗಳನ್ನು ತೆಗೆದುಹಾಕಲು 'ಟ್ರ್ಯಾಕಿಂಗ್ ಪ್ರೊಟೆಕ್ಷನ್' ವೈಶಿಷ್ಟ್ಯವನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಕಂಪನಿಯು ಯೋಜಿಸಿದೆ. ಥರ್ಡ್-ಪಾರ್ಟಿ ಕುಕೀಗಳು ಸುಮಾರು ಮೂರು ದಶಕಗಳಿಂದ ವೆಬ್‌ನ ಮೂಲಭೂತ ಭಾಗವಾಗಿದೆ. ನಿಮ್ಮ ವೆಬ್‌ಸೈಟ್ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಅವುಗಳನ್ನು ಬಳಸಬಹುದಾದರೂ, ಸೈಟ್ಗಳು ಅವುಗಳನ್ನು ಗ್ರಾಹಕರ ಆನ್ಲೈನ್ ಅನುಭವಗಳನ್ನು ಉತ್ತಮಗೊಳಿಸಲು ಸಹ ಬಳಸಿವೆ. ಉದಾಹರಣೆಗೆ- ಲಾಗ್ ಇನ್ ಮಾಡಲು ನಿಮಗೆ ಸಹಾಯ ಮಾಡುವುದು ಅಥವಾ ನಿಮಗೆ ಸರಿ ಹೊಂದುವ ಜಾಹೀರಾತುಗಳನ್ನು ತೋರಿಸುವುದು.
"ಕ್ರೋಮ್ನಲ್ಲಿ ಥರ್ಡ್-ಪಾರ್ಟಿ ಕುಕೀಗಳನ್ನು ಹಂತಹಂತವಾಗಿ ತೆಗೆದುಹಾಕಲು ನಾವು ಜವಾಬ್ದಾರಿಯುತ ವಿಧಾನವನ್ನು ಅನುಸರಿಸುತ್ತಿದ್ದೇವೆ" ಎಂದು ಪ್ರೈವಸಿ ಸ್ಯಾಂಡ್ಬಾಕ್ಸ್ನ ಗೂಗಲ್ ಉಪಾಧ್ಯಕ್ಷ ಆಂಥೋನಿ ಚಾವೆಜ್ ಕಳೆದ ತಿಂಗಳು 'ಟ್ರ್ಯಾಕಿಂಗ್ ಪ್ರೊಟೆಕ್ಷನ್' ಪರೀಕ್ಷೆಯನ್ನು ಘೋಷಿಸುವಾಗ ಹೇಳಿದ್ದರು. "ಪ್ರೈವಸಿ ಸ್ಯಾಂಡ್ ಬಾಕ್ಸ್ ನೊಂದಿಗೆ ಕ್ರೋಮ್ ನಲ್ಲಿ ಥರ್ಡ್ ಪಾರ್ಟಿ ಕುಕೀಗಳನ್ನು ಹಂತ ಹಂತವಾಗಿ ತೆಗೆದುಹಾಕಲು ನಾವು ಜವಾಬ್ದಾರಿಯುತ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ಪ್ರಮುಖ ಬಳಕೆಯ ಪ್ರಕರಣಗಳನ್ನು ಬೆಂಬಲಿಸುವ ಸೈಟ್ಗಳಿಗಾಗಿ ನಾವು ಹೊಸ ಸಾಧನಗಳನ್ನು ನಿರ್ಮಿಸಿದ್ದೇವೆ ಮತ್ತು ಡೆವಲಪರ್ಗಳಿಗೆ ಪರಿವರ್ತನೆ ಮಾಡಲು ಸಮಯ ನೀಡಿದ್ದೇವೆ" ಎಂದು ಅವರು ಹೇಳಿದರು.
ಕುಕೀಗಳು (ಸಾಮಾನ್ಯವಾಗಿ ಇಂಟರ್ನೆಟ್ ಕುಕೀಗಳು ಎಂದು ಕರೆಯಲ್ಪಡುತ್ತವೆ) ನೀವು ನೆಟ್ವರ್ಕ್ ಅನ್ನು ಬಳಸುವಾಗ ನಿಮ್ಮ ಕಂಪ್ಯೂಟರ್ ಅನ್ನು ಗುರುತಿಸಲು ಬಳಸಲಾಗುವ ಬಳಕೆದಾರ ಹೆಸರು ಮತ್ತು ಪಾಸ್ ವರ್ಡ್ ನಂಥ ಡೇಟಾದ ಸಣ್ಣ ತುಣುಕುಗಳನ್ನು ಹೊಂದಿರುವ ಪಠ್ಯ ಫೈಲ್ಗಳಾಗಿವೆ. ನಿರ್ದಿಷ್ಟ ಬಳಕೆದಾರರನ್ನು ಗುರುತಿಸಲು ಮತ್ತು ಅವರ ವೆಬ್ ಬ್ರೌಸಿಂಗ್ ಅನುಭವವನ್ನು ಸುಧಾರಿಸಲು ನಿರ್ದಿಷ್ಟ ಕುಕೀಗಳನ್ನು ಬಳಸಲಾಗುತ್ತದೆ.
ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಇಂಧನ ಕೋಶದ ಪರೀಕ್ಷೆ ಯಶಸ್ವಿ; ಇಸ್ರೋ