ಸ್ಯಾನ್ ಫ್ರಾನ್ಸಿಸ್ಕೋ : ಪೋರ್ಚುಗಲ್, ಬರ್ಮುಡಾ ಮತ್ತು ಯುಎಸ್ ಅನ್ನು ಸಂಪರ್ಕಿಸುವ ಹೊಸ ಅಟ್ಲಾಂಟಿಕ್ ಸಬ್ ಸೀ ಕೇಬಲ್ ವ್ಯವಸ್ಥೆಯೊಂದನ್ನು ಜಾರಿಗೊಳಿಸುವುದಾಗಿ ಗೂಗಲ್ ಸೋಮವಾರ ಘೋಷಿಸಿದೆ. ನುವೆಮ್ (Nuvem) ಎಂದು ಕರೆಯಲ್ಪಡುವ ಈ ಕೇಬಲ್ ಜಾಲ ಅಟ್ಲಾಂಟಿಕ್ನಾದ್ಯಂತ ನೆಟ್ವರ್ಕ್ ವ್ಯವಸ್ಥೆಯನ್ನು ಸುಧಾರಿಸಲಿದ್ದು, ಡಿಜಿಟಲ್ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಹಾಯಕವಾಗಲಿದೆ.
ಹೊಸ ಕೇಬಲ್ ಜಾಲವು ಅಂತರರಾಷ್ಟ್ರೀಯ ನೆಟ್ವರ್ಕ್ ಮಾರ್ಗಗಳಲ್ಲಿ ವೈವಿಧ್ಯತೆಯನ್ನು ತರಲಿದೆ ಮತ್ತು ಖಂಡಗಳು ಮತ್ತು ದೇಶಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಮೂಲಸೌಕರ್ಯಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಗೂಗಲ್ ಹೇಳಿಕೆಯಲ್ಲಿ ತಿಳಿಸಿದೆ. ನುವೆಮ್ ಬರ್ಮುಡಾವನ್ನು ಯುರೋಪ್ ನೊಂದಿಗೆ ಸಂಪರ್ಕಿಸುವ ಮೊದಲ ಕೇಬಲ್ ಸಂಪರ್ಕ ಜಾಲವಾಗಲಿದೆ.
"ಬರ್ಮುಡಾ ದೀರ್ಘಕಾಲದಿಂದ ಜಲಾಂತರ್ಗಾಮಿ ಕೇಬಲ್ ಮಾರುಕಟ್ಟೆಗೆ ಬದ್ಧವಾಗಿದೆ ಮತ್ತು ನಮ್ಮ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಅಟ್ಲಾಂಟಿಕ್ ಹಬ್ ಗೆ ನುವೆಮ್ ಕೇಬಲ್ ಅನ್ನು ನಾವು ಸ್ವಾಗತಿಸುತ್ತೇವೆ" ಎಂದು ಬರ್ಮುಡಾ ಉಪ ಪ್ರಧಾನಿ ಮತ್ತು ಗೃಹ ವ್ಯವಹಾರಗಳ ಸಚಿವ ವಾಲ್ಟರ್ ರೋಬನ್ ಹೇಳಿದರು. ಯುರೋಪಿನ ಮುಖ್ಯ ಭೂಭಾಗದ ನೈಋತ್ಯದಲ್ಲಿ ತನ್ನ ಕಾರ್ಯತಂತ್ರದ ಭೌಗೋಳಿಕ ಸ್ಥಳದಿಂದಾಗಿ ಮಾತ್ರವಲ್ಲದೆ ಡಿಜಿಟಲ್ ಆರ್ಥಿಕತೆಯ ಮೂಲಸೌಕರ್ಯವನ್ನು ಹೆಚ್ಚಿಸುವತ್ತ ದೇಶದ ಗಮನದಿಂದಾಗಿ ಪೋರ್ಚುಗಲ್ ಈಗಾಗಲೇ ಇದೇ ರೀತಿಯ ಸಬ್ ಸೀ ಕೇಬಲ್ ಗಳ ಬಂದರಾಗಿ ಮಾರ್ಪಟ್ಟಿದೆ.
ಅಮೆರಿಕದ ದಿಕ್ಕಿನಲ್ಲಿ ನೋಡುವುದಾದರೆ ನುವೆಮ್ ಅಮೆರಿಕದ ದಕ್ಷಿಣ ಕೆರೊಲಿನಾವನ್ನು ಸಂಪರ್ಕಿಸಲಿದೆ. ಕೇಬಲ್ ಜಾಲದಿಂದ ದಕ್ಷಿಣ ಕೆರೊಲಿನಾ ರಾಜ್ಯವು ತಂತ್ರಜ್ಞಾನ ಕೇಂದ್ರವಾಗಿ ಮತ್ತಷ್ಟು ಬಲವಾಗಲಿದೆ, ಸಂಪರ್ಕ ಮತ್ತು ಉದ್ಯೋಗಗಳನ್ನು ಹೆಚ್ಚಿಸಲಿದೆ ಎಂದು ಗೂಗಲ್ ಹೇಳಿದೆ. 2026 ರಲ್ಲಿ ಸೇವೆಗೆ ಸಿದ್ಧವಾಗುವ ನಿರೀಕ್ಷೆಯಿರುವ ನುವೆಮ್ ಸಂಪರ್ಕ ಜಾಲವನ್ನು ಬಲಪಡಿಸಿ ಪ್ರಪಂಚದಾದ್ಯಂತದ ಗೂಗಲ್ ಬಳಕೆದಾರರು ಮತ್ತು ಗೂಗಲ್ ಕ್ಲೌಡ್ ಗ್ರಾಹಕರಿಗೆ ಎದುರಾಗುತ್ತಿರುವ ಸಂಪರ್ಕದಲ್ಲಿನ ವಿಳಂಬವನ್ನು ಕಡಿಮೆ ಮಾಡುತ್ತದೆ.
ಸಬ್ ಸೀ ಅಥವಾ ಜಲಾಂತರ್ಗಾಮಿ ಕೇಬಲ್ ಗಳು ಫೈಬರ್ ಆಪ್ಟಿಕ್ ಕೇಬಲ್ಗಳಾಗಿವೆ. ಇದು ಸಾಗರ ತಳದಲ್ಲಿ ಹಾಕಲಾದ ಕೇಬಲ್ ಗಳ ಮೂಲಕ ಪ್ರಪಂಚದಾದ್ಯಂತದ ದೇಶಗಳನ್ನು ಸಂಪರ್ಕಿಸುತ್ತದೆ. ಈ ಕೇಬಲ್ಗಳು ಸಾಮಾನ್ಯವಾಗಿ ಸಾವಿರಾರು ಮೈಲುಗಳಷ್ಟು ಉದ್ದವಾಗಿದ್ದು, ದೊಡ್ಡ ಪ್ರಮಾಣದ ಡೇಟಾವನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ವೇಗವಾಗಿ ರವಾನಿಸುತ್ತವೆ. ಈ ಕೇಬಲ್ ಗಳು ಫೈಬರ್ ಗಳು ಎಂದು ಕರೆಯಲ್ಪಡುವ ನೂರಾರು ತೆಳುವಾದ ತಂತಿಗಳಿಂದ ಮಾಡಲ್ಪಟ್ಟಿರುತ್ತವೆ.
ಉದಾಹರಣೆಗೆ ನೋಡುವುದಾದರೆ- ನಾವು ವಿದೇಶದಲ್ಲಿರುವ ಸ್ನೇಹಿತರಿಗೆ ಫೋನ್ ಕರೆ ಮಾಡಿದಾಗ, ಇಮೇಲ್ ಕಳುಹಿಸಿದಾಗ ಅಥವಾ ಯೂಟ್ಯೂಬ್ ನಲ್ಲಿ ವೀಡಿಯೊವನ್ನು ಡೌನ್ ಲೋಡ್ ಮಾಡಿದಾಗ ಅಥವಾ ಅಪ್ ಲೋಡ್ ಮಾಡಿದಾಗ ಪ್ರಾಥಮಿಕವಾಗಿ ನಾವು ಡೇಟಾ ವರ್ಗಾಯಿಸುತ್ತೇವೆ. ಡೇಟಾವನ್ನು ಒಂದು ಮೂಲದಿಂದ ಇನ್ನೊಂದಕ್ಕೆ ವರ್ಗಾಯಿಸುವಾಗ ಆ ಡೇಟಾ ಸಾಗಿಸಲು ಒಂದು ಮಾಧ್ಯಮ ಬೇಕಾಗುತ್ತದೆ. ಈ ಮಾಧ್ಯಮವೇ ಸಬ್ ಸೀ ಕೇಬಲ್ಗಳು. ಸರಳವಾಗಿ ಹೇಳುವುದಾದರೆ ಅವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮಾಹಿತಿಯ ಬೈಟ್ಗಳನ್ನು ಸಾಗಿಸುತ್ತವೆ.
ಇದನ್ನೂ ಓದಿ : ಮನುಷ್ಯರಂತೆ ಕೆಲಸ ಮಾಡುವ 'ಆಪ್ಟಿಮಸ್'; ಇದು ಟೆಸ್ಲಾದ ಹ್ಯೂಮನಾಯ್ಡ್ ರೋಬೋಟ್