ವಾಷಿಂಗ್ಟನ್ : ಜೂನ್ 2023ನೇ ತಿಂಗಳು ಈ ಭೂಮಿ ಕಂಡ ಅತ್ಯಧಿಕ ಬಿಸಿಯಾದ ತಿಂಗಳು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ನ್ಯಾಷನಲ್ ಒಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ ನಡೆಸಿದ ಹವಾಮಾನ ವಿಶ್ಲೇಷಣೆಯ ಪ್ರಕಾರ ಜೂನ್ 2023ನೇ ತಿಂಗಳು ಇತಿಹಾಸದಲ್ಲೇ ಭೂಮಿಯು ತನ್ನ ಅತ್ಯಂತ ಬಿಸಿಯಾದ ಅವಧಿ ದಾಖಲಿಸಿದೆ.
ಜೂನ್ 2023 ರ ಸರಾಸರಿ ಜಾಗತಿಕ ತಾಪಮಾನವು ಜೂನ್ 2020 ರ ಹಿಂದಿನ ದಾಖಲೆಯನ್ನು ಮುರಿದಿದೆ. ಆದಾಗ್ಯೂ ತಾಪಮಾನದ ಏರಿಕೆ ಗಣನೀಯವಾಗಿಲ್ಲ (0.13 ಡಿಗ್ರಿ ಸೆಲ್ಸಿಯಸ್). ಜೂನ್‌ನಲ್ಲಿನ ಸರಾಸರಿ ಜಾಗತಿಕ ಮೇಲ್ಮೈ (ಭೂಮಿ ಮತ್ತು ಸಾಗರ) ತಾಪಮಾನವು ಸರಾಸರಿಗಿಂತ 1.05 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿತ್ತು. ಈ ಮೂಲಕ ಜೂನ್ 2023 ಭೂಮಿಯ ಅತಿ ಬಿಸಿಯಾದ ತಿಂಗಳು ಎಂದು ದಾಖಲೆಯಾಗಿದೆ.
20ನೇ ಶತಮಾನದ ಸರಾಸರಿ ತಾಪಮಾನವನ್ನು ಸತತ 47ನೇ ಬಾರಿಗೆ ಮೀರಿರುವ ಜೂನ್ ಆಗಿ 2023 ಮತ್ತು 532 ನೇ ಸತತ ತಿಂಗಳಾಗಿ ಈ ತಿಂಗಳು ಗುರುತಿಸಿಕೊಂಡಿದೆ. NOAA ವಿಶ್ಲೇಷಣೆಯ ಪ್ರಕಾರ 2023ನೇ ವರ್ಷವು 10 ಅತ್ಯಧಿಕ ಬಿಸಿಯಾದ ವರ್ಷಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ 100ಕ್ಕೆ ನೂರರಷ್ಟಿದೆ ಮತ್ತು ಅಗ್ರ ಐದರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಶೇಕಡಾ 97 ರಷ್ಟಿದೆ.
"ಕಳೆದ ಜೂನ್ ತಿಂಗಳು ಅತ್ಯಧಿಕ ಬಿಸಿಯಾದ ತಿಂಗಳಾಗಿತ್ತು ಎಂದು ನಾಸಾದ ದತ್ತಾಂಶಗಳು ತೋರಿಸಿವೆ. ಕಳಪೆ ಗಾಳಿಯ ಗುಣಮಟ್ಟ, ಶಾಖ ಸಂಬಂಧಿತ ಸಾವುಗಳು ಮತ್ತು ಕೆಟ್ಟ ಹವಾಮಾನ ಹೀಗೆ ಇದರ ಪರಿಣಾಮಗಳನ್ನು ನಾವು ನೇರವಾಗಿ ಅನುಭವಿಸಿದ್ದೇವೆ" ಎಂದು NASA ನಿರ್ವಾಹಕ ಬಿಲ್ ನೆಲ್ಸನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
NOAA ವಿಜ್ಞಾನಿಗಳು ಸಾಗರ ಮೇಲ್ಮೈ ತಾಪಮಾನದ ಅಸಂಗತತೆಯನ್ನು ಕಂಡುಕೊಂಡಿದ್ದಾರೆ. ದೀರ್ಘಾವಧಿಯ ಸರಾಸರಿಗಿಂತ ಸಾಗರ ಮೇಲ್ಮೈ ಎಷ್ಟು ಬೆಚ್ಚಗಿರುತ್ತದೆ ಅಥವಾ ತಂಪಾಗಿರುತ್ತದೆ ಮತ್ತು ಇದುವರೆಗೆ ದಾಖಲಾದ ಅತಿ ಹೆಚ್ಚು ಉಷ್ಣಾಂಶಗಳು ತಾಪಮಾನದ ಅಸಂಗತತೆಯಾಗಿದೆ. ಸತತ ಮೂರನೇ ತಿಂಗಳಲ್ಲಿ ಮುಂದುವರಿದಿದ್ದ ದುರ್ಬಲ ಎಲ್ ನಿನೊ ಪರಿಸ್ಥಿತಿಗಳು ಜೂನ್‌ನಲ್ಲಿ ಬಲಗೊಂಡಿದ್ದರಿಂದ ಜಾಗತಿಕ ಸಾಗರ ಮೇಲ್ಮೈ ತಾಪಮಾನವು ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿದೆ.
ಎಲ್ ನಿನೊ ಮತ್ತು ಲಾ ನಿನಾ ಸಮಭಾಜಕ ಪೆಸಿಫಿಕ್ ಪ್ರದೇಶದಲ್ಲಿನ ಸಾಗರ ತಾಪಮಾನದಲ್ಲಿನ ವ್ಯತ್ಯಾಸಗಳಿಂದ ಉಂಟಾಗುವ ಸಂಕೀರ್ಣ ಹವಾಮಾನದ ಮಾದರಿಗಳಾಗಿವೆ. ಅವು ಎಲ್ ನಿನೋ ಸದರ್ನ್ ಆಸಿಲೇಷನ್ (ENSO) ಸೈಕಲ್ ಎಂದು ಕರೆಯಲ್ಪಡುವ ಪರಸ್ಪರ ವಿರುದ್ಧದ ಹಂತಗಳಾಗಿವೆ. ENSO ಚಕ್ರವು ಪೂರ್ವ-ಮಧ್ಯ ಈಕ್ವಟೋರಿಯಲ್ ಪೆಸಿಫಿಕ್‌ನಲ್ಲಿ ಸಾಗರ ಮತ್ತು ವಾತಾವರಣದ ನಡುವಿನ ತಾಪಮಾನದಲ್ಲಿನ ಏರಿಳಿತಗಳನ್ನು ವಿವರಿಸುತ್ತದೆ. ಎಲ್ ನಿನೋ ಮತ್ತು ಲಾ ನಿನಾ ಹಂತಗಳು ಸಾಮಾನ್ಯವಾಗಿ ಒಂಬತ್ತರಿಂದ 12 ತಿಂಗಳುಗಳವರೆಗೆ ಇರುತ್ತದೆ. ಆದರೆ ಕೆಲ ಸುದೀರ್ಘ ಚಕ್ರಗಳು ವರ್ಷಗಳವರೆಗೆ ಇರುತ್ತದೆ.
ಇದನ್ನೂ ಓದಿ : Sudan Conflict: ಸುಡಾನ್ ಸಂಘರ್ಷ ಕೊನೆಗಾಣಿಸಲು ಸಾರ್ವಭೌಮ ಮಂಡಳಿ ಯತ್ನ