ಲಂಡನ್ : ಅಂಟಾರ್ಕ್ಟಿಕಾದಲ್ಲಿ ಸಮುದ್ರದ ಶಾಖದ ಅಲೆಗಳು ಉಂಟಾಗುವುದು ಮತ್ತು ಮಂಜುಗಡ್ಡೆ ಕರಗುವಿಕೆಯಂಥ ವಿಕೋಪದ ಸಾಧ್ಯತೆಗಳು ಹೆಚ್ಚು ಸಾಮಾನ್ಯ ಮತ್ತು ಹೆಚ್ಚು ತೀವ್ರವಾಗಲಿವೆ ಎಂದು ಸಂಶೋಧಕರು ಹೇಳಿದ್ದಾರೆ. ಜಾಗತಿಕ ತಾಪಮಾನ ಏರಿಕೆಯನ್ನು ಪ್ಯಾರಿಸ್ ಒಪ್ಪಂದದ ಗುರಿಯಾದ 1.5 ಡಿಗ್ರಿ ಸೆಲ್ಸಿಯಸ್ಗೆ ಸೀಮಿತಗೊಳಿಸಲು ಈಗ ಕಠಿಣ ಕ್ರಮದ ಅಗತ್ಯ ಎಂದು ಹೇಳಿರುವ ವಿಜ್ಞಾನಿಗಳು, ಹಿಮಗಡ್ಡೆಗಳ ಕರಗುವಿಕೆಯು ಭಾರಿ ವಿಕೋಪದ ಮುನ್ಸೂಚನೆಯಾಗಿರಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಫ್ರಂಟಿಯರ್ಸ್ ಇನ್ ಎನ್ವಿರಾನ್ಮೆಂಟಲ್ ಸೈನ್ಸ್ ಜರ್ನಲ್ನಲ್ಲಿ (Frontiers in Environmental Science) ಪ್ರಕಟವಾದ ಈ ಅಧ್ಯಯನವು ಹವಾಮಾನ, ಸಮುದ್ರದಲ್ಲಿನ ಹಿಮಗಡ್ಡೆಗಳು, ಸಾಗರ ತಾಪಮಾನ, ಹಿಮನದಿ ಮತ್ತು ಐಸ್ ಶೆಲ್ಫ್ ವ್ಯವಸ್ಥೆಗಳು ಮತ್ತು ಭೂಮಿ ಮತ್ತು ಸಮುದ್ರದ ಜೀವವೈವಿಧ್ಯತೆ ಸೇರಿದಂತೆ ಅಂಟಾರ್ಕ್ಟಿಕಾ ಮತ್ತು ದಕ್ಷಿಣ ಮಹಾಸಾಗರದಲ್ಲಿನ ವಿಕೋಪ ಘಟನೆಗಳ ಬಗ್ಗೆ ಸಂಶೋಧನಾ ಮಾಹಿತಿಯನ್ನು ಹೊಂದಿದೆ.
ಅಂಟಾರ್ಕ್ಟಿಕಾದ ದುರ್ಬಲ ಪರಿಸರಗಳು ಭವಿಷ್ಯದ ವರ್ಷಗಳಲ್ಲಿ ಮತ್ತು ದಶಕಗಳಲ್ಲಿ ಸಾಕಷ್ಟು ಒತ್ತಡ ಮತ್ತು ಹಾನಿಗೆ ಒಳಗಾಗಬಹುದು ಎಂದು ವರದಿ ಹೇಳಿದ್ದು, ಅವುಗಳನ್ನು ರಕ್ಷಿಸಲು ತುರ್ತಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವರದಿ ಕರೆ ನೀಡಿದೆ. ಅಂಟಾರ್ಕ್ಟಿಕ್ನಲ್ಲಾಗುತ್ತಿರುವ ಬದಲಾವಣೆಯು ಜಾಗತಿಕ ಪರಿಣಾಮಗಳನ್ನು ಬೀರಲಿದೆ ಎಂದು ಎಕ್ಸೆಟರ್ ವಿಶ್ವವಿದ್ಯಾಲಯದ ಪ್ರಮುಖ ಲೇಖಕ ಪ್ರೊಫೆಸರ್ ಮಾರ್ಟಿನ್ ಸೀಗರ್ಟ್ ಹೇಳಿದ್ದಾರೆ.
ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ಇಳಿಸುವುದು ಅಂಟಾರ್ಕ್ಟಿಕಾವನ್ನು ಸಂರಕ್ಷಿಸುವ ಅತ್ಯುತ್ತಮ ಕ್ರಮವಾಗಿದೆ ಮತ್ತು ಇದು ವಿಶ್ವದ ಪ್ರತಿಯೊಂದು ದೇಶ ಮತ್ತು ವ್ಯಕ್ತಿಗೆ ಮುಖ್ಯವಾಗಬೇಕು. ಅಂಟಾರ್ಕ್ಟಿಕಾದಲ್ಲಿ ಈಗ ನಡೆಯುತ್ತಿರುವ ಕ್ಷಿಪ್ರ ಬದಲಾವಣೆಗಳು ಅನೇಕ ದೇಶಗಳು ಅಂತರರಾಷ್ಟ್ರೀಯ ಒಪ್ಪಂದವನ್ನು ಉಲ್ಲಂಘಿಸಿದಂತಾಗುತ್ತಿದೆ ಎಂದು ಪ್ರೊಫೆಸರ್ ಸೀಗರ್ಟ್ ಹೇಳಿದರು.
ಅಂಟಾರ್ಕ್ಟಿಕ್ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳಾದ ಯುಕೆ, ಯುಎಸ್, ಭಾರತ ಮತ್ತು ಚೀನಾ ಸೇರಿದಂತೆ ಎಲ್ಲ ದೇಶಗಳು ಈ ದೂರದ ಮತ್ತು ದುರ್ಬಲ ಸ್ಥಳದ ಪರಿಸರವನ್ನು ಸಂರಕ್ಷಿಸುವ ಪ್ರತಿಜ್ಞೆ ಮಾಡಿವೆ. ವಿಶ್ವದ ಯಾವುದೇ ಭಾಗದಲ್ಲಿ ಪಳೆಯುಳಿಕೆ ಇಂಧನಗಳನ್ನು ಅನ್ವೇಷಿಸುವುದು, ಹೊರತೆಗೆಯುವುದು ಮತ್ತು ಸುಡುವುದನ್ನು ಮುಂದುವರಿಸುವುದರಿಂದ ಅಂಟಾರ್ಕ್ಟಿಕಾದ ಪರಿಸರದ ಮೇಲೆ ಅತ್ಯಧಿಕ ಪರಿಣಾಮ ಬೀರುತ್ತಿದೆ ಎಂಬುದನ್ನು ರಾಷ್ಟ್ರಗಳು ಅರ್ಥಮಾಡಿಕೊಳ್ಳಬೇಕು ಎಂದು ಪ್ರೊಫೆಸರ್ ಸೀಗರ್ಟ್ ತಿಳಿಸಿದರು.
ಈ ಬೇಸಿಗೆಯಲ್ಲಿ ಯುರೋಪಿನಲ್ಲಿ ಕಾಣಿಸಿಕೊಂಡ ಭಾರಿ ಮಳೆ ಮತ್ತು ಪ್ರವಾಹ, ಶಾಖದ ಅಲೆಗಳು ಮತ್ತು ಕಾಡ್ಗಿಚ್ಚಿನ ತೀವ್ರ ವಿಕೋಪದ ಘಟನೆಗಳು ಇಡೀ ವಿಶ್ವದ ಮೇಲೆ ಪರಿಣಾಮ ಬೀರುತ್ತವೆ ಎಂದು ನಮ್ಮ ಫಲಿತಾಂಶಗಳು ತೋರಿಸಿವೆ. ಅವು ದೂರದ ಧ್ರುವ ಪ್ರದೇಶಗಳ ಮೇಲೂ ಪರಿಣಾಮ ಬೀರುತ್ತವೆ ಎಂದು ಯುಕೆಯ ಲೀಡ್ಸ್ ವಿಶ್ವವಿದ್ಯಾಲಯದ ಸಹ-ಲೇಖಕ ಪ್ರೊಫೆಸರ್ ಅನ್ನಾ ಹಾಗ್ ಹೇಳಿದ್ದಾರೆ.
ಅಂಟಾರ್ಕ್ಟಿಕ್ ಹಿಮನದಿಗಳು, ಸಮುದ್ರದ ಮಂಜುಗಡ್ಡೆ ಮತ್ತು ನೈಸರ್ಗಿಕ ಪರಿಸರ ವ್ಯವಸ್ಥೆಗಳು ಹವಾಮಾನ ಬದಲಾವಣೆಯಿಂದ ಪ್ರಭಾವಿತವಾಗಿವೆ. ಹೀಗಾಗಿ ಈ ಸುಂದರ ಮತ್ತು ಸೂಕ್ಷ್ಮ ಪ್ರದೇಶಗಳನ್ನು ರಕ್ಷಿಸಲು ಅಂತರರಾಷ್ಟ್ರೀಯ ಒಪ್ಪಂದಗಳು ಮತ್ತು ನೀತಿಯನ್ನು ಜಾರಿಗೆ ತರುವುದು ಅತ್ಯಗತ್ಯ ಎಂದು ಹಾಗ್ ಹೇಳಿದರು.
ಇದನ್ನೂ ಓದಿ : Tesla & India: ಟೆಸ್ಲಾ ಸಿಎಫ್ಒ ಆಗಿ ಭಾರತ ಮೂಲದ ವೈಭವ್ ತನೇಜಾ ನೇಮಕ