ಹೈದರಾಬಾದ್: ಜಗತ್ತಿನಲ್ಲಿ ಬೆಳವಣಿಗೆ ಹೊಂದುತ್ತಿರುವ ನೂತನ ತಂತ್ರಜ್ಞಾನಗಳಾದ ಮಷಿನ್ ಲರ್ನಿಂಗ್, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ ಮುಂತಾದುವು ತಮ್ಮ ವೃತ್ತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಕಾರಿಯಾಗುತ್ತಿವೆ ಎಂದು ಭಾರತದ ಡಿಜಿಟಲ್ ಕ್ಷೇತ್ರದ ಶೇ.67 ರಷ್ಟು ಉದ್ಯೋಗಿಗಳು ಅಭಿಪ್ರಾಯ ಪಟ್ಟಿದ್ದಾರೆ ಎಂದು ಗಾರ್ಟನರ್ ಇಂಕ್ ನಡೆಸಿದ ಸಮೀಕ್ಷೆ ತಿಳಿಸಿದೆ.
ಬ್ರಿಟನ್ ಹಾಗೂ ಅಮೆರಿಕಗಳ ನಂತರ ಭಾರತವೇ ವಿಶ್ವದ ಅತಿ ಹೆಚ್ಚು ಡಿಜಿಟಲ್ ಕೌಶಲ್ಯ ಹೊಂದಿರುವ ದೇಶವಾಗಿದೆ ಎಂದು 'ದಿ ಗಾರ್ಟನರ್-2019 ಡಿಜಿಟಲ್ ವರ್ಕಫೋರ್ಸ್ ಸರ್ವೆ' ಹೇಳಿದೆ. ತಮ್ಮ ವೃತ್ತಿ ನಿರ್ವಹಣೆಗೆ ಸಂಬಂಧಿಸಿದಂತೆ ಹೊಸ ಡಿಜಿಟಲ್ ತಂತ್ರಜ್ಞಾನಗಳನ್ನು ಕಲಿಯಲು ಹಾಗೂ ಅಳವಡಿಸಿಕೊಳ್ಳಲು ಉತ್ಸುಕವಾಗಿರುವ ಅತಿ ಹೆಚ್ಚು ಸಂಖ್ಯೆಯ ಝೆಡ್-ಜನರೇಶನ್ (Gen Z) ಯುವ ಉದ್ಯೋಗಿಗಳನ್ನು ಭಾರತ ಹೊಂದಿರುವುದೇ ಇದಕ್ಕೆ ಕಾರಣವಾಗಿದೆ.
ದೇಶದ ಶೇ.27 ರಷ್ಟು ಡಿಜಿಟಲ್ ಕ್ಷೇತ್ರದ ಉದ್ಯೋಗಿಗಳು ವೃತ್ತಿ ಸಂಬಂಧಿತ ಡಿಜಿಟಲ್ ತಂತ್ರಜ್ಞಾನದಲ್ಲಿ ನೈಪುಣ್ಯತೆ ಸಾಧಿಸಿದವರಾಗಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. "ನೂತನ ತಂತ್ರಜ್ಞಾನಗಳ ಕಲಿಕೆಯಿಂದ ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ ಹಾಗೂ ಹೆಚ್ಚು ಸಂಬಳದ ಕೆಲಸ ಸಿಗುತ್ತವೆ ಎಂದು ಪ್ರತಿ ಹತ್ತರಲ್ಲಿ ಏಳು ಜನ ಡಿಜಿಟಲ್ ಉದ್ಯೋಗಿಗಳು ಅಭಿಪ್ರಾಯಪಡುತ್ತಾರೆ," ಎನ್ನುತ್ತಾರೆ ಗಾರ್ಟನರ್ ಸಂಸ್ಥೆಯ ಮುಖ್ಯ ಸಂಶೋಧನಾ ವಿಶ್ಲೇಷಕಿ ರಶ್ಮಿ ಚೌಧರಿ.
ಮ್ಯಾನ್ಯುಯಲ್, ಕುಶಲ ಹಾಗೂ ಅರೆ ಕುಶಲ ಮ್ಯಾನ್ಯುಯಲ್ ಕೆಲಸಗಾರರಿಗೆ ಹೋಲಿಸಿದರೆ ಡಿಜಿಟಲ್ ಉದ್ಯೋಗಿಗಳು ವೃತ್ತಿಜೀವನದಲ್ಲಿ ನೂತನ ತಂತ್ರಜ್ಞಾನಗಳ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಾರೆ.
ಚೀನಾ, ಫ್ರಾನ್ಸ್, ಜರ್ಮನಿ, ಅಮೆರಿಕ ಹಾಗೂ ಬ್ರಿಟನ್ಗಳಿಗೆ ಹೋಲಿಸಿದರೆ ಭಾರತ ಹಾಗೂ ಸಿಂಗಾಪುರ ದೇಶಗಳಲ್ಲಿನ ಡಿಜಿಟಲ್ ಉದ್ಯೋಗಿಗಳು ಕ್ಷಿಪ್ರ ಸಂಹಹನಕ್ಕಾಗಿ ಮೆಸೇಜಿಂಗ್ ಹಾಗೂ ಸೋಶಿಯಲ್ ಮೀಡಿಯಾಗಳನ್ನು ಅತಿ ಹೆಚ್ಚು ಬಳಸುತ್ತಾರೆ. ಕೆಲಸ ಮಾಡುವ ಸ್ಥಳದಲ್ಲಿ ತಮ್ಮ ಕೆಲಸದ ಮೇಲೆ ಡಿಜಿಟಲ್ ಪ್ಲಾಟ್ಫಾರ್ಮ್ ಮೂಲಕ ಕಣ್ಣಿಡುವುದಾದರೆ ತಮಗೇನೂ ತೊಂದರೆಯಿಲ್ಲ ಎನ್ನುತ್ತಾರಂತೆ ಶೇ.45 ರಷ್ಟು ಭಾರತೀಯ ಡಿಜಿಟಲ್ ಉದ್ಯೋಗಿಗಳು. ಇಷ್ಟು ಆತ್ಮವಿಶ್ವಾಸ ಹೊಂದಿರುವ ಡಿಜಿಟಲ್ ಉದ್ಯೋಗಿಗಳು ಭಾರತ ಬಿಟ್ಟರೆ ಮತ್ತೆಲ್ಲೂ ಇಲ್ಲ.
ವರ್ಕಶಾಪ್ ಹಾಗೂ ಕ್ಲಾಸ್ರೂಂ ಮಾದರಿಯ ಕಲಿಕೆ ಮಾತ್ರವಲ್ಲದೆ ಕೆಲಸ ಮಾಡುತ್ತ ಕಲಿಕೆ ಹಾಗೂ ಅಗತ್ಯಕ್ಕೆ ತಕ್ಕಂಥ ಕಲಿಕೆಗೂ ಸದಾ ಸಿದ್ದ ಡಿಜಿಟಲ್ ಉದ್ಯೋಗಿಗಳು. ಮಶೀನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ ಕ್ಷೇತ್ರದ ಹೊಸ ಆವಿಷ್ಕಾರಗಳನ್ನು ಕೆಲಸ ಮಾಡುತ್ತಲೇ ಕಲಿಯಲು ಇಚ್ಛಿಸುವುದಾಗಿ ಶೇ.39 ರಷ್ಟು ಭಾರತದ ಡಿಜಿಟಲ್ ಉದ್ಯೋಗಿಗಳು ಹೇಳುತ್ತಾರೆ.