ಲಾಸ್ ಏಂಜಲೀಸ್(ಅಮೆರಿಕ): ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಅಮೆರಿಕದಿಂದ ತೆರಳಿದ್ದ ಮೊದಲ ಖಾಸಗಿ ಗಗನಯಾತ್ರಿ ಮಿಷನ್ ಭೂಮಿಗೆ ಸುರಕ್ಷಿತವಾಗಿ ಮರಳಿದೆ. ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು, ಆಗ್ನೇಯ ಅಮೆರಿಕದ ಫ್ಲೋರಿಡಾದ ಜಾಕ್ಸನ್‌ವಿಲ್ಲೆ ಕರಾವಳಿ ತೀರದ ಬಾಹ್ಯಾಕಾಶ ಉಡ್ಡಯನ ಕೇಂದ್ರಕ್ಕೆ ಬಂದಿಳಿದಿದೆ ಎಂದು ಸ್ಪೇಸ್‌ಎಕ್ಸ್ ದೃಢಪಡಿಸಿದೆ.
ಖಾಸಗಿ ಗಗನಯಾತ್ರಿ ಮಿಷನ್ನಲ್ಲಿ ನಾಲ್ಕು ಗಗನಯಾನಿಗಳಿದ್ದರು. ಕಮಾಂಡರ್ ಮೈಕೆಲ್ ಲೋಪೆಜ್ - ಅಲೆಗ್ರಿಯಾ ಮತ್ತು ಅಮೆರಿಕದ ಪೈಲಟ್ ಲ್ಯಾರಿ ಕಾನರ್, ಇಸ್ರೇಲ್‌ನ ಮಿಷನ್ ಸ್ಪೆಷಲಿಸ್ಟ್ ಐಟಾನ್ ಸ್ಟಿಬ್ಬೆ ಮತ್ತು ಕೆನಡಾದ ಮಿಷನ್ ಸ್ಪೆಷಲಿಸ್ಟ್ ಮಾರ್ಕ್ ಪಾಥಿ ಈ ಮಿಷನ್ನ ಭಾಗವಾಗಿದ್ದರು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಮೊದಲ ಖಾಸಗಿ ಮಿಷನ್ ತನ್ನ ಉದ್ದೇಶದಲ್ಲಿ ಯಶಸ್ಸು ಸಾಧಿಸಿದ್ದು, ಬಾಹ್ಯಾಕಾಶ ಪ್ರಯಾಣಿಕರಿಗೆ ಹೊಸ ಆಶಾ ಕಿರಣ ಮೂಡಿಸಿದೆ. ಅಷ್ಟೇ ಅಲ್ಲ ಹೊಸ ಅವಕಾಶಗಳನ್ನು ಸೃಷ್ಟಿಸುವಲ್ಲಿ ಮೊದಲ ಹೆಜ್ಜೆ ಆಗಿದೆ. ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶದ ವಾಣಿಜ್ಯ ವ್ಯವಹಾರ ಸಕ್ರಿಯಗೊಳಿಸುವ ನಾಸಾದ ಗುರಿಯನ್ನು ಸಾಧಿಸಲು ನೆರವಾಗಿದೆ ಎಂದು ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ.
ಈ ಪ್ರಗತಿಯು ಖಾಸಗಿ ಉದ್ಯಮದೊಂದಿಗೆ ನಾಸಾ ತನ್ನ ಕೆಲಸವನ್ನು ಸುಗಮವಾಗಿ ಮುಂದುವರಿಸಲು ದಾರಿ ಮಾಡಿಕೊಟ್ಟಿದೆ ಎಂದು ಬಿಲ್ ನೆಲ್ಸನ್ ಇದೇ ವೇಳೆ ಹೇಳಿದರು. ಏಪ್ರಿಲ್ 8 ರಂದು ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್‌ನಲ್ಲಿ ಆಕ್ಸ್-1 ಎಂಬ ಹೆಸರಿನ ಈ ಮಿಷನ್ ಅನ್ನು ಉಡ್ಡಯನ ಮಾಡಲಾಗಿತ್ತು.
ನಾಲ್ವರು ಖಾಸಗಿ ಗಗನಯಾನಿಗಳು ಬಾಹ್ಯಾಕಾಶದಲ್ಲಿ 15 ದಿನಗಳನ್ನು ಕಳೆದಿದ್ದು, ಈ ವೇಳೆ ಹಲವು ಸಂಶೋಧನೆಗಳು ಹಾಗೂ ಪರೀಕ್ಷೆಗಳನ್ನು ನಡೆಸಿದ್ದು ವಿಶೇಷವಾಗಿತ್ತು. ಇದೇ ವೇಳೆ ಬಾಹ್ಯಾಕಾಶದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯ ಸಂಶೋಧನೆಯನ್ನು ಕೈಗೊಳ್ಳಲಾಗಿತ್ತು.
ಇದನ್ನು ಓದಿ:ಹಸು, ಮೇಕೆಗಳಿಗೂ ಆಧಾರ್ ಸಂಖ್ಯೆ ಕಡ್ಡಾಯ.. ಇದರಿಂದ ಏನು ಲಾಭ ಗೊತ್ತಾ?