ನವದೆಹಲಿ: ಹಲವಾರು ಸ್ಮಾರ್ಟ್ಫೋನ್ ಬಳಕೆದಾರರಿಗೆ ಮಾದರಿ ಸಂದೇಶ (sample message)ವನ್ನು ಕಳುಹಿಸುವ ಮೂಲಕ ಕೇಂದ್ರ ಸರ್ಕಾರ ಗುರುವಾರ ತನ್ನ "ತುರ್ತು ಎಚ್ಚರಿಕೆ ವ್ಯವಸ್ಥೆಯ" (emergency alert system) ಪರೀಕ್ಷೆ ನಡೆಸಿದೆ. ಸ್ಮಾರ್ಟ್ಫೋನ್ ಬಳಕೆದಾರರಿಗೆ 'ತುರ್ತು ಎಚ್ಚರಿಕೆ: ಗಂಭೀರ' (emergency alert: severe) ಎಂಬ ಪದಗಳನ್ನು ಹೊಂದಿರುವ ಟೆಕ್ಸ್ಟ್ ಮೆಸೇಜ್ ಕಳುಹಿಸಲಾಗಿದ್ದು, ಮೆಸೇಜ್ ಬಂದಾಗ ದೊಡ್ಡ ಬೀಪ್ ಶಬ್ದ ಕೇಳಿಸಿದ್ದು, ಫ್ಲ್ಯಾಶ್ ಕಾಣಿಸಿಕೊಂಡಿದೆ.
"ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯ ಸೆಲ್ ಬ್ರಾಡ್ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಿದ ಸ್ಯಾಂಪಲ್ ಪರೀಕ್ಷಾ ಸಂದೇಶವಾಗಿದೆ. ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ಇದಕ್ಕೆ ನೀವು ಯಾವುದೇ ಪರ್ತಿಕ್ರಿಯೆ ನೀಡುವ ಅಗತ್ಯವಿಲ್ಲ. ಈ ಸಂದೇಶವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೆ ತರುತ್ತಿರುವ ಪ್ಯಾನ್ - ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸುವ ಸಲುವಾಗಿ ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ತುರ್ತು ಸಂದರ್ಭಗಳಲ್ಲಿ ಸಮಯೋಚಿತ ಎಚ್ಚರಿಕೆಗಳನ್ನು ನೀಡುವ ಗುರಿಯನ್ನು ಹೊಂದಿದೆ" ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ದೂರಸಂಪರ್ಕ ಇಲಾಖೆ (ಸಿ-ಡಾಟ್) ಸೆಲ್ ಬ್ರಾಡ್ಕಾಸ್ಟಿಂಗ್ ಮೂಲಕ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಗುರುವಾರ ಮಧ್ಯಾಹ್ನ 1.35 ರ ಸುಮಾರಿಗೆ ಫ್ಲ್ಯಾಶ್ ಸಂದೇಶ ಬಂದಿದೆ. ಸ್ಮಾರ್ಟ್ಫೋನ್ಗಳಲ್ಲಿ ಈ ಸಂದೇಶ ನೋಡಿದ ಹಲವಾರು ಬಳಕೆದಾರರು ಈ ಬಗ್ಗೆ ಟ್ವಿಟರ್ನಲ್ಲಿ ಚರ್ಚೆ ಆರಂಭಿಸಿದ್ದರು. "ಸರ್ಕಾರದಿಂದ ನನ್ನ ಮೊಬೈಲ್ಗೆ ದೊಡ್ಡ ಬೀಪ್ ಶಬ್ದದೊಂದಿಗೆ ತುರ್ತು ಎಚ್ಚರಿಕೆ ಸಂದೇಶ ಬಂದಿದೆ! ಇದು ಕುತೂಹಲಕಾರಿಯಾಗಿದೆ. ಈಗ ಮೊದಲು ಇಂಗ್ಲಿಷ್ನಲ್ಲಿ ಮತ್ತು ನಂತರ ಹಿಂದಿಯಲ್ಲಿ ಹೀಗೆ ಎರಡು ಬಾರಿ ಮೆಸೇಜ್ ಬಂದಿದೆ" ಎಂದು ಬಳಕೆದಾರರೊಬ್ಬರು ಟ್ವಿಟರ್ನಲ್ಲಿ ಬರೆದಿದ್ದಾರೆ.
ಸೆಲ್ ಬ್ರಾಡ್ಕಾಸ್ಟಿಂಗ್ ಸಿಸ್ಟಮ್ ಪ್ರಕಾರ, ಮೊಬೈಲ್ ಆಪರೇಟರ್ಗಳು ಮತ್ತು ಸೆಲ್ ಬ್ರಾಡ್ಕಾಸ್ಟ್ ಸಿಸ್ಟಮ್ಗಳ ತುರ್ತು ಎಚ್ಚರಿಕೆ ಪ್ರಸಾರ ಸಾಮರ್ಥ್ಯಗಳ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪರಿಶೀಲಿಸಲು ಇಂಥ ಪರೀಕ್ಷೆಗಳನ್ನು ವಿವಿಧ ಪ್ರದೇಶಗಳಲ್ಲಿ ನಿಯಮಿತವಾಗಿ ನಡೆಸಲಾಗುವುದು ಎಂದು ತಿಳಿಸಲಾಗಿದೆ. ಭೂಕಂಪ, ಸುನಾಮಿ ಮತ್ತು ಹಠಾತ್ ಪ್ರವಾಹಗಳಂತಹ ವಿಪತ್ತುಗಳ ಸಂದರ್ಭಗಳಲ್ಲಿ ಸನ್ನದ್ಧತೆ ಸುಧಾರಿಸಲು ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಕೆಲಸ ಮಾಡುತ್ತಿದೆ. ಕಳೆದ ತಿಂಗಳು ಕೂಡ ಸರ್ಕಾರ ಇಂಥ ಪರೀಕ್ಷೆಯನ್ನು ನಡೆಸಿತ್ತು.
ನಿಮಗೂ ಇಂತದೊಂದು ಸಂದೇಶ ಬಂದಿದ್ದರೆ ಅದರ ವಿವರಣೆ ಇಲ್ಲಿದೆ: ಡಿಒಟಿ ಪ್ರಸಾರ ಮಾಡಿದ ಸಂದೇಶವು ಮಳೆಗಾಲದಲ್ಲಿ ಸಂಭವಿಸುವ ಪ್ರವಾಹ ಮುಂತಾದ ನೈಸರ್ಗಿಕ ವಿಪತ್ತುಗಳ ಬಗ್ಗೆ ನಾಗರಿಕರನ್ನು ಎಚ್ಚರಿಸುವ ಉದ್ದೇಶವನ್ನು ಹೊಂದಿದೆ. ಡೆಮೊ ಎಚ್ಚರಿಕೆಗಳನ್ನು ಕಳುಹಿಸುವ ಮೂಲಕ ಈ ಸಂದೇಶಗಳು ಜನರಿಗೆ ಸಕಾಲಕ್ಕೆ ತಲುಪುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇಲಾಖೆ ಅಲರ್ಟ್ ಸಿಸ್ಟಮ್ ಅನ್ನು ಪರೀಕ್ಷಿಸುತ್ತಿದೆ ಅಥವಾ ಕೆಲವೊಮ್ಮೆ ಇದು ನಿಜವಾದ ಎಚ್ಚರಿಕೆಯಾಗಿರಬಹುದು. ಡೆಮೊ ಸಂದರ್ಭದಲ್ಲಿ, ನೋಟಿಫಿಕೇಶನ್ ಅದನ್ನು ಡೆಮೊ ಎಂದು ಸೂಚಿಸುತ್ತದೆ.
ಇದನ್ನೂ ಓದಿ : Cyber crime: ಕೀಸ್ಟ್ರೋಕ್ ಕೇಳಿಸಿಕೊಂಡು ಪಾಸ್ವರ್ಡ್ ಕಳ್ಳತನ ಸಾಧ್ಯ! ಹೇಗೆ ಅಂತೀರಾ?