ಬೆಂಗಳೂರು: ಒಬ್ಬ ವ್ಯಕ್ತಿಯ ಸಾವಿನ ಸಮಯವನ್ನು ಊಹಿಸುವ ಪ್ರಯತ್ನಗಳಿಗೆ ವಿಜ್ಞಾನಿಗಳು ಹತ್ತಿರವಾಗುತ್ತಿದ್ದಾರೆ. "ಡೂಮ್ ಕ್ಯಾಲ್ಕುಲೇಟರ್" ಎಂದು ಕರೆಯಲ್ಪಡುವ ಎಐ ಚಾಲಿತ ಸಾಫ್ಟ್ವೇರ್ ಸಾಧನ ಮಾನವನ ಸಾವಿನ ಸಮಯವನ್ನು ಹೇಳುತ್ತದೆಯಂತೆ. ಕೃತಕ ಬುದ್ಧಿಮತ್ತೆ ಅಲ್ಗಾರಿದಮ್ ಚಾಟ್ಜಿಪಿಟಿಗೆ ಹೋಲಿಸಬಹುದಾದ, ಆದರೆ ಬಳಕೆದಾರರೊಂದಿಗೆ ನೇರ ಸಂವಹನ ನಡೆಸದ ಈ ಸಾಫ್ಟ್ವೇರ್ ವ್ಯಕ್ತಿಯೊಬ್ಬ ಮುಂದಿನ ನಾಲ್ಕು ವರ್ಷಗಳಲ್ಲಿ ಸಾಯುತ್ತಾನೆಯೇ ಅಥವಾ ಇಲ್ಲವೇ ಎಂಬುದನ್ನು 75%ಕ್ಕಿಂತ ಹೆಚ್ಚು ನಿಖರವಾಗಿ ಪತ್ತೆ ಮಾಡಿದೆ.
ಡೆನ್ಮಾರ್ಕ್ ಮತ್ತು ಯುನೈಟೆಡ್ ಸ್ಟೇಟ್ಸ್ನ ತಂಡಗಳು ಜಂಟಿಯಾಗಿ ನಡೆಸಿದ ಸಂಶೋಧನಾ ವರದಿಯು ನೇಚರ್ ಕಂಪ್ಯೂಟೇಶನಲ್ ಸೈನ್ಸ್ ಆನ್ಲೈನ್ ಜರ್ನಲ್ನಲ್ಲಿ ಪ್ರಕಟವಾಗಿದೆ. ಈ ತಂತ್ರಜ್ಞಾನದ ತಿರುಳು ಲೈಫ್ 2ವೆಕ್ (life2vec) ಎಂಬ ಯಂತ್ರ-ಕಲಿಕೆ ಟ್ರಾನ್ಸ್ ಫಾರ್ಮರ್ ಮಾದರಿಯಲ್ಲಿದೆ.
ಚಾಟ್ಜಿಪಿಟಿಯಂಥ ಟ್ರಾನ್ಸ್ಫಾರ್ಮರ್ ಮಾದರಿಗಳಂತೆಯೇ ಕಾರ್ಯನಿರ್ವಹಿಸುತ್ತಿರುವ ಲೈಫ್ 2ವೆಕ್ ಡೆನ್ಮಾರ್ಕ್ನಲ್ಲಿ 6 ದಶಲಕ್ಷಕ್ಕೂ ಹೆಚ್ಚು ವ್ಯಕ್ತಿಗಳ ಮಾದರಿಯಿಂದ ವಯಸ್ಸು, ಆರೋಗ್ಯ ಸ್ಥಿತಿ, ಶೈಕ್ಷಣಿಕ ಹಿನ್ನೆಲೆ, ಉದ್ಯೋಗ ಇತಿಹಾಸ, ಆದಾಯ ಮತ್ತು ವಿವಿಧ ಜೀವನ ಘಟನೆಗಳನ್ನು ಒಳಗೊಂಡ ಡೇಟಾವನ್ನು ವಿಶ್ಲೇಷಿಸಿದೆ. ಡ್ಯಾನಿಶ್ ಸರ್ಕಾರವು ಒದಗಿಸಿದ ಡೇಟಾವು ಈ ಅಲ್ಗಾರಿದಮ್ನ ಆಧಾರವಾಗಿದೆ.
"ಜೀವನ-ಘಟನೆಗಳ ಅನುಕ್ರಮವನ್ನು ಬಳಸಿ ಮಾನವ ಜೀವನದ ಬಗ್ಗೆ ಊಹಿಸುವುದು ಈ ತಂತ್ರಜ್ಞಾನವಾಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಆತನ ಜೀವನದಲ್ಲಿ ಸಂಭವಿಸುವ ಘಟನೆಗಳನ್ನು ಅನುಕ್ರಮವಾಗಿ ಪ್ರತಿನಿಧಿಸುವ ಮೂಲಕ ಮಾನವ ಜೀವನವನ್ನು ವಿಶ್ಲೇಷಿಸಲು ನಾವು ಚಾಟ್ಜಿಪಿಟಿಯ ತಂತ್ರಜ್ಞಾನ ಬಳಸುತ್ತೇವೆ." ಎಂದು ಡಿಸೆಂಬರ್ 2023ರ ಅಧ್ಯಯನದ ಪ್ರಮುಖ ಸಂಶೋಧಕ ಸುನೆ ಲೆಹ್ಮನ್ ದಿ ನ್ಯೂಯಾರ್ಕ್ ಪೋಸ್ಟ್ಗೆ ಹೇಳಿದರು.
2008ರಿಂದ 2020ರವರೆಗೆ ವಿವಿಧ ಲಿಂಗ ಮತ್ತು ವಯೋಮಾನದ ಆರು ಮಿಲಿಯನ್ ಡ್ಯಾನಿಷ್ ಜನಸಂಖ್ಯೆಯ ಮಾಹಿತಿಯನ್ನು ಲೈಫ್ 2ವೆಕ್‌ಗೆ ಅಳವಡಿಸಲಾಯಿತು. ಈ ವ್ಯಕ್ತಿಗಳ ಪೈಕಿ ಯಾರೆಲ್ಲ ಜನವರಿ 1, 2016ರ ನಂತರ ಕನಿಷ್ಠ ನಾಲ್ಕು ವರ್ಷಗಳ ಕಾಲ ಬದುಕುವ ಸಾಧ್ಯತೆಯಿದೆ ಎಂಬುದನ್ನು ಈ ಎಐ ವ್ಯವಸ್ಥೆ ನಿರ್ಣಯಿಸಿತ್ತು.
ಈ ಎಐ ಆವಿಷ್ಕಾರವು ನಿಮ್ಮ ವಯಸ್ಸು, ಆರೋಗ್ಯ ಅಭ್ಯಾಸಗಳು, ಕುಟುಂಬ ಇತಿಹಾಸ ಮತ್ತು ಜೀವನಶೈಲಿ ಸೇರಿದಂತೆ ವ್ಯಾಪಕ ಶ್ರೇಣಿಯ ಅಂಶಗಳನ್ನು ವಿಶ್ಲೇಷಿಸುತ್ತದೆ. ಕೆಲ ಕ್ಯಾಲ್ಕುಲೇಟರ್ ಗಳು ನೈಜ-ಸಮಯದ ಆರೋಗ್ಯ ಅಪ್ಡೇಟ್ಗಳನ್ನು ಪಡೆಯಲು ಧರಿಸಬಹುದಾದ ಸಾಧನಗಳೊಂದಿಗೆ ಸಿಂಕ್ ಮಾಡುತ್ತವೆ. ಇದು ಅತ್ಯಂತ ನಿಖರವಾದ ಅಂದಾಜುಗಳನ್ನು ಖಚಿತಪಡಿಸುತ್ತದೆ. ಉಪಕರಣವು ನಿಮ್ಮ ವಿಶಿಷ್ಟ ಪ್ರೊಫೈಲ್ಗೆ ಅನುಗುಣವಾಗಿ ವೈಯಕ್ತಿಕಗೊಳಿಸಿದ ಸಲಹೆ ಮತ್ತು ಶಿಫಾರಸುಗಳನ್ನು ನೀಡುತ್ತದೆ. ಅಲ್ಲದೆ ನೀವು ಮತ್ತಷ್ಟು ಆರೋಗ್ಯಕರವಾಗಿ ಹೇಗೆ ಬದುಕಬಹುದು ಎಂಬ ಮಾಹಿತಿಯನ್ನು ಕೂಡ ನೀಡುತ್ತದೆ.
ಇದನ್ನೂ ಓದಿ: ಸಾಮಾಜಿಕ ಮಾಧ್ಯಮ ತ್ಯಜಿಸಲಿದ್ದಾರೆ ಶೇ 50ಕ್ಕೂ ಹೆಚ್ಚು ಜನ; ಅಧ್ಯಯನ ವರದಿ