ನವದೆಹಲಿ : ಮನೋರಂಜನೆ ಉದ್ಯಮದ ಬೃಹತ್ ಕಂಪನಿಯಾಗಿರುವ ವಾಲ್ಟ್ ಡಿಸ್ನಿ, ಏಪ್ರಿಲ್ 1 ಕ್ಕೆ ಮುಕ್ತಾಯವಾದ ಎರಡನೇ ತ್ರೈಮಾಸಿಕದಲ್ಲಿ ತನ್ನ ಪ್ರಮುಖ ವಿಭಾಗವಾಗಿರುವ ಡಿಸ್ನಿ ಪ್ಲಸ್ (Disney+) ಪ್ಲಾಟ್ಫಾರ್ಮ್ನಲ್ಲಿ 4 ಮಿಲಿಯನ್ ಚಂದಾದಾರರನ್ನು ಕಳೆದುಕೊಂಡಿದೆ. ಈ ಮಧ್ಯೆ ಕಂಪನಿಯು ಮೂರನೇ ಹಂತದ ಉದ್ಯೋಗಿಗಳ ವಜಾ ಪ್ರಕ್ರಿಯೆಯನ್ನು ಆರಂಭಿಸಿರುವುದು ಗಮನಾರ್ಹ. 2023ರ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯು 157.8 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಹಿಂದಿನ ವರ್ಷ ಇದೇ ತ್ರೈಮಾಸಿಕದಲ್ಲಿ 161.8 ಮಿಲಿಯನ್ ಚಂದಾದಾರರಿದ್ದರು.
ಡಿಸ್ನಿ+ಹಾಟ್‌ಸ್ಟಾರ್ ಇದು ಚಂದಾದಾರರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ತನ್ನ ಚಂದಾದಾರರ ಪೈಕಿ ಶೇಕಡಾ 8 ರಷ್ಟು ಜನರನ್ನು ಕಳೆದುಕೊಂಡಿದೆ. 2023ರ ಮೊದಲ ತ್ರೈಮಾಸಿಕದಲ್ಲಿ 57.5 ಮಿಲಿಯನ್ ಇದ್ದ ಚಂದಾದಾರರ ಸಂಖ್ಯೆ ಎರಡನೇ ತ್ರೈಮಾಸಿಕದ ವೇಳೆಗೆ 52.9 ಮಿಲಿಯನ್‌ಗೆ ಇಳಿಕೆಯಾಗಿದೆ. ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ (ಐಪಿಎಲ್) ಲೀಗ್‌ನ ಸ್ಟ್ರೀಮಿಂಗ್ ಹಕ್ಕುಗಳನ್ನು ಪ್ಲಾಟ್‌ಫಾರ್ಮ್ ಉಳಿಸಿಕೊಳ್ಳದ ಕಾರಣದಿಂದ ಪ್ಲಾಟ್‌ಫಾರ್ಮ್ ಬಹುದೊಡ್ಡ ಸಂಖ್ಯೆಯಲ್ಲಿ ಭಾರತೀಯ ಚಂದಾದಾರರನ್ನು ಕಳೆದುಕೊಂಡಿದೆ.
ಒಟ್ಟಾರೆಯಾಗಿ ನೋಡಿದರೆ ಕಂಪನಿಯ ಆದಾಯಗಳು ತ್ರೈಮಾಸಿಕದಲ್ಲಿ ಮತ್ತು 6 ತಿಂಗಳಲ್ಲಿ ಕ್ರಮವಾಗಿ ಶೇ 13 ರಷ್ಟು ಮತ್ತು ಶೇ 10 ರಷ್ಟು ಏರಿಕೆಯಾಗಿವೆ. "ನಮ್ಮ ಸ್ಟ್ರೀಮಿಂಗ್ ವ್ಯವಹಾರದ ಸುಧಾರಿತ ಹಣಕಾಸಿನ ಕಾರ್ಯಕ್ಷಮತೆ ಸೇರಿದಂತೆ ಈ ತ್ರೈಮಾಸಿಕದಲ್ಲಿ ನಮ್ಮ ಸಾಧನೆಗಳಿಂದ ನಾವು ಸಂತಸಗೊಂಡಿದ್ದೇವೆ. ಇದು ನಿರಂತರ ಬೆಳವಣಿಗೆ ಮತ್ತು ಯಶಸ್ಸಿಗಾಗಿ ಡಿಸ್ನಿಯನ್ನು ಮರುಹೊಂದಿಸಲು ಕಾರ್ಯತಂತ್ರದ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ" ಎಂದು ವಾಲ್ಟ್ ಡಿಸ್ನಿ ಕಂಪನಿಯ ಸಿಇಒ ರಾಬರ್ಟ್ ಇಗರ್ ಹೇಳಿದರು.
ಡಿಸ್ನಿ ಕಂಪನಿಯು 5.5 ಶತಕೋಟಿ ಡಾಲರ್ ವೆಚ್ಚವನ್ನು ಕಡಿತಗೊಳಿಸುವ ದೊಡ್ಡ ಹೊಂದಾಣಿಕೆಯ ಭಾಗವಾಗಿ ತನ್ನ 7000 ಉದ್ಯೋಗಿಗಳನ್ನು ವಜಾ ಮಾಡಲು ಯೋಜಿಸಿದೆ. ಹೊಸ ಸುತ್ತಿನ ಉದ್ಯೋಗ ಕಡಿತವು ಡಿಸ್ನಿ ಎಂಟರ್‌ಟೈನ್‌ಮೆಂಟ್ ಮತ್ತು ಇಎಸ್‌ಪಿಎನ್, ಹಾಗೆಯೇ ಡಿಸ್ನಿ ಪಾರ್ಕ್‌ಗಳು ಮತ್ತು ಉತ್ಪನ್ನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. "ನಾನು ಈ ನಿರ್ಧಾರವನ್ನು ಲಘುವಾಗಿ ತೆಗೆದುಕೊಂಡಿಲ್ಲ. ವಿಶ್ವಾದ್ಯಂತ ನಮ್ಮ ಉದ್ಯೋಗಿಗಳ ಪ್ರತಿಭೆ ಮತ್ತು ಸಮರ್ಪಣೆಗೆ ನಾನು ಅಪಾರ ಗೌರವ ಮತ್ತು ಮೆಚ್ಚುಗೆಯನ್ನು ಹೊಂದಿದ್ದೇನೆ ಮತ್ತು ಈ ಬದಲಾವಣೆಗಳಿಂದ ವೈಯಕ್ತಿಕವಾಗಿ ಅವರ ಮೇಲಾಗುವ ಪ್ರಭಾವದ ಬಗ್ಗೆ ನಾನು ಗಮನಹರಿಸುತ್ತೇನೆ" ಎಂದು ಇಗರ್ ಹೇಳಿದ್ದಾರೆ.
ಡಿಸ್ನಿ ಪ್ಲಸ್ ಎನ್ನುವುದು ಡಿಸ್ನಿಯ ಅನೇಕ ಬ್ರ್ಯಾಂಡ್‌ಗಳ ಆನ್ ಡಿಮ್ಯಾಂಡ್ ಸ್ಕ್ರೀನಿಂಗ್ ಮತ್ತು ಚಲನಚಿತ್ರಗಳ ಬೃಹತ್ ಲೈಬ್ರರಿಯನ್ನು ಹೊಂದಿರುವ ಸ್ಟ್ರೀಮಿಂಗ್ ಸೇವೆಯಾಗಿದೆ. ಡಿಸ್ನಿ+ ಯುಕೆ ಮತ್ತು ಯುಎಸ್ ಎರಡನ್ನೂ ಒಳಗೊಂಡಂತೆ ಹಲವು ದೇಶಗಳಲ್ಲಿ ಮತ್ತು ಪ್ರದೇಶಗಳಲ್ಲಿ ಲಭ್ಯವಿದೆ. ಪೋರ್ಚುಗಲ್, ನಾರ್ವೆ, ಸ್ವೀಡನ್ ಮತ್ತು ಡೆನ್ಮಾರ್ಕ್ ಸೇರಿದಂತೆ ಯುರೋಪ್‌ನಾದ್ಯಂತ ಇದು ಲಭ್ಯವಿದೆ. ಹೆಸರೇ ಸೂಚಿಸುವಂತೆ, ಡಿಸ್ನಿ ಪ್ಲಸ್ ದಿ ವಾಲ್ಟ್ ಡಿಸ್ನಿ ಕಂಪನಿಯ ಸ್ಟ್ರೀಮಿಂಗ್ ಸೇವೆಯಾಗಿದೆ. ಮೂಲತಃ ನವೆಂಬರ್ 2019 ರಲ್ಲಿ ಇದನ್ನು ಸ್ಥಾಪಿಸಲಾಯಿತು.
ಇದನ್ನೂ ಓದಿ : ನೋಕಿಯಾ ಬಜೆಟ್ ಸ್ಮಾರ್ಟ್ಫೋನ್ C22 ಭಾರತದಲ್ಲಿ ಬಿಡುಗಡೆ: ಬೆಲೆ 7,999 ರೂ.