ಸ್ಯಾನ್ ಫ್ರಾನ್ಸಿಸ್ಕೋ: ಚಾಟ್ ಜಿಪಿಟಿ ತಯಾರಕ ಕಂಪನಿಯಾಗಿರುವ ಓಪನ್ ಎಐ ನಿಂದ ಸ್ಯಾಮ್ ಆಲ್ಟ್ಮ್ಯಾನ್ ಅವರನ್ನು ಹೊರಹಾಕಲು ಓಪನ್ ಎಐ ಅಭಿವೃದ್ಧಿಪಡಿಸುತ್ತಿರುವ ಒಂದು ಸೀಕ್ರೆಟ್ ಎಐ ಸಾಧನ ಕಾರಣವಾಗಿತ್ತಾ ಎಂಬ ವಿಷಯ ಈಗ ಚರ್ಚೆಯ ವಿಷಯವಾಗಿದೆ. ಓಪನ್ ಎಐ ಅಭಿವೃದ್ಧಿಪಡಿಸುತ್ತಿರುವ 'ಕ್ಯೂ' (ಕ್ಯೂ-ಸ್ಟಾರ್ ಎಂದು ಉಚ್ಚರಿಸಲಾಗುತ್ತದೆ) ಹೆಸರಿನ ರಹಸ್ಯ ಎಐ ಯೋಜನೆ ಇದರ ಹಿಂದಿರಬಹುದು ಎನ್ನಲಾಗಿದೆ.
ವರದಿಗಳ ಪ್ರಕಾರ, ಕಂಪನಿಯಲ್ಲಿನ ಹಲವಾರು ಸಿಬ್ಬಂದಿ ಸಂಶೋಧಕರು ಓಪನ್ಎಐ ಮಂಡಳಿಗೆ ಪತ್ರವೊಂದನ್ನು ಬರೆದಿದ್ದು, ಪ್ರಬಲವಾದ ಎಐ ತಯಾರಿಕೆಯು ಮಾನವ ಕುಲಕ್ಕೆ ಅಪಾಯ ತರಬಹುದು ಎಂದು ಎಂದು ಎಚ್ಚರಿಸಿದ್ದರು. ಈ ಪತ್ರಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿಯ ಪ್ರಕಾರ, ಪತ್ರ ಮತ್ತು ಎಐ ಅಲ್ಗಾರಿದಮ್ ಆಲ್ಟ್ಮ್ಯಾನ್ ಅವರನ್ನು ಮಂಡಳಿಯು ಹೊರಹಾಕಲು ಕಾರಣವಾಯಿತು. ಇದಕ್ಕೂ ಮುನ್ನ ತಿಳಿಯದ ಈ ಪತ್ರದ ವಿಚಾರ ಸೇರಿದಂತೆ ಇನ್ನೂ ಹಲವಾರು ವಿಷಯಗಳಿಂದಾಗಿ ಅವರನ್ನು ವಜಾ ಮಾಡಲಾಗಿತ್ತು ಎನ್ನಲಾಗಿದೆ.
ಆದರೆ ಪತ್ರ ಬರೆದ ಸಂಶೋಧಕರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಓಪನ್ಎಐ ಕೂಡ ಪ್ರತಿಕ್ರಿಯಿಸಿಲ್ಲ. ಕೃತಕ ಸಾಮಾನ್ಯ ಬುದ್ಧಿಮತ್ತೆ (ಎಜಿಐ) ಎಂದೂ ಕರೆಯಲ್ಪಡುವ ಸೂಪರ್ ಇಂಟೆಲಿಜೆನ್ಸ್ ತಯಾರಿಕೆಯಲ್ಲಿ ಮಹತ್ವದ ಹೆಜ್ಜೆಯಾಗಬಹುದಾದ 'ಕ್ಯೂ-ಸ್ಟಾರ್' ಯೋಜನೆಯಲ್ಲಿ ಚಾಟ್ ಜಿಪಿಟಿ ತಯಾರಕರು ಪ್ರಗತಿ ಸಾಧಿಸಿದ್ದಾರೆ.
ವರದಿಗಳ ಪ್ರಕಾರ, ಈ ಪತ್ರವು ಕಳೆದ ವಾರ ಆಲ್ಟ್ಮ್ಯಾನ್ ಅವರನ್ನು ವಜಾಗೊಳಿಸಲು ಮಂಡಳಿಯು ತ್ವರಿತವಾಗಿ ಕ್ರಮ ತೆಗೆದುಕೊಳ್ಳಲು ಕಾರಣವಾಯಿತು ಎಂದು ಓಪನ್ಎಐನ ಹಿರಿಯ ಕಾರ್ಯನಿರ್ವಾಹಕಿ ಮೀರಾ ಮುರತಿ ಇತರ ಉದ್ಯೋಗಿಗಳಿಗೆ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇತ್ತೀಚೆಗೆ ಸ್ಯಾಮ್ ಆಲ್ಟ್ಮ್ಯಾನ್ ಅವರನ್ನು ಓಪನ್ ಎಐ ಕಂಪನಿಯಿಂದ ವಜಾಗೊಳಿಸಿತ್ತು. ಆದರೆ ಸಂಧಾನ ಮಾತುಕತೆಗಳ ನಂತರ ಆಲ್ಟ್ಮ್ಯಾನ್ ಮತ್ತೆ ಸಿಇಒ ಆಗಿ ಓಪನ್ ಎಐ ಗೆ ಮರಳಿದ್ದಾರೆ. ಅಲ್ಲದೆ ತಮ್ಮನ್ನು ವಜಾಗೊಳಿಸಲು ಕಾರಣವಾದ ಮಂಡಳಿಯ ಬಹುತೇಕರನ್ನು ಅವರು ಹೊರಹಾಕಿದ್ದಾರೆ. ಓಪನ್ ಎಐಗೆ ಸಿಇಒ ಆಗಿ ಮರಳಿದ ನಂತರ, ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅವರು, "ನಾನು ಓಪನ್ ಎಐ ಅನ್ನು ಪ್ರೀತಿಸುತ್ತೇನೆ ಮತ್ತು ಕಳೆದ ಕೆಲವು ದಿನಗಳಲ್ಲಿ ನಾನು ಮಾಡಿದ ಎಲ್ಲ ಕೆಲಸಗಳು ಈ ತಂಡ ಮತ್ತು ಅದರ ಉದ್ದೇಶಗಳನ್ನು ಮುಂದುವರಿಸುವ ಹೆಜ್ಜೆಯಾಗಿದೆ." ಎಂದು ಬರೆದಿದ್ದಾರೆ.
ಇದನ್ನೂ ಓದಿ : ಡೀಪ್ ಫೇಕ್ ತಡೆಗೆ ಶೀಘ್ರ ಹೊಸ ಕಾನೂನು: ಕೇಂದ್ರ ಸರ್ಕಾರ