ಜೆರುಸಲೇಮ್ : ಹಮಾಸ್ ಮತ್ತು ಇಸ್ರೇಲ್ ನಡುವಿನ ಸಮರ ತೀವ್ರಗೊಳ್ಳುತ್ತಿರುವ ಮಧ್ಯೆ ಇಸ್ರೇಲ್ ಮೇಲೆ ಸೈಬರ್ ದಾಳಿಗಳು ಕೂಡ ಹೆಚ್ಚಾಗುತ್ತಿವೆ. ಹ್ಯಾಕರ್ಗಳು ವ್ಯಾಪಕ ಪ್ರಮಾಣದಲ್ಲಿ ಇಸ್ರೇಲ್ ವೆಬ್ಸೈಟ್ಗಳ ಮೇಲೆ ದಾಳಿ ನಡೆಸಿ, ಅವುಗಳನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇಸ್ರೇಲ್ ವಿರುದ್ಧ ಹಮಾಸ್ ಶನಿವಾರ ಬೆಳಗ್ಗೆ ದಾಳಿ ಆರಂಭಿಸಿದ ನಂತರ ನಮ್ಮ ವೆಬ್ಸೈಟ್ ಮೇಲೆ ತೀವ್ರವಾಗಿ ದಾಳಿ ನಡೆಸಲಾಗುತ್ತಿದ್ದು, ವೆಬ್ಸೈಟ್ ಸ್ಥಗಿತಗೊಂಡಿದೆ ಎಂದು ಇಸ್ರೇಲ್ ನ ಪ್ರಮುಖ ವೃತ್ತ ಪತ್ರಿಕೆ ದಿ ಜೆರುಸಲೇಮ್ ಪೋಸ್ಟ್ ಎಕ್ಸ್ ನಲ್ಲಿ ಹೇಳಿಕೊಂಡಿದೆ.
"ನಾವು ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲಿದ್ದೇವೆ ಮತ್ತು ಶೀಘ್ರದಲ್ಲೇ ನಿಮ್ಮೆದುರಿಗೆ ಬರಲಿದ್ದೇವೆ. ಆಪರೇಷನ್ ಸ್ವೋರ್ಡ್ಸ್ ಆಫ್ ಐರನ್ ಮತ್ತು ಹಮಾಸ್ನ ಹಿಂಸಾತ್ಮಕ ದಾಳಿಗಳ ಬಗ್ಗೆ ನಿಮಗೆ ಮಾಹಿತಿ ನೀಡುವುದನ್ನು ಮುಂದುವರಿಸಲಿದ್ದೇವೆ" ಎಂದು ಅದು ಹೇಳಿದೆ. "ಇಸ್ರೇಲ್ನ ಹಲವಾರು ವೆಬ್ಸೈಟ್ಗಳ ಮೇಲೆ denial of service (DDoS) ದಾಳಿಗಳು ನಡೆದಿದ್ದು, ಅನೇಕ ವೆಬ್ಸೈಟ್ಗಳನ್ನು ವಿರೂಪಗೊಳಿಸಲಾಗಿದೆ. ಆದರೆ ಯಾವ ದೇಶದಿಂದ ಇದನ್ನು ಮಾಡಲಾಗುತ್ತಿದೆ ಎಂಬುದು ಇನ್ನೂ ತಿಳಿದಿಲ್ಲ" ಎಂದು ಇಸ್ರೇಲ್ನ ರಾಷ್ಟ್ರೀಯ ಭದ್ರತಾ ಏಜೆನ್ಸಿಯ ಸೈಬರ್ ಸೆಕ್ಯುರಿಟಿ ನಿರ್ದೇಶಕ ರಾಬ್ ಜಾಯ್ಸ್ ಹೇಳಿದ್ದಾರೆ.
ಡಿಡಿಒಎಸ್ ದಾಳಿಯಿಂದ 60ಕ್ಕೂ ಹೆಚ್ಚು ವೆಬ್ಸೈಟ್ಗಳನ್ನು ಹಾಳು ಮಾಡಲಾಗಿದೆ ಎಂದು ಸೈಬರ್ ಸೆಕ್ಯುರಿಟಿ ಸಂಶೋಧಕ ವಿಲ್ ಥಾಮಸ್ ಹೇಳಿದ್ದಾರೆ. ಪ್ಯಾಲೆಸ್ಟೈನ್ ಪರವಾಗಿರುವ ಹ್ಯಾಕ್ಟಿವಿಸ್ಟ್ಗಳು ಇಸ್ರೇಲ್ನ ಸರ್ಕಾರಿ ವೆಬ್ಸೈಟ್ಗಳು, ನಾಗರಿಕ ಸೇವಾ ಸಂಸ್ಥೆ ವೆಬ್ಸೈಟ್ಗಳು, ಸುದ್ದಿ ಮಾಧ್ಯಮ ವೆಬ್ಸೈಟ್ಗಳು, ಹಣಕಾಸು ಸಂಸ್ಥೆಗಳು, ದೂರಸಂಪರ್ಕ ಮತ್ತು ಇಂಧನ ಕಂಪನಿಗಳ ವೆಬ್ಸೈಟ್ಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಥಾಮಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ನೆಟ್ವರ್ಕ್, ಕಂಪ್ಯೂಟರ್ ಸಿಸ್ಟಮ್ ಅಥವಾ ಡಿಜಿಟಲ್ ಸಾಧನಕ್ಕೆ ಅನಧಿಕೃತ ಪ್ರವೇಶದ ಮೂಲಕ ಡೇಟಾ, ಅಪ್ಲಿಕೇಶನ್ಗಳು ಅಥವಾ ಇತರ ಸ್ವತ್ತುಗಳನ್ನು ಕದಿಯುವ, ಬಹಿರಂಗಪಡಿಸುವ, ಬದಲಾಯಿಸುವ, ನಿಷ್ಕ್ರಿಯಗೊಳಿಸುವ ಅಥವಾ ನಾಶಪಡಿಸುವ ಯಾವುದೇ ಉದ್ದೇಶಪೂರ್ವಕ ಪ್ರಯತ್ನವನ್ನು ಸೈಬರ್ ದಾಳಿ ಎಂದು ಕರೆಯಲಾಗುತ್ತದೆ.
ಶನಿವಾರದಂದು ಹಮಾಸ್ ಆರಂಭಿಸಿದ ಶಸ್ತ್ರಸಜ್ಜಿತ ದಾಳಿಯ ನಂತರ ಎರಡೂ ಪ್ರದೇಶಗಳ ಮಧ್ಯೆ ಭೀಕರ ಕದನ ಏರ್ಪಟ್ಟಿದೆ. ಎರಡೂ ಕಡೆಗಳ ಸುಮಾರು 1600ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದು, 2616ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. 25 ಕ್ಕೂ ಹೆಚ್ಚು ಗಾಯಾಳುಗಳು ಗಂಭೀರ ಸ್ಥಿತಿಯಲ್ಲಿದ್ದಾರೆ. ಪ್ಯಾಲೆಸ್ಟೈನ್ ಎನ್ಕ್ಲೇವ್ನಲ್ಲಿ 130 ಕ್ಕೂ ಹೆಚ್ಚು ಇಸ್ರೇಲ್ ನಾಗರಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವುದಾಗಿ ಗಾಜಾ ಉಗ್ರರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ಜಾಗತಿಕ ಉಷ್ಣಾಂಶ ಹೆಚ್ಚಳಕ್ಕೆ ಪ್ರಮುಖ 6 ಕಾರಣಗಳು ಇಲ್ಲಿವೆ...