ವಾಷಿಂಗ್ಟನ್ (ಅಮೆರಿಕ): ನಾಸಾದ ಕ್ಯೂರಿಯಾಸಿಟಿ ರೋವರ್ ನೌಕೆ ಮಂಗಳ ಗ್ರಹದಲ್ಲಿ ನಾಲ್ಕು ಸಾವಿರ ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಮಂಗಳ ಗ್ರಹದಲ್ಲಿ ಸೂಕ್ಷ್ಮಜೀವಿಗಳು ಇರುವ ವಾತಾವರಣವನ್ನು ಹೊಂದಿದೆಯೇ ಎಂದು ಅಧ್ಯಯನ ಮಾಡುವುದಕ್ಕಾಗಿಯೇ ರೋವರ್ ಮೊದಲ ಬಾರಿಗೆ ಆಗಸ್ಟ್ 5, 2012 ರಂದು ಮಂಗಳನ ಗೇಲ್ ಕುಳಿಯಲ್ಲಿ ಇಳಿದಿತ್ತು.
ಒಂದು ಕಾರಿನ ಗಾತ್ರದಷ್ಟಿರುವ ರೋವರ್ ನೌಕೆ ಕ್ರಮೇಣ 5 ಕಿಲೋಮೀಟರ್ ಎತ್ತರದ ಮೌಂಟ್ ಶಾರ್ಪ್ನ ತುದಿಗೆ ಏರುತ್ತಿದೆ. ಈ ಪರ್ವತದ ಪದರುಗಳು ಮಂಗಳದ ಇತಿಹಾಸದ ವಿವಿಧ ಅವಧಿಗಳಲ್ಲಿ ರೂಪುಗೊಂಡಿವೆ ಮತ್ತು ಕಾಲಾನಂತರದಲ್ಲಿ ಗ್ರಹದ ಹವಾಮಾನ ಹೇಗೆ ಬದಲಾಯಿತು ಎಂಬುದರ ಬಗ್ಗೆ ಮಾಹಿತಿ ನೀಡುತ್ತವೆ.
ರೋವರ್ ನೌಕೆಯು ಇತ್ತೀಚೆಗೆ 39 ನೇ ಮಾದರಿಯನ್ನು ಕೊರೆದಿದೆ ಮತ್ತು ವಿವರವಾದ ವಿಶ್ಲೇಷಣೆಗಾಗಿ ಪುಡಿಮಾಡಿದ ಬಂಡೆಯನ್ನು ಸಂಗ್ರಹಿಸಿದೆ. ಹೀಗೆ ಬಂಡೆ ಕೊರೆದು ಮಾದರಿಗಳನ್ನು ಸಂಗ್ರಹಿಸಿದ ಸ್ಥಳಕ್ಕೆ "ಸಿಕ್ವೊಯಾ" ಎಂದು ಹೆಸರಿಡಲಾಗಿದೆ.
ಈ ಪ್ರದೇಶವು ಸಲ್ಫೇಟ್ಗಳಿಂದ ಸಮೃದ್ಧವಾಗುತ್ತಿದ್ದಂತೆ ಮಂಗಳ ಗ್ರಹದ ಹವಾಮಾನ ಮತ್ತು ವಾಸಯೋಗ್ಯತೆಯು ಹೇಗೆ ವಿಕಸನಗೊಂಡಿತು ಎಂಬುದರ ಬಗ್ಗೆ ಈ ಮಾದರಿ ಇನ್ನಷ್ಟು ಮಾಹಿತಿ ನೀಡಬಹುದು ಎಂಬುದು ವಿಜ್ಞಾನಿಗಳ ಅಂದಾಜು ಹಾಗೂ ಊಹೆಯಾಗಿದೆ. ಶತಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹವು ಮೊದಲು ಒಣಗಲು ಪ್ರಾರಂಭಿಸಿದಾಗ ಆವಿಯಾಗುತ್ತಿದ್ದ ಉಪ್ಪು ನೀರಿನಲ್ಲಿ ರೂಪುಗೊಂಡ ಖನಿಜಗಳು ಸಲ್ಫೇಟ್ಗಳಾಗಿದ್ದವು. ಅಂತಿಮವಾಗಿ ಮಂಗಳನಲ್ಲಿನ ದ್ರವ ನೀರು ಕಣ್ಮರೆಯಾಯಿತು ಎಂಬುದು ವಿಜ್ಞಾನಿಗಳು ಮಾಡಿರುವ ಅಂದಾಜಾಗಿದೆ.
"ಕಳೆದ ವರ್ಷದಲ್ಲಿ ಕ್ಯೂರಿಯಾಸಿಟಿಯಲ್ಲಿನ ಉಪಕರಣಗಳು ಗುರುತಿಸಿದ ಸಲ್ಫೇಟ್ ಮತ್ತು ಕಾರ್ಬೊನೇಟ್ ಖನಿಜಗಳ ಪ್ರಕಾರಗಳು ಬಹಳ ಹಿಂದೆ ಮಂಗಳ ಗ್ರಹ ಹೇಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾವು ದಶಕಗಳಿಂದ ಈ ಫಲಿತಾಂಶಗಳನ್ನು ನಿರೀಕ್ಷಿಸುತ್ತಿದ್ದೇವೆ ಮತ್ತು ಈಗ ಸಿಕ್ವೊಯಾ ನಮಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಲಿದೆ." ಎಂದು ಮಿಷನ್ನ ನೇತೃತ್ವ ವಹಿಸಿರುವ ದಕ್ಷಿಣ ಕ್ಯಾಲಿಫೋರ್ನಿಯಾ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಕ್ಯೂರಿಯಾಸಿಟಿ ಯೋಜನಾ ವಿಜ್ಞಾನಿ ಅಶ್ವಿನ್ ವಸವಾಡಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2012 ರಿಂದ ಧೂಳು ಮತ್ತು ವಿಕಿರಣದಿಂದ ತುಂಬಿದ ಶೀತ ವಾತಾವರಣದಲ್ಲಿ ಸುಮಾರು 32 ಕಿಲೋಮೀಟರ್ ಓಡಿರುವ ಕ್ಯೂರಿಯಾಸಿಟಿ ರೋವರ್ ಈಗಲೂ ಯಾವುದೇ ಅಡೆ ತಡೆಯಿಲ್ಲದೇ ಮಂಗಳ ಅಂಗಳಲ್ಲಿ ಸುತ್ತು ಹಾಕುತ್ತಾ ವಿಜ್ಞಾನಿಗಳಿಗೆ ಬೇಕಾಗಿರುವ ಮಾಹಿತಿಯನ್ನು ಸಂಗ್ರಹ ಮಾಡುತ್ತಿದೆ. ರೋವರ್ ನ ಪರಮಾಣು ವಿದ್ಯುತ್ ಮೂಲದ ಕಾರ್ಯಕ್ಷಮತೆಯನ್ನು ಮಿಷನ್ ಎಂಜಿನಿಯರ್ ಗಳು ಈ ರೋವರ್ ಮೇಲೆ ಕಣ್ಗಾವಲಿಟ್ಟಿದ್ದು, ಸತತವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ರೋವರ್ ಇನ್ನೂ ಅನೇಕ ವರ್ಷಗಳವರೆಗೆ ಕಾರ್ಯನಿರ್ವಹಿಸಲು ಪರಮಾಣು ಇಂಧನ ಸಾಕಷ್ಟು ಶಕ್ತಿಯನ್ನು ನೀಡಲಿದೆ ಎಂದು ವಿಜ್ಞಾನಿಗಳು ನಿರೀಕ್ಷಿಸಿದ್ದಾರೆ.
ಇದನ್ನೂ ಓದಿ : ಹೊಸ ಚಾಟ್ಬಾಟ್ GPT-4 Turbo ಬಿಡುಗಡೆ; 100 ಮಿಲಿಯನ್ ದಾಟಿದ ಚಾಟ್ಜಿಪಿಟಿ ಬಳಕೆದಾರರ ಸಂಖ್ಯೆ