ಸ್ಯಾನ್ ಫ್ರಾನ್ಸಿಸ್ಕೋ : 2030ರ ವೇಳೆಗೆ ಒಂದೇ ಒಂದು ಪ್ಯಾಕೇಜ್ನಲ್ಲಿ ಒಂದು ಟ್ರಿಲಿಯನ್ ಟ್ರಾನ್ಸಿಸ್ಟರ್ಗಳನ್ನು ಅಳವಡಿಸುವ ನಿರೀಕ್ಷೆ ಇದೆ ಎಂದು ಇಂಟೆಲ್ ಹೇಳಿದೆ. ಚಿಪ್ ಪ್ಯಾಕೇಜಿಂಗ್ ತಂತ್ರಜ್ಞಾನ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದ್ದು, ತನ್ನ ಮುಂದಿನ ತಲೆಮಾರಿನ ಚಿಪ್ ಪ್ಯಾಕೇಜಿಂಗ್ ತಂತ್ರಜ್ಞಾನದೊಂದಿಗೆ 2030 ರ ವೇಳೆಗೆ ಒಂದು ಟ್ರಿಲಿಯನ್ ಟ್ರಾನ್ಸಿಸ್ಟರ್ ಗಳನ್ನು ಪ್ಯಾಕೇಜ್ ನಲ್ಲಿ ಇರಿಸಲು ಬಯಸಿರುವುದಾಗಿ ಇಂಟೆಲ್ ತಿಳಿಸಿದೆ.
ಕಳೆದ ಒಂದೆರಡು ದಶಕಗಳಿಂದ ಇಂಟೆಲ್ ಸುಧಾರಿತ ಚಿಪ್ ಪ್ಯಾಕೇಜಿಂಗ್ ಉದ್ಯಮದ ಮುಂಚೂಣಿಯಲ್ಲಿದೆ. ಇಂಟೆಲ್ನ ಆವಿಷ್ಕಾರಗಳಲ್ಲಿ ಇಎಂಐಬಿ (ಎಂಬೆಡೆಡ್ ಮಲ್ಟಿ-ಡೈ ಇಂಟರ್ಕನೆಕ್ಟ್ ಬ್ರಿಡ್ಜ್) ಮತ್ತು ಫೋವೆರೋಸ್ ಸೇರಿವೆ. ಇವು ಪ್ಯಾಕೇಜ್ನಲ್ಲಿನ ಅನೇಕ ಚಿಪ್ಗಳನ್ನು ಅಕ್ಕಪಕ್ಕದಲ್ಲಿ ಸಂಪರ್ಕಿಸಲು (ಇಎಂಐಬಿ) ಅಥವಾ 3 ಡಿ ಶೈಲಿಯಲ್ಲಿ (ಫೋವೆರೊಸ್) ಒಂದರ ಮೇಲೊಂದು ಜೋಡಿಸಲು ಅನುವು ಮಾಡಿಕೊಡುವ ತಂತ್ರಜ್ಞಾನಗಳಾಗಿವೆ.
"ಮೂರ್ಸ್ ಲಾ (Moore's Law) ಪ್ರಗತಿ ಹೊಂದುತ್ತಿದ್ದಂತೆ, ಸಾಂಪ್ರದಾಯಿಕ ವಿಧಾನದ ಸ್ಕೇಲಿಂಗ್ ಕಡಿಮೆಯಾಗುತ್ತಿದೆ" ಎಂದು ಇಂಟೆಲ್ನ ತಂತ್ರಜ್ಞಾನ ಅಭಿವೃದ್ಧಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಆನ್ ಕೆಲ್ಲೆಹರ್ ಹೇಳಿದರು. "ಆದರೆ ನಾವು ಸುಧಾರಿತ ಪ್ಯಾಕೇಜಿಂಗ್ ಮತ್ತು ವೈವಿಧ್ಯಮಯ ಸಂಯೋಜನೆ ಮಾಡಲು ಪ್ರಾರಂಭಿಸುತ್ತಿದ್ದಂತೆ, ನಾವು ಹೆಚ್ಚಿನ ಘಟಕಗಳನ್ನು ನಿರ್ದಿಷ್ಟ ಪ್ಯಾಕೇಜ್ ಮತ್ತು ನಿರ್ದಿಷ್ಟ ಉತ್ಪನ್ನದಲ್ಲಿ ಪ್ಯಾಕ್ ಮಾಡಬಹುದು" ಎಂದು ಕೆಲ್ಲೆಹರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂಟೆಲ್ ನ ಪ್ಯಾಕೇಜಿಂಗ್ ತಂತ್ರಜ್ಞಾನವು ಇಂಟೆಲ್ ಫೌಂಡ್ರಿ ಸೇವೆಗಳಿಗೆ (ಐಎಫ್ ಎಸ್) ಸ್ಪರ್ಧಾತ್ಮಕವಾಗಿ ಸಹಾಯಕವಾಗಿದೆ. "ನಾವು ವಿಶ್ವಾಸಾರ್ಹ ತಂತ್ರಜ್ಞಾನ ಕಂಪನಿಯಾಗಿದ್ದು, ಪ್ರಮಾಣಿತ ಪ್ಯಾಕೇಜಿಂಗ್ ಮತ್ತು ಸುಧಾರಿತ ಪ್ಯಾಕೇಜಿಂಗ್ ಎರಡರಲ್ಲೂ ಸಾಬೀತಾಗಿರುವ ಟ್ರ್ಯಾಕ್ ರೆಕಾರ್ಡ್ ಅನ್ನು ಹೊಂದಿದ್ದೇವೆ ಎಂಬುದು ನಮ್ಮ ಫೌಂಡ್ರಿ ಗ್ರಾಹಕರಿಂದ ಬಂದ ಪ್ರತಿಕ್ರಿಯೆಯಾಗಿದೆ" ಎಂದು ಐಎಫ್ಎಎಸ್ ಫೌಂಡ್ರಿ ಅಡ್ವಾನ್ಸಡ್ ಪ್ಯಾಕೇಜಿಂಗ್ನ ಹಿರಿಯ ನಿರ್ದೇಶಕ ಮಾರ್ಕ್ ಗಾರ್ಡ್ನರ್ ಹೇಳಿದರು.
ಇಂಟೆಲ್ ಇದರ ಪೂರ್ಣ ಹೆಸರು ಇಂಟೆಲ್ ಕಾರ್ಪೊರೇಷನ್ ಆಗಿದ್ದು, ಇದು ಪ್ರಮುಖ ಅಮೇರಿಕನ್ ಬ್ರಾಂಡ್ ಆಗಿದೆ. ಕಂಪನಿಯು ಎಲೆಕ್ಟ್ರಾನಿಕ್ ಕಂಪ್ಯೂಟರ್ ಸರ್ಕ್ಯೂಟ್ ಗಳನ್ನು ತಯಾರಿಸುತ್ತದೆ. ಇದರ ಪ್ರಧಾನ ಕಚೇರಿ ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾದಲ್ಲಿದೆ. ಇಂಟೆಲ್ ಕಾರ್ಪ್ ಇದು ವಿಶ್ವದ ಅತಿದೊಡ್ಡ ಪ್ರೊಸೆಸಿಂಗ್ ಯೂನಿಟ್ ಮತ್ತು ಸೆಮಿಕಂಡಕ್ಟರ್ ತಯಾರಕ ಕಂಪನಿಯಾಗಿದೆ.
ಕಂಪನಿಯು ತನ್ನ ಎಕ್ಸ್ 86 ವಾಸ್ತುಶಿಲ್ಪದ ಆಧಾರದ ಸಿಪಿಯುಗಳಿಗೆ ಹೆಸರುವಾಸಿಯಾಗಿದೆ. ಎಕ್ಸ್ 86 ಅನ್ನು 1980 ರ ದಶಕದಲ್ಲಿ ಪ್ರಥಮಬಾರಿಗೆ ತಯಾರಿಸಲಾಗಿತ್ತು ಮತ್ತು ನಿರಂತರವಾಗಿ ಇದನ್ನು ಮಾರ್ಪಡಿಸಲಾಗಿದೆ, ಪರಿಷ್ಕರಿಸಲಾಗಿದೆ ಮತ್ತು ಆಧುನೀಕರಿಸಲಾಗಿದೆ. ಇಂಟೆಲ್ ಅನ್ನು 1968 ರಲ್ಲಿ ಗಾರ್ಡನ್ ಮೂರ್ ಮತ್ತು ರಾಬರ್ಟ್ ನೊಯ್ಸ್ ನೇತೃತ್ವದ ಫೇರ್ ಚೈಲ್ಡ್ ಸೆಮಿಕಂಡಕ್ಟರ್ ನ ಎಂಜಿನಿಯರ್ಗಳ ಗುಂಪು ಸ್ಥಾಪಿಸಿತು. ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ಸ್ ಎಂಬ ಪದವನ್ನು ಸಂಕ್ಷಿಪ್ತಗೊಳಿಸಿ ಇಂಟೆಲ್ ಎಂದು ಕಂಪನಿಗೆ ಹೆಸರಿಡಲಾಗಿದೆ.
ಇದನ್ನೂ ಓದಿ : ಬದಲಾಗಲಿದೆ ಆಂಡ್ರಾಯ್ಡ್ ಬ್ರಾಂಡಿಂಗ್; ಬರಲಿದೆ 3D ಲೋಗೊ, ಆಕರ್ಷಕ ಲುಕ್!