ಬೀಜಿಂಗ್, ಚೀನಾ: ಮಂಗಳ ಗ್ರಹದ ಮೇಲೆ ಮುಂದಿನ ತಿಂಗಳುಗಳಲ್ಲಿ ರೋವರ್ ಇಳಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಈಗ ಮಂಗಳನ ಕಕ್ಷೆಯಲ್ಲಿ ತಾತ್ಕಾಲಿಕವಾಗಿ ಟಿಯಾನ್ವೆನ್-1 ಸ್ಪೇಸ್ ಕ್ರಾಫ್ಟ್ ಇಳಿಸಲಾಗಿದೆ ಎಂದು ಚೀನಾ ತಿಳಿಸಿದೆ.
ಬುಧವಾರ ಬೆಳಗ್ಗೆ ಚೀನಾದ ಕಾಲಮಾನದಂತೆ ಸ್ಪೇಸ್ ಕ್ರಾಫ್ಟ್ಅನ್ನು ಮಂಗಳನ ಕಕ್ಷೆಯಲ್ಲಿ ತಾತ್ಕಾಲಿಕವಾಗಿ ಇಳಿಸಲಾಗಿದ್ದು, ಮುಂದಿನ ಮೂರು ತಿಂಗಳು ಅದೇ ಕಕ್ಷೆಯಲ್ಲಿ ಸ್ಪೇಸ್ ಕ್ರಾಫ್ಟ್ ಇರಲಿದೆ. ಇದಾದ ನಂತರ ಮಂಗಳನ ಮೇಲೆ ಲ್ಯಾಂಡಿಂಗ್ ಮಾಡಲು ಯತ್ನಿಸುತ್ತದೆ ಎಂದು ಚೀನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ ಹೇಳಿದೆ.
ಕಕ್ಷೆಯಲ್ಲಿರುವ ವೇಳೆ ಮಂಗಳ ಗ್ರಹದ ಮೇಲ್ಮೈಯನ್ನು ಅಧ್ಯಯನ ಮಾಡಲಾಗುತ್ತದೆ. ಕ್ಯಾಮರಾ ಮತ್ತು ಇತರ ಸೆನ್ಸಾರ್ ಸಾಧನಗಳಿಂದ ವಿವಿಧ ರೀತಿಯ ಮಾಹಿತಿ ಸಂಗ್ರಹಣೆ ಮಾಡಲಾಗುತ್ತದೆ ಎಂದು ಚೀನಾ ಬಾಹ್ಯಾಕಾಶ ಆಡಳಿತ ಹೇಳಿದೆ.
ಇದನ್ನೂ ಓದಿ: ಕೊರೊನಾ ಲಸಿಕೆ ಉಚಿತವಿಲ್ಲ! 'ಪ್ರೈವೇಟ್ ಆಸ್ಪತ್ರೆಗಳಲ್ಲಿ ಜನ ಹಣ ಪಾವತಿಸಬೇಕು'
ಗುರುವಾರವಷ್ಟೇ ಅಮೆರಿಕದ ರೋವರ್ಅನ್ನು ಮಂಗಳ ಗ್ರಹದ ಮೇಲೆ ಇಳಿಸಲಾಗಿತ್ತು. ಪ್ರಾಚೀನ ನದಿ ಎನ್ನಲಾದ ಜೆಝೆರೋ ಕ್ರೇಟರ್ ಬಳಿ ರೋವರ್ ಇಳಿಸಲಾಗಿದ್ದು, ಅಲ್ಲಿನ ಸೂಕ್ಷ್ಮಜೀವಿಗಳ ಅಧ್ಯಯನ ಕೈಗೊಳ್ಳಲಾಗುತ್ತದೆ.
ಮಂಗಳ ಗ್ರಹದ ಮೇಲೆ ಸ್ಪೇಸ್ ಕ್ರಾಫ್ಟ್ ಲ್ಯಾಂಡಿಂಗ್ ಮಾಡುವುದು ತುಂಬಾ ಕ್ಲಿಷ್ಟಕರವಾಗಿದ್ದು, 2011ರಲ್ಲಿ ರಷ್ಯನ್ ಮಿಷನ್ನ ಭಾಗವಾದ ಕಾರ್ಯಾಚರಣೆಯೊಂದು ವಿಫಲವಾಗಿತ್ತು.
ಇನ್ನು ಟಿಯಾನ್ವೆನ್ ಎಂಬುದು ಪ್ರಾಚೀನ ಪದ್ಯವಾಗಿದ್ದು, ಸ್ವರ್ಗದ ಸತ್ಯಕ್ಕಾಗಿ ಅನ್ವೇಷಣೆ ಎಂಬ ಅರ್ಥವನ್ನು ನೀಡುತ್ತದೆ. ಈಗ ಬಾಹ್ಯಾಕಾಶ ನೌಕೆಗೆ ಆ ಹೆಸರು ಇಡಲಾಗಿದ್ದು, ಇದು ಚೀನಾದ ಮಹತ್ವದ ಯೋಜನೆಯಾಗಿದೆ.