ಬೆಂಗಳೂರು: ಭಾರತದ ಮೂರನೇ ಚಂದ್ರಯಾನ -3 ರ ಲ್ಯಾಂಡರ್ ವಿಕ್ರಮ್ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಸರಾಗವಾಗಿ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್. ಸೋಮನಾಥ್ ಮಂಗಳವಾರ ಹೇಳಿದ್ದಾರೆ. ಒಂದೊಮ್ಮೆ ಎಂಜಿನ್ ವೈಫಲ್ಯವಾದರೂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
ಎನ್ಜಿಓ ದಿಶಾ ಭಾರತ್ ಆಯೋಜಿಸಿದ್ದ "ಚಂದ್ರಯಾನ -3: ಭಾರತದ ಹೆಮ್ಮೆಯ ಬಾಹ್ಯಾಕಾಶ ಮಿಷನ್" ಕುರಿತ ಉಪನ್ಯಾಸದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲ ಸಂವೇದಕಗಳು ಮತ್ತು ಅದರ ಎರಡು ಎಂಜಿನ್ಗಳು ಕೆಲಸ ಮಾಡಲು ವಿಫಲವಾದರೂ ಸಾಫ್ಟ್ ಲ್ಯಾಂಡಿಂಗ್ ಮಾಡಲಾಗುವುದು. ಚಂದ್ರನ ಮೇಲ್ಮೈಯಲ್ಲಿ ಸಮತಲವಾಗಿರುವ ವಿಕ್ರಮ್ ಅನ್ನು ಲಂಬವಾಗಿ ಇಳಿಸುವುದು ಇಸ್ರೋ ತಂಡದ ಮುಂದಿರುವ ದೊಡ್ಡ ಸವಾಲಾಗಿದೆ ಎಂದು ಅವರು ಹೇಳಿದರು.
ಲ್ಯಾಂಡರ್ ಆರ್ಬಿಟ್ನಿಂದ ಬೇರ್ಪಟ್ಟ ನಂತರ ಅದು ಸಮತಲವಾಗಿ ಚಲಿಸುತ್ತದೆ. ಸರಣಿ ಕ್ರಮಗಳ ನಂತರ, ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವುದನ್ನು ಖಚಿತಪಡಿಸಿಕೊಳ್ಳಲು ವಿಕ್ರಮ್ ಅನ್ನು ಲಂಬ ಸ್ಥಾನಕ್ಕೆ ತರಲಾಗುವುದು. ಸಮತಲದಿಂದ ಲಂಬ ದಿಕ್ಕಿಗೆ ವರ್ಗಾಯಿಸುವ ಸಮಯದಲ್ಲಿಯೇ ನಾವು ತಂತ್ರಗಳನ್ನು ಬಳಸಬೇಕಿದೆ. ಇದೇ ವಿಷಯದಲ್ಲಿ ನಾವು ಕಳೆದ ಬಾರಿ ಸಮಸ್ಯೆಗಳನ್ನು ಎದುರಿಸಿದ್ದೆವು ಎಂದು ಅವರು ಹೇಳಿದರು.
ಚಂದ್ರಯಾನ -2 ಸಮಯದಲ್ಲಿ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಇಳಿಸಲು ಇಸ್ರೋ ವಿಫಲವಾಗಿತ್ತು. ಆದರೆ, ಈ ಬಾರಿ ವೈಫಲ್ಯಗಳು ಉಂಟಾಗದಂತೆ ಲ್ಯಾಂಡರ್ 'ವಿಕ್ರಮ್' ಅನ್ನು ವಿನ್ಯಾಸ ಮಾಡಲಾಗಿದೆ. ಎಲ್ಲ ಸಂವೇದಕಗಳು ಕೆಲಸ ಮಾಡುವುದನ್ನು ನಿಲ್ಲಿಸಿದರೆ ಹಾಗೂ ಎಲ್ಲವೂ ವಿಫಲವಾದರೂ ಲ್ಯಾಂಡರ್ ಪ್ರೊಪಲ್ಷನ್ ಸಿಸ್ಟಮ್ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ ಎಂದು ಅವರು ತಿಳಿಸಿದರು.
ಚಂದ್ರಯಾನ -3 ಮಿಷನ್ ಜುಲೈ 14 ರಂದು ಉಡಾವಣೆಯಾಗಿದೆ ಮತ್ತು ಬಾಹ್ಯಾಕಾಶಕ್ಕೆ ಹಾರಿದ ನಂತರ ಅದು ಆಗಸ್ಟ್ 5 ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ಚಂದ್ರನ ಕಕ್ಷೆಯು ಚಂದ್ರನಿಂದ 100 ಕಿಮೀ x 100 ಕಿಮೀಗೆ ಕಡಿಮೆಯಾಗುವವರೆಗೆ ಆಗಸ್ಟ್ 9, 14 ಮತ್ತು 16 ರಂದು ಇನ್ನೂ ಮೂರು ಡಿ - ಆರ್ಬಿಟಿಂಗ್ ಕಾರ್ಯಗಳು ನಡೆಯಲಿವೆ.
ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಇಳಿಯುವಂತೆ ಚಂದ್ರನಿಗೆ ಹತ್ತಿರ ತರಲು ಇದನ್ನು ಮಾಡಲಾಗುತ್ತದೆ. ಲ್ಯಾಂಡರ್ ಡಿಬೂಸ್ಟ್ ನಂತರ ಲ್ಯಾಂಡರ್ ಪ್ರೊಪಲ್ಷನ್ ಮಾಡ್ಯೂಲ್ ಬೇರ್ಪಡಿಸುವ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಇದು ನೌಕೆಯನ್ನು ನಿಧಾನಗೊಳಿಸುವ ಪ್ರಕ್ರಿಯೆಯಾಗಿದೆ. ನಂತರ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಇಳಿಯಲಿದೆ ಎಂದು ಇಸ್ರೋ ಮುಖ್ಯಸ್ಥರು ತಿಳಿಸಿದ್ದಾರೆ. ಕಡಿಮೆ ಇಂಧನ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು ಕೂಡ ಒಂದು ಸವಾಲಾಗಿದೆ. ಲೆಕ್ಕಾಚಾರಗಳಲ್ಲಿ ಕೆಲ ವ್ಯತ್ಯಾಸಗಳಿದ್ದರೂ ವಿಕ್ರಮ್ ಸರಿಯಾಗಿ ಲ್ಯಾಂಡಿಂಗ್ ಆಗುವುದನ್ನು ಇಸ್ರೋ ತಂಡ ಈ ಬಾರಿ ಖಚಿತಪಡಿಸಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : Global Warming: ಅಂಟಾರ್ಕ್ಟಿಕಾದಲ್ಲಿ ಶಾಖದ ಅಲೆ, ಕರಗುತ್ತಿವೆ ಹಿಮಗಡ್ಡೆಗಳು; ವಿಜ್ಞಾನಿಗಳ ಎಚ್ಚರಿಕೆ