ಸಮುದ್ರದಾಳ ನಮಗೆ ಗೊತ್ತಿರದ ನಿಗೂಢ ಪ್ರಪಂಚ. ಅಲ್ಲಿ ಅದೆಷ್ಟೋ ವಿಸ್ಮಯಕಾರಿ ಜೀವರಾಶಿಗಳ ಸಮೂಹವೇ ಇದೆ. ಹಿಂದೂ ಮಹಾಸಾಗರದ ಆಳದಲ್ಲಿ ಕಣ್ಣುಗಳಿಲ್ಲದ ಈಲ್ಗಳು, ಕೋರೆಹಲ್ಲುಗಳ ಮೀನುಗಳು, ಸಮುದ್ರದ ಅರ್ಚಿನ್ಗಳಂತಹ ವಿಚಿತ್ರವಾದ ಜೀವ ಸಂಕುಲಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ಮ್ಯೂಸಿಯಮ್ಸ್ ವಿಕ್ಟೋರಿಯಾ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ತಂಡ ಆಸ್ಟ್ರೇಲಿಯಾದ ಕೋಕೋಸ್ (ಕೀಲಿಂಗ್) ಐಲ್ಯಾಂಡ್ಸ್ ಮೆರೈನ್ ಪಾರ್ಕ್ ಪ್ರದೇಶದ ಸಮುದ್ರದ ಆಳದಲ್ಲಿ ಮೊದಲ ಬಾರಿಗೆ ಅಧ್ಯಯನ ನಡೆಸಿ ಈ ವಿಚಿತ್ರ ಮತ್ತು ಅದ್ಭುತ ಜಲಜೀವಿಗಳನ್ನು ಗುರುತಿಸಿದೆ.
ಆಸ್ಟ್ರೇಲಿಯಾದ ವಿಜ್ಞಾನ ಏಜೆನ್ಸಿಯಾದ ಸಿಎಸ್ಐಆರ್ಒ ಇದೇ ಮೊದಲ ಬಾರಿಗೆ ನಿಗೂಢ ಸ್ಥಳವಾದ ಐಲ್ಯಾಂಡ್ಸ್ ಮೆರೈನ್ ಪಾರ್ಕ್ ಸಮುದ್ರದಾಳದಲ್ಲಿ ಸಂಶೋಧನಾ ನೌಕೆಯನ್ನು ಕಳುಹಿಸಿ, ಇಲ್ಲಿನ ಜೀವರಾಶಿಗಳ ಸಮೀಕ್ಷೆ ನಡೆಸಿದೆ. ಸಂಶೋಧನೆಯ ವೇಳೆ ಸಮುದ್ರದ ಆಳದಲ್ಲಿ ಪರ್ವತದ ಮಾದರಿಯಲ್ಲಿ ರೂಪಿತವಾದ ಜಲವಿಸ್ಮಯದ ಮೇಲೆ ಈ ಅದ್ಭುತ ಜೀವರಾಶಿಗಳು ಕಂಡುಬಂದಿವೆ. ಇವುಗಳನ್ನು 5 ಕಿಲೋಮೀಟರ್ ಆಳದಲ್ಲಿ ಪತ್ತೆ ಮಾಡಿ, ಸೆರೆಹಿಡಿಯಲಾಗಿದೆ.
ಕುರುಡು ಈಲ್ಸ್ಗಳು: ಅತ್ಯಂತ ಆಕರ್ಷಕವಾಗಿ ಕಂಡುಬರುವ ಈಲ್ಸ್ಗಳು ಕಣ್ಣು ಹೊಂದಿದ್ದರೂ ಕಾಣಿಸುವುದಿಲ್ಲ. ಸಡಿಲವಾದ ಪಾರದರ್ಶಕ ಚರ್ಮವನ್ನು ಇವುಗಳು ಹೊಂದಿದ್ದು, ಹೆಣ್ಣು ಮೀನುಗಳ ಸಂತಾನೋತ್ಪತ್ತಿಯವರೆಗೂ ಇವುಗಳು ಜೀವಿಸುತ್ತವೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಬ್ಯಾಟ್‌ಫಿಶ್, ಸ್ಪೈಡರ್‌ಫಿಶ್: ಸಮುದ್ರದಾಳದಲ್ಲಿ ಕಂಡುಬಂದ ಮತ್ತೊಂದು ಕುತೂಹಲಕಾರಿ ಜೀವಿಯೆಂದರೆ ಅದು, ಆಳ ಸಮುದ್ರದಲ್ಲಿ ವಾಸವಿರುವ ಬ್ಯಾಟ್‌ಫಿಶ್. ಇದು ಸಮುದ್ರದ ತಳದಲ್ಲಿ ತನ್ನ ತೋಳಿನಂತಿರುವ ರೆಕ್ಕೆಗಳ ಸಹಾಯದಿಂದ ಚಲಿಸುತ್ತದೆ. ಬೇಟೆಯನ್ನು ಆಕರ್ಷಿಸಲು ಮುಖದ ಮೇಲೆ ಸಣ್ಣದಾದ ಟೊಳ್ಳು ಭಾಗವನ್ನು ಹೊಂದಿದೆ.
ಇದಲ್ಲದೇ, ಟ್ರಿಬ್ಯೂಟ್ ಸ್ಪೈಡರ್‌ಫಿಶ್ ಕೂಡ ಇಲ್ಲಿ ಕಂಡುಬಂದಿವೆ. ಉದ್ದವಾದ ರೆಕ್ಕೆಗಳನ್ನು ಇದು ಹೊಂದಿದ್ದು, ದಪ್ಪವಾದ ದೇಹಾಕೃತಿಯನ್ನು ಪಡೆದಿವೆ. ಪ್ರವಾಹದ ವೇಳೆಯೂ ಬೇಟೆಯಾಡಲು ಉದ್ದವಾದ ರೆಕ್ಕೆಗಳು ಸಹಾಯ ಮಾಡುತ್ತವೆ. ಇಷ್ಟಲ್ಲದೇ, ಈ ಪ್ರದೇಶದಲ್ಲಿ ವಿಚಿತ್ರವಾದ ಜೀವಿಗಳಾದ ಪೆಲಿಕನ್ ಈಲ್, ಹೈಫಿನ್ ಮೀನು, ಸ್ಲೋನ್ಸ್ ವೈಪರ್ ಫಿಶ್, ಸ್ಲೆಂಡರ್ ಸ್ನೈಪ್ ಈಲ್, ಸೀ ಅರ್ಚಿನ್‌ಗಳು ಮತ್ತು ಪ್ಯೂಮಿಸ್ ಸ್ಟೋನ್‌ಗಳು ಇಲ್ಲಿವೆ.
ನಿಗೂಢವಾದ ಮೆರೈನ್ ಪಾರ್ಕ್ ಪ್ರದೇಶದ ಸಮುದ್ರದಾಳದಲ್ಲಿ ಹೊಸ ಪ್ರಭೇದಗಳನ್ನು ಕಂಡುಹಿಡಿಯಲಾಗಿದೆ ಎಂದು ಮ್ಯೂಸಿಯಮ್ಸ್ ವಿಕ್ಟೋರಿಯಾ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಮುಖ್ಯ ವಿಜ್ಞಾನಿ ಟಿಮ್ ಒಹಾರಾ ಹೇಳಿದರು.
ಓದಿ: ಕೊಲೆಸ್ಟ್ರಾಲ್ ನಿಯಂತ್ರಿಸಲು ಹೊಸ ಔಷಧ.. ಏನ್ ಹೇಳುತ್ತೆ ಅಧ್ಯಯನ ವರದಿ?