ಹೈದರಾಬಾದ್: ಕಳೆದ ವರ್ಷ ಐಟಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಹೈದರಾಬಾದ್ ಬೆಂಗಳೂರನ್ನು ಹಿಂದಿಕ್ಕಿತ್ತು ಎಂದು ತೆಲಂಗಾಣದ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್ ಸೋಮವಾರ ಹೇಳಿದ್ದಾರೆ. ಹೈದರಾಬಾದ್ ಸಾಫ್ಟ್‌ವೇರ್ ಎಂಟರ್‌ಪ್ರೈಸಸ್ ಅಸೋಸಿಯೇಷನ್ (ಹೈಎಸ್‌ಇಎ) ಆಯೋಜಿಸಿದ್ದ ಐಟಿ ಉದ್ಯಮದ ಪ್ರಮುಖರೊಂದಿಗಿನ ಸಂವಾದದಲ್ಲಿ, ಹೈದರಾಬಾದ್ ನಗರವು 1,50,000 ಉದ್ಯೋಗಗಳನ್ನು ಸೃಷ್ಟಿಸಿದ್ದು ಬೆಂಗಳೂರನ್ನು ಮೀರಿಸಿದೆ ಎಂದು ಸಚಿವರು ಹೇಳಿದರು. ಕಳೆದ ವರ್ಷ ಐಟಿ ಕ್ಷೇತ್ರದಲ್ಲಿ ಭಾರತದಲ್ಲಿ ಸೃಷ್ಟಿಯಾದ 4.50 ಲಕ್ಷ ಉದ್ಯೋಗಗಳ ಪೈಕಿ ಬೆಂಗಳೂರಿನಲ್ಲಿ 1.46 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಎಂಟು ತ್ರೈಮಾಸಿಕಗಳಿಂದ ಬೆಂಗಳೂರು ಹಿಂದಿಕ್ಕಿದ್ದೇವೆ- ಕೆಟಿಆರ್: ಸತತ ಎಂಟು ತ್ರೈಮಾಸಿಕಗಳಲ್ಲಿ ಕಚೇರಿ ಜಾಗಗಳ ಸ್ವಾಧೀನಪಡಿಸಿಕೊಳ್ಳುವಲ್ಲಿ ಹೈದರಾಬಾದ್ ಬೆಂಗಳೂರನ್ನು ಹಿಂದಿಕ್ಕಿದೆ ಎಂದು ಸಚಿವ ಕೆಟಿಆರ್ ಗಮನ ಸೆಳೆದರು. ಐಟಿ ವಲಯದ 5 ಮಿಲಿಯನ್ ಉದ್ಯೋಗಿಗಳಲ್ಲಿ 1 ಮಿಲಿಯನ್ ಹೈದರಾಬಾದ್‌ನವರು ಎಂಬುದು ಹೆಮ್ಮೆಯ ಸಂಗತಿಯಾಗಿದೆ. ತೆಲಂಗಾಣದಲ್ಲಿ ಐಟಿ ಕ್ಷೇತ್ರದಲ್ಲಿ ಉದ್ಯೋಗಿಗಳ ಸಂಖ್ಯೆ 3.23 ಲಕ್ಷದಿಂದ 8.7 ಲಕ್ಷಕ್ಕೆ ಏರಿಕೆಯಾಗಿದೆ ಮತ್ತು ಕಳೆದ ಎಂಟು ವರ್ಷಗಳಲ್ಲಿ ಐಟಿ ರಫ್ತು 57,000 ಕೋಟಿ ರೂ.ಗಳಿಂದ 1.83 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಹೇಳಿದರು.
ಭಾರತದಲ್ಲಿ ಎರಡು ಮಿಲಿಯನ್ ಉದ್ಯೋಗ ಸೃಷ್ಟಿ ನಿರೀಕ್ಷೆ: ಹೈದರಾಬಾದ್‌ನತ್ತ ಬರುತ್ತಿರುವ ಉದ್ಯೋಗಿಗಳು, ಉದ್ಯೋಗದಾತರ ಸಂಖ್ಯೆ ಹೆಚ್ಚುತ್ತಿದೆ. ಇದು ಆರಂಭವಷ್ಟೇ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ ಎಂದು ಕೆಟಿಆರ್ ಹೇಳಿದರು. ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಎರಡು ಮಿಲಿಯನ್ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರವು ಉದ್ಯಮದೊಂದಿಗೆ ನಿಕಟವಾಗಿ ಸಹಯೋಗ ಮುಂದುವರಿಸುತ್ತದೆ ಎಂದು ಹೇಳಿದ ಅವರು, ಹೈದರಾಬಾದ್ ಬಿಟ್ಟು ರಾಜ್ಯದ ಇತರ ನಗರಗಳತ್ತ ಗಮನ ಹರಿಸಿ ಅಲ್ಲಿಯೂ ಉದ್ಯಮವನ್ನು ವಿಸ್ತರಿಸುವಂತೆ ಉದ್ಯಮದ ಮುಖಂಡರಿಗೆ ಮನವಿ ಮಾಡಿದರು.
ಈ ವಿಚಾರದಲ್ಲಿ ಸಾಕಷ್ಟು ಅವಕಾಶಗಳಿರುವುದರಿಂದ ಇನ್ಫೋಸಿಸ್ ಮತ್ತು ಟಿಸಿಎಸ್‌ನಂತಹ ಐಟಿ ದೈತ್ಯರು ಇಂತಹ ಉಪಕ್ರಮಗಳನ್ನು ಮುನ್ನಡೆಸಬೇಕೆಂದು ಅವರು ಆಗ್ರಹಿಸಿದರು. ಸರ್ಕಾರ ಈಗಾಗಲೇ ಖಮ್ಮಂ ಮತ್ತು ಕರೀಂನಗರದಲ್ಲಿ ಐಟಿ ಹಬ್‌ಗಳನ್ನು ಆರಂಭಿಸಿದೆ. ನಿಜಾಮಾಬಾದ್ ಐಟಿ ಹಬ್ ಅನ್ನು ಮುಂದಿನ ತಿಂಗಳು ಪ್ರಾರಂಭಿಸಲಾಗುವುದು ಮತ್ತು ಇದರ ನಂತರ ಮಹಬೂಬ್‌ನಗರ ಮತ್ತು ನಲ್ಗೊಂಡ ಐಟಿ ಹಬ್‌ಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕೆ ಮತ್ತು ಅಕಾಡೆಮಿಗಳ ನಡುವೆ ಪಾಲುದಾರಿಕೆಯನ್ನು ಹೇಗೆ ರೂಪಿಸಬಹುದು ಎಂಬುದರ ಮೇಲೆ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ಆದರೆ ಜೀವ ವಿಜ್ಞಾನ, ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ತೆಲಂಗಾಣ ಅಕಾಡೆಮಿ ಆಫ್ ಸ್ಕಿಲ್ಸ್ ಅಂಡ್ ನಾಲೆಡ್ಜ್ (TASK) ಕಳೆದ ಎಂಟು ವರ್ಷಗಳಲ್ಲಿ 7 ಲಕ್ಷ ಯುವಕರಿಗೆ ತರಬೇತಿ ನೀಡಿದೆ ಎಂದು ಅವರು ಉದ್ಯಮದ ಮುಖಂಡರಿಗೆ ತಮ್ಮ ಸರ್ಕಾರದ ಕ್ರಮಗಳ ಬಗ್ಗೆ ವಿವರಣೆ ನೀಡಿದರು.
ಸೈಬರಾಬಾದ್ ಭದ್ರತಾ ಮಂಡಳಿ ಸ್ಥಾಪನೆ: ರಾಜ್ಯ ಸರ್ಕಾರವು ಈಗಾಗಲೇ ಸೈಬರಾಬಾದ್ ಭದ್ರತಾ ಮಂಡಳಿಯನ್ನು ಸ್ಥಾಪಿಸಿದೆ. ಇದು ಉದ್ಯಮದೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತದೆ. ಕಳೆದ ಎಂಟು ವರ್ಷಗಳಲ್ಲಿ ತೆಲಂಗಾಣವು ಟಿ-ಹಬ್, ಡಬ್ಲ್ಯುಇ ಹಬ್, ತೆಲಂಗಾಣ ರಾಜ್ಯ ಇನ್ನೋವೇಶನ್ ಸೆಲ್ (ಟಿಎಸ್ಐಸಿ), ವಾಶ್ ಹಬ್, ಟಿ-ವರ್ಕ್ಸ್ ಮತ್ತು ಇತರರನ್ನು ಒಳಗೊಂಡಿರುವ ದೃಢವಾದ ಇನೋವೇಶನ್ ಇಕೊಸಿಸ್ಟಮ್ ರಚಿಸಿದೆ. ಬಯೋಟೆಕ್ ಮತ್ತು ಲೈಫ್ ಸೈನ್ಸಸ್ ಇಂಡಸ್ಟ್ರೀಸ್‌ಗಾಗಿ ಬಿ-ಹಬ್ ಮುಂದಿನ ದಿನಗಳಲ್ಲಿ ಆರಂಭವಾಗಲಿದೆ ಮತ್ತು ಟಿ-ವರ್ಕ್ಸ್ ಈ ವರ್ಷ ಉದ್ಘಾಟನೆಯಾಗಲಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಮೈ ನಡುಗುವ ಚಳಿ: ಸಿರ್ಪುರದಲ್ಲಿ 4.7 ಡಿಗ್ರಿ ತಾಪಮಾನ ದಾಖಲು!