ಸ್ಯಾನ್ ಫ್ರಾನ್ಸಿಸ್ಕೋ : ಆ್ಯಪಲ್ ವಾಚ್ ತೀವ್ರ ಮಧುಮೇಹದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರ ಜೀವ ಉಳಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ. ಟೈಪ್ 1 ಮಧುಮೇಹದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ತಾವು ಪ್ರಜ್ಞೆ ತಪ್ಪಿ ಬಿದ್ದಾಗ ತುರ್ತು ಸೇವೆ ಸಂಖ್ಯೆಗೆ ಕರೆ ಮಾಡಿದ ಆ್ಯಪಲ್ ವಾಚ್ ತನ್ನ ಜೀವ ಉಳಿಸಿದೆ ಎಂದು ಅವರು ವಾಚ್ ಅನ್ನು ಶ್ಲಾಘಿಸಿದ್ದಾರೆ.
ತನ್ನ ರಕ್ತದಲ್ಲಿನ ಸಕ್ಕರೆ ಮಟ್ಟ ಕುಸಿದಾಗ ತನ್ನ ಇನ್ಸುಲಿನ್ ಪಂಪ್ ಸಾಮಾನ್ಯವಾಗಿ ಎಚ್ಚರಿಕೆ ನೀಡುತ್ತಿತ್ತು ಎಂದು 40 ವರ್ಷದ ಜೋಶ್ ಫರ್ಮನ್ ಎಂಬ ವ್ಯಕ್ತಿ ಹೇಳಿದ್ದಾರೆ. ಆದಾಗ್ಯೂ, ಈ ವರ್ಷದ ಆರಂಭದಲ್ಲಿ ಅವರ ರಕ್ತದಲ್ಲಿನ ಸಕ್ಕರೆ ಮಟ್ಟ ತುಂಬಾ ಕಡಿಮೆಯಾಗಿ ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದರು. ಆಗ ಅವರ ತಲೆಗೆ ಪೆಟ್ಟಾಗಿತ್ತು.
"ನಾನು ಎಷ್ಟು ಸಮಯದವರೆಗೆ ಪ್ರಜ್ಞಾಹೀನನಾಗಿದ್ದೆ ಎಂಬುದು ನನಗೆ ತಿಳಿದಿಲ್ಲ, ಆದರೆ ನಾನು ಎಚ್ಚರವಾದಾಗ, ಆ್ಯಪಲ್ ವಾಚ್ 911 ತುರ್ತು ಸಂಖ್ಯೆಗೆ ಕರೆ ಮಾಡಿತ್ತು. ಆದರೆ ಆಗ ನನಗೆ ಮಾತನಾಡಲು ಸಾಧ್ಯವಾಗಲಿಲ್ಲ. 911ಗೆ ನನಗೇನಾಗಿದೆ ಎಂಬುದು ಗೊತ್ತಾಗಲಿಲ್ಲ. ಆದರೆ ವಾಚ್ನ ಜಿಪಿಎಸ್ ನಿಂದ ನನ್ನ ಲೊಕೇಶನ್ ಅವರಿಗೆ ತಿಳಿದಿತ್ತು" ಎಂದು ಫರ್ಮನ್ ಹೇಳಿದ್ದಾರೆ.
ಇದಲ್ಲದೆ ವ್ಯಕ್ತಿಯು ತಮ್ಮ ವಾಚ್ ಅನ್ನು ತುರ್ತು ಸಂಪರ್ಕ ಸಂಖ್ಯೆಯೊಂದಿಗೆ ಜೋಡಿಸಿದ್ದರು. ಇದರಿಂದ ಅವರು ತಮ್ಮ ತಾಯಿಯೊಂದಿಗೆ ಕೂಡ ಸಂಪರ್ಕ ಸಾಧಿಸಲು ಸಾಧ್ಯವಾಯಿತು. "ಫಾಲ್ ಡಿಟೆಕ್ಷನ್ ವೈಶಿಷ್ಟ್ಯ ನಿಜವಾಗಿಯೂ ಎಷ್ಟು ಉಪಯುಕ್ತವಾಗಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಅದರಲ್ಲೂ ವಯಸ್ಸಾದ ಜನರಿಗೆ ಬಹುಶಃ ಬೀಳುವಿಕೆ ಪತ್ತೆ ವೈಶಿಷ್ಟ್ಯ ಬಗ್ಗೆ ತಿಳಿದಿಲ್ಲ. ನೀವು ಇದನ್ನು ನಿಮ್ಮ ಐಫೋನ್ನಲ್ಲಿ ಆನ್ ಮಾಡಬೇಕು" ಎಂದು ಫರ್ಮನ್ ತಿಳಿಸಿದರು.
ಆರೋಗ್ಯವಂತ ವ್ಯಕ್ತಿಯೊಬ್ಬನ ಹೃದಯ ಸಮಸ್ಯೆಯನ್ನು ಗುರುತಿಸುವ ಮೂಲಕ ಆ್ಯಪಲ್ ವಾಚ್ ಅವರಿಗೆ ಸಹಾಯ ಮಾಡಿದ ಬಗ್ಗೆ ಆಗಸ್ಟ್ನಲ್ಲಿ ವರದಿಯಾಗಿತ್ತು. ಆಪಲ್ ವಾಚ್ ಸೀರಿಸ್ 6 ಧರಿಸಿದ್ದ 40 ವರ್ಷದ ವ್ಯಕ್ತಿಗೆ ಅನಾರೋಗ್ಯದ ಬಗ್ಗೆ ನೋಟಿಫಿಕೇಶನ್ಗಳು ಬರುತ್ತಿದ್ದವು. ಇಸ್ರೇಲ್ನ ಶಾಕ್ಲರ್ ಸ್ಕೂಲ್ ಆಫ್ ಮೆಡಿಸಿನ್ ಮತ್ತು ಲೆವಿವ್ ಹಾರ್ಟ್ ಸೆಂಟರ್ನ ಸಂಶೋಧಕರು ವ್ಯಕ್ತಿಯ ಮೇಲೆ ಪರೀಕ್ಷೆಗಳನ್ನು ನಡೆಸಿ ಪ್ರಮುಖ ಹೃದಯ ಸಮಸ್ಯೆಯನ್ನು ಪತ್ತೆಹಚ್ಚಿದ್ದರು ಮತ್ತು ಚಿಕಿತ್ಸೆ ನೀಡಿದ್ದರು.
ಇದನ್ನೂ ಓದಿ : ವರ್ಚುವಲ್ ರಿಯಾಲಿಟಿಯಿಂದ ಮಾನವರ ಫೋಬಿಯಾ ನಿವಾರಣೆ ಸಾಧ್ಯ!