ಹಾಂಕಾಂಗ್ : ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಜ್ಞಾನಗಳು ಸುಮಾರು 8 ಲಕ್ಷ ಉದ್ಯೋಗಗಳನ್ನು ಅಥವಾ 2028 ರ ವೇಳೆಗೆ ಹಾಂಕಾಂಗ್‌ನಲ್ಲಿನ ಒಟ್ಟು ಉದ್ಯೋಗಿಗಳ ಶೇಕಡಾ 25 ರಷ್ಟು ಉದ್ಯೋಗಗಳನ್ನು ಕಸಿದುಕೊಳ್ಳಲಿವೆ ಎಂದು ಅಧ್ಯಯನವೊಂದು ಮುನ್ಸೂಚನೆ ನೀಡಿದೆ. ಐಟಿ ನೇಮಕಾತಿ ಸಂಸ್ಥೆ ವೆಂಚುರೆನಿಕ್ಸ್‌ನ ವರದಿಯ ಪ್ರಕಾರ ಡೇಟಾ ಎಂಟ್ರಿ ಕ್ಲರ್ಕ್‌ಗಳು, ಆಡಳಿತ ಸಿಬ್ಬಂದಿ ಮತ್ತು ಗ್ರಾಹಕ ಸೇವಾ ಪ್ರತಿನಿಧಿಗಳು AI ನಿಂದ ಹೆಚ್ಚು ಪ್ರಭಾವಿತರಾಗಲಿದ್ದಾರೆ. ವಕೀಲರು ಮತ್ತು ಭಾಷಾಂತರಕಾರರಂತಹ ವೈವಿಧ್ಯಮಯ ವೃತ್ತಿಗಳ ಮೇಲೆ AI ಬೀರಬಹುದಾದ ಪರಿಣಾಮದ ಬಗ್ಗೆ ವರದಿಯು ಹೈಲೈಟ್ ಮಾಡಿದೆ.
"AI ಅಪ್ಲಿಕೇಶನ್‌ಗಳು ವಿವಿಧ ಉದ್ಯಮಗಳಲ್ಲಿ ಸೇರಿಕೊಳ್ಳುವುದರಿಂದ ವಕೀಲರು ಮತ್ತು ಭಾಷಾಂತರಕಾರರಂತಹ ಸಾಂಪ್ರದಾಯಿಕ ಹೆಚ್ಚು ಪಾವತಿಸುವ ವೃತ್ತಿಗಳ ಮೇಲೆ ಪರಿಣಾಮವಾಗಲಿದೆ" ಎಂದು ಅಧ್ಯಯನವು ಹೇಳಿದೆ. "ಇಲಸ್ಟ್ರೇಟರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು" ಎಂದು ವರದಿ ತಿಳಿಸಿದೆ. ಚಾಟ್ ಜಿಪಿಟಿಯ ಜನಪ್ರಿಯತೆಯ ಕಾರಣದಿಂದ ಬೃಹತ್ ಸಂಖ್ಯೆಯಲ್ಲಿ ಉದ್ಯೋಗ ಕಡಿತವಾಗುವ ಸಾಧ್ಯತೆಗಳು ಎದುರಾಗಿವೆ.
ಈ ಹಿಂದೆ ಯಾವುದೇ ಐಟಿ ಅನುಭವವಿಲ್ಲದೇ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಈಗ ಚಾಟ್ ಜಿಪಿಟಿ ಬಗ್ಗೆ ತರಬೇತಿ ಪಡೆಯಬೇಕೆಂದು ಹಲವಾರು ಹಾಂಕಾಂಗ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸೂಚಿಸಿವೆ. ಜಾಗತಿಕ ಹೂಡಿಕೆ ಬ್ಯಾಂಕ್ ಗೋಲ್ಡ್‌ಮನ್ ಸ್ಯಾಕ್ಸ್ ಪ್ರಕಾರ ಭವಿಷ್ಯದಲ್ಲಿ ಜಾಗತಿಕವಾಗಿ ಸುಮಾರು 300 ಮಿಲಿಯನ್ ಉದ್ಯೋಗಗಳು AI ಗೆ ಬಲಿಯಾಗಬಹುದು.
AI ತಂತ್ರಜ್ಞಾನವು ಸಂಪೂರ್ಣ ಕಾರ್ಮಿಕ ಮಾರುಕಟ್ಟೆಯ 25 ಪ್ರತಿಶತವನ್ನು, ಆಡಳಿತಾತ್ಮಕ ಉದ್ಯೋಗಗಳಲ್ಲಿ 46 ಪ್ರತಿಶತ, 44 ಪ್ರತಿಶತ ಕಾನೂನು ಉದ್ಯೋಗಗಳು ಮತ್ತು 37 ಪ್ರತಿಶತ ಆರ್ಕಿಟೆಕ್ಚರ್ ಮತ್ತು ಎಂಜಿನಿಯರಿಂಗ್ ವೃತ್ತಿಗಳನ್ನು ಸ್ವಯಂಚಾಲಿತಗೊಳಿಸಬಹುದು ಎಂದು ಗೋಲ್ಡ್‌ಮನ್ ಸ್ಯಾಕ್ಸ್‌ನ ಸಂಶೋಧನಾ ವರದಿಯು ಭವಿಷ್ಯ ನುಡಿದಿದೆ.
ಮಾನವ ವಿಶ್ಲೇಷಕರಿಗೆ ನೀಡುವ ಸಂಬಳದ ಕೇವಲ ಶೇಕಡಾ 1 ರಷ್ಟು ಖರ್ಚು ಮಾಡುವ ಮೂಲಕ ಡೇಟಾ ವಿಶ್ಲೇಷಣೆಯಲ್ಲಿ GPT-4 ನಂತಹ ದೊಡ್ಡ ಭಾಷಾ ಮಾದರಿಗಳನ್ನು (LLM) ಆಧರಿಸಿದ ಚಾಟ್‌ಜಿಪಿಟಿಯನ್ನು ನೇಮಿಸಿಕೊಳ್ಳಬಹುದಾಗಿದೆ ಎಂದು ದಾಮೋ ಅಕಾಡೆಮಿಯ ಸಂಶೋಧಕರು ಹೇಳಿದ್ದಾರೆ. ದಾಮೋ ಅಕಾಡೆಮಿ ಚೀನಾದ ಇ-ಕಾಮರ್ಸ್ ದೈತ್ಯ ಅಲಿಬಾಬಾ ಹಾಗೂ ಸಿಂಗಾಪುರದ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗವಾಗಿದೆ.
ಜನರೇಟಿವ್ AI ಯ ಬಳಕೆ ಹೆಚ್ಚಾಗುತ್ತಿರುವಂತೆ ಉದ್ಯೋಗ ಭದ್ರತೆಗೆ ಅಪಾಯ ಎದುರಾಗುತ್ತಿರುವುದನ್ನು ಅಧ್ಯಯನವು ಎತ್ತಿ ತೋರಿಸಿದೆ. ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ GPT-4 ಮನುಷ್ಯರಿಗಿಂತ ಹೆಚ್ಚು ವೇಗವಾಗಿದೆ ಎಂದು ಪ್ರಯೋಗಗಳು ತೋರಿಸಿವೆ. ಕೆಲ ಸಂದರ್ಭಗಳಲ್ಲಿ ಅಂಕಿ- ಅಂಶಗಳ ನಿಖರತೆ ಮತ್ತು ವಿಶ್ಲೇಷಣೆಯ ವಿಷಯದಲ್ಲಿ AI ಮಾದರಿಯು ಮಾನವ ಡೇಟಾ ವಿಶ್ಲೇಷಕರನ್ನು ಮೀರಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ : Truecaller: ಕಾಲ್ ರೆಕಾರ್ಡಿಂಗ್ ಸೌಲಭ್ಯ ಆರಂಭಿಸಿದ ಟ್ರೂಕಾಲರ್; ಇದು ದುಡ್ಡು ಕೊಡುವ ಗ್ರಾಹಕರಿಗೆ ಮಾತ್ರ!