ಬೆಂಗಳೂರು: ಪ್ರತಿ ವರ್ಷ ಜುಲೈ 16 ರಂದು ಕೃತಕ ಬುದ್ಧಿಮತ್ತೆಯ ಮೆಚ್ಚುಗೆಯ ದಿನ (AI Appreciation Day) ಎಂದು ಆಚರಿಸಲಾಗುತ್ತದೆ. ಮಾನವೀಯತೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಕಾರಾತ್ಮಕ ಕೊಡುಗೆಗಳನ್ನು ಗೌರವಿಸುವ ಉದ್ದೇಶದಿಂದ ಇದನ್ನು ಆಚರಿಸಲಾಗುತ್ತದೆ. ಇದು AI ನೈತಿಕತೆಯನ್ನು ಎತ್ತಿ ಹಿಡಿಯುತ್ತದೆ ಮತ್ತು AI ಮತ್ತು ನೈತಿಕತೆಯ ಕುರಿತಾದ ಸಂವಾದವನ್ನು ಉತ್ತೇಜಿಸುತ್ತದೆ.
ಓಪನ್ ಎಐ ಕಂಪನಿ ತಯಾರಿಸಿದ ಚಾಟ್ ಬಾಟ್ ಚಾಟ್ಜಿಪಿಟಿ ಕಳೆದ ವರ್ಷ ಇಂಟರ್ನೆಟ್ನಲ್ಲಿ ಕಾಣಿಸಿಕೊಂಡ ನಂತರ AI ಎಂಬ ಶಬ್ದ ಬಹುತೇಕ ಎಲ್ಲರಿಗೂ ಚಿರಪರಿಚಿತವಾಗಿದೆ. ಓಪನ್ ಎಐ ಕಂಪನಿ ಚಾಟ್ ಜಿಪಿಟಿ ಹೊರತಂದ ನಂತರ ಗೂಗಲ್ ಹಾಗೂ ಮೈಕ್ರೊಸಾಫ್ಟ್ ಸೇರಿದಂತೆ ಜಗತ್ತಿನ ತಂತ್ರಜ್ಞಾನ ದಿಗ್ಗಜ ಕಂಪನಿಗಳು ಈ ಕ್ಷೇತ್ರದಲ್ಲಿ ಇನ್ನಿಲ್ಲದಂತೆ ಪೈಪೋಟಿಗಿಳಿದಿವೆ. ಆದರೆ ಗೂಗಲ್ ಹಾಗೂ ಮೈಕ್ರೊಸಾಫ್ಟ್ನ ಚಾಟ್ ಬಾಟ್ಗಳು ಸೇರಿದಂತೆ ಕಳೆದ ವರ್ಷ ಬಿಡುಗಡೆಯಾದ ಇನ್ನೂ ಕೆಲ ಮಹತ್ವದ ಚಾಟ್ ಬಾಟ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಚಾಟ್ ಜಿಪಿಟಿ (ChatGPT) : OpenAI ಕಂಪನಿಯು ನವೆಂಬರ್ 30, 2022 ರಂದು ChatGPT ಅನ್ನು ಪ್ರಾರಂಭಿಸಿತು. ಚಾಟ್ ಮಾದರಿಯ ಪ್ರಶ್ನೆಗಳಿಗೆ ಸಂಭಾಷಣಾ ಶೈಲಿಯ ಉತ್ತರಗಳಿಂದಾಗಿ ಈ ಭಾಷಾ ಮಾದರಿಯು ಇಂಟರ್ನೆಟ್‌ನ ಅತ್ಯಂತ ಜನಪ್ರಿಯ AI ಸಾಧನವಾಗಿದೆ. ಚಾಟ್ ಜಿಪಿಟಿಯ ಬಳಕೆದಾರರು ಕವಿತೆಗಳನ್ನು ಬರೆಯುವುದು ಮತ್ತು ಮನೆಕೆಲಸವನ್ನು ಮುಗಿಸುವುದು ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಇದನ್ನು ಬಳಸುತ್ತಿದ್ದಾರೆ. ಪ್ರಸ್ತುತ, ಭಾಷಾ ಮಾದರಿಯು ಸುಧಾರಿತ GPT-4 ಮಾದರಿಯಿಂದ ಚಾಲಿತವಾಗಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ಸುಲಭವಾಗಿ ಬಳಸಲು ಚಾಟ್ ಜಿಪಿಟಿಯ iOS ಅಪ್ಲಿಕೇಶನ್ ಕೂಡ ಲಭ್ಯವಿದೆ.
ಡಾಲ್-ಇ 2 (DALL-E 2): ಚಾಟ್ ಜಿಪಿಟಿ ತಯಾರಿಸಿದ ಓಪನ್ ಎಐ ಕಂಪನಿಯೇ ಇದನ್ನೂ ತಯಾರಿಸಿದೆ. 2021 ರಲ್ಲಿ ಡಾಲ್-ಇ ಅನ್ನು ಅನಾವರಣಗೊಳಿಸಲಾಗಿತ್ತು. ಕಳೆದ ವರ್ಷ ಜುಲೈನಲ್ಲಿ ಇದರ ಬೀಟಾ ವರ್ಷನ್ ಬಿಡುಗಡೆಯಾದ ನಂತರ, ಇಮೇಜ್ ಜನರೇಷನ್ ಟೂಲ್ ಬಳಸಲು ಸೆಪ್ಟೆಂಬರ್ 28, 2022 ರಿಂದ ಎಲ್ಲರಿಗೂ ಅವಕಾಶ ನೀಡಲಾಯಿತು. ಇನ್‌ಪುಟ್ ಬಾಕ್ಸ್‌ನಲ್ಲಿ ಪಠ್ಯ ಪ್ರಾಂಪ್ಟ್‌ಗಳ ಮೂಲಕ ಬಳಕೆದಾರರು ಚಿತ್ರಗಳನ್ನು ರಚಿಸಬಹುದು. ಇದು ಇಮೇಜ್ ಎಡಿಟಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ಹೊಸ ಆವೃತ್ತಿಗಳನ್ನು ರೂಪಿಸುತ್ತದೆ. ಈ ಉತ್ಪಾದಕ AI ಇಮೇಜ್ ಕ್ರಿಯೇಟರ್ ಮೈಕ್ರೋಸಾಫ್ಟ್‌ನ ಬಿಂಗ್ ಇಮೇಜ್ ಕ್ರಿಯೇಟರ್ ಹಿಂದಿರುವ ಸಾಧನವಾಗಿದೆ.
ಮಿಡ್ ಜರ್ನಿ (Midjourney): ಈ ಶಕ್ತಿಶಾಲಿ AI ಪರಿಕರವು ನೈಜತೆಗೆ ಅತ್ಯಂತ ಹತ್ತಿರವಾಗಿರುವ ಚಿತ್ರಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ಜುಲೈ 12, 2022 ರಂದು ಇದರ ಓಪನ್ ಬೀಟಾ ವರ್ಷನ್ ಬಂದಿತ್ತು. ಇತ್ತೀಚಿನ ಆವೃತ್ತಿಯು ಮಿಡ್‌ಜರ್ನಿ v5.2 ಆಗಿದೆ, ಇದು ಈ ವರ್ಷದ ಜೂನ್‌ನಲ್ಲಿ ಪ್ರಾರಂಭವಾಯಿತು. ಈ ಇಮೇಜ್ ಜನರೇಷನ್ ಟೂಲ್ ಅತ್ಯಂತ ನೈಜ ರೀತಿಯಲ್ಲಿ ಸುಪ್ರಸಿದ್ಧ ವ್ಯಕ್ತಿಗಳ ನಕಲಿ ಚಿತ್ರಗಳನ್ನು ತಯಾರಿಸಬಹುದು.
ಮೆಟಾ ವಾಯ್ಸ್ ಟ್ರಾನ್ಸಲೇಶನ್ (Meta's Voice Translation) : ಮೌಖಿಕ ಇನ್‌ಪುಟ್‌ನ ಆಡಿಯೊ ಅನುವಾದದ ಮೂಲಕ ಭೌತಿಕ ಮತ್ತು ವರ್ಚುವಲ್ ಜಗತ್ತಿನಲ್ಲಿ (ಮೆಟಾವರ್ಸ್) ಮಾತಿನ ಅಡೆತಡೆಗಳನ್ನು ನಿಗ್ರಹಿಸಬಲ್ಲ ಮೊದಲ AI-ಚಾಲಿತ "ಸ್ಪೀಚ್-ಟು-ಸ್ಪೀಚ್ ಅನುವಾದ" ವ್ಯವಸ್ಥೆಯನ್ನು ಮೆಟಾ ಓಪನ್-ಸೋರ್ಸ್ ಮಾಡಿದೆ. ಇದು ಮುಖ್ಯವಾಗಿ ಚೀನಾ ಮತ್ತು ಮಲೇಷ್ಯಾ, ತೈವಾನ್, ಸಿಂಗಾಪುರ್ ಮತ್ತು ಫಿಲಿಪೈನ್ಸ್‌ನ ಕೆಲವು ಭಾಗಗಳಲ್ಲಿ ಮಾತನಾಡುವ ಹೊಕ್ಕಿನ್ ಭಾಷೆಗೆ ಸೀಮಿತವಾಗಿದೆ.
ಇಥಾಕಾ: AI ಹಿಸ್ಟೋರಿಯನ್ (Ithaca: The AI Historian) : ಡೀಪ್‌ಮೈಂಡ್‌ನಿಂದ ತಯಾರಿಸಲ್ಪಟ್ಟ ಇಥಾಕಾವು ಪಠ್ಯಗಳನ್ನು ಮರುಸ್ಥಾಪಿಸುವ ಮೊದಲ "ಡೀಪ್ ನ್ಯೂರಲ್ ನೆಟ್‌ವರ್ಕ್" ಆಗಿದೆ. ಇದು ಪ್ರಾಚೀನ ಗ್ರೀಕ್ ಶಾಸನಗಳ ಭೌಗೋಳಿಕ ಮತ್ತು ಕಾಲಾನುಕ್ರಮದ ಗುಣಲಕ್ಷಣಗಳನ್ನು ಶೇಕಡಾ 62 ರಷ್ಟು ನಿಖರತೆಯೊಂದಿಗೆ ಪಠ್ಯಗಳನ್ನು ಮರುಸ್ಥಾಪಿಸಬಲ್ಲದು.
ಇದನ್ನೂ ಓದಿ : ಮೆಟಾದ ಚಾಟ್ಬಾಟ್ CM3leon; ಪಠ್ಯ, ಚಿತ್ರ ವಿನ್ಯಾಸಕ್ಕೆ ಬಂದಿದೆ 'ಊಸರವಳ್ಳಿ'