ಚೆನ್ನೈ/ಹೈದರಾಬಾದ್: ಇಸ್ರೋದ ಮಹತ್ವಾಕಾಂಕ್ಷೆಯ ಸೌರ ಬಾಹ್ಯಾಕಾಶ ಮಿಷನ್ ಆದಿತ್ಯ - ಎಲ್1 ಅನ್ನು ಸೆಪ್ಟೆಂಬರ್ 2 ರಂದು ಉಡಾವಣೆ ಮಾಡಲು ಬಾಹ್ಯಾಕಾಶ ಸಂಸ್ಥೆ ಸಜ್ಜಾಗುತ್ತಿದೆ ಮತ್ತು ಅದರ ಉಡಾವಣೆಗೆ ಕ್ಷಣಗಣನೆ ಈಗಾಗಲೇ ಶುರುವಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.
ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಮೊದಲ ಬಾಹ್ಯಾಕಾಶ ಆಧಾರಿತ ವೈಜ್ಞಾನಿಕ ಸೌರ ಮಿಷನ್ ಸೆಪ್ಟೆಂಬರ್ 2 ರಂದು ಬೆಳಗ್ಗೆ 11.50 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆಗೊಳ್ಳಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಬಹುನಿರೀಕ್ಷಿತ ಆದಿತ್ಯ-L1 ಬಾಹ್ಯಾಕಾಶ ನೌಕೆಯು ಸೂರ್ಯನ ಕರೋನಾ ಭಾಗದ ವೀಕ್ಷಣೆ ಮಾಡಲಿದೆ. ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಲಾಂಗ್ರೇಜ್ ಪಾಯಿಂಟ್ನಲ್ಲಿ ನೆಲೆಗೊಂಡು, ಸೌರ ಮಾರುತದ ಬಗ್ಗೆ ಅಧ್ಯಯನ ನಡೆಸಲಿದೆ.
ಬಾಹ್ಯಾಕಾಶ ಸಂಸ್ಥೆಯ ಬೆಂಗಳೂರಿನ ಪ್ರಧಾನ ಕಚೇರಿಯಿಂದ ಇದರ ನಿಯಂತ್ರಣ ಇರಲಿದೆ. ಸೂರ್ಯನ ವೀಕ್ಷಣೆಗಾಗಿ ಇದು ಮೊದಲ ಭಾರತೀಯ ಬಾಹ್ಯಾಕಾಶ ಕಾರ್ಯಾಚರಣೆಯಾಗಿದೆ ಎಂಬುದು ವಿಶೇಷ. ಈ ಬಗ್ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಸೋಮನಾಥ "ನಾವು ಉಡಾವಣೆಗೆ ತಯಾರಾಗುತ್ತಿದ್ದೇವೆ. ರಾಕೆಟ್ ಮತ್ತು ಉಪಗ್ರಹವೂ ಇದಕ್ಕಾಗಿ ಸಿದ್ಧವಾಗಿದೆ. ನಾವು ಉಡಾವಣೆಯ ಪೂರ್ವಾಭ್ಯಾಸವನ್ನು ಪೂರ್ಣಗೊಳಿಸಿದ್ದೇವೆ. ಆದ್ದರಿಂದ ಉಡಾವಣೆಗೆ ಪ್ರಕ್ರಿಯೆಗಳನ್ನು ನಾವು ಪ್ರಾರಂಭಿಸಬೇಕಾಗಿದೆ‘’ ಎಂದರು
ಈ ಉಡಾವಣೆ ಬಳಿಕ ಮತ್ತಷ್ಟು ಯೋಜನೆಗಳನ್ನು ಎದುರು ನೋಡುತ್ತಿದ್ದೇವೆ, ಆದಿತ್ಯ-L1 ಮಿಷನ್ ಸಂಪೂರ್ಣ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಆದಿತ್ಯ L1, ಸೌರ ಮಿಷನ್- ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ಮಿಷನ್ ಆಗಿದೆ. ಬಾಹ್ಯಾಕಾಶ ನೌಕೆಯು ಉಪಗ್ರಹವನ್ನು ಲಾಂಗ್ರೇಜ್ ವಲಯದ ಹಾಲೋ ಕಕ್ಷೆಯಲ್ಲಿ ನೆಲೆಗೊಳಿಸಲಾಗುತ್ತದೆ ಎಂದು ಇಸ್ರೋ ತನ್ನ ಹೇಳಿಕೆ ತಿಳಿಸಿದೆ.
ನೌಕೆಯನ್ನ ಲಾಂಗ್ರೇಜ್ ಬಿಂದುವಿನ ಸುತ್ತ ಹಾಲೋ ಕಕ್ಷೆಯಲ್ಲಿ ಒಮ್ಮೆ ಇರಿಸಿದರೆ, ಉಪಗ್ರಹವು ಯಾವುದೇ ಅಡೆತಡೆ ಇಲ್ಲದೇ ಸೂರ್ಯನನ್ನು ನಿರಂತರವಾಗಿ ವೀಕ್ಷಿಸುವ ಸಾಮರ್ಥ್ಯ ಪಡೆದುಕೊಳ್ಳಲಿದೆ. ಇದು ಸೌರ ಚಟುವಟಿಕೆಗಳನ್ನು ಮತ್ತು ನೈಜ ಸಮಯದಲ್ಲಿ ಬಾಹ್ಯಾಕಾಶ ಹವಾಮಾನದ ಮೇಲೆ ಆಗುವ ಪರಿಣಾಮಗಳನ್ನು ಸೆರೆ ಹಿಡಿದು ವಿಜ್ಞಾನಿಗಳಿಗೆ ರವಾನಿಸಲಿದೆ. ಉಡಾವಣಾ ವಾಹನವು ವಿದ್ಯುತ್ಕಾಂತೀಯ ಮತ್ತು ಕಣ ಮತ್ತು ಕಾಂತೀಯ ಕ್ಷೇತ್ರ ಶೋಧಕಗಳನ್ನು ಬಳಸಿಕೊಂಡ ದ್ಯುತಿಗೋಳ, ವರ್ಣಗೋಳ ಮತ್ತು ಸೂರ್ಯನ ಹೊರಗಿನ ಪದರಗಳನ್ನು ವೀಕ್ಷಿಸಲು ಏಳು ಪೇಲೋಡ್‌ಗಳನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಲಿದೆ.
ನಾಲ್ಕು ಪೇಲೋಡ್‌ಗಳು ಸೂರ್ಯನನ್ನು ನೇರವಾಗಿ ವೀಕ್ಷಿಸುತ್ತವೆ ಮತ್ತು ಅದರ ವೀಕ್ಷಣೆಗಳನ್ನು ದಾಖಲಿಸುತ್ತವೆ. ಹೀಗೆ ಸೆರಿ ಹಿಡಿದ ಮಾಹಿತಿಯನ್ನು ಭೂಮಿಯಲ್ಲಿರುವ ಇಸ್ರೋ ಕೇಂದ್ರಕ್ಕೆ ರವಾನಿಸುತ್ತದೆ. ಇತರ ಮೂರು ಪೇಲೋಡ್‌ಗಳು L1 ನಲ್ಲಿ ಕಣಗಳು ಮತ್ತು ಕ್ಷೇತ್ರಗಳ ಸ್ಥಳದಲ್ಲೇ ಅಧ್ಯಯನಗಳನ್ನು ನಡೆಸುತ್ತವೆ. ಇದು ಅಂತರಗ್ರಹ ಮಾಧ್ಯಮದಲ್ಲಿ ಸೌರ ಡೈನಾಮಿಕ್ಸ್‌ನ ಪ್ರಸರಣ ಪರಿಣಾಮದ ಪ್ರಮುಖ ವೈಜ್ಞಾನಿಕ ಅಧ್ಯಯನಗಳನ್ನು ಮಾಡಲಿದೆ ಎಂದು ಇಸ್ರೋ ಹೇಳಿದೆ.
ಇದನ್ನು ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಪ್ಲಾಸ್ಮಾ ವಿರಳ; ರೇಡಿಯೋ ತರಂಗಗಳ ಸಂಪರ್ಕ ಕಷ್ಟವಿಲ್ಲ: ಇಸ್ರೋ ಹೊಸ ಮಾಹಿತಿ