ನವದೆಹಲಿ: ಸೂರ್ಯನ ಕೌತುಕವನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಾರಿಬಿಟ್ಟಿರುವ ಆದಿತ್ಯ-ಎಲ್ 1 ಮಿಷನ್ ಸೌರ ಸಂಶೋಧನೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ. ಅದು ಗಮ್ಯಸ್ಥಾನವಾದ ಲಗ್ರೇಂಜ್ ಪಾಯಿಂಟ್ 1 ಕಡೆಗೆ ಪ್ರಯಾಣವನ್ನು ಮುಂದುವರೆಸಿದ್ದಲ್ಲದೇ, ಸೂರ್ಯನ ಪ್ರಖರ ಜ್ವಾಲೆಯನ್ನು ಮೊದಲ ಬಾರಿಗೆ ತನ್ನ ಪೆಲೋಡ್ನಲ್ಲಿ ದಾಖಲಿಸಿದೆ.
ಆದಿತ್ಯ-L1 ಬಾಹ್ಯಾಕಾಶ ನೌಕೆಯಲ್ಲಿನ ಏಳು ಪೇಲೋಡ್‌ಗಳಲ್ಲಿ ಒಂದಾದ ಹೈ ಎನರ್ಜಿ L1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (HEL1OS) ಅಕ್ಟೋಬರ್ 29 ರಂದು ಸೌರ ಜ್ವಾಲೆಯನ್ನು ಯಶಸ್ವಿಯಾಗಿ ದಾಖಲಿಸಿದೆ.
ಈ ಸೌರ ಜ್ವಾಲೆಯು ಸೂರ್ಯನ ಮೇಲ್ಮೈ ಮತ್ತು ಬಾಹ್ಯ ವಾತಾವರಣದಿಂದ ಸೂಸುವ ನೇರಳಾತೀತ ಕಿರಣಗಳಾಗಿವೆ. ಇದು ಬೆಳಕಿನ ರೂಪದಲ್ಲಿ ಉಂಟಾಗುವ ಶಕ್ತಿ ಮತ್ತು ವಿಕಿರಣವಾಗಿದೆ. ಸೂರ್ಯನ ವಾತಾವರಣದಲ್ಲಿ ಸಂಗ್ರಹವಾಗಿರುವ ಕಾಂತೀಯ ಶಕ್ತಿಯ ಬಿಡುಗಡೆಯಿಂದ ಈ ಸೌರ ಜ್ವಾಲೆಗಳು ಉಂಟಾಗುತ್ತವೆ.
ಈ ವರ್ಷದ ಸೆಪ್ಟೆಂಬರ್ 2 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ-ಎಲ್ 1 ಮಿಷನ್ ಅನ್ನು ಉಡಾವಣೆ ಮಾಡಲಾಯಿತು. ಇದು ಸೂರ್ಯನ ಡೈನಾಮಿಕ್ಸ್ ಮತ್ತು ಭೂಮಿಯ ಹವಾಮಾನದ ಮೇಲೆ ಅದರ ಪ್ರಭಾವದ ಬಗ್ಗೆ ಸಮಗ್ರ ಅಧ್ಯಯನ ನಡೆಸುವ ಯೋಜನೆಯಾಗಿದೆ.
ಬೆಂಗಳೂರು ಕೇಂದ್ರದ ವಿಜ್ಞಾನಿಗಳ ಕೈಚಳಕ: ಸೂರ್ಯನ ವಿಕಿರಣವನ್ನು ದಾಖಲಿಸಿರುವ HEL1OS ಪೆಲೋಡ್ ಅನ್ನು ಇಸ್ರೋದ ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದ ಬಾಹ್ಯಾಕಾಶ ಖಗೋಳವಿಜ್ಞಾನ ಗುಂಪು ಅಭಿವೃದ್ಧಿಪಡಿಸಿದೆ. HEL1OS ಉಪಕರಣವು ಸೂರ್ಯನಿಂದ ಪ್ರವಹಿಸುವ ನೇರಳಾತೀತ ಎಕ್ಸ್-ರೇ ಕಿರಣಗಳನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾಗಿದೆ.
HEL1OS ಪೆಲೋಡ್ 10 ಗಂಟೆಗಳ ಕಾರ್ಯಾಚರಣೆಯಲ್ಲಿ ನಡೆಸಿದ್ದು, ನ್ಯಾಷನಲ್ ಓಶಿಯನ್ ಅಂಡ್ ಅಟಮೋಸ್ಪೆರಿಕ್ ಅಡ್ಮಿನಿಸ್ಟ್ರೇಷನ್ಸ್ ಜಿಯೋಸ್ಟೇಷನರಿ ಆಪರೇಷನಲ್ ಎನ್ವಿರಾನ್ಮೆಂಟಲ್ ಸೆಟಲೈಲ್ಸ್ ಒದಗಿಸಿದ ಎಕ್ಸ್- ಕಿರಣದ ಬೆಳಕಿನ ವಕ್ರರೇಖೆಗಳೊಂದಿಗೆ HEL1OS ಡೇಟಾವನ್ನು ಸೆರೆಹಿಡಿಯಿತು. ಪೆಲೋಡ್ನ ಈ ಕಾರ್ಯದಿಂದ ಸೌರ ಜ್ವಾಲೆಗಳ ಸ್ಫೋಟದಿಂದ ಉಂಟಾಗುವ ಶಕ್ತಿಯ ಬಿಡುಗಡೆ ಮತ್ತು ಎಲೆಕ್ಟ್ರಾನ್ ವೇಗವರ್ಧನೆಯನ್ನು ಅಧ್ಯಯನ ಮಾಡುವುದಕ್ಕೆ ಮಹತ್ವದ್ದಾಗಿದೆ.
HEL1OS ಪೆಲೋಡ್ ಕಾರ್ಯಾಚರಣೆ ನಿಖರ ಫಲಶ್ರುತಿ ನೀಡಿದ್ದು, ಸೌರ ಜ್ವಾಲೆಗಳ ಹೊರಸೂಸುವಿಕೆಯನ್ನು ಸಂಶೋಧಕರಿಗೆ ಒದಗಿಸುತ್ತದೆ. ಇದರ ಮಾಹಿತಿಯಿಂದ ಸೂರ್ಯನ ಸಂಕೀರ್ಣ ಪ್ರಕ್ರಿಯೆಗಳ ಬಗ್ಗೆ ಹೆಚ್ಚಿನ ಮಾಹಿತಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ.
ಆದಿತ್ಯ-ಎಲ್ 1 ಮಿಷನ್ ಯೋಜನೆಯು ಭಾರತದ ಬಾಹ್ಯಾಕಾಶ ಸಂಶೋಧನೆಗಳ ಶಕ್ತಿಗೆ ಸಾಕ್ಷಿಯಾಗಿದೆ. ಇದು ದೇಶದ ಮೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯ ವರ್ಗದ ಸೌರ ಮಿಷನ್ ಆಗಿದೆ. ಇದರಲ್ಲಿನ ಏಳು ಪೇಲೋಡ್‌ಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ.
ಇದನ್ನೂ ಓದಿ: ಮಂಗಳನ ಅಂಗಳದಲ್ಲಿ 4 ಸಾವಿರ ದಿನ ಪೂರೈಸಿದ ಕ್ಯೂರಿಯಾಸಿಟಿ ರೋವರ್