ನವದೆಹಲಿ: ವಾಟ್ಸ್‌ಆ್ಯಪ್ ಕಂಪನಿಯು ಭಾರತದಲ್ಲಿ ನ್ಯೂ ಪೇಮೆಂಟ್ (ಹೊಸ ಪಾವತಿ) ಫೀಚರ್ಸ್ಗಳ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರಿಂದಾಗಿ ವಾಟ್ಸ್‌ಆ್ಯಪ್ ಮೂಲಕವೇ ಇತರರಿಗೆ ಹಣ ಕಳುಹಿಸಲು, ಪಡೆಯಲು ಸಹಾಯವಾಗುತ್ತದೆ.
ಯೂನಿಫೈಡ್ ಪೇಮೆಂಟ್ ಇಂಟರ್ ಫೇಸ್ (ಯುಪಿಐ) ನಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿಸಿಐ) ಸಹಭಾಗಿತ್ವದಲ್ಲಿ ಈ ಹೊಸ ಪೇಮೆಂಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ರಿಯಲ್ - ಟೈಮ್ ಪೇಮೆಂಟ್ ಸಿಸ್ಟಮ್ ಆಗಿದ್ದು, ಅದು 227 ಕ್ಕೂ ಹೆಚ್ಚು ಬ್ಯಾಂಕ್ ಗಳೊಂದಿಗೆ ವಹಿವಾಟು ನಡೆಸುತ್ತದೆ ಎಂದು ಕಂಪನಿ ತಿಳಿಸಿದೆ.
ವಾಟ್ಸ್‌ಆ್ಯಪ್ ಪಾವತಿಗಳ ನಿರ್ದೇಶಕರಾದ ಮನೇಶ್ ಮಹಾತ್ಮೆ ಈ ಬಗ್ಗೆ ಮಾತನಾಡಿ, ವಾಟ್ಸ್‌ಆ್ಯಪ್ ಒಂದು ಸುರಕ್ಷಿತ ಸ್ಥಳವಾಗಿದ್ದು, ಜನತೆ ತಮ್ಮ ಭಾವನೆ - ಆಲೋಚನೆಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ವಾಟ್ಸ್ಆ್ಯಪ್ನಲ್ಲಿ ಹಣ ಕಳಿಸುವುದು, ಸ್ವೀಕರಿಸುವುದು ಕೇವಲ ವ್ಯವಹಾರವಲ್ಲ. ಅದೊಂದು ಭಾವನಾತ್ಮಕ ಎಂದು ನಾವು ನಂಬುತ್ತೇವೆ ಎಂದು ಹೇಳಿದ್ದಾರೆ.
ವಾಟ್ಸ್ಆ್ಯಪ್ನಲ್ಲಿ ಹಣ ಕಳುಹಿಸುವುದೆಂದರೆ ಕೇವಲ ವಹಿವಾಟಲ್ಲ. ಕೆಲವರ ಹುಟ್ಟುಹಬ್ಬಕ್ಕೆ ಗಿಫ್ಟ್ ಕಳುಹಿಸುವುದು, ಪ್ರಯಾಣಕ್ಕಾಗಿ ಹಣ ಕಳುಹಿಸುವುದು ಹೀಗೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಹಣ ಕಳುಹಿಸುವುದು, ಸ್ವೀಕರಿಸಲು ಈ ಆ್ಯಪ್ ಸಹಾಯಕವಾಗಲಿದೆ.
ಈಗಾಗಲೇ ಪೇಟಿಎಂ, ಗೂಗಲ್ ಪೇ, ಫೋನ್‌ಪೇ, ಅಮೆಜಾನ್ ಪೇ ಸೇರಿದಂತೆ ಪ್ರಬಲ ಆ್ಯಪ್ಗಳು ಭಾರತದಲ್ಲಿವೆ. ಈ ಆನ್‌ಲೈನ್ ಪಾವತಿಗಳ ವಿಭಾಗದಲ್ಲಿ ವಾಟ್ಸ್‌ಆ್ಯಪ್ ತನ್ನ ಛಾಪನ್ನು ಮೂಡಿಸಲು ಶ್ರಮಿಸುತ್ತಿದೆ.