ಕರೈಕುಡಿ (ತಮಿಳು ನಾಡು): ಕೋವಿಡ್-19 ಚಿಕಿತ್ಸೆಗೆ ಅತ್ಯಗತ್ಯವಾದ ಪಿಪಿಇ (Personal Protective Equipment) ಗಳನ್ನು ಉತ್ಪಾದಿಸಲು ಸರಕಾರಿ ಸ್ವಾಮ್ಯದ ಸಿಎಸ್ಐಆರ್ (The Council of Scientific and Industrial Research) (ವೈಜ್ಞಾನಿಕ ಮತ್ತು ಔದ್ಯೋಗಿಕ ಅನುಸಂಧಾನ ಪರಿಷತ್) ಮುಂದಾಗಿದೆ. ತಮಿಳುನಾಡಿನ ಕರೈಕುಡಿಯಲ್ಲಿರುವ ಸಿಎಸ್ಐಆರ್ ನ ಸಿಇಸಿಆರ್ಐ (Central Electrochemical Research Institute) ಪ್ರಯೋಗಾಲಯದಲ್ಲಿ ಕೋವಿಡ್ ಚಿಕಿತ್ಸೆಗೆ ಬೇಕಾದ ಪಿಪಿಇ ಗಳ ಸಂಶೋಧನೆ ಹಾಗೂ ಉತ್ಪಾದನೆಯ ಕೆಲಸ ನಡೆಯುತ್ತಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಯಾನಿಟೈಜರ್, ಆಸ್ಪತ್ರೆ ಸಲಕರಣೆಗಳು ಮತ್ತು ವೈಯಕ್ತಿಕ ಸುರಕ್ಷತಾ ಕವಚ ಅತಿ ತುರ್ತಾಗಿ ಬೇಕಾಗಿವೆ. ಈ ಹಿನ್ನೆಲೆಯಲ್ಲಿ ಸಿಎಸ್ಐಆರ್-ಸಿಇಸಿಆರ್ಐ ಪ್ರಯೋಗಾಲಯದಲ್ಲಿ ಹಲವಾರು ಪಿಪಿಇಗಳನ್ನು ತಯಾರಿಸುತ್ತಿದ್ದು, ಅವುಗಳ ಪಟ್ಟಿ ಇಲ್ಲಿದೆ-
- ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ ಹ್ಯಾಂಡ್ ಸ್ಯಾನಿಟೈಸರ್ ತಯಾರಿಕೆ
- ತೆಂಗಿನ ಎಣ್ಣೆ ಹಾಗೂ ಸೋಡಿಯಂ ಹೈಪೊಕ್ಲೋರೈಟ್ ಆಧರಿತ ಕೈತೊಳೆಯುವ ದ್ರಾವಣ ತಯಾರಿಸಲಾಗುತ್ತಿದೆ. ಇವನ್ನು ಕಂಟೇನರ್ಗಳಲ್ಲಿ ಪ್ಯಾಕ್ ಮಾಡಿ ಅವುಗಳ ಮೇಲೆ ಬಳಕೆಯ ನಿರ್ದೇಶನಗಳ ಲೇಬಲ್ ಅಂಟಿಸಿ ಅಗತ್ಯ ಸಂಸ್ಥೆಗಳಿಗೆ ಉಚಿತವಾಗಿ ಪೂರೈಸಲಾಗುತ್ತಿದೆ.
ಇಲ್ಲಿಯವರೆಗೆ 350 ಲೀಟರ್ ಹ್ಯಾಂಡ್ ಸ್ಯಾನಿಟೈಜರ್, 250 ಲೀಟರ್ ಕೈ ತೊಳೆಯುವ ದ್ರಾವಣಗಳನ್ನು ಕರೈಕುಡಿ ಮಹಾನಗರ ಪಾಲಿಕೆ, ದೇವಕೊಟ್ಟೈ ಪಾಲಿಕೆ, ಸಿವಗಂಗಾ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ, ಕರೈಕುಡಿಯ ಸರ್ಕಾರಿ ಆಸ್ಪತ್ರೆ, ಕರೈಕುಡಿಯ ಎಸ್ಪಿ ಕಚೇರಿ ಹಾಗೂ ಸುತ್ತಮುತ್ತಲಿನ ಪೊಲೀಸ್ ಠಾಣೆಗಳು, ತಾಲೂಕಾಫೀಸು, ಹತ್ತಿರದ ಪಂಚಾಯತ್ ಕಚೇರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕೆಲ ಸರ್ಕಾರಿ ಬ್ಯಾಂಕುಗಳಿಗೆ ಪೂರೈಕೆ ಮಾಡಲಾಗಿದೆ.
ಗ್ರಾಮೀಣ ಮಹಿಳೆಯರಿಗೆ ಮಾಸ್ಕ್ ತಯಾರಿಕೆ ಕುರಿತು ಡಿಜಿಟಲ್ ತರಬೇತಿಯನ್ನು ಸಹ ಸಿಎಸ್ಐಆರ್-ಸಿಇಸಿಆರ್ಐ ನೀಡುತ್ತಿದೆ. ಇದರ ಜೊತೆಗೆ 3ಡಿ ಪ್ರಿಂಟೆಡ್ ಮರುಬಳಕೆ ಮಾಡಬಹುದಾದ ಫೇಸ್ ಶೀಲ್ಡ್ಗಳನ್ನು ತಯಾರಿಸಿ ಸಿಎಸ್ಐಆರ್-ಸಿಇಸಿಆರ್ಐ ಆಸ್ಪತ್ರೆ ಸಿಬ್ಬಂದಿಗೆ ನೀಡಲಾಗಿದೆ.