ಮೆಲ್ಬೋರ್ನ್: ಈ ವರ್ಷ ಜಗತ್ತು ತುಂಬಾ ಬಿಸಿಯಾಗಿದೆ. ಜಗತ್ತಿನಲ್ಲಿ ಹಿಂದೆಂದೂ ಕಾಣದಂಥ ಅತ್ಯಧಿಕ ಉಷ್ಣಾಂಶವನ್ನು ನೋಡುತ್ತಿದ್ದೇವೆ. ಅತ್ಯಧಿಕ ಉಷ್ಣಾಂಶದ ಹಳೆಯ ದಾಖಲೆಗಳು ಅಳಿಸುತ್ತಿದ್ದು, ತಡೆಯಲಾಗದ ಮಟ್ಟದಲ್ಲಿ ಭೂಮಿ ಬಿಸಿಯಾಗುತ್ತಿದೆ. ಉದಾಹರಣೆಗೆ ನೋಡುವುದಾದರೆ- ಕೈಗಾರಿಕಾ ಪೂರ್ವ ಮಟ್ಟಕ್ಕಿಂತ ಪ್ರಾಥಮಿಕ ಸೆಪ್ಟೆಂಬರ್ ಜಾಗತಿಕ ಸರಾಸರಿ ತಾಪಮಾನ ವೈಪರೀತ್ಯವನ್ನು ನೋಡಿದರೆ ಇದು ಹಿಂದಿನ ದಾಖಲೆಗಿಂತ ನಂಬಲಾಗದ 0.5 ಸೆಂಟಿಗ್ರೇಡ್ನಷ್ಟು ಹೆಚ್ಚಾಗಿದೆ. ಹಾಗಾದರೆ ಜಗತ್ತು ಈಗ ಇಷ್ಟೊಂದು ಬಿಸಿಯಾಗುತ್ತಿರುವುದೇಕೆ? ನಮ್ಮ ಪ್ಯಾರಿಸ್ ಒಪ್ಪಂದದ ಗುರಿಗಳ ಅರ್ಥವಾದರೂ ಏನು?
ಜಗತ್ತು ಈಗ ಇಷ್ಟೊಂದು ಬಿಸಿಯಾಗಲು ಪ್ರಮುಖ 6 ಕಾರಣಗಳು ಇಲ್ಲಿವೆ:
1. ಎಲ್ ನಿನೋ
ಜಗತ್ತು ಈಗ ಪ್ರಬಲವಾದ ಎಲ್ ನಿನೊ ಅಲೆಯಲ್ಲಿರುವುದರಿಂದ ಶಾಖದ ಪ್ರಮಾಣ ವಿಪರೀತವಾಗಲು ಒಂದು ಕಾರಣವಾಗಿದೆ. ಎಲ್ ನಿನೊ ಮತ್ತಷ್ಟು ಬಲಗೊಳ್ಳುತ್ತಿದೆ. ಎಲ್ ನಿನೋ ಸಮಯದಲ್ಲಿ ಉಷ್ಣವಲಯದ ಪೆಸಿಫಿಕ್ ನ ಹೆಚ್ಚಿನ ಭಾಗಗಳಲ್ಲಿ ಮೇಲ್ಮೈ ಸಾಗರದ ತಾಪಮಾನ ಏರಿಕೆಯಾಗುತ್ತದೆ. ಈ ತಾಪಮಾನ ಏರಿಕೆ ಮತ್ತು ವಿಶ್ವದ ಇತರ ಭಾಗಗಳಲ್ಲಿ ಎಲ್ ನಿನೊ ಪರಿಣಾಮಗಳು ಜಾಗತಿಕ ಸರಾಸರಿ ತಾಪಮಾನವನ್ನು ಸುಮಾರು 0.1 ರಿಂದ 0.2 ಡಿಗ್ರಿ ಸೆಲ್ಸಿಯಸ್ ಹೆಚ್ಚಿಸುತ್ತವೆ.
ಕಳೆದ ಮೂರು ವರ್ಷಗಳಿಂದ ಲಾ ನಿನಾ ಅಲೆ ಜಗತ್ತಿನಲ್ಲಿ ಇತ್ತು. ಲಾ ನಿನಾ ಇದು ಜಗತ್ತನ್ನು ತಂಪಾಗಿಸುವ ಅಲೆಯಾಗಿದೆ. ಆದರೆ ಈಗ ನಾವು ಲಾ ನಿನಾ ದಿಂದ ಹೊರಬಂದಿದ್ದು, ಕಳೆದ ಎಂಟು ವರ್ಷಗಳಲ್ಲಿ ಜಗತ್ತು ಕಾಣುತ್ತಿರುವ ಅತಿ ಪ್ರಬಲ ಎಲ್ ನಿನೋ ಈ ವರ್ಷ ಇದೆ. ಹೀಗಾಗಿ ಭೂಮಿಯ ತಾಪಮಾನ ಹೆಚ್ಚಾಗುತ್ತಿರುವುದು ಆಶ್ಚರ್ಯಕರವೇನಲ್ಲ.
2. ಕಡಿಮೆಯಾಗುತ್ತಿರುವ ಮಾಲಿನ್ಯ
ಮಾನವರ ಚಟುವಟಿಕೆಗಳಿಂದ ಉಂಟಾಗುವ ವಾಯುಮಾಲಿನ್ಯವು ಭೂಮಿಯನ್ನು ತಂಪಾಗಿಸುತ್ತದೆ ಮತ್ತು ಇದು ಹಸಿರುಮನೆ ಅನಿಲ ಹೊರಸೂಸುವಿಕೆಯಿಂದ ಉಂಟಾಗುವ ತಾಪಮಾನದ ಏರಿಳಿತವನ್ನು ಸರಿದೂಗಿಸಿದೆ. 2020 ರಿಂದ ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಪ್ರಯತ್ನಗಳು ನಡೆದಿವೆ. ಹೀಗಾಗಿ ಸದ್ಯ ಮಾಲಿನ್ಯ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಇದರಿಂದ ಹೆಚ್ಚಾದ ಶುದ್ಧ ಗಾಳಿಯು ಇತ್ತೀಚಿನ ಅತ್ಯಧಿಕ ಶಾಖಕ್ಕೆ ಕಾರಣವಾಗಿದೆ ಎಂದು ಊಹಿಸಲಾಗಿದೆ.
3. ಸೌರ ಚಟುವಟಿಕೆಯ ಹೆಚ್ಚಳ
ಮಾಲಿನ್ಯದ ಮಟ್ಟವು ಕುಸಿದರೆ ಹೆಚ್ಚಿನ ಪ್ರಮಾಣದ ಬಿಸಿಲು ಭೂಮಿಯನ್ನು ತಲುಪುತ್ತದೆ ಎಂದರ್ಥ. ಆದರೆ ಭೂಮಿಯನ್ನು ತಲುಪುವ ಬಿಸಿಲಿನ ಪ್ರಮಾಣವು ಬದಲಾಗುತ್ತಲೇ ಇರುತ್ತದೆ. ಭೂಮಿಯ ವಾತಾವರಣದಲ್ಲಿ ಹಲವಾರು ಸೌರ ಚಕ್ರಗಳಿವೆ. ಆದರೆ 11 ವರ್ಷಗಳ ಚಕ್ರವು ಇಂದಿನ ಹವಾಮಾನಕ್ಕೆ ಹೆಚ್ಚು ಪ್ರಸ್ತುತವಾಗಿದೆ. 2019 ರ ಕೊನೆಯಿಂದ ಸೂರ್ಯ ಹೆಚ್ಚು ಪ್ರಖರವಾಗುತ್ತಿದ್ದಾನೆ. ಇದು ಜಾಗತಿಕ ತಾಪಮಾನದ ಏರಿಕೆಗೆ ಸಣ್ಣ ಪ್ರಮಾಣದ ಕೊಡುಗೆ ನೀಡುತ್ತಿದೆ. ಒಟ್ಟಾರೆಯಾಗಿ, ಹೆಚ್ಚುತ್ತಿರುವ ಸೌರ ಚಟುವಟಿಕೆಯು ಇತ್ತೀಚಿನ ಜಾಗತಿಕ ಶಾಖಕ್ಕೆ ಗರಿಷ್ಠ ನೂರನೇ ಒಂದು ಡಿಗ್ರಿಯ ಕೊಡುಗೆ ನೀಡುತ್ತಿದೆ.
4. ಹಂಗಾ ಟೋಂಗಾ ಜ್ವಾಲಾಮುಖಿ ಸ್ಫೋಟ
ಜನವರಿ 15, 2022 ರಂದು, ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ನೀರಿನೊಳಗಿನ ಹಂಗಾ ಟೊಂಗಾ ಹಪೈ ಜ್ವಾಲಾಮುಖಿ ಸ್ಫೋಟಗೊಂಡಿತು. ಇದು ಹೆಚ್ಚಿನ ಪ್ರಮಾಣದ ನೀರಿನ ಆವಿಯನ್ನು ಮೇಲ್ಭಾಗದ ವಾತಾವರಣಕ್ಕೆ ಬಿಡುಗಡೆ ಮಾಡಿತು. ನೀರಿನ ಆವಿಯು ಹಸಿರುಮನೆ ಪರಿಣಾಮ ಬೀರುವ ಅನಿಲವಾಗಿದೆ. ಜ್ವಾಲಾಮುಖಿ ಸ್ಫೋಟ ಸುಮಾರು ಎರಡು ವರ್ಷಗಳ ಹಿಂದೆ ಸಂಭವಿಸಿದ್ದರೂ, ಇದು ಭೂಮಿಯ ತಾಪಮಾನದ ಮೇಲೆ ಸಣ್ಣ ಪ್ರಮಾಣದ ಪರಿಣಾಮವನ್ನು ಬೀರುತ್ತಿದೆ. ಆದರೆ ಇದರ ಪರಿಣಾಮ ಕೂಡ ಒಂದು ಡಿಗ್ರಿ ಸೆಲ್ಸಿಯಸ್ನ ನೂರನೇ ಒಂದು ಭಾಗ ಮಾತ್ರವಾಗಿರುತ್ತದೆ.
5. ದುರಾದೃಷ್ಟ
ಎಲ್ ನಿನೊ ಅಥವಾ ಮಾಲಿನ್ಯದಲ್ಲಿ ಯಾವುದೇ ಬದಲಾವಣೆಗಳಾಗದಿದ್ದರೂ ಜಾಗತಿಕ ತಾಪಮಾನ ವರ್ಷದಿಂದ ವರ್ಷಕ್ಕೆ ಬದಲಾಗುವುದು ಸಹಜ. ಆದರೆ ಭೂಮಿಯನ್ನು ಬಿಸಿಯಾಗಿಸುವ ಹವಾಮಾನ ವ್ಯವಸ್ಥೆಗಳು ಈ ಬಾರಿ ಸೂಕ್ತ ಸ್ಥಳದಲ್ಲಿರುವುದರಿಂದ ಈ ಸೆಪ್ಟೆಂಬರ್ ಇಷ್ಟೊಂದು ಬಿಸಿಯಾಗಿರಬಹುದು.
6. ಹವಾಮಾನ ಬದಲಾವಣೆ
ಒಟ್ಟಾರೆ +1.7 ಡಿಗ್ರಿ ಸೆಲ್ಸಿಯಸ್ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಮಾನವನ ಕೊಡುಗೆ ದೊಡ್ಡದಾಗಿದೆ. ಒಟ್ಟಾರೆಯಾಗಿ, ಮಾನವರ ಕಾರಣದಿಂದ ಹವಾಮಾನದ ಮೇಲೆ ಸುಮಾರು 1.2 ಡಿಗ್ರಿ ಸೆಲ್ಸಿಯಸ್ ನಷ್ಟು ಪರಿಣಾಮ ಉಂಟಾಗಿದೆ. ಹಸಿರುಮನೆ ಅನಿಲಗಳ ಹೊರಸೂಸುವಿಕೆ ಹೆಚ್ಚಾದಂತೆ ಜಾಗತಿಕ ತಾಪಮಾನ ಏರಿಕೆಯೂ ವೇಗಗೊಳ್ಳುವುದು ಸಹಜ ಎಂಬುದನ್ನು ಆರ್ಥ ಮಾಡಿಕೊಳ್ಳಬೇಕಿದೆ.
ಇದನ್ನೂ ಓದಿ: ಇರಾನ್ನಿಂದ ವಶಪಡಿಸಿಕೊಂಡ ಮದ್ದುಗುಂಡು ಉಕ್ರೇನ್ಗೆ ನೀಡಿದ ಅಮೆರಿಕ