ನವದೆಹಲಿ : 2022 ರ ಅಂತ್ಯದ ವೇಳೆಗೆ ಭಾರತದಲ್ಲಿನ 5ಜಿ ಮೊಬೈಲ್ ಸಂಪರ್ಕಗಳ ಸಂಖ್ಯೆ 1 ಕೋಟಿಗೆ ತಲುಪಿದೆ ಮತ್ತು 2028 ರ ಅಂತ್ಯದ ವೇಳೆಗೆ ಈ ಪ್ರಮಾಣ ಸುಮಾರು ಶೇಕಡಾ 57 ರಷ್ಟು ಅಂದರೆ 70 ಕೋಟಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಎರಿಕ್ಸನ್ ಮೊಬಿಲಿಟಿ ವರದಿಯ ಪ್ರಕಾರ ಪ್ರತಿ ಸ್ಮಾರ್ಟ್‌ಫೋನ್‌ಗೆ ಸರಾಸರಿ ಡೇಟಾ ಬಳಕೆಯು 2022 ರಲ್ಲಿ ತಿಂಗಳಿಗೆ 26 ಜಿಬಿಯಿಂದ 2028 ರಲ್ಲಿ ತಿಂಗಳಿಗೆ 62 ಜಿಬಿವರೆಗೆ ಬೆಳೆಯುವ ನಿರೀಕ್ಷೆ ಇದೆ.
ಭಾರತದಲ್ಲಿನ ಒಟ್ಟಾರೆ ಮೊಬೈಲ್ ಬಳಕೆದಾರರ ಪೈಕಿ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಕಳೆದ ವರ್ಷ ಶೇ 76 ರಷ್ಟಿದ್ದು, 2028ರ ವೇಳೆಗೆ ಇದು ಶೇ 93ಕ್ಕೆ ತಲುಪುವ ನಿರೀಕ್ಷೆಯಿದೆ. ಜೊತೆಗೆ 4ಜಿ ಸಂಪರ್ಕಗಳು 2022 ರಲ್ಲಿ ಇದ್ದ 82 ಕೋಟಿಯಿಂದ 2028 ರ ವೇಳೆಗೆ 50 ಕೋಟಿಗೆ ಇಳಿಯುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.
"ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸೇರ್ಪಡೆಗೆ ಚಾಲನೆ ನೀಡುವಲ್ಲಿ ಮೊಬೈಲ್ ನೆಟ್‌ವರ್ಕ್‌ಗಳು ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಭಾರತದಲ್ಲಿ ಸ್ಥಾಪಿಸಲಾಗುತ್ತಿರುವ ಪ್ರಬಲ ಡಿಜಿಟಲ್ ಮೂಲಸೌಕರ್ಯಗಳು ದೇಶದಲ್ಲಿನ ಡಿಜಿಟಲ್ ಡಿವೈಡ್ ಅನ್ನು ಕಡಿಮೆ ಮಾಡಲು, ಉದ್ಯೋಗಗಳನ್ನು ಸೃಷ್ಟಿಸಲು, ಉದ್ಯಮಶೀಲತೆಯನ್ನು ಹೆಚ್ಚಿಸಲು ಮತ್ತು ಆರ್ಥಿಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ" ಎರಿಕ್ಸನ್ ಇಂಡಿಯಾದ ಮುಖ್ಯಸ್ಥ ಮತ್ತು ಆಗ್ನೇಯ ಏಷ್ಯಾ, ಓಷಿಯಾನಿಯಾ ಮತ್ತು ಭಾರತ, ಎರಿಕ್ಸನ್ ನೆಟ್‌ವರ್ಕ್ ಪರಿಹಾರಗಳ ಮುಖ್ಯಸ್ಥ ಎಂದು ನಿತಿನ್ ಬನ್ಸಲ್ ಹೇಳಿದರು.
ಸ್ಮಾರ್ಟ್‌ಫೋನ್ ಬಳಕೆಯ ಸಂಖ್ಯೆಯು ದೇಶದಲ್ಲಿ ಶೇಕಡಾ 5 ರಷ್ಟು CAGR ನಲ್ಲಿ ಬೆಳೆಯುವ ನಿರೀಕ್ಷೆಯಿದೆ. ಇದು ಕಳೆದ ವರ್ಷಾಂತ್ಯಕ್ಕೆ ಇದ್ದ 84 ಕೋಟಿಯಿಂದ 2028ರ ಅಂತ್ಯದ ವೇಳೆಗೆ 114 ಕೋಟಿಗೆ ಏರಿಕೆಯಾಗುವುದೆಂದು ಅಂದಾಜಿಸಲಾಗಿದೆ. ಒಟ್ಟು ಮೊಬೈಲ್ ಸಂಪರ್ಕಗಳ ಶೇಕಡಾವಾರು ಪ್ರಮಾಣದಲ್ಲಿ ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆಗಳು 2022 ರಲ್ಲಿ ಇದ್ದ ಶೇಕಡಾ 76 ರಿಂದ 2028 ರಲ್ಲಿ ಶೇಕಡಾ 93 ಕ್ಕೆ ಬೆಳೆಯುವ ನಿರೀಕ್ಷೆಯಿದೆ ಎಂದು ವರದಿ ಉಲ್ಲೇಖಿಸಿದೆ.
ಭಾರತದಲ್ಲಿ, ಒಟ್ಟು ಮೊಬೈಲ್ ಡೇಟಾ ಬಳಕೆಯು 2022 ರಲ್ಲಿ ತಿಂಗಳಿಗೆ 18 ಎಕ್ಸಾಬೈಟ್ (EB) ಇದ್ದದ್ದು, 2028 ರಲ್ಲಿ ತಿಂಗಳಿಗೆ 58 EB ಗೆ ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ. ಇದು 22 ಶೇಕಡಾ CAGR ನಲ್ಲಿ ಬೆಳೆಯುತ್ತದೆ. ಭಾರತದಲ್ಲಿನ ಒಟ್ಟು ಮೊಬೈಲ್ ಸಂಪರ್ಕಗಳು 2028 ರಲ್ಲಿ 120 ಕೋಟಿಗೆ ಏರಿಕೆಯಾಗಲಿವೆ ಎಂದು ಅಂದಾಜಿಸಲಾಗಿದೆ.
ಜಾಗತಿಕವಾಗಿ ನೋಡಿದರೆ ಪ್ರತಿಯೊಂದು ರಾಷ್ಟ್ರದಲ್ಲಿಯೂ 5ಜಿ ಸಂಪರ್ಕಗಳು ದಿನೇ ದಿನೆ ಏರಿಕೆಯಾಗುತ್ತಿವೆ. 2023 ರ ಅಂತ್ಯದ ವೇಳೆಗೆ ವಿಶ್ವದಲ್ಲಿನ 5ಜಿ ಸಂಪರ್ಕಗಳು 150 ಕೋಟಿಗೆ ತಲುಪುವ ಮುನ್ಸೂಚನೆ ಇದೆ. ವಿಶ್ವಾದ್ಯಂತ ಸುಮಾರು 240 ಮೊಬೈಲ್ ಸೇವಾ ಪೂರೈಕೆದಾರರು (CSP ಗಳು) ವಾಣಿಜ್ಯ 5ಜಿ ಸೇವೆಗಳನ್ನು ಪ್ರಾರಂಭಿಸಿದ್ದಾರೆ ಮತ್ತು ಸುಮಾರು 35 5ಜಿ ಸ್ಟ್ಯಾಂಡ್ ಅಲೋನ್ (SA) ವ್ಯವಸ್ಥೆಗಳನ್ನು ನಿಯೋಜಿಸಿದ್ದಾರೆ ಅಥವಾ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ : ಭಾರತದಿಂದ ₹1 ಲಕ್ಷ 20 ಸಾವಿರ ಕೋಟಿ ಮೌಲ್ಯದ ಮೊಬೈಲ್ ರಫ್ತು: ಅರ್ಧಪಾಲು ಆ್ಯಪಲ್ನದ್ದು