ನವದೆಹಲಿ : ಪ್ರಸಕ್ತ ಹಣಕಾಸು ವರ್ಷ 2024ರಲ್ಲಿ ಭಾರತದ ಮೊಬೈಲ್ ರಫ್ತು ಉದ್ಯಮದ ವಹಿವಾಟು 1,20,000 ಕೋಟಿ ರೂಪಾಯಿ ದಾಟಲಿದೆ ಎಂದು ಎಲೆಕ್ಟ್ರಾನಿಕ್ಸ್ ಉದ್ಯಮದ ಉನ್ನತ ಸಂಘಟನೆ ತಿಳಿಸಿದೆ. ಸರ್ಕಾರದ ಉದ್ಯಮ ಪರ ನೀತಿಗಳು ಮತ್ತು ಉತ್ಪಾದನಾ ಸಂಬಂಧಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆಯ ಉತ್ತೇಜನೆಯಿಂದ ಈ ಸಾಧನೆ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಭಾರತದ ಮೊಬೈಲ್ ರಫ್ತು ವಹಿವಾಟಿನಲ್ಲಿ ಆ್ಯಪಲ್ನ ಪಾಲು ಬಹಳ ದೊಡ್ಡದಾಗಿರುವುದು ಗಮನಾರ್ಹ ಸಂಗತಿಯಾಗಿದೆ.
2022-2023ರ ಆರ್ಥಿಕ ವರ್ಷದಲ್ಲಿ ದೇಶವು 90,000 ಕೋಟಿ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದೆ. ಇಂಡಿಯಾ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ICEA) ಪ್ರಕಾರ, ಮೊಬೈಲ್ ಫೋನ್ ರಫ್ತುಗಳು ಈ ವರ್ಷದ ಏಪ್ರಿಲ್- ಮೇ ತಿಂಗಳುಗಳಲ್ಲಿ ಈಗಾಗಲೇ 128 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿವೆ.
"2023-24ರಲ್ಲಿ ಮೊಬೈಲ್ ಫೋನ್ ರಫ್ತು ಬೆಳವಣಿಗೆಯು 2023-24ರ ಮೊದಲ ಎರಡು ತಿಂಗಳಲ್ಲಿ ಶೇಕಡಾ 128 ರ ಬೆಳವಣಿಗೆಯೊಂದಿಗೆ ರಫ್ತು ಕುಸಿತದ ಪ್ರವೃತ್ತಿಯನ್ನು ತೊಡೆದುಹಾಕಿದೆ" ಎಂದು ಐಸಿಇಎ ಅಧ್ಯಕ್ಷ ಪಂಕಜ್ ಮೊಹಿಂದ್ರೂ ತಿಳಿಸಿದರು. "ಕಳೆದ ಹಣಕಾಸು ವರ್ಷದ 90,000 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿ ರಫ್ತುಗಳು 1,20,000 ಕೋಟಿ ರೂಪಾಯಿಗಳನ್ನು ದಾಟುವ ವಿಶ್ವಾಸವಿದೆ, ಇದು 90 ಪ್ರತಿಶತದಷ್ಟು ಬೆಳವಣಿಗೆಯಾಗಿದೆ" ಎಂದು ಮೊಹಿಂದ್ರೂ ಶ್ಲಾಘಿಸಿದ್ದಾರೆ.
ಈ ವರ್ಷ ಭಾರತದಿಂದ ರಫ್ತಾಗಲಿರುವ ಒಟ್ಟಾರೆ ಮೊಬೈಲ್ ರಫ್ತುಗಳ ಪೈಕಿ ಆ್ಯಪಲ್ ಅರ್ಧದಷ್ಟು ಪಾಲು ಹೊಂದಿರುವುದು ಗಮನಾರ್ಹ. ಮೇ ತಿಂಗಳಲ್ಲಿ ಐಫೋನ್ ರಫ್ತು ದಾಖಲೆಯ 10,000 ಕೋಟಿ ರೂ.ಗಳನ್ನು ತಲುಪಿದ್ದು, ದೇಶದ ಒಟ್ಟಾರೆ ಮೊಬೈಲ್ ರಫ್ತು ಪ್ರಮಾಣವನ್ನು ರೂ.12,000 ಕೋಟಿಯಾಗಿದೆ. ಭಾರತವು ಪ್ರಸ್ತುತ ಯುಎಇ, ಯುಎಸ್, ನೆದರ್ಲ್ಯಾಂಡ್ಸ್, ಯುಕೆ ಮತ್ತು ಇಟಲಿ ಈ ಐದು ರಾಷ್ಟ್ರಗಳಿಗೆ ಮೊಬೈಲ್ ರಫ್ತು ಮಾಡುತ್ತಿದೆ.
ಭಾರತದಲ್ಲಿ ಮಾರಾಟವಾಗುವ ಶೇಕಡಾ 97 ಕ್ಕಿಂತ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಈಗ ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿದೆ. ಭಾರತ ಈಗ ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿದೆ. ದೇಶವು ಈಗ ವಿಭಿನ್ನ ದಿಕ್ಕಿನಲ್ಲಿ ಸಾಗುತ್ತಿದೆ, ಇದು ಹೆಚ್ಚಾಗಿ ರಫ್ತು ಕೇಂದ್ರಿತವಾಗಿದೆ ಮತ್ತು ಸರ್ಕಾರದ ಪಿಎಲ್‌ಐ ಯೋಜನೆಯಿಂದ ಪ್ರೋತ್ಸಾಹಿತವಾಗಿದೆ ಎಂದು ಐಸಿಇಎ ಅಧ್ಯಕ್ಷ ಪಂಕಜ್ ಮೊಹಿಂದ್ರೂ ಹೇಳಿದರು. ಅಂದಾಜಿನ ಪ್ರಕಾರ ಭಾರತ ಮತ್ತು ವಿಯೆಟ್ನಾಂ ದೇಶಗಳು ಚೀನಾದಿಂದ ಸ್ಮಾರ್ಟ್‌ಫೋನ್ ಉದ್ಯಮ ಸರಪಳಿ ಹೊರಬಂದಿರುವುದರ ಅತಿದೊಡ್ಡ ಫಲಾನುಭವಿಗಳಾಗಲಿವೆ.
ಆ್ಯಪಲ್ ಈಗಾಗಲೇ ಭಾರತದಲ್ಲಿ ಅನೇಕ ಐಫೋನ್ ಮಾದರಿಗಳನ್ನು ಉತ್ಪಾದಿಸುತ್ತಿದೆ. ಆದರೆ ಕಂಪನಿಯು ತನ್ನ ಚೀನೀ ಪೂರೈಕೆ ಸರಪಳಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತದಲ್ಲಿನ ಉತ್ಪಾದನೆಯನ್ನು ಹೆಚ್ಚಿಸಲು ಬಯಸಿದೆ. ಬ್ಯಾಂಕ್ ಆಫ್ ಅಮೇರಿಕಾ ವರದಿಯ ಪ್ರಕಾರ ಆ್ಯಪಲ್ ತನ್ನ ಐಫೋನ್ ಉತ್ಪಾದನೆಯ ಶೇಕಡಾ 18 ಕ್ಕಿಂತ ಹೆಚ್ಚಿನ ಪ್ರಮಾಣವನ್ನು 2025 ರ ವೇಳೆಗೆ ಭಾರತಕ್ಕೆ ವರ್ಗಾಯಿಸಲು ಬಯಸುತ್ತಿದೆ.
ಇದನ್ನೂ ಓದಿ : ಹೃದಯಬಡಿತ ಹೊಂದಿರುವ ಮಾನವ ಭ್ರೂಣದ ಮಾದರಿ ತಯಾರಿಸಿದ ವಿಜ್ಞಾನಿಗಳು