ETV Bharat / opinion

ವಿಶೇಷ ಲೇಖನ: ಗ್ರಾಮೀಣ ಪ್ರದೇಶಗಳಿಗೆ ಹೊಸ ಬೆಳವಣಿಗೆಯ ಮಾದರಿ - ಗಾಂಧೀಜಿಯ ಗ್ರಾಮ ಸ್ವರಾಜ್

ತಮ್ಮ ನಿತ್ಯದ ಜೀವನೋಪಾಯಕ್ಕಾಗಿ ಜನರು ಪಟ್ಟಣ ಮತ್ತು ನಗರಗಳಿಗೆ ವಲಸೆ ಹೋಗದಂತೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆಯಿದೆ. ನಮ್ಮ ಗ್ರಾಮಗಳು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಇದು ಸಾಧ್ಯವಾಗುವುದು. ಪ್ರಸಕ್ತ ಸಂಕಷ್ಟವನ್ನು ಅವಕಾಶ ಎಂದು ಭಾವಿಸಿ, ಹೊಸ ಬೆಳವಣಿಗೆಯ ಮಾದರಿಗಳನ್ನು ತುರ್ತು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕು.

New-Growth Model for Rural Areas
ಗ್ರಾಮೀಣ ಪ್ರದೇಶಗಳಿಗೆ ಹೊಸ-ಬೆಳವಣಿಗೆಯ ಮಾದರಿ
author img

By

Published : Jul 10, 2020, 3:09 PM IST

ತಮ್ಮ ಬದುಕು ಕಟ್ಟಿಕೊಳ್ಳಲು ಹೋಗಿದ್ದ ನಗರಗಳಿಂದ ಲಕ್ಷಾಂತರ ವಲಸೆ ಕಾರ್ಮಿಕರು ಕೋವಿಡ್‌-19 ಬಿಕ್ಕಟ್ಟಿನ ಅವಧಿಯಲ್ಲಿ ತಮ್ಮ ಊರುಗಳಿಗೆ ಮತ್ತೆ ವಾಪಾಸ್‌ ಬಂದಿದ್ದಾರೆ. ಹಾಗೆ ನಗರದಿಂದ ತಮ್ಮ ಊರುಗಳತ್ತ ವಲಸೆ ಹೊರಟಿರುವ ಈ ಕಾರ್ಮಿಕರು ಆಹಾರ ಮತ್ತು ನೀರಿಗಾಗಿ ಪರದಾಡುತ್ತಿದ್ದ ದೃಶ್ಯಗಳು ಎಷ್ಟೋ ಜನರ ಕಣ್ಣಲ್ಲಿ ನೀರು ತರಿಸಿವೆ. ಈ ರೀತಿ, ಸ್ವಂತ ಮನೆಗಳಿಲ್ಲದೆ ದಿನಗೂಲಿಯ ಮೇಲೆಯೇ ಬದುಕುವ ಬಡಜನರಿಗೆ ಅವರ ಸ್ವಂತ ಊರುಗಳಲ್ಲಿಯೇ ಜೀವನಾವಶ್ಯಕ ಸೌಲಭ್ಯಗಳನ್ನು ಕಲ್ಪಿಸುವ ಅವಶ್ಯಕತೆ ಇದೆಯೇ ಹೊರತು ಅವುಗಳನ್ನು ಹುಡುಕಿಕೊಂಡು ಅವರು ನಗರಗಳಿಗೆ ಬರುವಂತಾಗಬಾರದು ಎಂಬುದನ್ನು ಕೊರೊನಾ ನಮಗೆ ತೋರಿಸಿಕೊಟ್ಟಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಜೀವನ ನಡೆಸುವ ಸೌಲಭ್ಯಗಳು ಮತ್ತು ಉದ್ಯೋಗವನ್ನು ಕಲ್ಪಿಸುವುದು ಎಲ್ಲಿ ಸಾಧ್ಯವಾಗಿಲ್ಲವೋ, ಅಂತಹ ಸ್ಥಳಗಳಿಂದ ಲಕ್ಷಾಂತರ ಜನರು ತಮ್ಮ ನಿತ್ಯದ ಊಟ ದುಡಿದುಕೊಳ್ಳುವ ಸಲುವಾಗಿ ಪ್ರತಿ ವರ್ಷ ದೂರದ ಊರುಗಳಿಗೆ ವಲಸೆ ಹೋಗುತ್ತಾರೆ. ಅಂತಹ ವ್ಯವಸ್ಥೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಒದಗಿಸಿದಾಗ ಮಾತ್ರ ಗಾಂಧೀಜಿ ಅವರ ಕನಸಿನ ಗ್ರಾಮ ಸ್ವರಾಜ್‌ ವಾಸ್ತವವಾಗಿ ಬದಲಾಗುತ್ತದೆ.

ದೇಶಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ 60 ಲಕ್ಷ ಜನರಿಗೆ ಆರ್ಥಿಕವಾಗಿ ಮತ್ತು ಸ್ವತಂತ್ರವಾಗಿ ಸ್ವಾವಲಂಬಿ ಮತ್ತು ಸ್ವಯಂ ಬದುಕು ಸಾಗಿಸಬಲ್ಲ ಶಕ್ತಿ ನೀಡಲು ತಂತ್ರಜ್ಞಾನ ದೊಡ್ಡ ಪ್ರಮಾಣದ ಸಂಪನ್ಮೂಲವಾಗಬಲ್ಲುದು. ಜನವಿಜ್ಞಾನ ವೇದಿಕೆಗಳ ನೆರವಿನಿಂದ ಗ್ರಾಮೀಣ ಪ್ರದೇಶಗಳಲ್ಲಿ ಸರಕಾರದ ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ಜಾರಿಗೊಳಿಸುವ ಮೂಲಕ ಇಂತಹ ವ್ಯವಸ್ಥೆಯನ್ನು ಸಾಧ್ಯವಾಗಿಸಬಹುದು. ಕಳೆದ 10 ವರ್ಷಗಳಲ್ಲಿ ಹಳ್ಳಿಗಳಿಂದ ನಗರಕ್ಕೆ ವಲಸೆ ಹೋಗುವ ಪ್ರಮಾಣ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ವಿವಿಧ ಅಂದಾಜುಗಳ ಪ್ರಕಾರ, ಕಳೆದ ಕೆಲ ವರ್ಷಗಳಲ್ಲಿ ಹೀಗೆ ವಲಸೆ ಹೋಗುವವರ ಪ್ರಮಾಣ 7.2 ಕೋಟಿಯಿಂದ 11 ಕೋಟಿಗಳಿಗೆ ಏರಿಕೆಯಾಗಿದೆ. ಈ ಅಂದಾಜುಗಳಿಂದಾಗಿ, ವಲಸೆ ಕಾರ್ಮಿಕರನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿರುವ ದೇಶಗಳ ಪೈಕಿ ಚೀನಾದ ನಂತರ ಭಾರತ ಎರಡನೇ ಸ್ಥಾನದಲ್ಲಿ ನಿಲ್ಲುವಂತಾಗಿದೆ.

ಗಾಂಧೀಜಿಯ ಗ್ರಾಮ ಸ್ವರಾಜ್‌

ಗಾಂಧೀಜಿಯವರ ಗ್ರಾಮ ಸ್ವರಾಜ್‌ ಪರಿಕಲ್ಪನೆಯಂತೆ ಹಳ್ಳಿಗಳನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವುದೇ ಗ್ರಾಮಗಳ ಹೊಸ-ಬೆಳವಣಿಗೆ ಮಾದರಿ. ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ, ಗಾಂಧೀಜಿಯವರು ಚಂಪಾರಣ್ಯ (1917), ಸೇವಾಗ್ರಾಮ (1920) ಮತ್ತು ವಾರ್ಧಾ (1938) ಅಂತಹ ಹಲವಾರು ಗ್ರಾಮೀಣ ಚಳವಳಿಗಳ ನೇತೃತ್ವ ವಹಿಸಿದ್ದರು. ಮೂಲಸೌಕರ್ಯಗಳನ್ನು ನಿರ್ಮಿಸುತ್ತಲೇ ರಾಜಕೀಯ ವಿಕೇಂದ್ರಿತ ವ್ಯವಸ್ಥೆಯನ್ನು ಗ್ರಾಮೀಣ ಮಟ್ಟದಲ್ಲಿ ರಚಿಸುವುದು, ಗ್ರಾಮಗಳು ಆರ್ಥಿಕ ಸ್ವಾವಲಂಬನೆಯನ್ನು ಹೊಂದುವಂತಹ ವಾತಾವರಣವನ್ನು ನಿರ್ಮಿಸುವುದು ಹಾಗೂ ಸಾಮಾಜಿಕ ಸಮಾನತೆಯನ್ನು ಸ್ಥಾಪಿಸುವುದು ಅವುಗಳ ಮುಖ್ಯ ಉದ್ದೇಶವಾಗಿತ್ತು. ಗ್ರಾಮಗಳ ಫಲವತ್ತಾದ ನೆಲದಲ್ಲಿ ಮಾತ್ರ ಸ್ವಾವಲಂಬಿ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಎಂದು ಕರೆಯಲ್ಪಡುವ ಪ್ರಜಾಪ್ರಭುತ್ವದ ನಿಜವಾದ ಬೇರುಗಳು ವಿಕಸಿತವಾಗಲು ಸಾಧ್ಯ ಎಂದು ಗಾಂಧೀಜಿ ಆಗ್ರಹಿಸಿದ್ದರು! “ಯಾವಾಗ ಪ್ರತಿಯೊಂದು ಹಳ್ಳಿಯು ಗಣರಾಜ್ಯದ ವೈಯಕ್ತಿಕ ಘಟಕದಂತೆ ಕೆಲಸ ಮಾಡಬಲ್ಲುದೋ ಆಗ ಮಾತ್ರ ಗ್ರಾಮ ಸ್ವರಾಜ್‌ ಸ್ಥಾಪನೆಯಾದಂತೆ. ತನ್ನ ಮಟ್ಟಿಗೆ ಅದೊಂದು ಸ್ವತಂತ್ರ ದೇಶದಂತೆ. ಜೊತೆಗೆ, ತನ್ನ ಅವಶ್ಯಕತೆಗಳನ್ನು ಮತ್ತು ಬೇಡಿಕೆಗಳನ್ನು ತಾನೇ ಈಡೇರಿಸಿಕೊಳ್ಳಲು ಅಕ್ಕಪಕ್ಕದ ಹಳ್ಳಿಗಳೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತದೆ” ಎಂದಿದ್ದರು ಗಾಂಧೀಜಿ.

ಪ್ರತಿಯೊಂದು ಹಳ್ಳಿಯೂ ಸ್ವಾವಲಂಬನೆ ಹಾಗೂ ಪರಸ್ಪರ ಒಗ್ಗಟ್ಟಿನ ಸಾರದಂತೆ ಬದುಕಬೇಕು ಎಂಬ ಅಂಶದತ್ತ ಗಾಂಧೀಜಿ ಒತ್ತು ಕೊಟ್ಟಿದ್ದರು. ಎಲ್ಲಿ ಜನರು ಸ್ಥಳೀಯವಾಗಿ ಕೆಲಸ ಮಾಡುತ್ತ, ಉನ್ನತ ಮಟ್ಟದ ಆದಾಯ ಹಾಗೂ ಉತ್ಪಾದನೆಯನ್ನು ಗಳಿಸುತ್ತಾರೋ ಅಂತಹ ಹಳ್ಳಿಯೇ ಗ್ರಾಮ ಸ್ವರಾಜ್ಯ ಸಾಧಿಸಿದ ಹಳ್ಳಿ ಎಂದು ಅವರು ಹೇಳಿದ್ದರು. ಗ್ರಾಮೀಣ ಅಭಿವೃದ್ಧಿಗೆ ತಂತ್ರಜ್ಞಾನವೇ ಕೀಲಿಕೈ ಎಂಬುದನ್ನು ಗಾಂಧೀಜಿ ಗುರುತಿಸಿದ್ದರು. ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲ, ಸಾಂಪ್ರದಾಯಿಕ ಚರಕವನ್ನು ಯಾರು ಅಭಿವೃದ್ಧಿಪಡಿಸುತ್ತಾರೋ ಮತ್ತು ಅದರ ತಾಂತ್ರಿಕ ನ್ಯೂನತೆಗಳನ್ನು ಸರಿಪಡಿಸುವ ಮೂಲಕ ಅಪ್‌ಡೇಟ್‌ ಮಾಡುತ್ತಾರೋ, ಅಂಥವರಿಗೆ 1 ಲಕ್ಷ ರೂ. (ಇವತ್ತಿನ ಲೆಕ್ಕದಲ್ಲಿ ಅಂದಾಜು ರೂ.2.5 ಕೋಟಿ) ಬಹುಮಾನ ನೀಡುವುದಾಗಿ ಗಾಂಧಿಜಿ ಆಗಿನ ಕಾಲದ ಬ್ರಿಟಿಷ್‌ ಮತ್ತು ಭಾರತೀಯ ದಿನಪತ್ರಿಕೆಗಳಲ್ಲಿ ಘೋಷಣೆ ಮಾಡಿದ್ದರು.

ಹಿಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಮ್‌ ಅವರು ಅಭಿವೃದ್ಧಿಯ ಮಾದರಿಯೊಂದನ್ನು ಪ್ರಸ್ತುತಪಡಿಸಿದ್ದು, ಅದರ ಮೂಲಕ ಹಳ್ಳಿಗಳಿಗೆ ಆಧುನಿಕ ಕಾಲದ ಸೌಲಭ್ಯಗಳನ್ನು ಒದಗಿಸುವ ಯೋಜನೆ ಅದಾಗಿತ್ತು. ಒಂದು ವೇಳೆ ೫೦ರಿಂದ 100 ಹಳ್ಳಿಗಳನ್ನು ಒಂದು ಸಂಕೀರ್ಣದಂತೆ ಸೃಷ್ಟಿ ಮಾಡಿದ್ದೇ ಆದರೆ, ಜಂಟಿ ವಸತಿ ಮತ್ತು ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಬಹುದು ಎಂದು ಅವರು ಹೇಳಿದ್ದರು. ಇಂತಹ ಸಂಕೀರ್ಣವನ್ನು “ಪುರ ಸಂಕೀರ್ಣ” ಎಂದು ಅವರು ಕರೆದಿದ್ದರು. ಇಂತಹ ಸಂಕೀರ್ಣಗಳ ಅವಶ್ಯಕತೆಗಳಾದ ರಸ್ತೆಗಳು, ಕಟ್ಟಡಗಳು, ವಸತಿ ಸಮುಚ್ಚಯಗಳು, ಉಗ್ರಾಣ ಸೌಲಭ್ಯಗಳು, ವಿಜ್ಞಾನ ಮತ್ತು ಆರ್ಥಿಕತೆಯಂತಹ ಸೌಲಭ್ಯಗಳನ್ನು ಪರಸ್ಪರ ಜೋಡಿಸುವ ಮೂಲಕ ಅವನ್ನು ಒಂದೇ ವೇದಿಕೆಯಡಿ ತರುವ ಪ್ರಸ್ತಾಪವನ್ನು ಅವರು ನೀಡಿದ್ದರು. ಇದರಿಂದಾಗಿ ಗ್ರಾಮೀಣ ಜನರು ಪರಸ್ಪರ ಸಂವಹನ ಬೆಳೆಸಿಕೊಳ್ಳುವುದು ಹಾಗೂ ತಮ್ಮಷ್ಟಕ್ಕೆ ತಾವೇ ಅಭಿವೃದ್ಧಿ ಹೊಂದುವುದು ಸಾಧ್ಯವಾಗುತ್ತದೆ. ಇಂತಹ ಸಂಕೀರ್ಣಗಳು ಪರಸ್ಪರ ಸಂಪರ್ಕ ಸಾಧಿಸುವ ಮೂಲಕ ಹಳ್ಳಿಗಳು ಮತ್ತು ಪಟ್ಟಣಗಳು ಸುಲಭವಾಗಿ ಅಭಿವೃದ್ಧಿಯ ಹಾದಿಯಲ್ಲಿ ನಡೆಯುವಂತಾಗುತ್ತದೆ. ಚಂಡಿಗಡದಲ್ಲಿ ೨೦೦೪ರ ಜನವರಿಯಲ್ಲಿ ನಡೆದ 90ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ನಲ್ಲಿ ಕಲಾಂ ಅವರು ಈ ರೀತಿಯ ಅಭಿವೃದ್ಧಿ ಮಾದರಿಯನ್ನು ಪ್ರಸ್ತುತಪಡಿಸಿದ್ದರು. ಸ್ವಾವಲಂಬಿ ಹಳ್ಳಿಗಳ ಬುನಾದಿಯನ್ನು ಬಲವಾದ ವಿಧಾನದಲ್ಲಿ ನಿರ್ಮಿಸಿದ್ದೇ ಆದರೆ, ಆರ್ಥಿಕವಾಗಿ ಉನ್ನತವಾದ ಎತ್ತರವನ್ನು ತಲುಪುವುದು ಭಾರತಕ್ಕೆ ಸುಲಭವಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದರು.

ಪುರ ಯೋಜನೆಯ ಪ್ರಮುಖ ಅಂಶವೊಂದರ ಪ್ರಕಾರ, ಕೆಲವು ಹಳ್ಳಿಗಳನ್ನು ಸಂಪರ್ಕಿಸುವಂತಹ 30 ಕಿಮೀ ವರ್ತುಲ ರಸ್ತೆಯೊಂದನ್ನು ನಿರ್ಮಿಸುವುದು ಹಾಗೂ ಈ ಸಂಕೀರ್ಣದಲ್ಲಿ ಬರುವ ಎಲ್ಲಾ ಹಳ್ಳಿಗಳನ್ನು ಸಾಮಾನ್ಯ ಬಸ್‌ ಮಾರ್ಗದ ಮೂಲಕ ಜೋಡಿಸುವ ಪ್ರಸ್ತಾಪವಿದೆ. ಈ ವಿಧಾನದಿಂದ ಪಟ್ಟಣಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇದರ ಜೊತೆಗೆ, ಪುರ ಗ್ರಾಮ ಸಂಕೀರ್ಣದೊಳಗೇ ವಸತಿ ಸೌಲಭ್ಯಗಳನ್ನು ನಿರ್ಮಿಸುವ ಉದ್ದೇಶವೂ ಇತ್ತು. ಇದರಿಂದಾಗಿ ಹಳ್ಳಿಗಳ ನಡುವೆಯೇ ವಲಸೆ ಹೆಚ್ಚುವ ಮೂಲಕ, ಗ್ರಾಮೀಣ ಜನರು ಹಳ್ಳಿಗಳಿಂದ ಪಟ್ಟಣ ಮತ್ತು ನಗರಗಳಿಗೆ ವಲಸೆ ಹೋಗುವುದನ್ನು ತಗ್ಗಿಸುವುದು ಸಾಧ್ಯವಿತ್ತು. ಇಂತಹದೊಂದು ಮಹತ್ವಕಾಂಕ್ಷಿ ಯೋಜನೆಯನ್ನು ಸಾಧ್ಯವಾಗಿಸಲು ಪ್ರತಿಯೊಂದು ಘಟಕಕ್ಕೂ ರೂ.130 ಕೋಟಿ ಅನುದಾನ ನೀಡುವ ಮೂಲಕ ಇಂತಹ 7,000 ಪುರ ಸಂಕೀರ್ಣಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಡಿ ಅಭಿವೃದ್ಧಿಪಡಿಸುವ ಪ್ರಸ್ತಾಪವನ್ನು ಕಲಾಂ ಮಾಡಿದ್ದರು. ಪುರ ಸಂಕೀರ್ಣದಲ್ಲಿ ಬರುವ ಹಳ್ಳಿಗಳಿಗೆ ಉನ್ನತ ಮಟ್ಟದ ಜೀವನವನ್ನು ಒದಗಿಸುವ ಅವಶ್ಯಕತೆಯನ್ನು ಅವರು ಪ್ರಸ್ತಾಪಿಸಿದ್ದರು.

ಮಾನವೀಯ ಮಾದರಿ

ಇನ್ನು, ನಾನಾಜಿ ದೇಶಮುಖ ಅವರ ಅಭಿವೃದ್ಧಿ ಪರಿಕಲ್ಪನೆಯು ಸಂಪೂರ್ಣ ಮಾನವೀಯ ಮಾದರಿಯನ್ನು ಅಳವಡಿಸಿಕೊಂಡ ಸ್ವಾವಲಂಬಿ ಗ್ರಾಮಗಳನ್ನು ಹೊಂದುವುದಾಗಿತ್ತು. ದೇಶಮುಖ ಅವರು ಈ ಅಭಿವೃದ್ಧಿ ಮಾದರಿಯನ್ನು ದೇಶಾದ್ಯಂತ 500 ಹಳ್ಳಿಗಳಲ್ಲಿ, ಮುಖ್ಯವಾಗಿ ಮಧ್ಯಪ್ರದೇಶ ರಾಜ್ಯದ ಚಿತ್ರಕೂಟ ಪ್ರದೇಶದಲ್ಲಿ ಜಾರಿಗೆ ತಂದರು. ನಿರುದ್ಯೋಗ-ರಹಿತ ಹಳ್ಳಿಗಳ ನಿರ್ಮಾಣ, ಬಡತನ ನಿರ್ಮೂಲನೆ, ಕಾನೂನು ವ್ಯಾಜ್ಯಗಳನ್ನು ಸ್ಥಳೀಯವಾಗಿಯೇ ಪರಿಹರಿಸುವುದು, ವಿಧವಾ ವಿವಾಹ – ಮುಂತಾದವು ಈ ಮಾದರಿಯ ಅವಿಭಾಜ್ಯ ಅಂಗಗಳಾಗಿದ್ದವು. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಹೊಂದಿರುವ ಹಳ್ಳಿಗಳನ್ನು ಸಂಕೀರ್ಣದೊಳಗೆ ತರುವುದು ದೇಶಮುಖ ಮಾದರಿಯು ಪ್ರಸ್ತಾಪಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನದ ಬಳಕೆಗೆ ಈ ಮಾದರಿಯಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಪ್ರಸಕ್ತ ಸಂದರ್ಭದಲ್ಲಿ, ಸುಸ್ಥಿರ ಕೃಷಿ ಅಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಇಂಟರ್‌ನೆಟ್‌ಗಳನ್ನು ಜಗತ್ತಿನಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ತಂತ್ರಜ್ಞಾನಗಳಿಂದಾಗಿ ಕೃಷಿ ಉತ್ಪನ್ನಗಳ ಬೆಲೆಗಳು ಜಾಗತಿಕ ಮಾರುಕಟ್ಟೆಯಲ್ಲಿ ಹೇಗಿವೆ ಹಾಗೂ ವಿದೇಶಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವಂತಹ ಆಧುನಿಕ ಕೃಷಿ ಪದ್ಧತಿಗಳು ಹೇಗಿವೆ ಎಂಬ ತಾಜಾ ಮಾಹಿತಿಯನ್ನು ಹೊಂದುವುದು ನಮ್ಮ ರೈತರಿಗೆ ಸಾಧ್ಯವಾಗಿದೆ. ನಮ್ಮ ರೈತರು ಉತ್ತಮ ಇಳುವರಿ ಹಾಗೂ ಆ ಮೂಲಕ ಉತ್ತಮ ಆದಾಯವನ್ನು ಪಡೆಯಲು ಇದು ನೆರವಾಗುತ್ತಿದೆ.

ದೇಶಮುಖ ಮಾದರಿಯೂ ಇದೇ ನಿಟ್ಟಿನಲ್ಲಿದ್ದು, ಸಣ್ಣ ಮತ್ತು ಮಧ್ಯಮ ರೈತರನ್ನು ಸಶಕ್ತಗೊಳಿಸಲು ಸ್ಥಾಪಿಸಲಾಗಿರುವ 10,000 ಕೃಷಿ ಉತ್ಪಾದಕರ ಒಕ್ಕೂಟಗಳು ಹೊಂದಿರುವ ಕಾರ್ಯಕ್ರಮ ದಾರಿಯಲ್ಲಿಯೇ ಇದೆ. ಗಾಂಧಿ, ಕಲಾಂ ಮತ್ತು ದೇಶಮುಖ ಅವರು ಕಂಡಿರುವ ಗ್ರಾಮೀಣ ಅಭಿವೃದ್ಧಿಯ ಕನಸುಗಳನ್ನು ಬೆಂಬಲಿಸಲು “ಸ್ವಾವಲಂಬಿ” (ಆತ್ಮ ನಿರ್ಭರ) ಬಾಂಡ್‌ಗಳ ಮೂಲಕ ನಿಧಿ ಸಂಗ್ರಹಿಸುವ ಪ್ರಸ್ತಾಪವನ್ನು ಕೇಂದ್ರ ಸರಕಾರ ಪರಿಶೀಲಿಸಬೇಕು. ವಾಣಿಜ್ಯ ಬ್ಯಾಂಕ್‌ಗಳು ನೀಡುವ ಆದ್ಯತಾ ಸಾಲಗಳ ಕೆಲ ಭಾಗವನ್ನು ಈ ಬಾಂಡ್‌ಗಳ ಖರೀದಿಗೆ ಬಳಸುವಂತಾಗಬೇಕು. ವಿದ್ಯಾರ್ಥಿ ಹಂತದಲ್ಲಿಯೇ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವಂತೆ ನಮ್ಮ ಯುವಜನತೆಯನ್ನು ನಾವು ಪ್ರೇರೇಪಿಸಬೇಕಾದ ಅವಶ್ಯಕತೆಯಿದೆ. ಎಂಜಿನಿಯರಿಂಗ್‌, ವೈದ್ಯಕೀಯ ಮತ್ತು ವಾಣಿಜ್ಯ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮವನ್ನು ಇದಕ್ಕೆ ಪೂರಕವಾಗುವ ರೀತಿ ಸಜ್ಜುಗೊಳಿಸಬೇಕಿದೆ. ಯುವಜನತೆಯ ಈ ನವೀಕರಿಸಬಹುದಾದ ಸಂಪನ್ಮೂಲವನ್ನು ಗ್ರಾಮೀಣ ಸಮುದಾಯಕ್ಕೆ ಬಳಸುವಂತಾಗಬೇಕಿದೆ.

ಮಹಾನ್‌ ನಾಯಕರು ತೋರಿಸಿಕೊಟ್ಟಿರುವ ಹಾದಿಯಲ್ಲಿ ಪಯಣಿಸುತ್ತಾ...

ದೇಶದ ನಾಲ್ವರು ಕೆಲಸಗಾರರ ಪೈಕಿ ಒಬ್ಬ ವ್ಯಕ್ತಿ ವಲಸೆಗಾರನಾಗಿದ್ದು, ಜೀವನಾದಾಯ ಕಂಡುಕೊಳ್ಳುವ ಉದ್ದೇಶದಿಂದ ತನ್ನ ಹಳ್ಳಿ/ಪಟ್ಟಣದಿಂದ ಆತ ನಗರಕ್ಕೆ ವಲಸೆ ಬಂದವನಾಗಿರುತ್ತಾನೆ. ಇಂತಹ ವಲಸೆ ಕಾರ್ಮಿಕರ ಬದುಕು ಹೇಗಿರುತ್ತದೆ ಮತ್ತು ದಿನದಿಂದ ದಿನಕ್ಕೆ ಅದು ಹೇಗೆ ವಿಷಮಿಸುತ್ತ ಹೋಗುತ್ತಿದೆ ಎಂಬುದನ್ನು ಕೊರೊನಾ ಸಂಕಷ್ಟ ಸಮಯ ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹಿಂದಿರುಗಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರ ನೆರವಿಗೆ ಧಾವಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ನಡೆಸಿರುವ ಪ್ರಯತ್ನ ಅವರೆಲ್ಲರಿಗೂ ನೆರವಾದ ಹಾಗೆ ಕಾಣುತ್ತಿಲ್ಲ. ಇದು ಹೇಗಿದೆ ಎಂದರೆ ಸಮುದ್ರಕ್ಕೆ ನೀರು ಹರಿಸಿದ ಹಾಗೆ.

ತಮ್ಮ ನಿತ್ಯದ ಜೀವನೋಪಾಯಕ್ಕಾಗಿ ಜನರು ಪಟ್ಟಣ ಮತ್ತು ನಗರಗಳಿಗೆ ವಲಸೆ ಹೋಗದಂತೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆಯಿದೆ. ನಮ್ಮ ಗ್ರಾಮಗಳು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಇದು ಸಾಧ್ಯವಾಗುವುದು. ಪ್ರಸಕ್ತ ಸಂಕಷ್ಟವನ್ನು ಅವಕಾಶ ಎಂದು ಭಾವಿಸಿ, ಹೊಸ ಬೆಳವಣಿಗೆಯ ಮಾದರಿಗಳನ್ನು ತುರ್ತು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕು. ಅದೃಷ್ಟವಶಾತ್‌, ಇಂತಹ ಪರ್ಯಾಯ ಅಭಿವೃದ್ಧಿ ಮಾದರಿಗಳನ್ನು ನಮ್ಮ ಮಹಾನ್‌ ರಾಷ್ಟ್ರೀಯ ನಾಯಕರು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ದೇಶಪ್ರೇಮಿ ನಾಯಕರಾದ ಮಹಾತ್ಮ ಗಾಂಧಿ, ಹಿಂದಿನ ರಾಷ್ಟ್ರಪತಿ ಅಬ್ದುಲ್‌ ಕಲಾಂ, ಸಮಾಜವಾದಿ ನಾನಾಜಿ ದೇಶಮುಖ್‌ ಅಂಥವರು ಗ್ರಾಮೀಣ ಅಭಿವೃದ್ಧಿಯ ಮಾದರಿಗಳನ್ನು ನಮ್ಮೆದುರು ಇಟ್ಟಿದ್ದು, ಅವನ್ನು ತಕ್ಷಣದಿಂದಲೇ ಜಾರಿಗೊಳಿಸಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.