ಇರಾನ್‌ನ ಪರಮಾಣು ಕಾರ್ಯಕ್ರಮದ ಪ್ರಮುಖ ವಿಜ್ಞಾನಿ ಮೊಹ್ಸಿನ್ ಫಖ್ರಿಜಾಡೆಹ್ ಅವರನ್ನು ತೆಹ್ರಾನ್ನಲ್ಲಿ ಹತ್ಯೆ ಮಾಡಲಾಗಿದೆ. ಇದರ ಆರೋಪವನ್ನು ಇಸ್ರೇಲ್ನ ಗುಪ್ತಚರ ಸಂಸ್ಥೆಯಾದ 'ಮೊಸ್ಸಾದ್' ಮೇಲೆ ಇರಾನ್ ಹೊರಿಸಿದೆ. ಮೊಸ್ಸಾದ್, ಇರಾನಿನ ವಿಜ್ಞಾನಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತದೆ. ಅಲ್ಲದೇ ಇರಾನ್‌ನ ಪರಮಾಣು ಕಾರ್ಯಕ್ರಮದ ದಾಖಲೆಗಳನ್ನು ಎಗರಿಸುತ್ತದೆ ಎಂಬ ಆರೋಪ ಕೂಡ ಇದೆ.
ಮೊಸ್ಸಾದ್ ಹಾಗೂ ಕೊಹೆನ್
ಇಸ್ರೇಲ್ ಮತ್ತು ಬಹ್ರೇನ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸುಡಾನ್ ಜೊತೆಗಿನ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾರಣ ಮೊಸ್ಸಾದ್ ನಿರ್ದೇಶಕ ಯೋಸಿ ಕೊಹೆನ್ರ ಪ್ರಭಾವ ಹೆಚ್ಚಿದೆ. ಅಷ್ಟೇ ಅಲ್ಲ ದೇಶದ ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೂಡ ಕಾರ್ಯ ನಿರ್ವಹಿಸುತ್ತಿದೆ. ಮಾರ್ಚ್ನಲ್ಲಿಯೇ 1 ಲಕ್ಷ ಕೋವಿಡ್ ಟೆಸ್ಟಿಂಗ್ ಕಿಟ್ಗಳಲ್ಲಿ ವಿದೇಶದಿಂದ ಖರೀದಿಸಿತ್ತು.
2016ರಲ್ಲಿ ಏಜೆನ್ಸಿ ಅಧಿಕಾರವನ್ನು ಕೊಹೆನ್ ವಹಿಸಿಕೊಂಡಾಗಿನಿಂದ ಕಾರ್ಯಾಚರಣೆ ವೇಗ ಕೂಡ ಹೆಚ್ಚಿದೆ. ಇಸ್ರೇಲ್ ಕಂಡ ಅತ್ಯಂತ ಧೈರ್ಯಶಾಲಿ ಬೇಹುಗಾರಿಕೆ ಕ್ರಮಗಳಿಗೆ ಮೊಸ್ಸಾದ್ ಸಾಕ್ಷಿಯಾಗಿದೆ. ಮೊದಲು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮತ್ತು ನಂತರ ಮೊಸ್ಸಾದ್ ನಿರ್ದೇಶಕರಾಗಿ, ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಸಹಾಯ ಮಾಡುವಲ್ಲಿ ಕೊಹೆನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ 'ಮೊಸ್ಸಾದ್' ಬಹಳ ಪರಿಣಾಮಕಾರಿ ಏಜೆನ್ಸಿಯಾಗಿದೆ.
ಮೊಸ್ಸಾದ್ನ ಹಗರಣಗಳಿವು..
1960ರಲ್ಲಿ ಅಡಾಲ್ಫ್ ಇಷ್ಮಾನ್ ಅಪಹರಣ, 1972ರ ಮ್ಯೂನಿಕ್ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ಕ್ರೀಡಾಪಟುಗಳ ಹತ್ಯೆಗೆ ಪ್ರತೀಕಾರ ಸೇರಿದಂತೆ ಅನೇಕ ಅಪಾಯಕಾರಿ ಕೃತ್ಯಗಳನ್ನು ಮೊಸ್ಸಾದ್ ನಡೆಸಿದೆ. 2018 ರಲ್ಲಿ ಇರಾನ್‌ನಿಂದ ಪರಮಾಣು ದಾಖಲೆಗಳನ್ನು ಇಸ್ರೇಲ್‌ಗೆ ಸ್ಥಳಾಂತರಿಸಿತ್ತು. ಮೊಸ್ಸಾದ್ ಹೆಸರಿನಲ್ಲಿ ಇರಾನ್‌ನಲ್ಲಿ ಹಲವಾರು ಹತ್ಯೆಗಳು ನಡೆದಿವೆ.
ಇರಾನಿನಲ್ಲಿ ವಿಜ್ಞಾನಿಗಳ ಹತ್ಯೆ
- ಮೊಹ್ಸಿನ್ ಫಖ್ರಿಜಾಡೆಹ್ ಕೊಲೆ ಮೊದಲೇ ನಾಲ್ವರು ಇರಾನಿನ ವಿಜ್ಞಾನಿಗಳನ್ನು ಕೊಲ್ಲಲಾಗಿತ್ತು
- 2010ರಲ್ಲಿ ರಿಮೋಟ್ ಕಂಟ್ರೋಲ್ ಬಾಂಬ್ ಸ್ಫೋಟಿಸಿ ಕಣ ಭೌತಶಾಸ್ತ್ರ ತಜ್ಞ ಮಸೂದ್ ಅಲಿ ಮೊಹಮ್ಮದಿ ಅವರನ್ನು ಹತ್ಯೆಮಾಡಲಾಯಿತು
- ಇದೇ ವರ್ಷ ಪರಮಾಣು ವಿಜ್ಞಾನಿ ಮಜೀದ್ ಶಹರಿಯಾರ್ ಇದ್ದ ಕಾರಿನ ಮೇಲೆ ಬಾಂಬ್ ಸ್ಫೋಟಿಸಿ ಹತ್ಯೆ
- ಇರಾನಿನ ಪರಮಾಣು ಮುಖ್ಯಸ್ಥ ಫರೇಡುನ್ ಅಬ್ಬಾಸಿ ಹತ್ಯೆಗೆ ಯತ್ನ
- 2011ರಲ್ಲಿ ದಾರಿಯುಶ್ ರೆಜನೆಜಾದ್ರನ್ನು ಗುಂಡಿಕ್ಕಿ ಕೊಲ್ಲಲಾಯಿತು
- 2012ರಲ್ಲಿ ಮುಸ್ತಫಾ ಅಹ್ಮದಿ ರೋಶನ್ ಹತ್ಯೆ
ಸಿಐಎಗಿಂತ ದೊಡ್ಡದು ಮೊಸ್ಸಾದ್
ಮಿಲಿಟರಿ ಗುಪ್ತಚರ ಇಲಾಖೆ, ಆಂತರಿಕ ಭದ್ರತಾ ಸೇವೆ ಮತ್ತು ವಿದೇಶಾಂಗ ಇಲಾಖೆ ಜೊತೆಗೆ ಸಹಕಾರ ಬಲಪಡಿಸುವ ದೃಷ್ಟಿಯಿಂದ 1949 ರ ಡಿಸೆಂಬರ್ನಲ್ಲಿ ಮೊಸ್ಸಾದ್ ಅನ್ನು ಸ್ಥಾಪಿಸಲಾಯಿತು. ಯೋಸಿ ಕೊಹೆನ್ ನಾಯಕತ್ವದಲ್ಲಿ ಮೊಸ್ಸಾದ್ ಬಜೆಟ್ ಹೆಚ್ಚುತ್ತಲೇ ಇದೆ. ಬಜೆಟ್ ಮತ್ತು ಗೂಢಚಾರರ ಸಂಖ್ಯೆಯಲ್ಲಿ ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆ (CIA)ಗಿಂತಲೂ ಮೊಸ್ಸಾದ್ ದೊಡ್ಡದಾಗಿದೆ.