ಹೈದರಾಬಾದ್: ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡುವ ಮೂಲಕ ಪಾಪ್ ಸೂಪರ್ ಸ್ಟಾರ್ ರಿಹಾನಾ ಮಂಗಳವಾರ ಇಂಟರ್ನೆಟ್ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಗಣರಾಜ್ಯೋತ್ಸವದ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರದ ನಂತರ ಮುರಿದು ಬಿದ್ದಂತಿದ್ದ ಹಾಗೂ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಂತೆ ತೋರುತ್ತಿದ್ದ ಪ್ರತಿಭಟನೆಗಳು, ರೈತ ಮುಖಂಡ ರಾಕೇಶ್ ಟಿಕಾಯತ್ ಸುರಿಸಿದ ಕೆಲ ಹನಿ ಕಣ್ಣೀರಿನಿಂದಾಗಿ ಪುನಶ್ಚೇತನಗೊಂಡಿವೆ. ಪ್ರತಿಭಟನೆಯನ್ನು ಅಂತ್ಯಗೊಳಿಸುವುದರ ಬದಲು ಆತ್ಮಹತ್ಯೆಯನ್ನೇ ಆಯ್ಕೆ ಮಾಡಿಕೊಳ್ಳುವುದಾಗಿ ಅವರು ಭಾವನಾತ್ಮಕ ಆಕ್ರೋಶದಲ್ಲಿ ಘೋಷಿಸಿದ್ದರು.
ರೈತರನ್ನು ಬೆಂಬಲಿಸುವ ರಿಹಾನಾಳ ಒಂದು ಟ್ವೀಟ್ ಭಾರಿ ಬೆಂಬಲ ಗಳಿಸಿದಂತೆ ಹಾಗೂ ಇತರ ಜಾಗತಿಕ ಗಣ್ಯರು ಅದನ್ನು ಬೆಂಬಲಿಸಿದ ರೀತಿಯಲ್ಲೇ ಟಿಕಾಯತ್ ಕಣ್ಣೀರಿನ ವಿಡಿಯೋ ಕೂಡಾ ಸಾಮಾಜಿಕ ತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿತು. ಕೆಲವೇ ಗಂಟೆಗಳಲ್ಲಿ ಮೀರತ್, ಹಾಪುರ, ಮುಜಾಫರ್‌ನಗರ, ಶಾಮ್ಲಿ ಮತ್ತು ಇತರ ಭಾಗಗಳಲ್ಲಿ ಸಾವಿರಾರು ಜನ ಪಶ್ಚಿಮ ಉತ್ತರಪ್ರದೇಶದ ಗಾಜಿಪುರ ಗಡಿ ತಲುಪಲು ಮತ್ತು ಪ್ರತಿಭಟನಾಕಾರ ರೈತರೊಂದಿಗೆ ಸೇರಿಕೊಳ್ಳಲು ರಸ್ತೆಗೆ ಇಳಿದರು.
ಕುತೂಹಲಕಾರಿ ಸಂಗತಿಯೆಂದರೆ, ಪೊಲೀಸರು ಮತ್ತು ಸಿಆರ್‌ಪಿಎಫ್ ತಂಡ ಜಾಗ ಖಾಲಿ ಮಾಡುವಂತೆ ಪ್ರತಿಭಟನಾಕಾರರಿಗೆ ಹೇಳಿದಾಗ ಹಾಗೂ ಜನವರಿ 27ರ ಹೊತ್ತಿಗೆ ನಿರ್ಜನವಾಗತೊಡಗಿದ್ದ ಘಾಜಿಪುರದ ಪ್ರತಿಭಟನಾ ಸ್ಥಳವು ಅಂದೇ ಮಧ್ಯರಾತ್ರಿಯ ಹೊತ್ತಿಗೆ ರೈತರು ಮತ್ತು ಬೆಂಬಲಿಗರ ಉಪಸ್ಥಿತಿಯಿಂದ ಮತ್ತೆ ಭರ್ತಿಯಾಯಿತು. ಪ್ರತಿಭಟನೆಯನ್ನು ಹತ್ತಿಕ್ಕಲು, ಎಲ್ಲಾ ಗಡಿ ಪ್ರತಿಭಟನಾ ಸ್ಥಳಗಳಲ್ಲಿ ಬಿಗಿ ಭದ್ರತೆಯನ್ನು ಹಾಕಲಾಗಿತ್ತು. ಚೂಪು ಮುಳ್ಳು ತಂತಿಗಳ ಸುರುಳಿಗಳು, ಭಾರೀ ಲೋಹದ ತಡೆಗೋಡೆಗಳು, ಬಂಡೆಗಲ್ಲುಗಳ ಪದರುಗಳು ಮತ್ತು ಕಾಂಕ್ರೀಟ್ ತಡೆಗೋಡೆಗಳ ಸಾಲುಗಳು ಘಾಜಿಪುರ, ಸಿಂಗು ಮತ್ತು ಟಿಕ್ರಿ ಗಡಿಗಳಲ್ಲಿನ ಮುಖ್ಯ ರಸ್ತೆಗಳನ್ನು ತುಂಬಿಕೊಂಡಿದ್ದವು. ಪ್ರತಿಭಟನಾಕಾರರು ಸ್ಥಳದಲ್ಲಿ ಕುಳಿತುಕೊಳ್ಳದಂತೆ ಮೊಳೆಗಳನ್ನು ಅಳವಡಿಸುವ ಜೊತೆಗೆ ಮುಂದೆ ಸಾಗದಂತೆ ರೈತರನ್ನು ತಡೆಯಲು ರಸ್ತೆಗಳಿಗೆ ಅಡ್ಡಲಾಗಿ ಕಾಂಕ್ರೀಟ್ ಚಪ್ಪಡಿಗಳನ್ನು ಹಾಕಲಾಗಿತ್ತು.
ಆದರೆ, ಎರಡು ಆರ್ಗಳು - ರಾಕೇಶ್ ಟಿಕಾಯತ್ ಮತ್ತು ರಿಹಾನಾ - ಸರ್ಕಾರದ ಯೋಜನೆಗಳನ್ನು ಸಂಪೂರ್ಣವಾಗಿ ತಲೆಕೆಳಗು ಮಾಡಿದ್ದಲ್ಲದೇ ಅದನ್ನು ಇಕ್ಕಟ್ಟಿಗೆ ಸಿಲುಕಿಸಿದವು. ರಿಹಾನಾ ಅವರ "ನಾವು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ?!" ಎಂಬ ಟ್ವೀಟ್ ರೈತರ ಪ್ರತಿಭಟನೆ ಕುರಿತು ಜಾಗತಿಕ ಗಮನ ಸೆಳೆದಿದೆ. ಈ ಬಾರ್ಬೇಡಿಯನ್ ಗಾಯಕಿ ತನ್ನ 101 ದಶಲಕ್ಷ ಅನುಯಾಯಿಗಳಿಗೆ ಟ್ವಿಟ್ಟರ್‌ನಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ. ವಾಸ್ತವದಲ್ಲಿ ಪ್ರತಿಭಟನೆ ಹರಡದಂತಿರಲು ಸರ್ಕಾರ ಎಲ್ಲಾ ವಿಧಾನಗಳನ್ನು ಪ್ರಯತ್ನಿಸಿದರೂ, ಇದಕ್ಕಾಗಿ ಕೆಲವು ಖಾತೆಗಳನ್ನು ನಿರ್ಬಂಧಿಸಲು ಪ್ರಯತ್ನಿಸಿದರೂ ಸಹ, ಜಾಗತಿಕ ನಾಯಕರು ಮತ್ತು ಪ್ರಸಿದ್ಧ ವ್ಯಕ್ತಿಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಬಂದ ಪ್ರತಿಕ್ರಿಯೆಗಳಿಂದಾಗಿ, ತನ್ನ ಪ್ರಯತ್ನದಲ್ಲಿ ಅದು ಸ್ಪಷ್ಟವಾಗಿ ಸೋಲು ಕಂಡಿದೆ.
ನಂತರ ಉಂಟಾದ ಬೆಳವಣಿಗೆಗಳು ಅಸಾಧಾರಣವಾದವುಗಳು: ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ – ಮಿನಿಸ್ಟ್ರಿ ಆಫ್ ಎಕ್ಸಟರ್ನಲ್ ಅಫೇರ್ಸ್) ಹೇಳಿಕೆಯೊಂದನ್ನು ನೀಡಿ, ನಡೆಯುತ್ತಿರುವ ರೈತ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿದ ವಿದೇಶಿ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿತು. "ಈ ಪ್ರತಿಭಟನೆಗಳ ಮೇಲೆ ಪಟ್ಟಭದ್ರ ಹಿತಾಸಕ್ತಿ ಗುಂಪುಗಳು ತಮ್ಮ ಕಾರ್ಯಸೂಚಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವುದನ್ನು ನೋಡುವುದು ದುರದೃಷ್ಟಕರ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿತು. "ಅಂತಹ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಮುಂದಾಗುವ ಮೊದಲು, ಸತ್ಯ ಏನೆಂಬುದನ್ನು ತಿಳಿದುಕೊಂಡಿರಬೇಕು ಹಾಗೂ ಮುಂದಿರುವ ಸಮಸ್ಯೆಗಳ ಬಗ್ಗೆ ಸರಿಯಾದ ತಿಳುವಳಿಕೆ ಹೊಂದಿರಬೇಕು ಎಂದು ನಾವು ಒತ್ತಾಯಿಸುತ್ತೇವೆ. ಸಂವೇದನಾಶೀಲ ಸಾಮಾಜಿಕ ಮಾಧ್ಯಮ ಹ್ಯಾಶ್‌ಟ್ಯಾಗ್‌ಗಳು ಮತ್ತು ಕಾಮೆಂಟ್‌ಗಳ ಪ್ರಲೋಭನೆಗಳು, ವಿಶೇಷವಾಗಿ ಖ್ಯಾತನಾಮರು ಬಳಸಿದಾಗ, ಅವು ನಿಖರವಾಗಿರುವುದಿಲ್ಲ ಅಥವಾ ಜವಾಬ್ದಾರಿಯುತವಾಗಿರುವುದಿಲ್ಲ” ಎಂದು ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಈ ಹೇಳಿಕೆಯಲ್ಲಿ ಎರಡು ಸಾಮಾಜಿಕ ಮಾಧ್ಯಮ ಹ್ಯಾಶ್‌ಟ್ಯಾಗ್‌ಗಳಿವೆ: “#ಇಂಡಿಯಾಟುಗೆದರ್” ಮತ್ತು “#ಇಂಡಿಯಾಅಗೈನಸ್ಟ್‌ಪ್ರೊಪಗಂಡಾ”. ನಂತರ ಈ ಹ್ಯಾಶ್‌ಟ್ಯಾಗ್‌ಗಳು ಹೆಚ್ಚಿನ ಭಾರತೀಯ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಇತರ ನಾಯಕರಿಂದ ಬಳಸಲ್ಪಟ್ಟವು. ಅನೇಕ ಭಾರತೀಯ ಸೆಲೆಬ್ರಿಟಿಗಳು ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಈ ವಿಷಯದ ಬಗ್ಗೆ ಪೋಸ್ಟ್ ಮಾಡಿ, ಯಾವುದೇ "ಅಪಪ್ರಚಾರ"ಕ್ಕೆ ಬಲಿಯಾಗದಂತೆ ಜನರನ್ನು ಆಗ್ರಹಿಸಿದರು.
ಗಡಿಗಳಲ್ಲಿ ಕಾಂಕ್ರೀಟ್ ಅಡೆತಡೆಗಳನ್ನು ಒಡ್ಡುವುದರಿಂದ ಹಿಡಿದು ಅಂತರ್ಜಾಲವನ್ನು ಸ್ಥಗಿತಗೊಳಿಸುವವರೆಗೆ, ಪ್ರತಿಭಟನೆಗಳನ್ನು ನಿಭಾಯಿಸಲು ಸರಕಾರ ಪ್ರಯತ್ನಿಸಿತು. ಆದರೆ, ಅದಾಗಲೇ ಕೈಮೀರಿ ಹೋಗಿತ್ತು. ಸಮಸ್ಯೆಯನ್ನು ನಿರ್ವಹಿಸುವ ಬದಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಹೇಳಿಕೆಯು ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಿದೆ, ಈ ನಡೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಜನ, ಜಗತ್ತಿನ ವಿವಿಧ ದೇಶಗಳ ಚುನಾಯಿತ ಜನಪ್ರತಿನಿಧಿಗಳು ಈ ಕುರಿತು ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯಿಸದಿದ್ದ ಸರಕಾರ ಒಬ್ಬ ವ್ಯಕ್ತಿಯ ಅಭಿಪ್ರಾಯಕ್ಕೆ ಈ ಪರಿ ಸ್ಪಂದಿಸುವ ಅವಶ್ಯಕತೆಯಿತ್ತೆ? ಎಂದು ಕೇಳುತ್ತಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಿವೃತ್ತ ರಾಜತಾಂತ್ರಿಕ ಕೆ.ಸಿ. ಸಿಂಗ್ ಅವರು, “ಎಂಇಎ ಮಾಜಿ ವಕ್ತಾರನಾಗಿ ಹೇಳುವುದಾದರೆ, ಇದರ ನಿಖರತೆಯ ಕೊರತೆಯಿಂದ ನನಗೆ ಬೇಸರವಾಗಿದೆ. ಈ ಹೇಳಿಕೆ ಎಲ್ಲೋ ಒಂದು ಕಡೆಯಿಂದ ಬಂದಿದ್ದು, ಸೂಚನೆಯ ಪ್ರಕಾರ ಅದನ್ನು ಬಿಡುಗಡೆ ಮಾಡಲಾಗಿದೆಯಷ್ಟೇ” ಎಂದು ಟ್ವೀಟ್ ಮಾಡಿದ್ದಾರೆ.
ಇದು ಭಾರತದ "ಆಂತರಿಕ ವಿಷಯ" ಎಂಬ ಸರ್ಕಾರದ ನಿಲುವನ್ನು ಹಲವಾರು ವೀಕ್ಷಕರು ಮತ್ತು ರಾಜಕಾರಣಿಗಳು ಟೀಕಿಸಿದ್ದಾರೆ. ರಾಜಕೀಯ ವಿಶ್ಲೇಷಕ ಮತ್ತು ಬರಹಗಾರ ತವ್ಲೀನ್ ಸಿಂಗ್ ಅವರು: "ಮ್ಯಾನ್ಮಾರ್‌ನಲ್ಲಿನ ದಂಗೆಯನ್ನು ಭಾರತ ಸರ್ಕಾರ ಖಂಡಿಸಿದರೆ ಅದು ಆ ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆಯೇ? ನಿನ್ನೆ ರಿಹಾನಾ ವಿರುದ್ಧ ಮಾತನಾಡಿದ ಭಾರತೀಯ ಗಣ್ಯರು ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕು" ಎಂದಿದ್ದಾರೆ.
ಹವಾಮಾನ ಕಾರ್ಯಕರ್ತೆ ಗ್ರೆಟಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ ನಂತರ ಪರಿಸ್ಥಿತಿ ಮತ್ತಷ್ಟು ಅತಿರೇಕಕ್ಕೆ ಹೋಯಿತು. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸರು, ಆಕೆ ಹಂಚಿಕೊಂಡಿರುವ ರೈತರ ಪ್ರತಿಭಟನೆ ಕುರಿತ ಟೂಲ್‌ಕಿಟ್ ಸೃಷ್ಟಿ ಮಾಡಿದವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ವ್ಯತಿರಿಕ್ತ ಪ್ರತಿಕ್ರಿಯೆಗಳ ಹಿನ್ನೆಲೆ ಈ ಟ್ವೀಟ್‌ಗಳಿಗೆ ಸರ್ಕಾರದ ತ್ವರಿತ ಪ್ರತಿಕ್ರಿಯೆ ಅಗತ್ಯವಿತ್ತೆ ಎಂದು ಅನೇಕರು ಯೋಚಿಸುವಂತಾಗಿದೆ. ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ಕೋಮು ಹಿಂಸಾಚಾರಗಳು, ಸಿಎಎ ಮತ್ತು ಎನ್‌ಆರ್‌ಸಿಯಂತಹ ಕಾನೂನುಗಳು, ವಿದ್ಯಾರ್ಥಿಗಳ ಮೇಲಿನ ದೇಶದ್ರೋಹ ಪ್ರಕರಣಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರತ ಟೀಕೆಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಯಾವುದೇ ಸಮಯದಲ್ಲಿ ತನ್ನ ಪಾಡಿಗೆ ತಾನು ಇಲ್ಲವಾಗಲಿದ್ದ ರೈತ ಪ್ರತಿಭಟನೆಗಳನ್ನು ಅದು ಜಾಗತಿಕ ಪರಿಶೀಲನೆ ಇಲ್ಲದೆ ಖಂಡಿತಾ ನಿಭಾಯಿಸಬಹುದಿತ್ತು.