ಪ್ರಯಾಗರಾಜ್( ಉತ್ತರಪ್ರದೇಶ): ಎನ್‌ಕೌಂಟರ್‌ನಲ್ಲಿ ಹತರಾದ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸದ್ ಅಂತ್ಯಕ್ರಿಯೆ ಇಂದು ಇಲ್ಲಿನ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಸಾದ್ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲು ಅಧಿಕಾರಿಗಳು ಕ್ರಮಕೈಗೊಳ್ಳುತ್ತಿದ್ದಾರೆ. ಜೈಲಿನಲ್ಲಿರುವ ಅತೀಕ್ ಅಹ್ಮದ್, ಆತನ ಸಹೋದರ ಅಶ್ರಫ್ ಅಹ್ಮದ್ ಮತ್ತು ಅಸದ್ ಸಹೋದರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ.
ಉತ್ತರಪ್ರದೇಶದ ಝಾನ್ಸಿಯ ಪರಿಚ್ಚಾ ಅಣೆಕಟ್ಟಿನ ಬಳಿ ಯುಪಿ ಎಸ್‌ಟಿಎಫ್ ನಡೆಸಿದ ಎನ್‌ಕೌಂಟರ್‌ನಲ್ಲಿ ಅಸದ್ ಅಹ್ಮದ್ ಮತ್ತು ಅವರ ಸಹಾಯಕ ಗುಲಾಮ್ ಹತ್ಯೆಗೀಡಾಗಿದ್ದಾರೆ. ಫೆಬ್ರವರಿ 24 ರಂದು ಪ್ರಯಾಗರಾಜ್‌ನಲ್ಲಿ ವಕೀಲ ಉಮೇಶ್ ಪಾಲ್ ಮತ್ತು ಇಬ್ಬರು ಪೊಲೀಸರನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಂತರ ಮೃತ ಆರೋಪಿಗಳು ಕಳೆದ 50 ದಿನಗಳಿಂದ ಪರಾರಿಯಾಗಿದ್ದರು. 2005 ರಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಶಾಸಕ ರಾಜು ಹತ್ಯೆಗೆ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಇದರಲ್ಲಿ ಅತೀಕ್ ಅಹ್ಮದ್ ಆರೋಪಿಯಾಗಿದ್ದ.
ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಅಸದ್ ಅಹ್ಮದ್‌ನ ಎನ್‌ಕೌಂಟರ್ ಉತ್ತರಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದ್ದು, ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದೆ. ಸಮಾಜವಾದಿ ಪಕ್ಷ , ಬಹುಜನ ಸಮಾಜ ಪಕ್ಷ ಬಿಎಸ್‌ಪಿ, ತೃಣಮೂಲ ಕಾಂಗ್ರೆಸ್ ಮತ್ತು ಮಜ್ಲಿಸ್-ಇತ್ತೆಹಾದುಲ್-ಮುಸ್ಲಿಮೀನ್ -ಎಂಐಎಂ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.
ಮಾಫಿಯಾ ನಿರ್ಮೂಲನೆಗೆ ಸಿಎಂ ಯೋಗಿ ಪಣ: ಆದರೆ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ , ಅಸದ್ ಅಹ್ಮದ್ ಎನ್‌ಕೌಂಟರ್ ಮಾಡಿದ ಯುಪಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಕೆಲಸಕ್ಕೆ ಶಹಬ್ಬಾಸ್ಗಿರಿ ಕೊಟ್ಟಿದ್ದಾರೆ. ತಮ್ಮ ರಾಜ್ಯದಲ್ಲಿ ಮಾಫಿಯಾವನ್ನು ತೊಡೆದುಹಾಕುವವರೆಗೆ ತಮ್ಮ ಸರ್ಕಾರವು ವಿಶ್ರಮಿಸುವುದಿಲ್ಲ ಎಂದು ಅವರು ಮತ್ತೆ ಮತ್ತೆ ಪುನರುಚ್ಛರಿಸಿದ್ದಾರೆ. ಯುಪಿಯಲ್ಲಿ ದರೋಡೆಕೋರರ ಯುಗ ಮುಗಿದಿದೆ ಮತ್ತು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಯಾವುದೇ ಬೆಲೆ ತೆತ್ತಾದರೂ ಸರಿದಾರಿಗೆ ತರುವುದಾಗಿ ಯೋಗಿ ಹೇಳಿದ್ದಾರೆ.
ನಕಲಿ ಎನ್‌ಕೌಂಟರ್ ಎಂದ ಅಖಿಲೇಶ್ ಯಾದವ್: ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅಸದ್ ಎನ್‌ಕೌಂಟರ್ 'ನಕಲಿ' ಎಂದು ಕರೆದರೆ, ಬಿಎಸ್‌ಪಿ ವರಿಷ್ಠೆ ಮಾಯಾವತಿ ಹತ್ಯೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ. ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಿಜೆಪಿಯು ಸಂವಿಧಾನವನ್ನು 'ಎನ್‌ಕೌಂಟರ್' ಮಾಡುತ್ತಿದೆ ಮತ್ತು ದೇಶದಾದ್ಯಂತ ಕಾನೂನು ಸುವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಟಿಎಂಸಿ ನಾಯಕ ಮಹುವಾ ಮೊಯಿತ್ರಾ ಅವರು ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಯುಪಿಯಲ್ಲಿ ಸಂಪೂರ್ಣ ಕಾನೂನುಬಾಹಿರೆ ಕೆಲಸಗಳು ನಡೆಯುತ್ತಿವೆ ಎಂದು ಆರೋಪಿಸಿದ್ದು, ಬಿಜೆಪಿ ಜಂಗಲ್ ರಾಜ್ ಅನ್ನು ಮುನ್ನಡೆಸುತ್ತಿದೆ ಎಂದು ಟೀಕಿಸಿದ್ದಾರೆ.
ಉಮೇಶ್ ಪಾಲ್ ಹತ್ಯೆಯ ನಂತರ ಆರೋಪಿಗಳಿಗಾಗಿ ಹಲವು ರಾಜ್ಯಗಳಲ್ಲಿ ಭಾರೀ ಶೋಧ ನಡೆಸಲಾಗಿತ್ತು. ಅಂತಿಮವಾಗಿ ಉತ್ತರಪ್ರದೇಶ ಪೊಲೀಸ್ ವಿಶೇಷ ಪಡೆ ಎಸ್‌ಟಿಎಫ್ ತಂಡ ಎನ್‌ಕೌಂಟರ್ ಮಾಡಿದೆ. ಡೆಪ್ಯುಟಿ ಎಸ್‌ಪಿ ನಾವೆಂದು ಮತ್ತು ಡಿವೈಎಸ್ಪಿ ವಿಮಲ್ ಈ ಎನ್‌ಕೌಂಟರ್ ನೇತೃತ್ವ ವಹಿಸಿದ್ದರು. ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು - ಬ್ರಿಟಿಷ್ ಬುಲ್ ಡಾಗ್ ರಿವಾಲ್ವರ್ ಮತ್ತು ವಾಲ್ಟರ್ ಪಿ 88 ಪಿಸ್ತೂಲ್ ಗಳನ್ನು ಹತರಿಂದ ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಟಿಎಫ್ ಮಾಹಿತಿ ನೀಡಿದೆ.
ಇದನ್ನು ಓದಿ: ಭಯೋತ್ಪಾದಕರ ಸಂಘಟನೆ ಜೊತೆ ಅತಿಕ್ ಅಹ್ಮದ್ ನೇರ ಸಂಪರ್ಕ.. ನಮಗೆ ಯೋಗಿ ಮೇಲೆ ನಂಬಿಕೆಯಿದೆ ಎಂದ ಮೃತ ವಕೀಲನ ಕುಟುಂಬ