ಸೋನಿಯಾ ಗಾಂಧಿ ನೇತೃತ್ವದ ರಾಜೀವ್ ಗಾಂಧಿ ಫೌಂಡೇಶನ್ (ಆರ್ಜಿಎಫ್)ಗೆ ಚೀನಾ ನೀಡಿದ ದೇಣಿಗೆ ಬಗ್ಗೆ ಬಹಿರಂಗವಾಗುತ್ತಿದ್ದಂತೆ ಭಾರತೀಯ ಜನತಾ ಪಕ್ಷದ ಬಗ್ಗೆ ಕಾಂಗ್ರೆಸ್ ಪಕ್ಷ ಪ್ರತಿದಾಳಿ ನಡೆಸಿದೆ. ಆದರೆ, ಎರಡು ಪ್ರಮುಖ ಪಕ್ಷಗಳ ಮಧ್ಯದ ಕೆಸರೆರಚಾಟ ಎಂದು ಇದನ್ನು ಬಿಂಬಿಸಲು ಪ್ರಯತ್ನಿಸಿದರೂ, ಸಾರ್ವಜನಿಕರ ಮನಸಿನಲ್ಲಿ ಮೂಡಿಸಿದ ಕೆಲವು ವಾಸ್ತವ ಪ್ರಶ್ನೆಗಳನ್ನು ಮರೆ ಮಾಡಲು ಸಾಧ್ಯವಾಗದು.
ಮೊದಲಿಗೆ, ನೆಹರೂ - ಗಾಂಧಿ ಕುಟುಂಬದ ಸಂಸ್ಥೆ ಆರ್ಜಿಎಫ್ಗೆ ಚೀನಾದಿಂದ ದೇಣಿಗೆಯನ್ನು ಏಕೆ ಕಾಂಗ್ರೆಸ್ ಸ್ವೀಕರಿಸಿತು ಎಂಬುದಕ್ಕೆ ಉತ್ತರಿಸಬೇಕಾಗುತ್ತದೆ. ಭಾರತದ ಸ್ನೇಹಿತ ಎಂದು ಹೇಳಿಕೊಂಡು ಹಲವು ದಶಕಗಳಿಂದಲೂ ಭಾರತದ ಭೌಗೋಳಿಕ ಸಮಗ್ರತೆಗೆ ಪದೇ ಪದೆ ಸವಾಲು ಎಸೆಯುತ್ತಲೇ ಇರುವ ಚೀನಾದಿಂದ ಏಕೆ ದೇಣಿಗೆ ಸ್ವೀಕರಿಸಲಾಗಿದೆ ಎಂದು ಉತ್ತರಿಸಬೇಕಾಗಿದೆ. ಅದಕ್ಕೂ ಪ್ರಮುಖವಾದ ಸಂಗತಿಯೆಂದರೆ, 2008 ರಲ್ಲಿ ಚೀನಾದ ಕಮ್ಯೂನಿಸ್ಟ್ ಪಾರ್ಟಿ (ಸಿಸಿಪಿ) ಜೊತೆಗೆ ಮಾಡಿಕೊಂಡ ಒಪ್ಪಂದದ ವಿವರಗಳನ್ನು ಬಹಿರಂಗಗೊಳಿಸಲು ಕಾಂಗ್ರೆಸ್ ಪಕ್ಷ ಸಮ್ಮತಿಸದೇ ಇರುವುದು ಅತ್ಯಂತ ಅಚ್ಚರಿಯ ಸಂಗತಿಯಾಗಿದೆ. ಪಕ್ಷದ ಪರವಾಗಿ ಈ ಒಪ್ಪಂದಕ್ಕೆ ರಾಹುಲ್ ಗಾಂದಿ ಸಹಿ ಮಾಡಿದ್ದರು. ಆಗ ರಾಹುಲ್ ಗಾಂಧಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸಿಸಿಪಿ ಅಧಿಕಾರಿಗಳು ಮತ್ತು ಪಕ್ಷದ ಅಧ್ಯಕ್ಷೆ ಹಾಗೂ ತಾಯಿ ಸೋನಿಯಾ ಗಾಂಧಿ ಕೂಡ ಈ ಸಮಯದಲ್ಲಿ ಹಾಜರಿದ್ದರು. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಕೂಡ ಹಾಜರಿದ್ದರು. ಸಾರ್ವಜನಿಕರಿಂದ ಇಷ್ಟು ಒತ್ತಡ ಕೇಳಿ ಬಂದಾಗಲೂ ಒಪ್ಪಂದವನ್ನು ಬಿಡುಗಡೆ ಮಾಡಲು ನೆಹರೂ ಗಾಂಧಿ ಕುಟುಂಬ ಹಿಂಜರಿಯುತ್ತಿದೆ.
ಒಪ್ಪಂದ ನಡೆದ ಸಂದರ್ಭದ ಚಿತ್ರವನ್ನು ಪ್ರಕಟಿಸಿದ ಮಹೇಶ್ ಜೇಠ್ಮಲಾನಿ, ಒಪ್ಪಂದದ ವಿವರಗಳನ್ನು ಪಕ್ಷ ಬಹಿರಂಗಗೊಳಿಸಬೇಕು ಮತ್ತು ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಬೇಕು ಎಂದಿದ್ದಾರೆ. ಭಾರತದ ಕಾನೂನಿನ ಪ್ರಕಾರ ಚೀನಾ ವಿರೋಧಿ ದೇಶ. ಸಿಸಿಪಿ ಒಂದು ಶತ್ರು ದೇಶದ ಸಂಘಟನೆ. ಭಾರತದ ಭೂಭಾಗವನ್ನು ಒತ್ತುವರಿ ಮಾಡಲು ಸಿಸಿಪಿ ಬೆಂಬಲಿಸುತ್ತದೆ ಮತ್ತು ಇತರ ಭೂಭಾಗವನ್ನು ನಾವು ವಶಪಡಿಸಿಕೊಂಡಿದ್ದೇವೆ ಎಂದು ಹೇಳುತ್ತದೆ. ಸಿಸಿಪಿ ಜೊತೆಗೆ ಮಾಡಿಕೊಂಡ ಯಾವುದೇ ಒಪ್ಪಂದವೂ ಯುಎಪಿಎ ಕಾಯ್ದೆ ಅಡಿ ಅಕ್ರಮ ಮತ್ತು ಶಿಕ್ಷಾರ್ಹ ಚಟುವಟಿಕೆ ಎಂದೂ ಅವರು ಹೇಳಿದ್ದಾರೆ. 1976 ಮತ್ತು 2010ರ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಗಳ ಅಡಿ ಸಂಭಾವ್ಯ ಅಪರಾಧಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕಿದೆ ಎಂದೂ ಅವರು ಹೇಳಿದ್ದಾರೆ.
ಇತ್ತೀಚೆಗೆ ಲಡಾಖ್ನಲ್ಲಿ ಚೀನಾ ಒಳನುಸುಳುವಿಕೆಗೆ ಪ್ರಯತ್ನ ನಡೆಸಿದಾಗ ಅದನ್ನು ತಡೆಯುವ ಪ್ರಯತ್ನದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಸನ್ನಿವೇಶದಲ್ಲಿ ಈ ಪ್ರಶ್ನೆಗಳು ಹೆಚ್ಚು ಪ್ರಸ್ತುತವೆನಿಸುತ್ತವೆ.
ಈ ಅವ್ಯವಹಾರಕ್ಕೆ ಒಂದು ದೇಶೀಯ ದೃಷ್ಟಿಕೋನವೂ ಇದೆ. ಈ ಕುಟುಂಬ ಒಡೆತನದ ಟ್ರಸ್ಟ್ಗೆ ಹರಿದು ಬಂದ ಹಣ ಇನ್ನಷ್ಟು ಆಘಾತಕಾರಿ ಅಂಶವನ್ನು ಬಹಿರಂಗಗೊಳಿಸುತ್ತಿದೆ. ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ನಿಧಿ (ಪಿಎಂಎನ್ಆರ್ಎಫ್) ಇಂದ ಈ ಸಂಸ್ಥೆಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ. 2004 ರಿಂದ 2014 ರ ಅವಧಿಯಲ್ಲಿ ಕೇಂದ್ರದಲ್ಲಿ ಒಕ್ಕೂಟ ಸರ್ಕಾರ ಅಧಿಕಾರದಲ್ಲಿದ್ದಾಗ ಸಂಕಷ್ಟದಲ್ಲಿರುವ ಜನರಿಗಾಗಿ ನೀಡಲಾದ ಹಣವನ್ನು ವಿಪತ್ತು ನಿಧಿಯಿಂದ ಆರ್ಜಿಎಫ್ಗೆ ಈ ಹಣ ವರ್ಗಾವಣೆ ಮಾಡಲಾಗಿತ್ತು. ನೆಹರೂ-ಗಾಂಧಿಗಳ ಜೊತೆಗೆ ಆಗ ಪ್ರಧಾನಿಯಾಗಿದ್ದ ಡಾ. ಮನಮೋಹನ ಸಿಂಗ್ ಕೂಡ, ತನ್ನ ನೇರ ನಿಗಾದ ಅಡಿ ಸಾರ್ವಜನಿಕ ಹಣವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟರು ಎಂಬುದನ್ನು ವಿವರಿಸಬೇಕಿದೆ. ಅವರು ಪ್ರಧಾನಿಯಾಗಿದ್ದಾಗ ಹಲವು ಕೇಂದ್ರ ಸರ್ಕಾರಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಆರ್ಜಿಎಫ್ಗೆ ಭಾರಿ ಪ್ರಮಾಣದ ಅನುದಾನವನ್ನು ಯಾಕೆ ನೀಡಿದವು ಎಂದೂ ಅವರು ವಿವರಿಸಬೇಕಿದೆ.
ಚೀನಾ ಸರ್ಕಾರದಿಂದ ಕಾಂಗ್ರೆಸ್ ಪಕ್ಷಕ್ಕೆ ನೀಡಿದ ದೇಣಿಗೆಯ ವಿಚಾರ ಈಗ ಭಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ವಹಿವಾಟಿನ ಪ್ರಾಮಾಣಿಕತೆಯ ಬಗ್ಗೆ ಮತ್ತು ಭಾರತದ ಸಮಗ್ರತೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಪಕ್ಷವು, ತನ್ನ ಪಕ್ಷದ ಮುಖಂಡರು ಮಾಡಿದ ಅಪಾರ ತ್ಯಾಗ ಮತ್ತು ಬಲಿದಾನಗಳಿಂದಾಗಿ ಜನರ ವ್ಯಾಪಕ ಮನ್ನಣೆ ಹೊಂದಿದೆ. ಪಕ್ಷದ ಮಾರ್ಗದರ್ಶಕರಂತಿದ್ದ ಮಹಾತ್ಮ ಗಾಂಧಿ, ಜವಾಹರ ಲಾಲ್ ನೆಹರು, ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಸಾವಿರಾರು ಗಣ್ಯರು ಸ್ವಾತಂತ್ರ್ಯದ ಆರಂಭಿಕ ದಶಕಗಳಲ್ಲಿ ದೇಶಕ್ಕಾಗಿ ಸೇವೆಯನ್ನು ಮುಡಿಪಾಗಿಟ್ಟಿದ್ದರು. ಆದರೆ, ಇಂದಿರಾ ಗಾಂಧಿಯ ನಂತರದಲ್ಲಿ ಈ ಗೌರವ ಕುಂದುತ್ತ ಬಂತು. ಈ ಅವಧಿಯಲ್ಲಿ ಪಕ್ಷವು ಖಾಸಗಿ ಕಂಪನಿಯಾಯಿತು. ನೆಹರು-ಗಾಂಧಿ ಕುಟುಂಬವೇ ಇಡೀ ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು ಮತ್ತು ಕುಟುಂಬದ ಅಭದ್ರತೆಗಳು ಮತ್ತು ಸಂಕುಚಿತತೆಗಳು ಪಕ್ಷದ ಚಟುವಟಿಕೆಯನ್ನು ಬಾಧಿಸಲು ಆರಂಭಿಸಿದವು. ಇದೇ ರೀತಿ, ಭಾರತವನ್ನು ಅವರು ಸರ್ವಾಧಿಕಾರಿ ದೇಶವನ್ನೂ ಆಗಿಸಿತು ಮತ್ತು ಕುಟುಂಬದ ಹೊರಗಿನ ನಾಯಕರು ಮಾಡಿದ ಸೇವೆಯನ್ನು ಗೌಣವಾಗಿಸಲು ಪಡೆಯೇ ಈ ನಿಟ್ಟಿನಲ್ಲಿ ಕೆಲಸ ಮಾಡಿತು.
ಇದರಿಂದಾಗಿ ಪ್ರತಿ ಸರ್ಕಾರಿ ಯೋಜನೆ, ಸಾರ್ವಜನಿಕ ಕಟ್ಟಡ, ರಾಷ್ಟ್ರೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ವಿದ್ಯಾರ್ಥಿವೇತನಗಳು ಮತ್ತು ಕ್ರೀಡೆ ಕಾರ್ಯಕ್ರಮಗಳನ್ನೂ ಈ ಕುಟುಂಬದ ಹೆಸರಿನಲ್ಲೇ ಆರಂಭಿಸುವಂತಾಯಿತು. ಅದು ಒಂದು ಹಂತಕ್ಕೆ ಯಾವ ಮಟ್ಟಕ್ಕೆ ಸಾಗಿತೆಂದರೆ, ದೇಶದ ದಕ್ಷಿಣದ ತುತ್ತ ತುದಿಯಾದ ಪಿಗ್ಮೋಲಿಯನ್ ಪಾಯಿಂಟ್ ಅನ್ನು ಇಂದಿರಾ ಪಾಯಿಂಟ್ ಎಂದೂ ಮರುನಾಮಕರಣ ಮಾಡಲಾಯಿತು. ಇನ್ನೊಂದೆಡೆ ಹಿಮಾಲಯದ ತುತ್ತ ತುದಿಯನ್ನು ರಾಜೀವ್ ಪೀಕ್ ಎಂದೂ ಕರೆಯಲಾಯಿತು. ಕುಟುಂಬವನ್ನು ಮೆಚ್ಚಿಸಲು ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳು ಯಾವ ಮಟ್ಟಿಗೆ ಪೈಪೋಟಿಗೆ ಬಿದ್ದಿದ್ದರು ಎಂದರೆ, ಹಸುಗಳನ್ನು ನೀಡುವ ಹರ್ಯಾಣ ಸರ್ಕಾರದ ಯೋಜನೆಗೆ ಇಂದಿರಾ ಗಾಂಧಿ ಸ್ಕೀಮ್ ಎಂದೂ ಪಾಂಡಿಚೆರಿಯಲ್ಲಿ ಉಪಾಹಾರ ಸ್ಕೀಮ್ ಮತ್ತು ಮಹಾರಾಷ್ಟ್ರದಲ್ಲಿ ಸ್ಲಂನಲ್ಲಿರುವ ಫುಟ್ಬಾಲ್ ಟೂರ್ನಮೆಂಟ್ಗೆ ರಾಜೀವ್ ಗಾಂಧಿ ಹೆಸರನ್ನೂ ಇಟ್ಟಿದ್ದರು.
ಇದೆಲ್ಲವೂ ಕುಟುಂಬ ಸಂಕುಚಿತ ಮನೋಸ್ಥಿತಿಯನ್ನು ತೋರಿಸುತ್ತದೆ. ದಶಕಗಳಿಂದಲೂ ಈ ಅವ್ಯವಹಾರಗಳನ್ನು ಯಾರೂ ಪ್ರಶ್ನಿಸಿರಲಿಲ್ಲ. ಹೀಗಾಗಿ ತನ್ನ ಕುಟುಂಬದ ಟ್ರಸ್ಟ್ ಹೆಸರಿಗೆ ಶತ್ರುವಿನಿಂದಲೂ ದೇಣಿಗೆ ಪಡೆಯುವ ಮಟ್ಟಕ್ಕೆ ಸಾಗಿತು. ಕುಟುಂಬ ಯಾವ ಮಟ್ಟಿಗೆ ವ್ಯಾಪಿಸಿಕೊಂಡಿತ್ತು ಎಂದರೆ, ಬೀಜಿಂಗ್ ಒಲಿಂಪಿಕ್ಗೆ ಪ್ರಧಾನಿ ಮನಮೋಹನ್ ಸಿಂಗ್ ತೆರಳಿರಲಿಲ್ಲ. ಬದಲಿಗೆ, ಸೋನಿಯಾ ಗಾಂಧಿ ತೆರಳಿದ್ದರು. ಸೋನಿಯಾ, ಅವರ ಪುತ್ರ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಮತ್ತು ಅಳಿಯ ರಾಬರ್ಟ್ ವಾದ್ರಾಗೆ ಚೀನಾ ಆತಿಥ್ಯ ನೀಡಿತ್ತು. ಈ ಬಗ್ಗೆ ಟ್ವೀಟ್ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ “ಇದು ಪ್ರಧಾನಿ ಕಚೇರಿಗೆ ಮಾಡಿದ ಅವಮಾನವಷ್ಟೇ ಅಲ್ಲ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಿದ್ಧಾಂತವನ್ನೇ ಗೌಣವಾಗಿಸಿದೆ” ಎಂದಿದ್ದರು.
ಗಾಲ್ವಾನ್ನಲ್ಲಿ ದೇಶದ ಪರ ಹೋರಾಡಿ 20 ಯೋಧರು ಹುತಾತ್ಮರಾದರೂ ಚೀನಾವನ್ನು ಟೀಕಿಸಲು ಕಾಂಗ್ರೆಸ್ ಪಕ್ಷ ಒಪ್ಪದೇ ಇರುವುದನ್ನು ಈ ದೇಣಿಗೆ, ಒಪ್ಪಂದ ಮತ್ತು ನೆಹರು - ಗಾಂಧಿ ಕುಟುಂಬಕ್ಕೆ ಚೀನೀಯರು ಹಾಕಿದ ಕೆಂಪು ಹಾಸಿನ ಸ್ವಾಗತದ ಹಿನ್ನೆಲೆಯಲ್ಲಿ ನಾವು ನೋಡಬೇಕು. ಆಗ ಎಲ್ಲ ಕೊಂಡಿಗಳೂ ಒಂದಕ್ಕೊಂದು ಸಂಪರ್ಕಿತಗೊಳ್ಳುತ್ತವೆ.
ಚೀನಾದ ಅಕ್ರಮಣಕಾರಿ ನೀತಿ, ಎಲ್ಎಸಿಯಲ್ಲಿ ಶಾಂತಿ ಕಾಪಾಡಿಕೊಳ್ಳುವ ಬಗ್ಗೆ ಒಪ್ಪಂದಗಳಿಗೆ ಸಹಿ ಹಾಕಿದ ನಂತರದಲ್ಲೂ ಅದಕ್ಕೆ ಬದ್ಧವಾಗದ ಮನಸ್ಥಿತಿಯ ಬಗ್ಗೆ ದೇಶದಲ್ಲಿ ತೀವ್ರ ಆಕ್ರೋಶ ಕೇಳಿಬಂದಿದೆ. ದೇಶದ ಭೌಗೋಳಿಕ ಸಮಗ್ರತೆಯನ್ನು ಕಾಯ್ದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನರು ಬಯಸುತ್ತಿದ್ದಾರೆ. ದುರಾದೃಷ್ಟವಶಾತ್, ಕಾಂಗ್ರೆಸ್ ಇದಕ್ಕೆ ಬೆಂಬಲ ನೀಡುತ್ತಿಲ್ಲ. ರಾಷ್ಟ್ರೀಯ ವಿಚಾರಧಾರೆಯ ವಿರುದ್ಧ ಯಾಕೆ ಕಾಂಗ್ರೆಸ್ ನಿಂತಿದೆ? ಪ್ರತಿ ಭಾರತೀಯನೂ ಈ ಪ್ರಶ್ನೆಯನ್ನು ಕೇಳಬೇಕು ಮತ್ತು ಉತ್ತರಕ್ಕಾಗಿ ಹುಡುಕಬೇಕು.
ಲೇಖಕರು - ಎ.ಸೂರ್ಯಪ್ರಕಾಶ್, ಪ್ರಸಾರ ಭಾರತಿ ಮಾಜಿ ಅಧ್ಯಕ್ಷ