ಹಿರೋಶಿಮಾದ ಮೇಲೆ ಮೊದಲ ಪರಮಾಣು ದಾಳಿ ನಡೆಸಿ ಇಂದಿಗೆ 6ಕ್ಕೆ ಭರ್ತಿ ಎಪ್ಪತ್ತೈದು ವರ್ಷ ತುಂಬಿದೆ. 1945ರಲ್ಲಿ ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ಪರಮಾಣು ಶಸ್ತ್ರಾಸ್ತ್ರ ಬಳಕೆ ಮಾಡಿದ ಬಳಿಕ ಮತ್ತೆ ಅಂತಹ ದುರ್ಘಟನೆ ಜಗತ್ತಿನಲ್ಲಿ ನಡೆದಿಲ್ಲ ಎಂಬುದು ಸಮಾಧಾನ ತರುವಂತಹ ಸಂಗತಿ. ಈ ಪರಮಾಣು ಹತ್ಯಾಕಾಂಡದಲ್ಲಿ 1,20,000 ಕ್ಕೂ ಹೆಚ್ಚು ಮುಗ್ಧ ಜಪಾನಿ ನಾಗರಿಕರು ಹತರಾದರು. ಲೆಕ್ಕ ಇಲ್ಲದಷ್ಟು ಮಂದಿ ಶಾಶ್ವತವಾಗಿ ವಿಕಲಾಂಗರಾದರು ಎಂದು ಅಂದಾಜಿಸಲಾಗಿದೆ. ಅಣುಬಾಂಬ್ ಸೃಷ್ಟಿಸಿದ ನರಕದಲ್ಲಿ ಬದುಕಿ ಉಳಿದವರು ಸತ್ತವರ ಬಗ್ಗೆ ಅಸೂಯೆ ಪಡುತ್ತಾರೆ ಎಂಬುದು ದುರಂತ ಸತ್ಯ.
1945 ರಿಂದ ಇಲ್ಲಿಯವರೆಗೆ ಇಡೀ 75 ವರ್ಷಗಳು ಸಾಗಿಬಂದ ಹಾದಿ ಸರಳವೇನೂ ಆಗಿರಲಿಲ್ಲ. ಆದರೆ, ಒಂದು ಎಡವಟ್ಟಿನ ಹೊರತಾಗಿ (1962ರ ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನ ಸಂದರ್ಭ) ಜಗತ್ತು ದೃಢ ಹೆಜ್ಜೆ ಇರಿಸಿತು. ಅದೃಷ್ಟವಶಾತ್ ಅಂದಿನ ಪ್ರಮುಖ ರಾಜಕೀಯ ಧ್ರುವಗಳಾಗಿದ್ದ ಯುಎಸ್ಎ ಮತ್ತು ಯುಎಸ್ಎಸ್ಆರ್ ತಗೆದುಕೊಂಡ ಮೆಚ್ಚುಗೆ ಸೂಚಿಸುವಂತಹ ವಿವೇಕಯುತ ನಿರ್ಧಾರದಿಂದ ವಿಶ್ವ ಈ ಹೆಜ್ಜೆ ಇಡಲು ಸಾಧ್ಯವಾಯಿತು. 1945ರ ಆಗಸ್ಟ್ 9ರಂದು ನಾಗಸಾಕಿ ಮೇಲೆ ಅಣುಬಾಂಬ್ ಸಿಡಿಸಿದ ಬಳಿಕ ಅಂತಹ ಇನ್ನೊಂದು ದುರ್ಘಟನೆಯಾಗಲಿ ಎಂದು ಯಾರೂ ಬಯಸಲಿಲ್ಲ.
ಆದರೂ, ಈಗಿನ ಜಾಗತಿಕ ಪರಮಾಣು ಸಂದರ್ಭವನ್ನು ಗಮನಿಸಿದರೆ, ಯಾವುದೇ ಕಳಂಕ ಇಲ್ಲದೇ ಹಿರೋಶಿಮಾದ 80ನೇ ವರ್ಷಾಚರಣೆಗೆ ಜಗತ್ತು ತನ್ನನ್ನು ಒಡ್ಡಿಕೊಳ್ಳುತ್ತದೆ ಎಂದು ನಿರೀಕ್ಷಿಸುವುದು ಸಾಧ್ಯ ಇಲ್ಲ. ಹಲವು ಕಗ್ಗಂಟಿನ ಎಳೆಗಳ ಜೊತೆಗೆ ಇತ್ತೀಚಿನ ಬೆಳವಣಿಗೆಯೊಂದು ಕೂಡ ಸೇರಿಕೊಂಡಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ( ಯುಎನ್‌ಎಸ್‌ಸಿ) ಸೋಮವಾರ ( ಆಗಸ್ಟ್ 3 ) ವಿಶ್ವಸಂಸ್ಥೆ ಸಲ್ಲಿಸಿದ ಗೋಪ್ಯವಾದ ವರದಿ ಪ್ರಕಾರ ಉತ್ತರ ಕೊರಿಯಾ ( ಪರಮಾಣು ನೀತಿ ಅನುಸರಿಸದ ದೇಶ ಎಂದು ಪರಿಗಣಿತ ) “ತನ್ನ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸಿಡಿತಲೆಗಳಿಗೆ ಅಳವಡಿಸಲು ಪುಟಾಣಿ ಗಾತ್ರದ ಪರಮಾಣು ಸಾಧನಗಳನ್ನು ಅಭಿವೃದ್ಧಿಪಡಿಸಿದೆ”.
ಈ ವರದಿಯ ಸತ್ಯಾಸತ್ಯತೆಯನ್ನು ಯುಎನ್‌ಎಸ್‌ಸಿ ಪರಿಶೀಲನೆ ನಡೆಸಲಿದೆ. ( ಆ ಮಂಡಳಿಗೆ ಜನವರಿ 2021 ರಲ್ಲಿ ಭಾರತ ಶಾಶ್ವತ ಸದಸ್ಯ ರಾಷ್ಟ್ರವಾಗಿ ಸೇರಲಿದೆ ), ಪಾಂಗೊಂಗ್ ರೀತಿಯ ಅತ್ಯಂತ ಪ್ರಕ್ಷುಬ್ಧ ಪ್ರದೇಶದಲ್ಲಿ ತನ್ನದೇ ಆದ ಭದ್ರತೆ ಖಚಿತಪಡಿಸಿಕೊಳ್ಳಲು ಭಾರತ ಕೈಗೊಂಡ ಕ್ರಮಗಳು ಏನೇನೂ ಸಾಲದಾಗಿ ತೋರುತ್ತಿವೆ. ವಿಶ್ವದ ಅತ್ಯಂತ ಶಕ್ತಿಶಾಲಿಯಾದ ಮತ್ತು ರಾಜಕೀಯವಾಗಿ ಪ್ರಾಮುಖ್ಯತೆ ಗಳಿಸಿದ ಹಾಗೂ ಅತ್ಯಂತ ಶ್ರೀಮಂತ ( ಜಿ 20 ) ಎನಿಸಿದ ರಾಷ್ಟ್ರಗಳು ( ವಿಶ್ವಸಂಸ್ಥೆಯ ಐದು ಕಾಯಂ ಸದಸ್ಯರ ದೇಶಗಳು ) ತಮ್ಮ ದೇಶದ ಭದ್ರತೆಗಾಗಿ ಈಗಲೂ ಕೂಡ ಪರಮಾಣು ಶಸ್ತ್ರಾಸ್ತ್ರವನ್ನೇ ನೆಚ್ಚಿಕೊಂಡಿವೆ. ಅಲ್ಲದೇ MAD ( Mutually Assured Destruction ) ಎಂದೇ ಕರೆಯಲಾಗುವ ಪರಸ್ಪರ ಭರವಸೆಯೊಂದರ ಮೇಲೆ ನಿಂತ ವಿನಾಶದ ಹಾದಿಯನ್ನೇ ಅವು ಆರಿಸಿಕೊಂಡಿವೆ.
ಸಂಕೀರ್ಣಮಯ ಅಭದ್ರತೆಯಿಂದಾಗಿ ಮೊದಲು ಡಬ್ಲ್ಯುಎಂಡಿ ( ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳು ) ಆಯುಧದ ಬಗೆಗಿನ ಜ್ಞಾನವನ್ನು ಪಡೆದುಕೊಳ್ಳಲಾಗುತ್ತದೆ. ಬಳಿಕ ತನ್ನ ಬತ್ತಳಿಕೆಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಆ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಹೆಚ್ಚಿನ ಮೌಲ್ಯ ಇರುವ ಶಸ್ತ್ರಾಸ್ತ್ರಕ್ಕೆ ಹೋಲಿಸಿದರೆ ಕಡಿಮೆ ಮೌಲ್ಯದ್ದು ಅದೇ ಮಟ್ಟದ ಸುರಕ್ಷತೆಯ ಸೂಚ್ಯಂಕ ಒದಗಿಸಬಹುದಾದರೆ ಅದನ್ನು ಉತ್ತಮವಾದುದು ಎಂದು ಪರಿಗಣಿಸಲಾಗುತ್ತದೆ. ಪರಮಾಣು ಕ್ಷೇತ್ರದ ಪ್ರಮುಖ ಶಕ್ತಿಗಳ ನಡುವೆ ಕೂಡ ಸಮರ್ಪಕತೆಯ ಅನ್ವೇಷಣೆ ಎಂಬುದು ಅಸ್ಪಷ್ಟವಾಗಿ ಉಳಿದಿದೆ. ಆ ಮಟ್ಟಿಗೆ ಉತ್ತರ ಕೊರಿಯಾ ಮತ್ತು ಅದು ತನಗೆ ಸರಿಸಾಟಿ ಎಂದು ಭಾವಿಸಿದ ಪರಮಾಣು ಸಹವರ್ತಿಗಳಾದ ( ಯುಎಸ್ಎ, ರಷ್ಯಾ ಮತ್ತು ಚೀನಾ ) ನಡುವಿನ ಅಭದ್ರತೆಯ ಒಡನಾಟವು ಅಸಂಗತವಾದುದಾಗಿದ್ದು ಅದನ್ನು ನಿರಾಕರಿಸಲಾಗದು.
ಶೀತಲ ಸಮರ ತುರಿಯಾ ಅವಸ್ಥೆಯಲ್ಲಿ ಇದ್ದಾಗ ಮಹಾಶಕ್ತಿಶಾಲಿಯಾದ ಎರಡು ರಾಷ್ಟ್ರಗಳ ನಡುವೆ ‘ಸೂಟ್‌ಕೇಸ್’ ರೂಪದ ಶಸ್ತ್ರಾಸ್ತ್ರವನ್ನೂ ಒಳಗೊಂಡಂತೆ ಕಾರ್ಯತಂತ್ರ ಮತ್ತು ಯುದ್ಧತಂತ್ರಕ್ಕೆಂದೇ ಮೀಸಲಿಟ್ಟ 55,000 ಕ್ಕೂ ಹೆಚ್ಚು ಪರಮಾಣು ಸಿಡಿತಲೆಗಳ ಆಗರ ಇತ್ತು. ಡಿಸೆಂಬರ್ 1991 ರಲ್ಲಿ ಯು ಎಸ್ ಎಸ್ ಆರ್ ವಿಘಟನೆಯ ನಂತರ ಜೊತೆಗೆ ಶೀತಲ ಸಮರದಿಂದ ಜಗತ್ತು ವಿಮುಖವಾದ ಬಳಿಕ, ಪರಮಾಣು ಶಸ್ತ್ರಾಸ್ತ್ರಗಳಲ್ಲಿ ದೊಡ್ಡ ಪ್ರಮಾಣದ ನಿರ್ಬಂಧ ಜಾರಿಗೆ ಬಂದಿತು. ಯುಎಸ್ಎ, ರಷ್ಯಾ ( ಸೋವಿಯತ್ ಮುಸುಕನ್ನು ತನ್ನ ಕಣಕಣದಲ್ಲೂ ಹೊದ್ದ ದೇಶ ), ಯುಕೆ, ಫ್ರಾನ್ಸ್ ಹಾಗೂ ಚೀನಾ ಮಾತ್ರ ಪರಮಾಣು ಶಸ್ತ್ರಾಸ್ತ್ರ ಹೊಂದಿರಬಹುದು ಎಂಬ ಮಿತಿ ಹೇರಲಾಗಿದೆ. ಭಾರತವು 1974 ರಲ್ಲಿ ಪರಮಾಣು ಪರೀಕ್ಷೆಯನ್ನು ನಡೆಸಿತ್ತಾದರೂ ತನ್ನ ಸಾಮರ್ಥ್ಯವನ್ನು ಶಸ್ತ್ರಸಜ್ಜಿತಗೊಳ್ಳುವ ಮಟ್ಟಕ್ಕೆ ವಿಕಸನಗೊಳಿಸಲಿಲ್ಲ. ಮತ್ತು ‘ಅಮಾನತಾದ’ ಸ್ಥಾನಮಾನವನ್ನು ಹೊಂದಿತ್ತು.
1970 ರಲ್ಲಿ ಎನ್‌ಪಿಟಿ ( ಪರಮಾಣು ಶಸ್ತ್ರಾಸ್ತ್ರ ಪ್ರಸರಣ ತಡೆ ಒಪ್ಪಂದ ) ಜಾರಿಗೆ ತಂದು ಪರಮಾಣು ಸ್ಥಿರತೆಯನ್ನು ಮೇಲ್ನೋಟಕ್ಕೆ ಕಾಪಾಡಿಕೊಳ್ಳಲಾಯಿತು, ಯುಎಸ್ಎ ಮತ್ತು ಯುಎಸ್‌ಎಸ್‌ಆರ್ ನಡುವೆ ನಡೆದ ಈ ಒಪ್ಪಂದವು ಜಾಗತಿಕ ಪರಮಾಣು ಕ್ಲಬ್ ಅನ್ನು ಸೀಮಿತ ಮತ್ತು ಪ್ರತ್ಯೇಕವಾಗಿ ಇಡಲು ಪ್ರಯತ್ನಿಸಿತು. ಒಂದು ವೇಳೆ ಸೋತ ಮಿತ್ರಪಡೆಗಳು (ಜರ್ಮನಿ, ಜಪಾನ್ ಮತ್ತು ಇಟಲಿ) ಈ ಸಾಮರ್ಥ್ಯ ಪಡೆಯದಂತೆ ತಡೆಯುವುದು ಎನ್‌ಪಿಟಿಯ ಪ್ರಾಥಮಿಕ ಉದ್ದೇಶ ಆಗಿತ್ತು. ಪ್ರಮುಖ ಐದು ದೇಶಗಳು ತಮ್ಮ ಭದ್ರತೆಗಾಗಿ ಅಣುಬಾಂಬು ಹೊಂದಿರಬೇಕು ಮತ್ತು ಅಗತ್ಯ ಇರುವ ದೇಶಗಳಿಗೆ ಈ ರಾಷ್ಟ್ರಗಳು ಅಣುಬಾಂಬಿನ ಸಹಾಯ ಒದಗಿಸಬೇಕು. ಹಾಗೆಯೇ ಉಳಿದ ದೇಶಗಳು ಪರಮಾಣು ಹಪಹಪಿಯನ್ನು ತೊರೆದರೆ ಜಗತ್ತು ಸುರಕ್ಷಿತವಾಗಿ ಉಳಿಯಲಿದೆ ಎಂಬುದು ಒಪ್ಪಂದದ ಪ್ರಮುಖ ಸಾರವಾಗಿತ್ತು. ಆದರೆ, ಉಳಿದ ದೇಶಗಳು ಅಭದ್ರತೆಯಲ್ಲಿಯೇ ತೊಳಲುವಂತಾಗಿತ್ತು.
ಸ್ಪಷ್ಟವಾಗಿ ಇದೊಂದು ಒಪ್ಪಲು ಸಾಧ್ಯ ಇಲ್ಲದ ಸಂಗತಿಯಾಗಿತ್ತು. ಶೀತಲ ಸಮರದ ನಂತರದ ಅವಧಿಯಲ್ಲಿ, ಭಾರತ, ಪಾಕಿಸ್ತಾನ ಮತ್ತು ಉತ್ತರ ಕೊರಿಯಾಗಳು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಕುರಿತಂತೆ ವಿಶ್ವಾಸಾರ್ಹತೆ ಗಳಿಸಲು ಪರಮಾಣು ಪರೀಕ್ಷೆಗಳನ್ನು ನಡೆಸಿದವು. ಆ ಮೂಲಕ ಅಣು ಶಸ್ತ್ರಾಸ್ತ್ರ ಹೊಂದಿದ ರಾಷ್ಟ್ರಗಳಾದವು. ಅಣ್ವಸ್ತ್ರ ಪ್ರಯೋಗದಲ್ಲಿ ಇಸ್ರೇಲ್ ತೆರೆಮರೆಯ ದೇಶವಾಗಿ ಉಳಿಯಿತು. ಇರಾಕ್, ಇರಾನ್ ಮತ್ತು ಲಿಬಿಯಾದಂತಹ ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರ ಹಾದಿ ತುಳಿಯದಂತೆ ವಿಭಿನ್ನ ರೀತಿಯಲ್ಲಿ ನಿಯಂತ್ರಣಕ್ಕೆ ಒಳಗಾದವು. ಸಂಕ್ಷಿಪ್ತವಾಗಿ ಹೇಳುವುದಾದರೆ, ರಾಷ್ಟ್ರೀಯ ಸಾರ್ವಭೌಮತ್ವ ರಕ್ಷಿಸಲು ಇರುವ ಸಾಧನ ಎಂದು ಏಕಪಕ್ಷೀಯವಾಗಿ ಪ್ರತಿಪಾದಿಸುವುದರ ಮೂಲಕ ಜಾಗತಿಕ ಪರಮಾಣು ಕ್ಲಬ್ ಅನ್ನು ವಿಸ್ತರಿಸಲಾಯಿತು. ಮಾತ್ರವಲ್ಲ ಭದ್ರತೆಯಲ್ಲಿ ಅಜೇಯವಾಗಿ ಉಳಿಯುವುದು ಸಾಧಿಸುವುದು ಹಾಗೂ ಅಣುಬಾಂಬ್ ಪಡೆಯುವುದು ಎರಡೂ ಒಂದೇ ಎಂಬ ಅರ್ಥ ಮೂಡುವಂತಾಯಿತು. ಅಲ್ಲದೇ ಪರಮಾಣು ಶಸ್ತ್ರಾಸ್ತ್ರಗಳ ಹೆಚ್ಚಳ ನಿಯಂತ್ರಿಸಲು ಯಾವುದೇ ಪರಿಣಾಮಕಾರಿ ಮಾತುಕತೆ ಅಥವಾ ಒಪ್ಪಂದ ಏರ್ಪಡಲೇ ಇಲ್ಲ.
ಕಳೆದ ಕೆಲವು ವರ್ಷಗಳಲ್ಲಿ, ಯುಎಸ್ಎ ಮತ್ತು ರಷ್ಯಾ ನಡುವೆ ಏರ್ಪಟ್ಟ ಅನೇಕ ಪ್ರಮುಖ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದಗಳು ಗೋಜಲುಗಳನ್ನು ಬಗೆಹರಿಸಿದ್ದವು. 2019 ರ ಆಗಸ್ಟ್ ತಿಂಗಳಲ್ಲಿ 1987 ರ ಐ ಎನ್ ಎಫ್ ( ಇಂಟರ್ ಮೀಡಿಯೆಟ್ ನ್ಯೂಕ್ಲಿಯರ್ ಫೋರ್ಸ್ ) ಒಪ್ಪಂದದಿಂದ ಹೊರನಡೆಯುವ ಏಕಪಕ್ಷೀಯ ನಿರ್ಧಾರವನ್ನು ಟ್ರಂಪ್ ಆಡಳಿತ ಕೈಗೊಂಡಿತು. ಆ ಸಮಯದಲ್ಲಿ, ಅಮೆರಿಕದ ಮಾಜಿ ಹಿರಿಯ ಶಸ್ತ್ರಾಸ್ತ್ರ ನಿಯಂತ್ರಣ ಅಧಿಕಾರಿ ಥಾಮಸ್ ಕಂಟ್ರಿಮನ್ ನೀಡಿದ ಎಚ್ಚರಿಕೆಯ ಮಾತುಗಳು ಹೀಗಿದ್ದವು : “ ಐಎನ್ಎಫ್ ಒಪ್ಪಂದ ಇಲ್ಲದೇ, ಹಾಗೂ ಹೊಸ ಎಸ್ಟಿಎಆರ್ಟಿ ( ಸ್ಟಾರ್ಟ್ ) ಒಪ್ಪಂದ ಮುಕ್ತಾಯಗೊಳ್ಳುವುದರಿಂದಾಗಿ, ಕಳೆದ ಅರ್ಧ ಶತಮಾನದಲ್ಲಿ ಇದೇ ಮೊದಲ ಬಾರಿಗೆ ವಿಶ್ವದ ಎರಡು ದೊಡ್ಡ ಅಣ್ವಸ್ತ್ರ ಶಕ್ತಿಗಳನ್ನು ಕಾನೂನುಬದ್ಧವಾಗಿ ಪರಾಮರ್ಶಿಸಬಲ್ಲ ಮಿತಿಗಳು ಇಲ್ಲದಂತಾಗಿದೆ "
ವ್ಯಾಕುಲಕ್ಕೆ ಈಡುಮಾಡುವ ರೀತಿಯಲ್ಲಿ ಕಳೆದ ಎರಡು ದಶಕಗಳಲ್ಲಿ ಅದರಲ್ಲಿಯೂ 2001ರ ಅಮೆರಿಕ ಮೇಲಿನ ದಾಳಿ ಮತ್ತು 2008 ರಲ್ಲಿ ಮುಂಬೈ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ 'ಇತರರ’ ಅಣುಬಾಂಬುಗಳಿಗೆ ಕೊಕ್ಕೆ ಹಾಕುವ ಪರಮಾಣು ಶಸ್ತ್ರಾಸ್ತ್ರದ ಮಹತ್ವದ ಅಭಿಯಾನ ದುರ್ಬಲಗೊಂಡಿದೆ. ಪರಮಾಣು ಶಸ್ತ್ರಾಸ್ತ್ರ ಪ್ರೇರಿತ ಭಯೋತ್ಪಾದನೆ ( ಎನ್ ಡಬ್ಲ್ಯು ಇ ಟಿ ) ಇಂದು ಒಂದು ಸಂಕೀರ್ಣ ಸವಾಲಾಗಿ ಮಾರ್ಪಟ್ಟಿದೆ. ಕೆಲವು ದೇಶಗಳ ಜಿಗುಟು ಸ್ವಭಾವ ಇದನ್ನು ಮತ್ತಷ್ಟು ಕಗ್ಗಂಟಾಗಿ ಮಾಡಿದೆ. ಅಲ್ಲದೇ ತಾಂತ್ರಿಕ ಪ್ರಗತಿಯಿಂದಾಗಿ ಸರ್ಕಾರೇತರ ಶಕ್ತಿಗಳು ಕೂಡ ಅಣುಶಕ್ತಿಯನ್ನು ಪಡೆಯುವ ಮತ್ತು ಆ ಮೂಲಕ ಸಾಮಾಜಿಕ ಸ್ಥಿರತೆಗೆ ಧಕ್ಕೆ ಉಂಟುಮಾಡುವ ಸ್ಥಿತಿಗೆ ತಲುಪುತ್ತಿವೆ.
ಅಣಬೆ ಮೋಡ ಮತ್ತೆ ಅವತರಿಸದಂತೆ ನೋಡಿಕೊಳ್ಳುವುದರೊಂದಿಗೆ ಜಗತ್ತು ಹಿರೋಶಿಮಾ ದುರಂತದ 75 ನೇ ವರ್ಷಾಚರಣೆಯ ಹೊಸ್ತಿಲಲ್ಲಿದೆ. ರಾಜಕೀಯ ಮತ್ತು ಭದ್ರತೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯದ ಹೊರತಾಗಿಯೂ ಅಂದು ಪ್ರಮುಖ ಶಕ್ತಿಗಳ ನಡುವೆ ಪರಸ್ಪರ ವಿಶ್ವಾಸ ಇದ್ದುದರಿಂದ, ಅಣ್ವಸ್ತ್ರಗಳ ನಿಷೇಧ ಕುರಿತಂತೆ ಅವು ನುಡಿದಂತೆ ನಡೆದವು. ಒಂದು ಕಡೆ ಯುಎಸ್ಎ ಮತ್ತು ರಷ್ಯಾ ನಡುವಿನ ಉದ್ವಿಗ್ನತೆ ಮತ್ತೊಂದೆಡೆ ಚೀನಾ ಮತ್ತು ಯು ಎಸ್ ಎ ನಡುವಿನ ಜಟಾಪಟಿ ಕಣ್ಣೆದುರು ಅವತರಿಸಿದೆ. ಇಂತಹ ಹೊತ್ತಿನಲ್ಲಿ 2020 ರಲ್ಲಿಯೂ ಈ ನಂಬಿಕೆ ಹಾಗೆಯೇ ಉಳಿಯುತ್ತದೆ ಎಂದು ಹೇಳಲು ಸಾಧ್ಯ ಇಲ್ಲ.
ವಿಷಾದದ ಸಂಗತಿ ಎಂದರೆ ಪರಮಾಣು ಶಸ್ತ್ರಾಸ್ತ್ರವು ಯುದ್ಧತಂತ್ರದ ಒಂದು ಭಾಗ ಆಗಿದೆ ಎಂದು ಬಹುತೇಕ ಶಕ್ತಿಗಳು ನಂಬಿರುವುದು ಮತ್ತು ‘ಬಳಸಬಹುದಾದ’ ಅಣುಬಾಂಬು ಪಡೆಯಲು ಅವು ಹವಣಿಸುತ್ತಿರುವುದು. ಆ ನಿಟ್ಟಿನಲ್ಲಿ ‘ಅಭದ್ರತೆ’ ಎದುರಿಸುವ ಸಲುವಾಗಿ ಉತ್ತರ ಕೊರಿಯಾ ಮಾತ್ರವೇ ಪರಮಾಣು ಶಸ್ತ್ರಾಸ್ತ್ರ ಪ್ರಯೋಗದಲ್ಲಿ ತೊಡಗಿಲ್ಲ. ಬರುವ ಆಗಸ್ಟ್ 6ಕ್ಕೆ ಜಗತ್ತು ಅಡಿ ಇರಿಸುತ್ತಿರುವಂತೆ ನಿಧಾನವಾಗಿ ಆದರೆ ಸ್ಪಷ್ಟವಾಗಿ ಕಾರ್ಮೋಡ ದಟ್ಟೈಸುತ್ತಿದೆ. ಹಿರೋಶಿಮಾ ದುರ್ಘಟನೆಯಿಂದ ಕಲಿಯಬೇಕಿದ್ದ ಪಾಠಗಳಿಂದ ಜಾಗತಿಕ ನಾಯಕತ್ವ ದೂರವೇ ಉಳಿದಿದೆ. ಈಗ ಕೋವಿಡ್ 19 ಸಾಂಕ್ರಾಮಿಕ ರೋಗ ದಾಳಿ ಮಾಡಿರುವುದು ಪರಮಾಣು ಪೆಡಂಭೂತದ ಬಗ್ಗೆ ಅಸಡ್ಡೆ ತಳೆಯುವಂತಾಗಿದೆ.
ಸಿ ಉದಯ್ ಭಾಸ್ಕರ್- ನಿರ್ದೇಶಕರು, ಸೊಸೈಟಿ ಫಾರ್ ಪಾಲಿಸಿ ಸ್ಟಡೀಸ್