ಹೈದರಾಬಾದ್: ಮೂರು ವಾರಗಳ ಕಾಲ ಏನೂ ಮಾಡದೆ ಮನೆಯಲ್ಲಿ ಕೂರುವುದು ಎಂಥವರಿಗೇ ಆದರೂ ಕಷ್ಟ .. ಕಷ್ಟ.. ಕಡುಕಷ್ಟ. ದೊಡ್ಡವರಿಗೇ ಹೀಗಾದರೆ ಯಾವಾಗಲೂ ಮನಸೋ ಇಚ್ಛೆ ಅಂಗಳದಲ್ಲಿ, ರಸ್ತೆಯಲ್ಲಿ ಆಟವಾಡುತ್ತ ಕಾಲ ಕಳೆಯುವ ಮಕ್ಕಳ ಸ್ಥಿತಿ ಹೇಗಾಗಿರಬೇಡ! ಶಾಲೆ, ಟ್ಯೂಶನ್ ಹೀಗೆ ಎಲ್ಲೆಡೆ ಗೆಳೆಯರೊಂದಿಗೆ ಬೆರೆತು ಕಾಲ ಕಳೆಯುತ್ತಿದ್ದ ಮಕ್ಕಳಿಗೆ ಈಗ ಅತಿ ಕಷ್ಟದ ಸಮಯ. ಶಾಲೆಗಳು ಬೇರೆ ಬಂದ್ ಆಗಿ ಬರೀ ಮನೆಯಲ್ಲಿ ಇರಬೇಕಾಗಿದ್ದರಿಂದ ಮಕ್ಕಳ ಮನೋಸ್ಥಿತಿಯ ಮೇಲೆ ಎಂಥ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ನಾವೆಲ್ಲ ತುರ್ತಾಗಿ ವಿಚಾರ ಮಾಡಬೇಕಿದೆ.
ಪ್ರಸ್ತುತ ಮಕ್ಕಳು ವಿಪರೀತ ಮಾನಸಿಕ ಒತ್ತಡ ಹಾಗೂ ಕಿರಿಕಿರಿಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಈ ಪರಿಸ್ಥಿತಿಯಲ್ಲಿ ಮಕ್ಕಳನ್ನು ಈ ಮೊದಲಿಗಿಂತಲೂ ಹೆಚ್ಚು ಪ್ರೀತಿ, ಆರೈಕೆ ಹಾಗೂ ತಾಳ್ಮೆಯಿಂದ ನೋಡಿಕೊಳ್ಳುವುದು ಎಲ್ಲ ಪಾಲಕರ ಜವಾಬ್ದಾರಿಯಾಗಿದೆ. ಚಿಕ್ಕ ಮಕ್ಕಳು ಹಾಗೂ ಈಗ ಪ್ರೌಢಾವಸ್ಥೆಗೆ ಬರುತ್ತಿರುವ ಮಕ್ಕಳೊಂದಿಗೆ ಬೆರೆಯಲು ಪಾಲಕರಿಗೆ ಈ ಲಾಕ್ಡೌನ್ ಅವಧಿ ಸದವಕಾಶವಾಗಿದೆ. ಈ ಸಮಯದಲ್ಲಿ ಮಕ್ಕಳಿಗೆ ತಮ್ಮ ಪ್ರೀತಿ ಹಾಗೂ ಕಾಳಜಿಯನ್ನು ಪಾಲಕರು ಧಾರೆಯೆರೆಯಲಿ.
ಲಾಕ್ಡೌನ್ನ ಈ ಸಂಕಷ್ಟದ ಸಮಯದಲ್ಲಿ ಮಕ್ಕಳಿಗೆ ಸುಭದ್ರತೆ ಹಾಗೂ ಕಾಳಜಿಯ ಭಾವನೆ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್, ಪೇರೆಂಟಿಂಗ್ ಫಾರ್ ಲೈಫ್ಲಾಂಗ್ ಹೆಲ್ಥ್, ಇಂಟರನೆಟ್ ಆಫ್ ಗುಡ್ ಥಿಂಗ್ಸ್, ಸಿಡಿಸಿ ಮತ್ತು ಆ್ಯಕ್ಸಿಲರೇಟ್ ಸಂಸ್ಥೆಗಳು ಕೆಲ ಮಾರ್ಗಸೂಚಿಗಳನ್ನು ಹೊರತಂದಿವೆ.
ಪಾಲಕರು ತಮ್ಮ ಪ್ರತಿ ಮಗುವಿನೊಂದಿಗೆ ಪ್ರತಿದಿನ ಕನಿಷ್ಠ 20 ನಿಮಿಷ ಅಥವಾ ಅದಕ್ಕೂ ಹೆಚ್ಚು ಕಾಲ ಕಳೆದು, ಸಾಮಾಜಿಕ ಅಂತರ ಪಾಲಿಸುತ್ತಲೇ ಮಗು ಏನು ಮಾಡಬಯಸುತ್ತದೆ ಎಂಬುದನ್ನು ತಿಳಿಯಲು ಯತ್ನಿಸಬೇಕು ಎಂದು ಈ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಮನೆಯಲ್ಲಿ ಶಿಶು ಇದ್ದರೆ ಆ ಮಗುವಿನ ಮುಂದೆ ತಾಳ ಹಾಕುತ್ತ ಹಾಡು ಹಾಡಬೇಕು ಅಥವಾ ಯಾವುದಾದರೂ ಒಳ್ಳೆಯ ಕತೆ ಹೇಳಬೇಕು. ಪ್ರೌಢಾವಸ್ಥೆಯ ಮಕ್ಕಳಿಗೆ ಅವರು ಇಷ್ಟಪಡುವ ಕ್ರೀಡೆ, ಟಿವಿ ಶೋ ಅಥವಾ ಅವರ ಗೆಳೆಯರ ಬಗ್ಗೆ ಮಾತನಾಡಿಸುತ್ತ ಕಾಲ ಕಳೆಯಬೇಕು. ಹಾಗೆಯೇ ಮನೆಯ ಸುತ್ತಮುತ್ತ ಮಕ್ಕಳನ್ನು ಸೇರಿಸಿಕೊಂಡು ಏನಾದರೂ ಕೆಲಸ ಮಾಡುವುದು ಅಥವಾ ಸರಳ ವ್ಯಾಯಾಮ ಮಾಡುವುದು ತುಂಬಾ ಪರಿಣಾಮಕಾರಿ ಎನ್ನಲಾಗಿದೆ.
ಮನೆಯಲ್ಲಿ ಸ್ವಲ್ಪ ಸಮಯವಾದರೂ ಎಲ್ಲ ಮೊಬೈಲ್, ಟಿವಿ ಸ್ಕ್ರೀನ್ಗಳಿಂದ ದೂರವಿದ್ದು ಒಂದಿಷ್ಟು ಪುಸ್ತಕ ಓದುವುದು, ಚಿತ್ರ ಬಿಡಿಸುವುದು, ಡಾನ್ಸ್ ಮುಂತಾದ ಚಟುವಟಿಕೆಗಳನ್ನು ಮಾಡಬೇಕು. ಮನೆಯ ಸ್ವಚ್ಛತೆ ಅಥವಾ ಅಡುಗೆ ಮಾಡುವುದರಲ್ಲಿ ಮಕ್ಕಳನ್ನು ತೊಡಗಿಸಿಕೊಂಡರೆ ಒಳ್ಳೆಯದು. ಹಾಗೆಯೇ ಮಕ್ಕಳ ಹೋಂ ವರ್ಕ್ ಮಾಡಿಸುವುದು ಹಾಗೂ ಅವರಿಗೆ ಅಭ್ಯಾಸ ಹೇಳಿಕೊಡುವುದನ್ನು ಮಾತ್ರ ಯಾವುದೇ ಕಾರಣಕ್ಕೂ ಮರೆಯುವಂತಿಲ್ಲ.
ಎಲ್ಲರೂ ಮನೆಯಲ್ಲೇ ಇರುವಾಗ ಪಾಲಕರು ಹಾಗೂ ಮಕ್ಕಳು ಇಬ್ಬರಿಗೂ ಇದೊಂದು ಕಠಿಣ ಅವಧಿಯೇ ಆಗಿದೆ. ಚಿಕ್ಕ ಪುಟ್ಟ ಕಾರಣಕ್ಕೆ ಪಾಲಕರು ರೇಗುವುದು, ಅದನ್ನು ಮಾಡಬೇಡ, ಇದನ್ನು ಮಾಡಬೇಡ ಎಂದು ಮಕ್ಕಳಿಗೆ ಬೈಯುವುದು ನಡೆಯಲಾರಂಭಿಸುತ್ತವೆ. ಆದರೆ ದೊಡ್ಡವರಾದ ಪಾಲಕರು ಒಂದಿಷ್ಟು ಸಹನೆ ವಹಿಸಿ ಮಕ್ಕಳಿಗೆ ಹೇಳಬೇಕಾದ್ದನ್ನು ಅವರ ಮನಸ್ಸಿಗೆ ನೋವಾಗದಂತೆ ನಯವಾಗಿ ಹೇಳುವುದು ಒಳಿತು.
ಮಕ್ಕಳ ಕೆಲಸವನ್ನು ಮೆಚ್ಚಿಕೊಳ್ಳುವುದರಿಂದ ಅವರನ್ನು ಹುರಿದುಂಬಿಸಿದಂತಾಗುತ್ತದೆ ಎಂಬುದು ಗೊತ್ತಿರಲಿ. ಯಾವುದೇ ಕೆಲಸ ಹೇಳುವಾಗ ಮಕ್ಕಳಿಗೆ ವಿನಂತಿಯ ಧಾಟಿಯಲ್ಲಿ ಹೇಳಬೇಕೇ ವಿನಃ ಆದೇಶ ಮಾಡುವುದಲ್ಲ. ಜೋರಾಗಿ ಕೂಗಾಡುವುದರಿಂದ ಮಕ್ಕಳು ಒತ್ತಡಭರಿತರಾಗಿ ಅವರಲ್ಲಿ ಕೋಪ ಹೆಚ್ಚಾಗಲು ಕಾರಣವಾಗುತ್ತದೆ.
ಪ್ರೌಢ ಮಕ್ಕಳು ತಮ್ಮ ಗೆಳೆಯರೊಂದಿಗೆ ಮಾತನಾಡಲು ಅವಕಾಶ ನೀಡಿ. ಅವರು ತಮ್ಮ ಮನಸ್ಸಿನೊಳಗಿನ ಭಾವನೆ, ಯಾವುದಾದರೂ ಅಳುಕು ಅಂಜಿಕೆ ಇದ್ದಲ್ಲಿ ಅದನ್ನು ನಿಮ್ಮೊಂದಿಗೆ ಹೇಳಿಕೊಳ್ಳುವಂತೆ ಮಾಡಿ.
ಮಕ್ಕಳಿಗೆ ಕೈತೊಳೆಯುವುದರ ಹಾಗೂ ಶುಚಿತ್ವದ ಬಗ್ಗೆ ತಿಳುವಳಿಕೆ ಮೂಡಿಸಿ. ಈ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮಹತ್ವವನ್ನು ಅವರಿಗೆ ಮನಮುಟ್ಟುವಂತೆ ತಿಳಿಸುವುದು ಬಹಳ ಮುಖ್ಯವಾಗಿದೆ. ಆದರೆ ಮಕ್ಕಳಿಗೆ ಹೇಳುವ ಮೊದಲು ಪಾಲಕರಾದವರು ಅದನ್ನೆಲ್ಲ ಮೊದಲು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಇನ್ನು ಪಾಲಕರಾದವರು ತಮ್ಮ ಸ್ವಂತದ ಆರೈಕೆಯ ಬಗೆಗೂ ಗಮನಹರಿಸಬೇಕು. ಒತ್ತಡದ ಪರಿಸ್ಥಿತಿಗಳಲ್ಲಿ ಮಾನಸಿಕವಾಗಿ ಸ್ಥಿಮಿತದಲ್ಲಿರುವುದು, ತಾಳ್ಮೆ ಬೆಳೆಸಿಕೊಳ್ಳುವುದು ಮುಂತಾದ ವಿಷಯಗಳ ಕಡೆಗೆ ಪಾಲಕರು ಗಮನವಹಿಸಬೇಕು. ಅಲ್ಕೊಹಾಲ್ ಯಾವತ್ತಿಗೂ ಯಾವುದೇ ಸಮಸ್ಯೆಗೂ ಪರಿಹಾರವಲ್ಲ. ಅದರಿಂದ ಮನಶಾಂತಿ ಹಾಳಾಗುವುದೇ ಹೊರತು ಏನೂ ಒಳಿತಾಗದು.
ಮಕ್ಕಳು ಯಾವುದಾದರೂ ವಿಷಯದ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಸಮಾಧಾನ ಚಿತ್ತದಿಂದ ಉತ್ತರಿಸಲು ಯತ್ನಿಸಿ. ಮಕ್ಕಳು ಕೆಲ ಬಾರಿ ಕೇಳಿದ್ದನ್ನೇ ಕೇಳಿದರೂ ಕೋಪ ಮಾಡಿಕೊಳ್ಳದೆ ಸಮಾಧಾನವಾಗಿ ನಿಭಾಯಿಸಿ.