ಆಗಸ್ಟ್ ತಿಂಗಳ ಜಿಟಿಜಿಟಿ ಮಳೆಯ ಹದವಾದ ನೆನೆಯುವಿಕೆಗೆ ಎಲೆ-ಚಿಗುರುಗಳು ಕಳೆಗಟ್ಟಿ ಹೊಳೆಯುವ ಹಾಗೆ ಮುಗ್ದ ಮನಸುಗಳ ಸ್ನೇಹಭಾವಕ್ಕೆ ಒಂದು ಭಾವಯಾನ. ನಿಷ್ಕಲ್ಮಷ ಸಂಬಂಧಕ್ಕೆ ಮತ್ತೊಂದು ಹೆಸರೇ ಸ್ನೇಹ... ಈ ಪ್ರಪಂಚದಲ್ಲಿ ಸ್ನೇಹಕ್ಕಿರುವಂತಹ ಶಕ್ತಿ ಇನ್ಯಾವ ಸಂಬಂಧಗಳಿಗೂ ಇಲ್ಲವೆಂದರೆ ತಪ್ಪಾಗಲಾರದು. ಯಾವುದೇ ಸಂಬಂಧಗಳು ಮುರಿದು ಬಿದ್ದರೂ ಸ್ನೇಹ ಮಾತ್ರ ಕೊನೇ ತನಕ ಗಟ್ಟಿಯಾಗಿರುತ್ತದೆ. ಅದರ ಶಕ್ತಿಯೇ ಹಾಗೆ. ಸ್ನೇಹಿತರು ಯಾವುದೇ ಕಾರಣಗಳಿಂದ ದೂರಾದರೂ ಯಾವತ್ತಾದರೂ ಅವರ ಸ್ನೇಹ ಮತ್ತೆ ಒಂದಾಗುತ್ತದೆ.
ಪ್ರೀತಿಗಿಂತ ಹೆಚ್ಚು ಸ್ನೇಹಕ್ಕೆ ಬೆಲೆ ಕೊಡುವಂತ ವ್ಯಕ್ತಿಗಳನ್ನು ನಾವು ಕಾಣಬಹುದು. ಇಂದಿನ ಆಧುನಿಕ ಯುಗದಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕವೂ ಸ್ನೇಹವು ಚಿರಾಯುವಾಗಿದೆ. ಇಷ್ಟೆಲ್ಲಾ ಪೀಠಿಕೆ ಯಾಕೆ ಗೊತ್ತಾ ಹಾಂ.. ಇಂದಿನ ದಿನ ಬಹಳ ವಿಶೇಷವಾದದ್ದು ಸ್ನೇಹಿತರೆಲ್ಲರೂ ಕುಣಿದು ಕುಪ್ಪಳಿಸುವಂತಹ ದಿನ ಅದೇ ಆಗಸ್ಟ್ ತಿಂಗಳ ಮೊದಲ ಭಾನುವಾರ ಆಚರಿಸುವ ಸ್ನೇಹಿತರ ದಿನಾಚರಣೆ.
ಈ ಜಗತ್ತಿನಲ್ಲಿ ಇನ್ನೂ ಗಟ್ಟಿಯಾಗಿ ಉಳಿದಿರುವ ಸಂಬಂಧವೆಂದರೆ ಅದು ಸ್ನೇಹ ಮಾತ್ರ. ಇದು ಅತ್ಯಂತ ವಿಶೇಷವಾಗಿರುಂತಹ ಆಕರ್ಷಣೆ ಮತ್ತು ನಂಬಿಕೆಯ ಸಂಬಂಧ. ಸ್ನೇಹವೆಂದರೆ ನಮ್ಮ ಬಗ್ಗೆ ಕಾಳಜಿ ವಹಿಸುವ ಮತ್ತು ಕಷ್ಟದಲ್ಲಿ ಹೆಗಲು ಕೊಡುವಂತಹ ಒಂದು ಅಭೂತಪೂರ್ವ ಸಂಬಂಧ. ಇಂದು ಎಷ್ಟೋ ಸ್ನೇಹಿತರು ತಮ್ಮ ಪ್ರೀತಿಗಿಂತ ಹೆಚ್ಚು ಸ್ನೇಹದಲ್ಲಿ ನಂಬಿಕೆ ಹೊಂದಿರುತ್ತಾರೆ, ಯಾಕೆ ಅಂತೀರಾ.. ಪ್ರೀತಿ ಯಾವಾಗ ಹುಟ್ಟುತ್ತದೋ ,ಯಾವಾಗ ಸಮಾಧಿಯಾಗುತ್ತದೋ ಹೇಳಲು ಸಾದ್ಯವಿಲ್ಲ. ಆದರೆ ಸ್ನೇಹ ಮಾತ್ರ ಸಾಯುವ ತನಕ ಚಿರಕಾಲ ಉಳಿಯುವಂತಹ ಅಭೂತಪೂರ್ವ ಶಕ್ತಿ.. ಸಾಮಾನ್ಯವಾಗಿ ಎಲ್ಲರೂ ಸ್ನೇಹಿತರಾಗಬಹುದು ಆದರೆ ಮನಸ್ಸಿಗೆ ಹತ್ತಿರವಾಗುವಂತಹ ನಮ್ಮ ಎಲ್ಲಾ ನೋವುಗಳಿಗೆ ಸ್ಪಂಧಿಸುವಂತ ಸ್ನೇಹಿತರು ಸಿಗುವುದು ತುಂಬಾ ವಿರಳ.
ಕಾಲಚಕ್ರ ಉರುಳಿದಂತೆ, ಎಳೆವಯಸ್ಸಿನ ಬೆಸ್ಟೆಸ್ಟ್ ಆಗಿದ್ದವರು ಅಪರಿಚಿತರಾಗಿ ಹೋಗಬಹುದು. ಅಷ್ಟೇನೂ ಒಡನಾಟವಿಲ್ಲದವರ ಜತೆಗೆ ಗಾಢ ಬಾಂಧವ್ಯ ಬೆಸೆದು ಹೋಗಬಹುದು ಅಥವಾ ಹೊಸ ಪರಿಚಯವಾಗಿ ಅವರು ನಮ್ಮ ಮನಸ್ಸಿನಲ್ಲಿ ವಿಶೇಷ ಸ್ಥಾನ ಕೂಡ ಹೊಂದಬಹುದು. ಈ ಎಲ್ಲದರ ಮಧ್ಯೆ ಯಾವುದೋ ಚಿಕ್ಕ ವಿಷಯಕ್ಕೆ ಅದೆಷ್ಟೋ ಜಗಳ, ಕಿತ್ತಾಟ, ಮುನಿಸು, ಬಿಟ್ಟಿರಲಾಗದೇ ಮತ್ತೆ ತಮ್ಮ ಸ್ನೇಹಿತರ ಬಳಿ ಪುನಃ ಕ್ಷಮೆ ಕೇಳಿ ಒಂದಾಗುವಂತಹ ಎಷ್ಟೋ ಸಂಗತಿಗಳು ಸಿಗಬಹುದು. ಆದರೆ ಸ್ನೇಹವಿಲ್ಲದ ಜಗತ್ತನ್ನು, ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲ ವಯಸ್ಸಿನಲ್ಲೂ ಎಲ್ಲರಿಗೂ ತಮ್ಮದೇ ಆದ ಸ್ನೇಹ ಸಖ್ಯವಿದ್ದೇ ಇರುತ್ತದೆ.ಹಾಗಾಗಿ ಸ್ನೇಹಿತರೆ ನನ್ನದೊಂದು ಸಣ್ಣ ಕಿವಿ ಮಾತು ನಿಮ್ಮ ಸ್ನೇಹಿತರು ಯಾರೇ ಆಗಿರಲಿ ಯಾವುದೋ ಚಿಕ್ಕ ಪುಟ್ಟ ವಿಷಯಗಳನ್ನು ಅತೀರೇಖಕ್ಕೆ ತೆಗೆದುಕೊಂಡು ಹೋಗದೇ ತಮ್ಮ ತಮ್ಮ ಸ್ನೇಹಿತರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿ.
ನಂಬಿಕೆ, ಪ್ರೋತ್ಸಾಹ, ಸಂವಹನ, ಪ್ರಾಮಾಣಿಕತೆ, ತಿಳುವಳಿಕೆ, ಕರುಣೆಯನ್ನು ಒಳಗೊಂಡಿರುವಂತಹ ಅತ್ಯಂತ ದೃಢ ಸಂಬಂಧವೇ ಸ್ನೇಹ. ಸ್ನೇಹಿತರ ಬಗ್ಗೆ ಕಾಳಜಿ ಮತ್ತು ಪ್ರೀತಿ ವ್ಯಕ್ತಪಡಿಸಲು ಯಾವುದೇ ವಿಶೇಷ ದಿನ ಬೇಕೆಂದಿಲ್ಲ. ಆದರೆ ಸ್ನೇಹಿತರ ದಿನವು ನಿಮ್ಮ ಸ್ನೇಹಿತರ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಗೌರವ ತೋರಿಸುವಂತಹ ಒಂದು ಅವಕಾಶವನ್ನು ಒದಗಿಸುತ್ತದೆ. ಎಂದೆಂದಿಗೂ ನಿಮ್ಮ ಆತ್ಮೀಯ ಗೆಳೆಯ ಗೆಳತಿಯರೊಂದಿಗೆ ನಗು ನಗುತ ಸಂತೋಷವಾಗಿರಲು ಪ್ರಯತ್ನಿಸಿ.