ಚಿಕಾಗೋ(ಅಮೆರಿಕ): ಆರೋಗ್ಯವಂತ ವ್ಯಕ್ತಿಯ ದೇಹದಿಂದ ರೋಗಿಯ ದೇಹಕ್ಕೆ ಕೆಲವೊಂದು ಜೀವಕೋಶಗಳನ್ನು ತಲುಪಿಸುವ ಮೂಲಕ ರೋಗಿಯನ್ನು ನಿರ್ದಿಷ್ಟ ರೋಗದಿಂದ ಗುಣಪಡಿಸಬಹುದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದು ಎಲ್ಲಾ ರೋಗಗಳಿಗೆ ಕಾರ್ಯ ಸಾಧುವಲ್ಲವಾದರೂ, ಕೆಲವೊಂದು ರೋಗಗಳ ವಿರುದ್ಧ ಈ ವಿಧಾನ ಯಶಸ್ವಿಯಾಗಿ ಕೆಲಸ ಮಾಡುತ್ತದೆ.
ಇತ್ತೀಚೆಗೆ ಕೋವಿಡ್ ವಿರುದ್ಧವೂ ಪ್ಲಾಸ್ಮಾ ಥೆರಪಿ ಎಂಬ ಹೆಸರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಕಾಂಡಕೋಶಗಳು ಅಥವಾ ಸ್ಟೆಮ್ ಸೆಲ್ಗಳು ಎಂದು ಕರೆಯಲ್ಪಡುವ ಜೀವಕೋಶಗಳನ್ನು ಕಸಿ ಮಾಡುವ ಮೂಲಕ, ಕೆಲವೊಂದು ರೋಗಗಳನ್ನ ಯಶಸ್ವಿಯಾಗಿ ಗುಣಪಡಿಸಬಹುದಾಗಿದೆ. ಏಡ್ಸ್ ಅನ್ನು ಕೂಡಾ ಸ್ಟೆಮ್ ಸೆಲ್ ಕಸಿಯ ಮೂಲಕ ಗುಣಪಡಿಸಬಹುದು ಅನ್ನೋದು ಅಚ್ಚರಿಯಾದರೂ ಸತ್ಯ.
ಈ ಮೊದಲು ಇಬ್ಬರು ರೋಗಿಗಳನ್ನು ಇದೇ ರೀತಿಯ ಕಸಿ ಮಾಡುವ ಮೂಲಕ ಗುಣಪಡಿಸಲಾಗಿತ್ತು. ಈಗ ಮಹಿಳೆಯೊಬ್ಬರನ್ನು ಹೆಚ್ಐವಿ ಸೋಂಕಿನಿಂದ ಗುಣಪಡಿಸಲಾಗಿದೆ. ಈ ಮೂಲಕ ಸ್ಟೆಮ್ ಸೆಲ್ ಚಿಕಿತ್ಸೆ ಮೂಲಕ ಹೆಚ್ಐವಿ ಸೋಂಕಿನಿಂದ ಚೇತರಿಕೆ ಕಂಡ ಮೊದಲ ಮಹಿಳೆ ಇವರಾಗಿದ್ದಾರೆ.
ಹೌದು, ಅಮೆರಿಕ ಮೂಲದ ರೋಗಿಯನ್ನು ಹೆಚ್ಐವಿ ಸೋಂಕಿನಿಂದ ಗುಣಪಡಿಸಲಾಗಿದ್ದು, ಆಕೆ ಲ್ಯುಕೇಮಿಯಾ ರೋಗದಿಂದಲೂ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಹೆಚ್ಐವಿ ಸೋಂಕನ್ನು ಈಗಾಗಲೇ ಜಯಿಸಿದ್ದ ವ್ಯಕ್ತಿಯೊಬ್ಬರ ಸ್ಟೆಮ್ ಸೆಲ್ ಅನ್ನು 'ದಾನ' ಪಡೆದುಕೊಂಡು ಮಹಿಳೆಗೆ ನೀಡಿ, ಆಕೆಯನ್ನು ಹೆಚ್ಐವಿಯಿಂದ ಗುಣಪಡಿಸಲಾಗಿದೆ.
ಡೆನ್ವರ್‌ನಲ್ಲಿ ನಡೆದ ಕಾನ್ಫರೆನ್ಸ್ ಆನ್ ರೆಟ್ರೊವೈರಸಸ್ ಆ್ಯಂಡ್ ಆಪರ್ಚುನಿಸ್ಟಿಕ್ ಇನ್ಫೆಕ್ಷನ್ ಸಮ್ಮೇಳನದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಲಾಗಿದ್ದು, ಈ ಚಿಕಿತ್ಸಾ ನೂತನ ವಿಧಾನದ ಮೂಲಕ ಹೆಚ್ಚಿನ ಜನರನ್ನು ಹೆಚ್ಐವಿಯಿಂದ ಗುಣಪಡಿಸಬಹುದಾಗಿದೆ.
ಇದನ್ನೂ ಓದಿ: ಲಸ್ಸಾ ಜ್ವರ ನಿಜಕ್ಕೂ ಗಂಭೀರವೇ?.. ಇದರ ಲಕ್ಷಣಗಳೇನು ಗೊತ್ತೇ?
ಆಕೆಗೆ ಹೊಕ್ಕುಳ ಬಳ್ಳಿಯಿಂದ ತೆಗೆದ ಸ್ಟೆಮ್ ಸೆಲ್ ಕಸಿ ಮಾಡಿದಾಗಿನಿಂದ, ಆಕೆಯಲ್ಲಿ ಹೆಚ್ಐವಿ ಪ್ರಭಾವ ಕಡಿಮೆಯಾಗುತ್ತಾ ಬಂದಿದ್ದು, 14 ತಿಂಗಳಲ್ಲಿ ಆಕೆಯಲ್ಲಿ ಹೆಚ್ಐವಿ ವೈರಸ್ ನಾಪತ್ತೆಯಾಗಿದೆ. ಈ ಮೂಲಕ ಹೆಚ್ಐವಿಗೆ ಆ್ಯಂಟಿ ವೈರಲ್ ಥೆರಪಿಯಂಥ ಪ್ರಬಲ ಚಿಕಿತ್ಸಾ ವಿಧಾನಗಳು ಅವಶ್ಯಕತೆ ಇಲ್ಲವೆಂದು ತಿಳಿದುಬಂದಿದೆ.
ಮೊದಲೇ ಹೇಳಿದಂತೆ ಹಿಂದಿನ ಬಾರಿ ಇಬ್ಬರು ಪುರುಷರಿಗೆ ಅಸ್ಥಿಮಜ್ಜೆಯ (ಬೋನ್ ಮ್ಯಾರೋ) ಸ್ಟೆಮ್ ಸೆಲ್ ಕಸಿ ಮಾಡಿ ಹೆಚ್ಐವಿಯಿಂದ ಗುಣಪಡಿಸಲಾಗಿತ್ತು. ಓರ್ವ ವ್ಯಕ್ತಿ ಶ್ವೇತವರ್ಣದ ವ್ಯಕ್ತಿಯಾದರೆ, ಮತ್ತೊಬ್ಬ ವ್ಯಕ್ತಿ ಲ್ಯಾಟಿನ್ ವ್ಯಕ್ತಿಯಾಗಿದ್ದನು. ಈಗ ಏಡ್ಸ್ನಿಂದ ಚೇತರಿಕೆ ಕಂಡಿರುವ ಮಹಿಳೆ ಕಪ್ಪು ಮತ್ತು ಬಿಳಿ ವರ್ಣಗಳ ಮಿಶ್ರಣವಾಗಿದ್ದಾರೆ ಎಂದು ಇಂಟರ್ನ್ಯಾಷನಲ್ ಏಡ್ಸ್ ಸೊಸೈಟಿ ಅಧಿಕೃತ ಹೇಳಿಕೆ ನೀಡಿದೆ.
ಕ್ಯಾಲಿಫೋರ್ನಿಯಾ ಲಾಸ್ ಏಂಜಲೀಸ್ ವಿಶ್ವವಿದ್ಯಾಲಯದ (UCLA) ಡಾ. ವೈವೊನ್ನೆ ಬ್ರೈಸನ್ ಮತ್ತು ಬಾಲ್ಟಿಮೋರ್‌ನಲ್ಲಿರುವ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಡಾ.ಡೆಬೊರಾ ಪರ್ಸೌಡ್ ನೇತೃತ್ವದಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಕ್ಯಾನ್ಸರ್ ಮತ್ತು ಇತರ ಗಂಭೀರ ರೋಗಗಳಿಗೆ ಸ್ಟೆಮ್ ಸೆಲ್ಗಳನ್ನು ಕಸಿ ಮಾಡಿ ಸುಮಾರು 25 ಮಂದಿಯನ್ನು ಹೆಚ್ಐವಿಯಿಂದ ಗುಣಪಡಿಸುವ ಗುರಿಯನ್ನು ಈಗ ಹೊಂದಲಾಗಿದೆ.
ಸ್ಟೆಮ್ ಸೆಲ್ ಥೆರಪಿ ಹೇಗೆ ಮಾಡಲಾಗುತ್ತದೆ?
ಮೊದಲು ರೋಗಿಗಳಿಗೆ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಕಿಮೋಥೆರಫಿ ಮಾಡಲಾಗುತ್ತದೆ. ನಂತರ ಅವರ ಸ್ಟೆಮ್ ಸೆಲ್ಗಳನ್ನು ಮೂಳೆ ಅಥವಾ ಹೊಕ್ಕಳ ಬಳ್ಳಿಯ ರಕ್ತದಿಂದ ಪಡೆದು, ಅವುಗಳನ್ನು ದಾನಿಗಳು ನೀಡಿದ ಆರೋಗ್ಯಕರ ಮತ್ತು ರೋಗ ನಿರೋಧಕ ಶಕ್ತಿ ಹೊಂದಿದ ಸ್ಟೆಮ್ ಸೆಲ್ಗಳನ್ನು ಕಸಿ ಮಾಡುತ್ತಾರೆ. ನಂತರ ರೋಗಿಯ ದೇಹಕ್ಕೆ ಕಸಿ ಮಾಡಿದ ಸೆಲ್ಗಳನ್ನು ನೀಡುತ್ತಾರೆ. ಈ ಸ್ಟೆಮ್ ಸೆಲ್ಗಳು ರೋಗಿಯ ವೈರಸ್ಗಳ ವಿರುದ್ಧ ಹೋರಾಡಿ ರೋಗದಿಂದ ಮುಕ್ತಗೊಳಿಸುತ್ತವೆ.