ವಾಷಿಂಗ್ಟನ್ ಡಿ ಸಿ(ಯುಎಸ್ಎ): ನೀವು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಸಿಗೋ ಸಿದ್ಧ ಆಹಾರಗಳನ್ನು ನೆಚ್ಚಿಕೊಂಡಿದ್ದರೆ, ನೀವು ಭಾರತದಲ್ಲಿ ತಯಾರಾಗೋ ಪ್ಯಾಕ್ ಫುಡ್ ಉತ್ಪನ್ನಗಳನ್ನು ತಿನ್ನದಿರೊದು ಉತ್ತಮ. ಹೀಗಂತ ನಾವು ಹೇಳ್ತಿಲ್ಲ. ಜಾಗತಿಕ ಸಮೀಕ್ಷೆಯೊಂದು ತಿಳಿಸಿದೆ.
ಸಿಡ್ನಿ ಮೂಲದ ಜಾರ್ಜ್ ಇನ್ಸಿಟ್ಯೂಟ್ ಆಫ್ ಗ್ಲೋಬಲ್ ಹೆಲ್ತ್ ಸಮೀಕ್ಷೆಯು, ಜಗತ್ತಿನ 12 ದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸುಮಾರು 4,00,000 ಆಹಾರ ಮತ್ತು ಪಾನೀಯ ಉತ್ಪನ್ನಗಳನ್ನು ವಿಶ್ಲೇಷಿಸಿ ಈ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದೆ. ಸಮೀಕ್ಷೆಯ ಪ್ರಕಾರ ನೀವು ಬ್ರಿಟೀಷ್(ಯುಕೆ) ಪ್ಯಾಕ್ ಫುಡ್ಗಳನ್ನು ಸೇವಿಸೋದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮವಂತೆ.
ಸಮೀಕ್ಷೆಯು, ಆಸ್ಟ್ರೇಲಿಯಾದ ಹೆಲ್ತ್ ಸ್ಟಾರ್ ರೇಟಿಂಗ್ ವ್ಯವಸ್ಥೆಯನ್ನಾಧರಿಸಿ, ಸಮೀಕ್ಷೆಗೊಳಪಟ್ಟ ದೇಶಗಳಿಗೆ ವಿವಿಧ ರ‍್ಯಾಂಕ್ ನೀಡಿದೆ. ಆಹಾರದಲ್ಲಿರುವ ಶಕ್ತಿ, ಉಪ್ಪು, ಸಕ್ಕರೆ, ಸ್ಯಾಚುರೇಟೆಡ್ ಕೊಬ್ಬು ಮತ್ತು ಪ್ರೋಟೀನ್ ಪ್ರಮಾಣ, ಕ್ಯಾಲ್ಸಿಯಂ ಮತ್ತು ಫೈಬರ್ನಂತಹತಹ ಪೋಷಕಾಂಶಗಳ ಪ್ರಮಾಣದ ಲೆಕ್ಕಾಚಾರ ಹಾಕಿ ದೇಶಗಳಿಗೆ ರ‍್ಯಾಂಕಿಂಗ್ ನೀಡಿದೆ. 0.5 ಕನಿಷ್ಠ ಆರೋಗ್ಯಕರ ಹಾಗೂ 5 ಗರಿಷ್ಟ ಆರೋಗ್ಯಕರ ಎಂದು ಅಂಕಗಳನ್ನು ನೀಡಿ ಈ ಸಮೀಕ್ಷೆ ಮಾಡಲಾಗಿದೆ.
ಈ ಸಮೀಕ್ಷೆಯಲ್ಲಿ ಯುಕೆ(ಯುನೈಟೆಡ್ ಕಿಂಗ್ಡಮ್) ಮೊದಲ ಸ್ಥಾನ ಪಡೆದಿದ್ದು, 2.83 ಸ್ಟಾರ್ ರೇಟಿಂಗ್ ಪಡೆದಿದೆ. ಯುಕೆ ಬಳಿಕ 2.82 ರೇಟಿಂಗ್ ಪಡೆದ ಯುಎಸ್ ಎರಡನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ 2.81 ರೇಟಿಂಗ್ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನು ಭಾರತ ಇದರಲ್ಲಿ ಕೆಳಮಟ್ಟದ ಸಾಧನೆ ಮಾಡಿದ್ದು, 2.27 ರೇಟಿಂಗ್ನೊಂದಿಗೆ 12 ದೇಶಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದರೊಂದಿಗೆ ಚೀನಾ 2.43 ಹಾಗೂ ಚಿಲಿ 2.44 ಸ್ಟಾರ್ ರೇಟಿಂಗ್ನೊಂದಿಗೆ ಕೆಳಗಿನಿಂದ ಎರಡು ಹಾಗೂ ಮೂರನೇ ಸ್ಥಾನದಲ್ಲಿದೆ.
ಸಮೀಕ್ಷೆಯ ಈ ಫಲಿತಾಂಶವು Obesity Reviews ಎಂಬ ಮೆಡಿಕಲ್ ಜರ್ನಲ್ನಲ್ಲಿ ಪ್ರಕಟಗೊಂಡಿದೆ.