ಆಯಾಸ, ಸ್ನಾಯು ಸೆಳೆತ, ನಿದ್ರಾಹೀನತೆಯು ನಿಮ್ಮನ್ನು ದೀರ್ಘ ಕಾಲದಿಂದ ಬಾಧಿಸುತ್ತಿದ್ದರೆ ಅದು ಕೊರೊನಾದ ರೋಗಲಕ್ಷಣಗಳು. ಇದು ಕೇವಲ ಕೊರೊನಾದಿಂದಾಗುವ ಸಮಸ್ಯೆ ಮಾತ್ರವಲ್ಲದೇ ಇದರೊಂದಿಗೆ ಬ್ಯಾಕ್ಟೀರಿಯಾಗಳು ಕೂಡ ಇದಕ್ಕೆ ಕಾರಣ ಎಂದು ಹಾಂಗ್ ಕಾಂಗ್ ವಿವಿಯೊಂದು ನಡೆಸಿದ ಅಧ್ಯಯನವೊಂದು ದೃಢಪಡಿಸಿದೆ.
81 ಪ್ರಭೇದ ದ ಬ್ಯಾಕ್ಟೀರಿಯಾಗಳು ಕೋವಿಡ್ ವೈರಸ್ನೊಂದಿಗೆ ಮಿಳಿತವಾಗಿವೆ. ಅದರಲ್ಲೂ ಪ್ರಮುಖವಾದ ಎರಡು ಬ್ಯಾಕ್ಟೀರಿಯಾ ವರ್ಗದಿಂದ ದೀರ್ಘವಾದ ಮತ್ತು ನಿರಂತರ ರೋಗಬಾಧೆಗೆ ಮನುಷ್ಯ ಒಳಗಾಗುತ್ತಾನೆ ಎಂದು ಗಟ್ ಆನ್ಲೈನ್ ಜರ್ನಲ್ನಲ್ಲಿ ಪ್ರಕಟವಾದ ವರದಿ ವಿವರಿಸಿದೆ.
ಕಳೆದ ವರ್ಷದ ಫೆಬ್ರವರಿಯಿಂದ ಆಗಸ್ಟ್ ನಡುವೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 106 ಕೊರೊನಾ ಸೋಂಕಿತರ ಕರುಳಿನ ಮೈಕ್ರೋಬಯೋಮ್ ವ್ಯವಸ್ಥೆ ಮೇಲಾಗುವ ಬದಲಾವಣೆಗಳ ಮೇಲೆ ಹಾಂಗ್ ಕಾಂಗ್ ಅಧ್ಯಯನ ತಂಡ ನಿಗಾ ವಹಿಸಿತ್ತು. ಇದರ ಜೊತೆಗೆ ಕೋವಿಡ್ ರಹಿತ 68 ರೋಗಿಗಳ ಮೇಲೂ ಇದೇ ತಂಡ ಏಕಕಾಲದಲ್ಲಿ ಅಧ್ಯಯನ ನಡೆಸಿತ್ತು.
ಅಧ್ಯಯನಕ್ಕೊಳಗಾದ 106 ಮಂದಿಯಲ್ಲಿ 86 ಜನರಿಗೆ ಕೊರೊನಾ ಸೋಂಕು 6 ತಿಂಗಳು ಬಾಧಿಸಿದೆ. ಈ ವೇಳೆ ಅವರಲ್ಲಿ ಆಯಾಸ(ಶೇ.31), ಹೆಚ್ಚಿನ ಮರೆವು(ಶೇ.28), ಕೂದಲು ಉದುರುವಿಕೆ(ಶೇ.22), ಆತಂಕ(ಶೇ.21), ನಿದ್ರಾಹೀನತೆ(ಶೇ.21) ಕಂಡುಬಂದಿದೆ. ಈ ವೇಳೆ ಅವರ ಕರುಳ ಮೈಕ್ರೋಬಯೋಮ್ ವ್ಯವಸ್ಥೆಯಲ್ಲಿ 25 ಕ್ಕೂ ಅಧಿಕ ಬ್ಯಾಕ್ಟೀರಿಯಾಗಳು ಕಂಡುಬಂದಿವೆ.
ಇದೇ ವೇಳೆ ಕೊರೊನಾ ಸೋಂಕಿತರಲ್ಲದ 68 ಜನರ ಆರೋಗ್ಯದ ಅಧ್ಯಯನ ನಡೆಸಿದಾಗ ಅವರಲ್ಲಿ ಆರೋಗ್ಯ ಸ್ನೇಹಿಯಾದ ಬ್ಯಾಕ್ಟೀರಿಯಾ ಮತ್ತು ಅನಾರೋಗ್ಯ ಉಂಟು ಮಾಡುವ ಶಿಲೀಂಧ್ರಗಳು ಮಾತ್ರ ಕಂಡು ಬಂದಿದ್ದವು.
ಇದರಿಂದ ವ್ಯಕ್ತಿ ಕೊರೊನಾ ಸೋಂಕಿಗೀಡಾದಾಗ ವೈರಸ್ ಜೊತೆಗೆ ವಿವಿಧ ಬ್ಯಾಕ್ಟೀರಿಯಾಗಳೂ ಕೂಡ ಮನುಷ್ಯನ ಆರೋಗ್ಯ ವ್ಯವಸ್ಥೆ ಮೇಲೆ ದಾಳಿ ಮಾಡುತ್ತವೆ. ಇದರಿಂದ ಮನುಷ್ಯರು ದೀರ್ಘಕಾಲದ ರೋಗಬಾಧೆಯಿಂದ ನರಳಬೇಕಾಗುತ್ತದೆ ಎಂಬುದನ್ನು ಅಧ್ಯಯನ ಕಂಡುಕೊಂಡಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ