ನವದೆಹಲಿ: 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊರೊನಾ ಸಾಂಕ್ರಾಮಿಕವು ಎಲ್ಲ ವಯಸ್ಸಿನ ಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಿದೆ ಎಂದು ಹೇಳಿದರು. ಈ ಬಾರಿಯ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಈ ಕೆಳಕಂಡಂತಿವೆ.
- ಟೆಲಿ-ಮೆಂಟಲ್ ಆರೋಗ್ಯ ಕೇಂದ್ರಗಳು: ಭಾರತದಲ್ಲಿ ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮವನ್ನು ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಿದ ಹಣಕಾಸು ಸಚಿವರು, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಅನ್ನು ನೋಡಲ್ ಕೇಂದ್ರವಾಗಿಸಿ 23 ಟೆಲಿ-ಮೆಂಟಲ್ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು. ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಳ ಪ್ರವೇಶವನ್ನು ಉತ್ತಮಗೊಳಿಸಲು ಈ ಕ್ರಮವನ್ನು ಕೇಂದ್ರ ತೆಗೆದುಕೊಂಡಿದೆ.
ಮಾನಸಿಕ ಆರೋಗ್ಯ ಕಾರ್ಯಕ್ರಮಕ್ಕೆ ಬೆಂಗಳೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ತಾಂತ್ರಿಕ ಬೆಂಬಲವನ್ನು ನೀಡಲಿದೆ ಎಂದು ಸೀತಾರಾಮನ್ ಹೇಳಿದರು.
- ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆ - ಇದು ಆರೋಗ್ಯ ಪೂರೈಕೆದಾರರ ಡಿಜಿಟಲ್ ದಾಖಲಾತಿಗಳು ಮತ್ತು ಆರೋಗ್ಯ ಸೌಲಭ್ಯಗಳು, ಅನನ್ಯ ಆರೋಗ್ಯ ಗುರುತು ಮತ್ತು ಆರೋಗ್ಯ ಸೌಲಭ್ಯಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಒಳಗೊಂಡಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್ 2022 : ಬೆಂಗಳೂರು ಅಭಿವೃದ್ಧಿಗೆ ಮತ್ತಷ್ಟು ಆದ್ಯತೆ
ಜನರ ನಿರೀಕ್ಷೆ ತಲುಪಿಲ್ಲ: ಕೋವಿಡ್ನಿಂದಾಗಿ ಭಾರೀ ಹೊಡೆತಕ್ಕೊಳಗಾದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆಗಳನ್ನು ಜನರು ಬಯಸಿದ್ದರು. ವೈದ್ಯಕೀಯ ವೆಚ್ಚ ಹಾಗೂ ಔಷಧ ಬೆಲೆಗಳಲ್ಲಿ ಇಳಿಕೆಯಾಗಿರಬಹುದು ಎಂದು ಭಾವಿಸಿದ್ದರು. ಕೋವಿಡ್ ಎರಡನೇ ಅಲೆಯಲ್ಲಿ ಎಷ್ಟೋ ಜನರು ಆಸ್ಪತ್ರೆಯ ಬೆಡ್ ಚಾರ್ಜ್ ಹಾಗೂ ಚಿಕಿತ್ಸಾ ವೆಚ್ಚ ಭರಿಸಲಾಗದೆ ಕ್ರೌಡ್ ಫಂಡಿಂಗ್ ಮೊರೆ ಹೋದ ಉದಾಹರಣೆಗಳೂ ನಮ್ಮ ಮುಂದಿದೆ. ಆದರೆ ಈ ಬಾರಿಯ ಬಜೆಟ್ ಜನರ ನಿರೀಕ್ಷೆಯನ್ನು ತಲುಪಿಲ್ಲ.
ಕಳೆದ ವರ್ಷ ನಿರ್ಮಲಾ ಸೀತಾರಾಮನ್ ಅವರು ಆರೋಗ್ಯ ಸೇವೆಗಳನ್ನು ಸುಧಾರಿಸಲು ಮುಂದಿನ ಆರು ವರ್ಷಗಳಲ್ಲಿ ಸರ್ಕಾರವು 64,180 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ಎಂದು ಹೇಳಿದ್ದರು. ಈ ಬಾರಿ 112 ಜಿಲ್ಲೆಗಳು 95 ಪ್ರತಿಶತದಷ್ಟು ಆರೋಗ್ಯ, ಮೂಲಸೌಕರ್ಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ