ನವದೆಹಲಿ : ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ವಾಹನಗಳಿಗೆ ಬೇಡಿಕೆ ಹೆಚ್ಚಾಗುವ ಭರವಸೆ ಎಲ್ಲರಲ್ಲಿದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಮತ್ತು ಬ್ಯಾಟರಿಗಳನ್ನು ತಯಾರಿಸಲು ಗುಜರಾತ್ನಲ್ಲಿ ನೂತನ ಕಾರ್ಖಾನೆಯನ್ನು ನಿರ್ಮಾಣ ಮಾಡುವುದಾಗಿ ಸುಜುಕಿ ಮೋಟಾರ್ ಕಂಪನಿ ತಿಳಿಸಿದ್ದು, 2026ರ ವೇಳೆಗೆ ವ್ಯಾಪಾರ ನಡೆಸುವ ಗುರಿ ಹೊಂದಿದೆ.
ಎಲೆಕ್ಟ್ರಿಕ್ ವಾಹನಗಳು ಮತ್ತು ಬ್ಯಾಟರಿಗಳ ಕಾರ್ಖಾನೆಯ ನಿರ್ಮಾಣಕ್ಕಾಗಿ ಸುಜುಕಿ ಸುಮಾರು 104 ಬಿಲಿಯನ್ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಈಗ ಭಾರತದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿಯಾಗಿರುವ ಸುಜುಕಿ ಉತ್ಪಾದನೆ ಮಾಡಿದ ಪ್ರತಿ ಎರಡು ಕಾರುಗಳಲ್ಲಿ ಒಂದು ಕಾರನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ.
ಶೇ.50ರಷ್ಟು ಕಾರುಗಳನ್ನು ಭಾರತವೇ ಕೊಂಡುಕೊಳ್ಳುತ್ತಿರುವ ಕಾರಣದಿಂದ ಇಲ್ಲಿಯೇ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಕಾರ್ಖಾನೆಯನ್ನು ಸ್ಥಾಪನೆ ಮಾಡಲಿದೆ. ಕೇಂದ್ರ ಸರ್ಕಾರವೂ ಡಿಕಾರ್ಬನೈಸೇಶನ್ ಮಾಡುವ ಸಲುವಾಗಿ ಶುದ್ಧ ಇಂಧನ ಬಳಸುವ ವಾಹನಗಳನ್ನು ಉತ್ತೇಜಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನೂ ಉತ್ತೇಜಿಸುತ್ತಿದೆ. ಕೇಂದ್ರ ಸರ್ಕಾರವೂ ನಿಲುವು ಕೂಡ ಸುಜುಕಿ ಮೋಟಾರ್ಗೆ ವರವಾಗಲಿದೆ. ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯು ಎಲೆಕ್ಟ್ರಿಕ್ ವಾಹನಗಳಿಗಾಗಿ ಇನ್ನೂ ಸಿದ್ಧವಾಗಿಲ್ಲ.
ಕಂಪನಿಯ ಪ್ರತಿಸ್ಪರ್ಧಿಗಳಾದ ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ತಮ್ಮ ತಮ್ಮ ಉತ್ಪನ್ನಗಳನ್ನು ಎಲೆಕ್ಟ್ರಿಕ್ ಮಾಡುವತ್ತ ಹಲವು ಯೋಜನೆಗಳನ್ನೂ ಈಗಾಗಲೇ ಘೋಷಿಸಿವೆ. 2021ನೇ ಹಣಕಾಸು ವರ್ಷದಲ್ಲಿ ಭಾರತದಲ್ಲಿ ನಾಲ್ಕು ಚಕ್ರಗಳ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡಿದೆ. ಎಲೆಕ್ಟ್ರಿನ್ ವಾಹನಗಳ ವಲಯದ ಮೇಲೆ ಕೊರೊನಾ ಸೋಂಕಿನ ಪರಿಣಾಮ ಹೆಚ್ಚಿಲ್ಲ.
2021ನೇ ಹಣಕಾಸು ವರ್ಷದಲ್ಲಿ 5,500-6,000 ಎಲೆಕ್ಟ್ರಿಕ್ ವಾಹನಗಳ ಮಾರಾಟವಾಗಿದೆ ಎಂದು ವರದಿಗಳು ಸ್ಪಷ್ಟನೆ ನೀಡಿದ್ದು, 2020ರ ಹಣಕಾಸು ವರ್ಷದಲ್ಲಿ 3,400 ವಾಹನಗಳ ಮಾರಾಟ ಮಾಡಲಾಗಿದೆ. 2020ಕ್ಕೆ ಹೋಲಿಸಿ ನೋಡುವುದಾದರೆ, 2021ರಲ್ಲಿ ಶೇ.60ರಿಂದ 75ರಷ್ಟು ಏರಿಕೆ ಕಂಡಿದೆ.
ಸುಜುಕಿ ಮೋಟಾರ್ ಕಾರ್ಪೊರೇಷನ್ ಮತ್ತು ಟೊಯೊಟಾ ಮೋಟಾರ್ ಕಾರ್ಪೊರೇಷನ್ (ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್) ಎಲೆಕ್ಟ್ರಿಕ್ ಉತ್ಪನ್ನಗಳನ್ನು ಉತ್ಪಾದಿಸುವ ಯೋಜನೆಗಳನ್ನು ಹಾಕಿಕೊಂಡಿವೆ. ಈ ಉತ್ಪನ್ನಗಳನ್ನು ಭಾರತ, ಯುರೋಪ್ ಮತ್ತು ದಕ್ಷಿಣ ಏಷ್ಯಾದ ದೇಶಗಳಿಗೆ ರಫ್ತು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕರ್ಣಾಟಕ ಬ್ಯಾಂಕ್ ಗೆ ‘ವರ್ಷದ ಅತ್ಯುತ್ತಮ ಎಂಎಸ್‌ಎಂಇ ಬ್ಯಾಂಕ್’ ಪ್ರಶಸ್ತಿ ಪ್ರದಾನ