ಲಖನೌ; ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿಯ ಮುಂದೆ ಬೆಂಕಿ ಹಚ್ಚಿಕೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೇಠಿ ಜಿಲ್ಲೆಯ ಭೂ ವಿವಾದ ಪ್ರಕರಣವೊಂದರಲ್ಲಿ ಪೊಲೀಸರು ನಿಷ್ಕ್ರಿಯರಾಗಿದ್ದಾರೆಂದು ಆರೋಪಿಸಿ ಮಹಿಳೆ ಮತ್ತು ಆಕೆಯ ಮಗಳು ಜುಲೈ 17ರಂದು ತಮಗೆ ತಾವೇ ಬೆಂಕಿ ಹಚ್ಚಿಕೊಂಡಿದ್ದರು. ಈ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಗಾಯಗೊಂಡಿದ್ದ ಸಫಿಯಾ (50) ಎಂಬುವವರು ಮಂಗಳವಾರ ತಡರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರ ಮಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಯೊಬ್ಬರು ತಿಳಿಸಿದರು.
ಲಖನೌ ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ಮಾತನಾಡಿ, ಕಳೆದ ವಾರ ನಡೆದ ಈ ಘಟನೆಯು ಪಿತೂರಿಯಂತೆ ಕಾಣುತ್ತಿದೆ. ಇದೊಂದು ಕ್ರಿಮಿನಲ್ ಪಿತೂರಿಯಾಗಿದ್ದು, ಕೆಲವರು ಅವರಿಗೆ (ಸಫಿಯಾ ಮತ್ತು ಅವರ ಮಗಳು) ಪ್ರಚೋದನೆ ನೀಡಿದ್ದಾರೆ. ಪ್ರಕರಣ ಸಂಬಂಧ ಆಸ್ಮಾ, ಸುಲ್ತಾನ್, ಎಐಎಂಐಎಂನ ಅಮೇಠಿ ಜಿಲ್ಲಾಧ್ಯಕ್ಷ ಕಾದಿರ್ ಖಾನ್ ಮತ್ತು ಕಾಂಗ್ರೆಸ್ನ ಮಾಜಿ ವಕ್ತಾರ ಅನೂಪ್ ಪಟೇಲ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದರು.