ಕೋಲ್ಕತ್ತಾ: ಚಲಿಸುತ್ತಿರುವ ಟ್ಯಾಕ್ಸಿಯಲ್ಲೇ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಚಾಲಕ, ಪೂರ್ವ ಮೆಟ್ರೋಪಾಲಿಟನ್ ಬೈಪಾಸ್ ಬಳಿ ಇರುವ ಕಾಲುವೆಯಲ್ಲಿ ಶವವನ್ನು ಎಸೆದಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಮೃತ ಮಹಿಳೆ ಸುಮಾರು 40 ವರ್ಷದವರಾಗಿದ್ದು, ಕಾಲುವೆಯಿಂದ ಮೃತದೇಹವನ್ನು ಹೊರತೆಗೆಯಲಾಗಿದೆ. ಟ್ಯಾಕ್ಸಿ ಚಾಲಕನನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಆತನು ಮಹಿಳೆಯು ತನಗೆ ತಿಳಿದಿರುವುದಾಗಿ, ಆಕೆಯಿಂದ ಸಾಲ ತೆಗೆದುಕೊಂಡಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಶುಕ್ರವಾರ ಮಧ್ಯಾಹ್ನ, ಆರೋಪಿಯು ಮಹಿಳೆಯನ್ನು ಟೋಲಿಗಂಜ್ ಪ್ರದೇಶದ ಬಳಿ ತನ್ನ ಕಾರಿನಲ್ಲಿ ಪಿಕ್ ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಮಹಿಳೆಯು ಸಾಲ ಮರುಪಾವತಿಸುವಂತೆ ಕೇಳಿದ್ದಾಳೆ. ಕೋಪಗೊಂಡ ಆರೋಪಿ ಆಕೆಯ ಗಂಟಲು ಹಿಸುಕಿ ಸಾಯಿಸಿದ್ದಾನೆ. ಬಳಿಕ ಕಾಲುವೆಯಲ್ಲಿ ಶವ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯ ಪತಿಯು ತಮ್ಮ ಪತ್ನಿ ಕಾನೆಯಾಗಿರುವುದಾಗಿ ಟೋಲಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.